Ugadi 2026: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

2026ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19, ಗುರುವಾರದಂದು ಆಚರಿಸಲಾಗುತ್ತಿದೆ. ಹಿಂದೂ ನಂಬಿಕೆಯಂತೆ ಇದು ಸೃಷ್ಟಿಯ ಆರಂಭ ಹಾಗೂ ಹೊಸ ವರ್ಷದ ದಿನ. ಈ ದಿನ ಮನೆಯನ್ನು ಸ್ವಚ್ಛಗೊಳಿಸಿ, ತೋರಣ ಕಟ್ಟಿ, ಅಭ್ಯಂಜನ ಸ್ನಾನ ಮಾಡಿ, ದೈವಿಕ ಆರಾಧನೆ ಮಾಡುವುದು ಶುಭ. ಸಾಲ ಮಾಡುವುದು, ಜಗಳ, ಮಾಂಸಾಹಾರ ತ್ಯಜಿಸಿ. ಬೇವು-ಬೆಲ್ಲ ಸವಿಯುವ ಮೂಲಕ ಹೊಸ ವರ್ಷವನ್ನು ಸಂತೋಷದಿಂದ ಸ್ವಾಗತಿಸಿ.

Ugadi 2026: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
ಯುಗಾದಿ ಹಬ್ಬ

Updated on: Mar 12, 2026 | 12:40 PM

ಹಿಂದೂ ಧರ್ಮದ ನಂಬಿಕೆಯಂತೆ ಯುಗಾದಿಯು ಸೃಷ್ಟಿಯ ಆರಂಭದ ದಿನ ಹಾಗೂ ಹೊಸ ವರ್ಷದ ಮುನ್ನುಡಿ. ಈ ಬಾರಿ ಅಂದರೆ 2026ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19, ಗುರುವಾರದಂದು ಆಚರಿಸಲಾಗುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಹುತೇಕ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಅಂದು ಮುಂಜಾನೆಯ ಶುಭ ಮುಹೂರ್ತಗಳಾದ ಬೆಳಿಗ್ಗೆ 5:00 ರಿಂದ 7:30 ಅಥವಾ 9:00 ರಿಂದ 11:30 ರ ಅವಧಿಯಲ್ಲಿ ದೈವಿಕ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ.

ಯುಗಾದಿ ಹಬ್ಬದಂದು ಏನು ಮಾಡಬೇಕು?

ಈ ಶುಭ ದಿನದ ಆಚರಣೆಯು ಶಿಸ್ತು ಮತ್ತು ಭಕ್ತಿಯಿಂದ ಕೂಡಿದೆ. ಹಬ್ಬದ ಮುನ್ನಾದಿನವೇ ಮನೆಯನ್ನು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸುವುದು ವಾಡಿಕೆ. ಹಬ್ಬದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲೇ ಎದ್ದು, ಮನೆಯ ಮುಂಭಾಗದಲ್ಲಿ ಮಾವಿನ ಎಲೆ ಮತ್ತು ಹೂವುಗಳ ತೋರಣವನ್ನು ಕಟ್ಟಿ ಶೃಂಗರಿಸಬೇಕು. ಮೈಗೆ ಎಳ್ಳೆಣ್ಣೆಯನ್ನು ಹಚ್ಚಿ, ಅರಿಶಿನ ಬೆರೆಸಿದ ಪವಿತ್ರ ನೀರಿನಲ್ಲಿ ಅಭ್ಯಂಜನ ಸ್ನಾನ ಮಾಡುವುದು ದೈಹಿಕ ಮತ್ತು ಮಾನಸಿಕ ಶುದ್ಧೀಕರಣದ ಸಂಕೇತವಾಗಿದೆ. ಸ್ನಾನದ ನಂತರ ಹೊಸ ಬಟ್ಟೆಗಳನ್ನು ಧರಿಸಿ, ಹಣೆಗೆ ತಿಲಕವನ್ನಿಟ್ಟು ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ. ಆಧುನಿಕ ಯುಗದಲ್ಲಿ ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಿದ್ದರೂ, ಸಾಂಪ್ರದಾಯಿಕ ರಂಗೋಲಿ ಮತ್ತು ತಳಿರು ತೋರಣಗಳ ಮೆರುಗು ಇಂದಿಗೂ ಕಡಿಮೆಯಾಗಿಲ್ಲ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಯುಗಾದಿ ಹಬ್ಬದಂದು ಏನು ಮಾಡಬಾರದು?

ಹೊಸ ವರ್ಷದ ಮೊದಲ ದಿನ ನಾವು ಮಾಡುವ ಕೆಲಸಗಳು ಇಡೀ ವರ್ಷದ ಮೇಲೆ ಪ್ರಭಾವ ಬೀರುತ್ತವೆ ಎಂಬ ಗಾಢವಾದ ನಂಬಿಕೆಯಿದೆ. ಆದ್ದರಿಂದ ಈ ದಿನದಂದು ಕೆಲವು ತಪ್ಪುಗಳನ್ನು ಮಾಡದಂತೆ ಜಾಗರೂಕರಾಗಿರಬೇಕು. ವಿಶೇಷವಾಗಿ ಯಾರೊಂದಿಗೂ ವಾದ-ವಿವಾದ ಅಥವಾ ಜಗಳಗಳಲ್ಲಿ ತೊಡಗಬಾರದು. ಇಂದು ಹಣಕಾಸಿನ ಸಾಲ ನೀಡುವ ಅಥವಾ ಪಡೆಯುವ ವ್ಯವಹಾರಗಳಿಂದ ದೂರವಿರುವುದು ವರ್ಷವಿಡೀ ಆರ್ಥಿಕ ಸ್ಥಿರತೆಗೆ ಒಳ್ಳೆಯದು. ಆಹಾರದ ವಿಚಾರದಲ್ಲಿ ಈ ದಿನ ಮಾಂಸಾಹಾರ ಮತ್ತು ಮದ್ಯಪಾನದಂತಹ ತಾಮಸಿಕ ವಸ್ತುಗಳನ್ನು ತ್ಯಜಿಸಿ ಸಾತ್ವಿಕತೆಯನ್ನು ಪಾಲಿಸಬೇಕು. ಉಗುರು ಅಥವಾ ಕೂದಲು ಕತ್ತರಿಸುವುದು ಹಾಗೂ ಹರಿದ ಬಟ್ಟೆಗಳನ್ನು ಧರಿಸುವುದು ಈ ಪವಿತ್ರ ದಿನದಂದು ನಿಷಿದ್ಧವೆಂದು ಪರಿಗಣಿಸಲಾಗಿದೆ. ಜೀವನದ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾದ ಬೇವು-ಬೆಲ್ಲವನ್ನು ಸವಿಯುತ್ತಾ, ಈ ಹೊಸ ವರ್ಷವನ್ನು ಸಂತೋಷದಿಂದ ಸ್ವಾಗತಿಸುವುದು ಹಬ್ಬದ ನಿಜವಾದ ಆಶಯವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us