ಧರ್ಮಸ್ಥಳದ ಮಂಜುನಾಥ, ಮಾಧ್ವಯತಿ ವಾದಿರಾಜರು, ಜೈನ ಕುಟುಂಬದ ಆಡಳಿತ
“ಧರ್ಮಸ್ಥಳ” ಎಂಬ ಹೆಸರು ಈ ಹಿಂದೆಂದಿಗಿಂತ ಹೆಚ್ಚೆಚ್ಚು ಕಿವಿಗೆ ಬೀಳುತ್ತಿದೆ. ಆದರೆ ಒಳ್ಳೆ ಕಾರಣಗಳಿಂದಲ್ಲ. ಒಂದು ತೀರ್ಥಕ್ಷೇತ್ರ ಜನಮಾನಸಕ್ಕೆ ಹತ್ತಿರ ಆಗುವುದು ದೇವರ ಸಾನ್ನಿಧ್ಯ, ಅಲ್ಲಿನ ಮಹಿಮೆ, ನಂಬಿಕೆಯೊಂದಿಗೆ ತಳುಕು ಹಾಕಿಕೊಂಡಂಥ ಭಾವನಾತ್ಮಕ ಸಂಗತಿಗಳಿಂದ. ಆದರೆ ಅದರ ಆಚೆಗೆ ಒಂದು ಕ್ಷೇತ್ರದ ಐತಿಹ್ಯ ಅಥವಾ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ತುಂಬ ಮುಖ್ಯವಾಗುತ್ತದೆ. ಧರ್ಮಸ್ಥಳ ಎಂಬ ಹೆಸರು ಹೇಗೆ ಬಂತು, ಅಲ್ಲಿರುವ ಮಂಜುನಾಥ ದೇವರ ಲಿಂಗ ಪ್ರತಿಷ್ಠಾಪನೆ ಮಾಡಿದವರು ಯಾರು ಮತ್ತಿತರ ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಅಂಗೈಯಗಲದ ಒಂದು ತೀರ್ಥಕ್ಷೇತ್ರ “ಧರ್ಮಸ್ಥಳ” ಇವತ್ತಿಗೆ ಬೆಂಕಿಯಂತಾಗಿದೆ. ಜನರಿಗೆ ಬೆಳಕು ತೋರಿಸುವ ಮಂಜುನಾಥನ ಸನ್ನಿಧಿ ಇರುವ ಈ ಕ್ಷೇತ್ರ ಕೆಟ್ಟ ಕಾರಣಗಳಿಂದ ಸುದ್ದಿಯ ಕೇಂದ್ರವಾಗಿದೆ. ಆದರೆ ಧರ್ಮಸ್ಥಳ ಮಂಜುನಾಥನ ಪ್ರತಿಷ್ಠಾಪನೆ ಕಾರ್ಯ ವೈದಿಕ ರೀತಿಯಲ್ಲಿ ನಡೆದದ್ದು, ಪ್ರವರ್ಧಮಾನಕ್ಕೆ ಬರುತ್ತಾ ಸಾಗಿದ್ದು, ಇತ್ಯಾದಿ ವಿಚಾರಗಳು ನೇಪಥ್ಯಕ್ಕೆ ಸರಿಯಬಾರದು. ಜನರ ಧಾರ್ಮಿಕ ನಂಬಿಕೆ ಘಾಸಿಯಾಗಬಾರದು. ಆ ಹಿನ್ನೆಲೆಯಲ್ಲಿ ನೋಡಿದಾಗ “ಧರ್ಮಸ್ಥಳ” ಎಂಬ ಹೆಸರು ಕಿವಿಗೆ ಬಿದ್ದೊಡನೆ ಮಹಾನ್ ಯತಿಗಳಾದ ವಾದಿರಾಜರ ನೆನಪಾಗುತ್ತದೆ.
ಕುಡುಮ ಎಂಬ ಹೆಸರಿನಿಂದ ಕರೆಯುತ್ತಿದ್ದ ಕ್ಷೇತ್ರವನ್ನು ಅಲ್ಲಿನ ಸಾನ್ನಿಧ್ಯ, ಅಲ್ಲಿ ಆಗುತ್ತಿದ್ದ ಧರ್ಮ ಕಾರ್ಯಗಳು ಇತ್ಯಾದಿಗಳಿಂದಾಗಿ ಅದಕ್ಕೆ “ಧರ್ಮಸ್ಥಳ” ಎಂಬ ಹೆಸರು ನೀಡಿದವರು ಯತಿಗಳಾಗಿದ್ದ ವಾದಿರಾಜರು.
ಧರ್ಮಸ್ಥಳ ಮಂಜುನಾಥನಿಗೂ ವಾದಿರಾಜರಿಗೂ ಏನು ಸಂಬಂಧ?
ವಾದಿರಾಜರ ಪರ್ಯಟನಾ ಕಾಲದಲ್ಲಿ ನೇತ್ರಾವತಿ ಸಿಕ್ಕಿದಳು. ವರಾಹದೇವರ ನೇತ್ರದಿಂದ ಉಗಮವಾದ ಆನಂದಾಶ್ರುವೇ ನೇತ್ರಾವತಿ ಎಂದು ತೀರ್ಥಪ್ರಬಂಧದಲ್ಲಿ ಯತಿಗಳೇ ವರ್ಣಿಸಿದ್ದಾರೆ. ಆಗ ಧರ್ಮಸ್ಥಳದಲ್ಲೊಂದು (ಆಗಿನ ಕುಡುಮ ಗ್ರಾಮ) ಶೈವ- ವೈಷ್ಣವ ಕಲಹ ನಡೆಯಿತು. ಅನೇಕ ಶೈವರೂ ವೈಷ್ಣವರೂ ಹತರಾದದ್ದೇ ನೇತ್ರಾವತಿ ನದಿಯ ತೀರದಲ್ಲಿ. ವಾದಿರಾಜರ ಜತೆಗೆ ಭಾವಿ ರುದ್ರದೇವರಾದ ಭೂತರಾಜರು (ಜೀವಿತಾವಧಿಯಲ್ಲಿ ನಾಸ್ತಿಕ ಬ್ರಾಹ್ಮಣ ನಾರಾಯಣ ಭಟ್ಟನಾಗಿ ಯತಿಗಳ ಸೇವೆ ಮಾಡುತ್ತಿದ್ದರು) ಕೈಂಕರ್ಯ ಮಾಡುತ್ತಿದ್ದರು.
ಧರ್ಮಸ್ಥಳಕ್ಕೆ ಬಂದು ಶಿವನ ಪಾರ್ಶ್ವ ಗಣವಾಗಿ ನಿಂತರು ಯತಿಗಳು. ಈ ಧರ್ಮಸ್ಥಳದಲ್ಲಿ ರುದ್ರರೂಪಿ ಭಗವಂತನನ್ನು ಪುನಃಪ್ರತಿಷ್ಠೆ ಮಾಡಿದರು. ಆಗ ಪಾರುಪತ್ತೆಗಾರರಾಗಿ ಇದ್ದವರು ಜೈನ ಸಮಾಜದ ಹೆಗ್ಗಡೆ ಮನೆತನದವವರು. ಇಂದಿಗೂ ಅದೇ ಮನೆತನ ಮುಂದುವರಿದಿದೆ. ಕದ್ರಿ ದೇವಸ್ಥಾನದಿಂದ ಶಿವಲಿಂಗವನ್ನು ತರಿಸಿ, ಧರ್ಮಸ್ಥಳದಲ್ಲಿ ಕಲಹಗಳಿಂದ ಭಗ್ನವಾದ ಶಿವಲಿಂಗವನ್ನು ವಿಸರ್ಜಿಸಿ, ನೂತನ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದು ಇತಿಹಾಸದ ಉಲ್ಲೇಖ. ಈಗಲೂ ಭೂತರಾಜರ ಗುಡಿಯನ್ನು ಧರ್ಮಸ್ಥಳದಲ್ಲಿ ಕಾಣಬಹುದು. ಆ ಕಾಲದಲ್ಲಿ ಈ “ಕುಡುಮ” ಎಂಬ ಸ್ಥಳವು ಆ ನಂತರ ವಾದಿರಾಜರೇ ಹೆಸರು ಸೂಚಿಸಿ, ಮುಂದೆ ಧರ್ಮಸ್ಥಳವಾಗಿ, ನಂಬಿದ ಭಕ್ತರಿಗೆ ಅನುಗ್ರಹವನ್ನು ನೀಡುತ್ತಾ ಬಂದಿದೆ.
ವಾದಿರಾಜರು ಪ್ರತಿಷ್ಠಾಪಿಸಿದ ಶಿವ ಸಾನ್ನಿಧ್ಯ, ಮಾಧ್ವರ ಪೂಜೆ
ಧರ್ಮಸ್ಥಳದಲ್ಲಿ ಇಂದಿಗೂ ಶಿವನ, ಅಂದರೆ ಮಂಜುನಾಥನ ಪೂಜೆ ಮಾಡುವವರು ಮಾಧ್ವ ಬ್ರಾಹ್ಮಣರು. ಅಂದರೆ ವೈಷ್ಣವರು. ಪುನಃ ಪ್ರತಿಷ್ಠಾಪನೆ ಮಾಡಿದ ವಾದಿರಾಜರು ಮಾಧ್ವಯತಿಗಳು. ಈಗ ಧರ್ಮಸ್ಥಳದ ಮಂಜುನಾಥನ ಸೇವೆಯನ್ನು ಪಂಜುರ್ಲಿ ದೈವ (ವರಾಹ) ಮಾಡುತ್ತಿದೆ. ಈಗ ಇದನ್ನು ಅಣ್ಣಪ್ಪ ಪಂಜುರ್ಲಿ ಎಂದು ಕರೆಯುತ್ತಾರೆ. ಇಲ್ಲಿ ಇರುವಂಥ ಮಂಜುನಾಥ ಸ್ಕಂದ ಪುರಾಣದ ದೇವರು. ಹತ್ತಿರದಲ್ಲೇ ಸುಬ್ರಹ್ಮಣ್ಯ(ಸ್ಕಂದ) ಇರುವುದರಿಂದ ಇದು ಪೌರಾಣಿಕ ದೇವ ಸಾನ್ನಿಧ್ಯ. ಪ್ರೊ.ಗುರುರಾಜ ಭಟ್ಟರ ಸಂಶೋಧನೆಯಲ್ಲಿ (The studies of Tuluva history and cultures) ಇದನ್ನು ಉಲ್ಲೇಖಿಸಲಾಗಿದೆ. ಅದರಂತೆ ಅವರು ಕ್ರಿಸ್ತಶಕ 10ನೇ ಶತಮಾನ ಎಂದು ತಿಳಿಸಿದ್ದಾರೆ. ವಾದಿರಾಜರು ಧರ್ಮಸ್ಥಳಕ್ಕೆ ಬಂದಾಗ ಅಲ್ಲಿ ದೇವಾಲಯದ ಆಡಳಿತವು ಜೈನರ ಕೈಲಿ ಇತ್ತು. ಈ ಹೆಗ್ಗಡೆ ಮನೆತನಕ್ಕೆ ಅಷ್ಟು ವರ್ಷಗಳ ಇತಿಹಾಸ ಇದೆ.
ಧರ್ಮಸ್ಥಳದ ವೆಬ್ಸೈಟ್ನಲ್ಲಿ ಸ್ಥಳ ಇತಿಹಾಸ ಹೀಗಿದೆ
800 ವರ್ಷಗಳ ಹಿಂದೆ, ದಕ್ಷಿಣ ಕನ್ನಡದ ಆಗಿನ ಗ್ರಾಮವಾದ ಮಲ್ಲರ್ಮಡಿಯಲ್ಲಿ ಧರ್ಮಸ್ಥಳವನ್ನು ಕುಡುಮ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಜೈನ ಮುಖ್ಯಸ್ಥ ಬಿರ್ಮಣ್ಣ ಪೆರ್ಗಡೆ ಮತ್ತು ಅವರ ಪತ್ನಿ ಅಮ್ಮು ಬಲ್ಲಾಳ್ತಿ ನೆಲ್ಯಾಡಿ ಬೀಡು ಎಂಬ ಮನೆಯಲ್ಲಿ ವಾಸಿಸುತ್ತಿದ್ದರು. ಸರಳ, ಧರ್ಮನಿಷ್ಠ ಮತ್ತು ಪ್ರೀತಿಯ ಜನರು; ಪೆರ್ಗಡೆ ಕುಟುಂಬವು ಎಲ್ಲರಿಗೂ ಔದಾರ್ಯ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿತ್ತು.
ದಂತಕಥೆಯ ಪ್ರಕಾರ, ಧರ್ಮದ ರಕ್ಷಕ ದೇವತೆಗಳು ಮಾನವ ರೂಪ ಧರಿಸಿ ಧರ್ಮವನ್ನು ಆಚರಿಸುತ್ತಿರುವ ಮತ್ತು ಮುಂದುವರಿಸಬಹುದಾದ ಹಾಗೂ ಪ್ರಚಾರ ಮಾಡಬಹುದಾದ ಸ್ಥಳವನ್ನು ಹುಡುಕುತ್ತಾ ಪೆರ್ಗಡೆಯವರ ನಿವಾಸಕ್ಕೆ ಬಂದರು. ಅವರ ಪದ್ಧತಿಯಂತೆ, ಪೆರ್ಗಡೆ ದಂಪತಿ ಈ ಸಂದರ್ಶಕರಿಗೆ ತಮ್ಮ ಎಲ್ಲಾ ಸಂಪತ್ತು ಮತ್ತು ಗೌರವದಿಂದ ಆತಿಥ್ಯ ನೀಡಿದರು. ಅವರ ಪ್ರಾಮಾಣಿಕತೆ ಮತ್ತು ಔದಾರ್ಯದಿಂದ ಸಂತೋಷಗೊಂಡ ಆ ರಾತ್ರಿ ಧರ್ಮ ದೈವಗಳು ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡರು. ಅವರು ತಮ್ಮ ಭೇಟಿಯ ಉದ್ದೇಶವನ್ನು ಅವರಿಗೆ ವಿವರಿಸಿದರು ಮತ್ತು ದೈವಗಳ ಆರಾಧನೆಗಾಗಿ ತಮ್ಮ ಮನೆಯನ್ನು ಖಾಲಿ ಮಾಡಲು ಮತ್ತು ಧರ್ಮದ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡಲು ಸೂಚಿಸಿದರು.
ಯಾವುದೇ ಪ್ರಶ್ನೆಗಳನ್ನು ಕೇಳದೆ, ಪೆರ್ಗಡೆಯವರು ನೆಲ್ಯಾಡಿ ಬೀಡುವಿನಲ್ಲಿ ಮತ್ತೊಂದು ಮನೆಯನ್ನು ನಿರ್ಮಿಸಿಕೊಂಡು ದೈವಗಳನ್ನು ಪೂಜಿಸಲು ಪ್ರಾರಂಭಿಸಿದರು. ಇದು ಇಂದಿಗೂ ಮುಂದುವರೆದಿದೆ.
ಅವರು ತಮ್ಮ ಪೂಜೆ ಮತ್ತು ಆತಿಥ್ಯದ ಪದ್ಧತಿಯನ್ನು ಮುಂದುವರಿಸುತ್ತಿದ್ದಂತೆ, ಧರ್ಮ ದೈವಗಳು ಮತ್ತೆ ಬಿರ್ಮಣ್ಣ ಪೆರ್ಗಡೆ ಅವರ ಮುಂದೆ ಕಾಣಿಸಿಕೊಂಡರು – ಕಲರಾಹು, ಕಲರ್ಕೈ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ ಎಂಬ ನಾಲ್ಕು ಧರ್ಮ ದೈವಗಳಿಗೆ ಮೀಸಲಾದ ಪ್ರತ್ಯೇಕ ದೇವಾಲಯಗಳನ್ನು ನಿರ್ಮಿಸಲು ಸೂಚಿಸಿದರು. ಅಲ್ಲದೆ, ದೈವಗಳ ದೇವತಾಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸಲು ಇಬ್ಬರು ಉದಾತ್ತ ವ್ಯಕ್ತಿಗಳನ್ನು ಮತ್ತು ದೇವಾಲಯಗಳ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಪೆರ್ಗಡೆ ಅವರಿಗೆ ಸಹಾಯ ಮಾಡಲು ನಾಲ್ಕು ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಲು ಸೂಚಿಸಲಾಯಿತು. ಪ್ರತಿಯಾಗಿ, ದೈವಗಳು ಪೆರ್ಗಡೆ ಕುಟುಂಬದ ರಕ್ಷಣೆ, ಹೇರಳವಾದ ದಾನ ಮತ್ತು ‘ಶ್ರೀ ಕ್ಷೇತ್ರ’ಕ್ಕೆ ಖ್ಯಾತಿಯ ಭರವಸೆ ನೀಡಿದವು.
ವಿಧಿವಿಧಾನದಂತೆ, ಪೆರ್ಗಡೆಯವರು ದೇವಾಲಯಗಳನ್ನು ನಿರ್ಮಿಸಿದರು ಮತ್ತು ಆಚರಣೆಗಳನ್ನು ನಿರ್ವಹಿಸಲು ಬ್ರಾಹ್ಮಣ ಪುರೋಹಿತರನ್ನು ಆಹ್ವಾನಿಸಿದರು. ಈ ಪುರೋಹಿತರು ಪೆರ್ಗಡೆಯವರನ್ನು ಸ್ಥಳೀಯ ದೈವಗಳ ಪಕ್ಕದಲ್ಲಿ ಶಿವಲಿಂಗವನ್ನು ಸ್ಥಾಪಿಸಲು ಕೇಳಿಕೊಂಡರು. ನಂತರ ದೈವಗಳು ತಮ್ಮ ಸಾಮಂತ ಅಣ್ಣಪ್ಪ ಸ್ವಾಮಿಯನ್ನು ಮಂಗಳೂರಿನ ಬಳಿಯ ಕದ್ರಿಯಿಂದ ಮಂಜುನಾಥೇಶ್ವರ ದೇವರ ವಿಗ್ರಹವನ್ನು ತರಲು ಕಳುಹಿಸಿದರು. ತರುವಾಯ ಈ ವಿಗ್ರಹದ ಸುತ್ತಲೂ ಮಂಜುನಾಥ ಸ್ವಾಮಿ ದೇವಾಲಯವನ್ನು ನಿರ್ಮಿಸಲಾಯಿತು.
16ನೇ ಶತಮಾನದ ಸುಮಾರಿಗೆ, ದೇವರಾಜ ಹೆಗ್ಗಡೆಯವರು ಉಡುಪಿಯ ಯತಿಗಳಾದ ವಾದಿರಾಜರನ್ನು ದೇವಾಲಯಕ್ಕೆ ಭೇಟಿ ನೀಡಲು ಆಹ್ವಾನಿಸಿದರು. ಸ್ವಾಮೀಜಿ ಸಂತೋಷದಿಂದ ಬಂದರು. ಆದರೆ ಮಂಜುನಾಥ ದೇವರ ವಿಗ್ರಹವನ್ನು ವೈದಿಕ ವಿಧಿಗಳ ಪ್ರಕಾರ ಪ್ರತಿಷ್ಠಾಪಿಸದ ಕಾರಣ ಭಿಕ್ಷೆ (ಅನ್ನದಾನ) ಸ್ವೀಕರಿಸಲು ನಿರಾಕರಿಸಿದರು. ಆ ನಂತರ ಹೆಗ್ಗಡೆಯವರು ಶಿವಲಿಂಗವನ್ನು ಸ್ವತಃ ಪ್ರತಿಷ್ಠಾಪಿಸುವಂತೆ ಸ್ವಾಮೀಜಿಯನ್ನು ವಿನಂತಿಸಿದರು. ವೈದಿಕ ವಿಧಿಗಳ ಆಚರಣೆ ಮತ್ತು ಹೆಗ್ಗಡೆಯವರ ಎಲ್ಲರಿಗೂ ದಾನ ಮಾಡುವುದರಿಂದ ಸಂತೋಷಗೊಂಡ ಸ್ವಾಮೀಜಿಯವರು ಈ ಸ್ಥಳಕ್ಕೆ ಧರ್ಮ ಮತ್ತು ದಾನದ ವಾಸಸ್ಥಾನ ಎಂಬುದಾಗಿ ಧರ್ಮಸ್ಥಳ ಎಂದು ಹೆಸರಿಸಿದರು. ಹೀಗಾಗಿ, 800 ವರ್ಷಗಳ ಹಿಂದೆ ಸ್ಥಾಪಿಸಿದ ದಾನ ಮತ್ತು ಧಾರ್ಮಿಕ ಸಹಿಷ್ಣುತೆಯ ಬೇರುಗಳನ್ನು ಹೆಗ್ಗಡೆ ಕುಟುಂಬದ ಇಪ್ಪತ್ತೊಂದು ತಲೆಮಾರುಗಳು ಪೋಷಿಸಿ ಬಲಪಡಿಸಿವೆ (ಹೆಗ್ಗಡೆ ಎಂಬುದು ಪೆರ್ಗಡೆಯಿಂದ ಬಂದಿರುವಂಥದ್ದು).
ಒಂದು ದೇವಾಲಯದ ಸಾನ್ನಿಧ್ಯವು ಅಲ್ಲಿನ ಪ್ರತಿಷ್ಠಾಪನೆ, ಪೂಜಾ ಕೈಂಕರ್ಯ ವಿಧಾನ, ಆ ಪ್ರತಿಷ್ಠಾಪನೆಯ ವೇಳೆ ಅನುಸರಿಸಿದ ವಿಧಿವತ್ತಾದ ಕ್ರಮ ಮತ್ತು ಯಾರು ಪ್ರತಿಷ್ಠಾಪನೆ ಮಾಡಿದರು ಎಂಬಿತ್ಯಾದಿ ವಿಚಾರಗಳ ಮೇಲೆಯೂ ಅವಲಂಬಿಸಿರುತ್ತದೆ.
ವಾದಿರಾಜರ ಜನ್ಮಸ್ಥಳ ಕುಂದಾಪುರದ ಹೂವಿನಕೆರೆ
ಮತ್ತೆ ವಾದಿರಾಜರ ಬಗೆಗಿನ ವಿವರಕ್ಕೆ ಬರುವುದಾದರೆ, ವಾದಿರಾಜರ ಕಾಲ ಕ್ರಿಸ್ತಶಕ 1480ರಿಂದ 1600ನೇ ಇಸವಿ ಎಂದು ಇತಿಹಾಸ ಹೇಳುತ್ತದೆ. ವಾದಿರಾಜರ ಜನ್ಮಸ್ಥಳ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೂವಿನಕೆರೆ. ಅವರ ಪೂರ್ವಾಶ್ರಮದ ತಂದೆ ಹೆಸರು ರಾಮಾಚಾರ್ಯ, ತಾಯಿ ಸರಸ್ವತಿದೇವಿ. ಸನ್ಯಾಸ ಸ್ವೀಕರಿಸುವ ಮುಂಚಿನ ವಾದಿರಾಜರ ಹೆಸರು ಭೂವರಾಹ.
ರುಕ್ಮಿಣೀಶ ವಿಜಯ ಎಂಬ ಮೇರುಕೃತಿ
ಅನೇಕ ಕೃತಿಗಳನ್ನು ಲೋಕಾರ್ಪಣೆ ಮಾಡಿದಂಥವರು ವಾದಿರಾಜರು.ಇವುಗಳಲ್ಲಿ ‘ರುಕ್ಮಿಣೀಶ ವಿಜಯ’ ಬಹಳ ಖ್ಯಾತಿ ಹೊಂದಿದೆ. ಮಡಿವಂತಿಕೆಯ ಆ ಕಾಲದಲ್ಲಿ ಮಡಿ ಎಂದರೇನು ಎಂಬುದನ್ನು ಕನಕದಾಸರ ಸಖ್ಯ ಪಡೆದು ತೋರಿಸಿದವರು ಈ ಯತಿಗಳು. ಎಲ್ಲೂ ಆಶ್ರಯ ನೀಡದ ಕನಕನಿಗೆ ಆಶ್ರಯ ನೀಡಿ, ಕನಕ ದಾಸರ ಸಾಹಿತ್ಯಾಸಕ್ತಿಗೆ ಅಮೃತವನ್ನಿತ್ತವರು. ಕನಕನಿಗೆ ಶ್ರೀ ಕೃಷ್ಣನ ನಿತ್ಯ ದರ್ಶನಕ್ಕಾಗಿ, ಪ್ರಸಾದಕ್ಕಾಗಿ ವ್ಯವಸ್ಥೆ ಮಾಡಿಸಿದ್ದರು. ಇಷ್ಟೇ ಅಲ್ಲ, ಉತ್ತಮ ಆಡಳಿತಗಾರರೂ ಶಾಸನಕಾರರೂ ಆದಂತಹ ವಾದಿರಾಜ ಸ್ವಾಮಿಗಳನ್ನು ಬಣ್ಣಿಸಲಸಾಧ್ಯ.
ಜಾತಿಗಳನ್ನು ಮೀರಿದ ಯತಿವರ್ಯ
ದೇಶದಾದ್ಯಂತ ಪರ್ಯಟನೆ ಮಾಡಿ, ಸಕಲ ತೀರ್ಥ ನದಿಗಳ ಮಹತ್ವ ತಿಳಿಸಿದ ಯತಿವರೇಣ್ಯರಾದ ವಾದಿರಾಜರದು “ತೀರ್ಥಪ್ರಬಂಧ” ಎಂಬುದು ಅತ್ಯುತ್ತಮವಾದ ಕೊಡುಗೆ. ಕನ್ನಡದಲ್ಲಿ ಗಜೇಂದ್ರ ಮೋಕ್ಷವನ್ನು ತುಂಬ ಸೊಗಸಾಗಿ ರಚಿಸಿದ್ದಾರೆ ವಾದಿರಾಜರು. ಮಡಿವಂತಿಕೆಯಲ್ಲಿ ಪರಿವರ್ತನೆ ತಂದಾಗ, ಕೆಲವರು ಯತಿಗಳನ್ನು ತೊರೆದರು. ಆಗ ತನ್ನ ತಪೋ ಶಕ್ತಿಯ ಮೂಲಕ ಮೂವತ್ತಮೂರು ಮೊಗವೀರ ಮಕ್ಕಳಿಗೆ ದ್ವಿಜತ್ವ ಕೊಟ್ಟು, ನಿಜವಾದ ಮಡಿವಂತಿಕೆ ಯಾವುದೆಂದು ತೋರಿಸಿ ಕೊಟ್ಟವರೇ ವಾದಿರಾಜ ಯತಿಗಳು.
ವಾದಿರಾಜಗುಳ್ಳ ಎಂಬ ಮಟ್ಟುಬದನೆ
ಇನ್ನು ಆಸಕ್ತಿಕರ ಸಂಗತಿ ಏನೆಂದರೆ, ಮಟ್ಟುಗುಳ್ಳ ಅಥವಾ ವಾದಿರಾಜ ಗುಳ್ಳ ಎಂದು ಕರೆಯುವ ಒಂದು ವಿಶಿಷ್ಟ ಬದನೆಕಾಯಿ ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಬೆಳೆಯಲಾಗುತ್ತದೆ. ಇದು ಸ್ಥಳೀಯವಾಗಿ ಪ್ರಸಿದ್ಧವಾಗಿದ್ದು, ಯತಿಗಳಾದ ವಾದಿರಾಜರೊಂದಿಗೆ ಸಂಬಂಧ ಹೊಂದಿರುವ ದಂತಕಥೆಯಿದೆ. ಮಟ್ಟುಗುಳ್ಳ ಹಸಿರು ಬಣ್ಣದ, ಗೋಳಾಕಾರದ ಬದನೆಕಾಯಿ. ಇದು ಆಯಾ ಋತುವಿನಲ್ಲಿ ಮಾತ್ರ ಬೆಳೆಯುತ್ತದೆ ಮತ್ತು ವಿಶಿಷ್ಟ ರುಚಿಯನ್ನು ಹೊಂದಿದೆ. ಸ್ಥಳೀಯ ನಂಬಿಕೆಗಳ ಪ್ರಕಾರ, ವಾದಿರಾಜರು ಈ ತರಕಾರಿಯನ್ನು ಮಟ್ಟು ಗ್ರಾಮದ ರೈತರಿಗೆ ಆಶೀರ್ವಾದವಾಗಿ ನೀಡಿದರು ಎಂದು ಹೇಳಲಾಗುತ್ತದೆ. ಇದನ್ನು “ಉಡುಪಿ ಬದನೆ” ಅಥವಾ “ವಾದಿರಾಜ ಬದನೆ” ಎಂದು ಸಹ ಕರೆಯಲಾಗುತ್ತದೆ.
ರಾಘವೇಂದ್ರ ಸ್ವಾಮಿಗಳಿಗೂ ಮುಂಚೆಯೇ ಸಶರೀರರಾಗಿ ವೃಂದಾವನಸ್ಥರಾದರು
ಇನ್ನು ಉಡುಪಿಯಲ್ಲಿ ಈಗಿನ ರೀತಿಯ ಪರ್ಯಾಯ ಪದ್ಧತಿಯ ಸಂವಿಧಾನ ರೂಪಿಸಿದವರು ವಾದಿರಾಜರು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳಿಗಿಂತಲೂ ಹಿಂದೆಯೇ ಸಶರೀರರಾಗಿ ವೃಂದಾವನಸ್ಥರಾದವರು. ಹಯಗ್ರೀವ (ಜ್ಞಾನ ವೃದ್ಧಿ) ದೇವರ ಉಪಾಸಕರು. ಮಾನವ ಕಾಯದ ಸಕಲ ನಿಯಮವನ್ನೂ ಪಾಲಿಸಿಕೊಂಡು 120 ವರ್ಷ 5 ದಿನಗಳವರೆಗೆ ಪೂರ್ಣಾಯುರ್ ಆರೋಗ್ಯದಿಂದ ಇದ್ದು, ಸಾಕು ಈ ಭವದ ಬಂಧನ ಎಂದು ಸಶರೀರವಾಗಿ ವೃಂದಾವನಸ್ಥರಾದರು. ಸೋಂದಾ ಕ್ಷೇತ್ರವು ವಾದಿರಾಜರ ವೃಂದಾವನ ಇರುವ ಸ್ಥಳ. ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಬಹಳ ಹತ್ತಿರವಾದಂಥ ಆ ಕ್ಷೇತ್ರದಲ್ಲಿ ಹಯಗ್ರೀವರ ಸಾನ್ನಿಧ್ಯವಿದೆ. ವಾದಿರಾಜರ ಆರಾಧ್ಯ ದೈವ ಹಯಗ್ರೀವರು. ಇಂದಿಗೂ ಬಹಳ ಮಂದಿ ತಮ್ಮ ಮಕ್ಕಳಿಗೆ ಈ ಕ್ಷೇತ್ರದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಲಿ ಎಂದೋ ಅಥವಾ ಏನಾದರೂ ಸಮಸ್ಯೆಯಾದಲ್ಲಿ ಅದರ ನಿವಾರಣೆಗೆಂದು ತುಲಾಭಾರ ಮಾಡಿಸುವುದಾಗಿ ಹರಕೆ ಹೊತ್ತು, ಅಂದುಕೊಂಡ ಕೆಲಸವು ಆದ ನಂತರದಲ್ಲಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ವಾದಿರಾಜ ಗುರುಗಳನ್ನು ಭಾವೀ ಸಮೀರರು (ವಾಯು ದೇವರು) ಎಂದೂ ಸೋಂದಾ ಕ್ಷೇತ್ರದಲ್ಲಿಯೇ ಇರುವಂಥ ಭೂತರಾಜರನ್ನು ಭಾವೀ ರುದ್ರದೇವರೆಂದೂ ಆಸ್ತಿಕರ ನಂಬಿಕೆಯಾಗಿದೆ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ)
ಪೂರಕ ಮಾಹಿತಿ: ಧರ್ಮಸ್ಥಳದ ವೆಬ್ ಸೈಟ್
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 am, Wed, 6 August 25




