ಬೆಚ್ಚಗಿನ ಎಣ್ಣೆಯನ್ನು ಇಡೀ ದೇಹಕ್ಕೆ ಹಚ್ಚಿ ಮರ್ದನ ಮಾಡಿಕೊಂಡು ಕೆಲ ಹೊತ್ತು ಬಿಟ್ಟು ಸ್ನಾನ ಮಾಡೋದನ್ನು ʼಅಭ್ಯಂಜನʼ ಸ್ನಾನ ಎನ್ನಲಾಗುತ್ತೆ (Ugadi Abhyanga Snana or Oil Bath). ಇದು ನಮ್ಮ ದೇಹಕ್ಕೆ ಆಯುರ್ವೇದ ಔಷಧಿಯಂತೆ ಕೆಲಸ ಮಾಡುತ್ತೆ. ಅಂಗಾಂಗಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದಕ್ಕೆ ನಮ್ಮ ಪೂರ್ವಜರು ಪ್ರಥಮ ಆದ್ಯತೆ ನೀಡಿದ್ದರು. ಆಯುರ್ವೇದದ ಮೂಲ ಸಿದ್ಧಾಂತವಾದ ತ್ರಿದೋಷ ತತ್ವದ ಪ್ರಕಾರ, ವಾತ ಪಿತ್ತ ಕಫ ಎಂಬ ಮೂರು ದೋಷಗಳು ಮಾನವನ ದೇಹವನ್ನು ವ್ಯಾಪಿಸಿರುತ್ತವೆ. ಈ ದೋಷಗಳನ್ನು ಹತೋಟಿಯಲ್ಲಿಟ್ಟರೆ ಮಾತ್ರ ಉಳಿದೆಲ್ಲವೂ ನಿಯಂತ್ರಣದಲ್ಲಿರಲು ಸಾಧ್ಯ. ವಾತ ದೋಷದ ಮುಖ್ಯ ಸ್ಥಾನಗಳಲ್ಲಿ ಚರ್ಮವೂ ಒಂದಾಗಿದೆ. ಆದ್ದರಿಂದ ಚರ್ಮಕ್ಕೆ ಎಣ್ಣೆ ಹಚ್ಚುವುದರಿಂದ ವಾತ ದೋಷ ಗುಣಮುಖವಾಗುತ್ತೆ ಎನ್ನುತ್ತೆ ವೈದ್ಯಶಾಸ್ತ್ರ (Ugadi 2022).
ಆಯುರ್ವೇದದ ಅನುಸಾರ ಅಭ್ಯಂಜನಕ್ಕೆ ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಸುಗಂಧ ದ್ರವ್ಯಗಳಿಂದ ತಯಾರಿಸಿದ ಎಣ್ಣೆ, ಪುಷ್ಪಸುಗಂಧಿತವಾದ ಎಣ್ಣೆ, ಇತರ ಔಷಧ ದ್ರವ್ಯಗಳನ್ನು ಸೇರಿಸಿ ತಯಾರಿಸಿದ ಎಣ್ಣೆಗಳನ್ನು ಬಳಸಬಹುದೆಂದು ತಿಳಿಸಲಾಗಿದೆ. ಎಣ್ಣೆಯನ್ನು ಮೈಗೆ ತಿಕ್ಕುವುದರಿಂದ ಶರೀರದ ಅಂಗಗಳಿಗೆ ಪುಷ್ಟಿ ದೊರೆಯುತ್ತದೆ, ಇದನ್ನು ತಲೆ, ಪಾದಗಳಿಗೆ ಹೆಚ್ಚಾಗಿ ಹಚ್ಚಬೇಕು. ಶರೀರ ಪೂರ್ತಿ ಎಣ್ಣೆಯನ್ನು ತಿಕ್ಕುವುದರಿಂದ ವಾತ, ಕಫದೋಷಗಳು ಹಾಗೂ ಆಯಾಸ ಪರಿಹಾರವಾಗುವುದು. ಶಕ್ತಿ, ಸುಖನಿದ್ರೆ, ವರ್ಣ, ಕೋಮಲೆ, ಸುಕುಮಾರತೆ, ಆಯಸ್ಸು, ಶರೀರಪುಷ್ಟಿ ಮುಂತಾದವು ಹೆಚ್ಚಾಗುತ್ತವೆ.
ತಲೆಗೆ ಎಣ್ಣೆ ಹಚ್ಚುವುದರಿಂದ ಶರೀರದ ಎಲ್ಲ ಇಂದ್ರಿಯಗಳು ತೃಪ್ತಗೊಳ್ಳುತ್ತವೆ. ಮೈ ದಷ್ಟಪುಷ್ಟವಾಗುತ್ತದೆ ಹಾಗೂ ಶಿರಸ್ಸಿಗೆ ಸಂಬಂಧಪಟ್ಟ ವ್ಯಾಧಿಗಳು ಇಲ್ಲವಾಗುತ್ತವೆ. ಕೂದಲುಗಳು ಒತ್ತಾಗಿದ್ದು ನೀಳವಾಗಿ, ಕೋಮಲವಾಗಿ ದೃಢವಾಗಿ ಹಾಗೂ ಕಪ್ಪು ಬಣ್ಣ ಹೊಂದಿರುತ್ತವೆ. ಜೊತೆಗೆ ಇತ್ತೀಚೆಗೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಕಾಲಿಕ ನೆರೆ ಕೂದಲು ಸಮಸ್ಯೆಗೆ ಶಿರೋಭ್ಯಂಗ ಉತ್ತಮ ಚಿಕಿತ್ಸೆ. ಇನ್ನು ಕೂದಲು ಉದುರುವಿಕೆ, ತಲೆ ಬೋಳಾಗುವಿಕೆಗೂ ಇದು ಅತ್ಯುತ್ತಮ ಪರಿಹಾರ.
ಪಾದಗಳಿಗೆ ಎಣ್ಣೆ ತಿಕ್ಕುವುದರಿಂದ ಪಾದಗಳಿಗೆ ದೃಢತೆ ಉಂಟಾಗಿ ನೇತ್ರಗಳು ನಿರ್ಮಲವಾಗುತ್ತವೆ. ಗಾಢವಾದ ನಿದ್ದೆ ಬರುತ್ತದೆ. ಪಾದಗಳು ಜೋಮು ಹಿಡಿಯುವುದಿಲ್ಲ. ತಲೆಸುತ್ತು, ಸ್ತಬ್ಧತೆ, ಹಿಂಡುವುದು ಹಾಗೂ ಕಾಲೊಡೆಯುವುದು ನಿವಾರಣೆಯಾಗುತ್ತದೆ. ತಲೆಯ ಅಭ್ಯಂಜನದಿಂದ ಕಿವಿಗಳು ತಂಪಾಗುತ್ತವೆ. ಕಿವಿಗಳ ಅಭ್ಯಂಜನದಿಂದ ಪಾದಗಳು ತಂಪಾಗುತ್ತವೆ. ಪಾದಗಳ ಅಭ್ಯಂಜನದಿಂದ ಕಣ್ಣಿನ ರೋಗಗಳು ನಿವಾರಣೆಯಾಗುತ್ತವೆ.
ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ರೋಮ ಕೂಪಗಳಿಗೂ, ನರಗಳ ಸಮೂಹಗಳಿಗೂ ಹಾಗೂ ಧಮನಿಯ ಒಳಗೂ ಎಣ್ಣೆಯ ಅಂಶ ಸೇರಿ ಶರೀರಕ್ಕೆ ತೃಪ್ತಿ ಹಾಗೂ ಬಲ ಉಂಟಾಗುತ್ತದೆ. ಯಾವ ರೀತಿ ನೀರಿನಿಂದ ತೋಯ್ದ ವೃಕ್ಷದಲ್ಲಿ ಅದರ ಚಿಗುರುಗಳು ಬೆಳೆಯುತ್ತವೆಯೋ ಅದೇ ರೀತಿ ಎಣ್ಣೆಯಿಂದ ತೋಯ್ದ ಶರೀರದಲ್ಲಿ ಧಾತುಗಳು ವೃದ್ಧಿ ಹೊಂದುತ್ತವೆ. ಅಂದರೆ ಎಣ್ಣೆಯಿಂದ ಮೈಯನ್ನು ಮರ್ದಿಸುವುದರಿಂದ ಶರೀರ ಧಾತುಗಳು ವೃದ್ಧಿಯಾಗಿ ಪೋಷಣೆಗೊಳ್ಳುತ್ತವೆ.
ಆಗತಾನೆ ಜ್ವರ ಬಂದಿರುವವರೂ, ಅಜೀರ್ಣದಿಂದ ನರಳುವವರೂ ಹಾಗೂ ವಾಂತಿ ಚಿಕಿತ್ಸೆಗಾಗಿ ಔಷಧಿ ತೆಗೆದುಕೊಂಡಿರುವವರೂ ಅಭ್ಯಂಜನ ಅಂದರೆ ಎಣ್ಣೆ ಸ್ನಾನಕ್ಕೆ ಯೋಗ್ಯರಲ್ಲ.
ಸ್ನಾನ ಮಾಡುವಾಗ ಜಿಡ್ಡು ತೆಗೆಯಲು ಚೂರ್ಣ ಅಂದರೆ ಪುಡಿ ಇತ್ಯಾದಿಗಳಿಂದ ಮೈ ಉಜ್ಜುವುದಕ್ಕೆ ʼಉದ್ವರ್ತನ ಕ್ರಿಯೆʼ ಎನ್ನುತ್ತಾರೆ. ಇದು ಕಫಮೇಧ ರೋಗಗಳನ್ನು ನಿವಾರಿಸುತ್ತದೆ. ಹಾಗೂ ಅತ್ಯಂತ ಸುಖದಾಯಕವಾಗಿದ್ದು ಶಕ್ತಿ, ರಕ್ತ ಹಾಗೂ ಮುಖಕಾಂತಿಯನ್ನು ವರ್ಧಿಸುತ್ತದೆ. ಚರ್ಮವನ್ನು ಶುದ್ಧಗೊಳಿಸಿ ಮೃದುಗೊಳಿಸುತ್ತದೆ.
ಮುಖದ ಉದ್ವರ್ತನ ಕ್ರಿಯೆಯನ್ನು ಮಾಡುವುದರಿಂದ ನೇತ್ರಗಳು ದೃಢವಾಗುತ್ತವೆ. ಕೆನ್ನೆಗಳು ಮಾಂಸದಿಂದ ತುಂಬಿಕೊಳ್ಳುತ್ತವೆ ಹಾಗೂ ಭಂಗು, ಮೊಡವೆ ಮುಂತಾದವುಗಳ ನಿವಾರಣೆಯಾಗಿ ಮುಖವು ಕಮಲದ ಹೂವಿನಂತೆ ಸುಂದರವಾಗುತ್ತದೆ. ಈ ಯುಗಾದಿಯಂದು ಮನೆಮಂದಿಯೆಲ್ಲಾ ಆಭ್ಯಂಜನ ಮಾಡಿ, ಬೇವು-ಬೆಲ್ಲ ಸವಿಯಿರಿ.