Vastu Tips: ಮನೆಯಲ್ಲಿ ದೇವರ ಕೋಣೆ ನಿರ್ಮಿಸುವ ಮೊದಲು ಈ ಅಂಶಗಳು ಗಮನದಲ್ಲಿರಲಿ
ಮನೆಯಲ್ಲಿ ಪೂಜಾ ಸ್ಥಳವನ್ನು ಯಾವಾಗಲೂ ಉತ್ತರಾಭಿಮುಖ ಅಥವಾ ಪೂರ್ವಾಭಿಮುಖವಾಗಿ ನಿರ್ಮಿಸಬೇಕು. ಆರಾಧನಾ ಕೋಣೆಯಲ್ಲಿ ದೇವರ ವಿಗ್ರಹಗಳನ್ನು ಮುಖಾಮುಖಿಯಾಗಿ ಇಡಬಾರದು. ದೇವರ ಚಿತ್ರ ಅಥವಾ ವಿಗ್ರಹಗಳು ಉತ್ತರ ಮತ್ತು ದಕ್ಷಿಣ ದಿಕ್ಕಿನ ಗೋಡೆಗಳ ಮೇಲೆ ಇರಬಾರದು.
ಈಗೀಗ ಮನೆ ಕಟ್ಟುವುದೆಂದರೆ ಸಣ್ಣ ಮಾತಲ್ಲ. ಎಷ್ಟೇ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿ ಮುಗಿಸಬೇಕೆಂದರೂ ಖರ್ಚುವೆಚ್ಚ ನಿರೀಕ್ಷೆ ಮೀರಿ ಸಾಗುತ್ತದೆ. ಮನೆಯ ಅಂದಚಂದ, ವಿನ್ಯಾಸ, ವಿಶಾಲತೆ ಬಗ್ಗೆ ಎಷ್ಟೇ ಗಮನ ಹರಿಸಿದದರೂ ಕೊನೆಯಲ್ಲಿ ಪರಿಗಣನೆಗೆ ಬರುವುದು ನೆಮ್ಮದಿ ಮಾತ್ರ. ಯಾವ ಮನೆಯಲ್ಲಿ ನೆಮ್ಮದಿ ಇರುತ್ತದೋ, ಶುಭ ಕಳೆ ಇರುತ್ತದೋ ಅಲ್ಲಿ ಆರಾಮಾಗಿ ವಾಸಿಸುವುದು ಸಾಧ್ಯವಾಗುತ್ತದೆ. ಹಿರಿಯರ ನಂಬಿಕೆ ಪ್ರಕಾರ ಮನೆಯಲ್ಲಿ ನೆಮ್ಮದಿ ನೆಲೆಯೂರುವುದಕ್ಕೆ ವಾಸ್ತು ಅತ್ಯಂತ ಪ್ರಮುಖ ಎನ್ನಲಾಗುತ್ತದೆ. ಹೀಗಾಗಿ ಯಾವುದೇ ಮನೆಯ ನಿರ್ಮಾಣದಲ್ಲಿ ವಾಸ್ತು ನಿಯಮಗಳು ಬಹಳ ಮುಖ್ಯ. ಮನೆಯ ಮುಖ್ಯದ್ವಾರ ಯಾವ ದಿಕ್ಕಿನಲ್ಲಿರಬೇಕು? ಅಡುಗೆ ಮನೆ ಎಲ್ಲಿರಬೇಕು? ದೇವರ ಕೋಣೆಯನ್ನು ಎಲ್ಲಿ ನಿರ್ಮಿಸಬೇಕು? ಎಂಬಲ್ಲಿಂದ ಹಿಡಿದು ಯಾವ ರೀತಿಯ ದೇವರ ಮೂರ್ತಿಯನ್ನು ಇಡಬೇಕು ಎನ್ನುವ ತನಕವೂ ವಾಸ್ತು ಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಮನಃಶಾಂತಿಗೆ ಅತ್ಯಂತ ಸಹಕಾರಿಯಾಗುವ ದೇವರಕೋಣೆಯನ್ನು ಹೇಗೆ ನಿರ್ಮಿಸಿಕೊಳ್ಳಬೇಕು, ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎನ್ನುವ ಬಗ್ಗೆ ಇಂದಿನ ಈ ಲೇಖನದಲ್ಲಿ ಕೆಲವು ಅಂಶಗಳನ್ನು ನೀಡಲಾಗಿದೆ.
ಮನೆಯಲ್ಲಿ ಪೂಜಾ ಸ್ಥಳವನ್ನು ಯಾವಾಗಲೂ ಉತ್ತರಾಭಿಮುಖ ಅಥವಾ ಪೂರ್ವಾಭಿಮುಖವಾಗಿ ನಿರ್ಮಿಸಬೇಕು. ಆರಾಧನಾ ಕೋಣೆಯಲ್ಲಿ ದೇವರ ವಿಗ್ರಹಗಳನ್ನು ಮುಖಾಮುಖಿಯಾಗಿ ಇಡಬಾರದು. ದೇವರ ಚಿತ್ರ ಅಥವಾ ವಿಗ್ರಹಗಳು ಉತ್ತರ ಮತ್ತು ದಕ್ಷಿಣ ದಿಕ್ಕಿನ ಗೋಡೆಗಳ ಮೇಲೆ ಇರಬಾರದು. ದೇವರ ಮನೆಯಲ್ಲಿ ಎಂದಿಗೂ ವಿಗ್ರಹಗಳನ್ನು ನೇರವಾಗಿ ಬಾಗಿಲಿನ ಮುಂದೆ ಇಡಬಾರದು. ಪುರಾತನ ದೇವಸ್ಥಾನದಿಂದ ತಂದ ಮೂರ್ತಿಯನ್ನು ಪೂಜೆಯ ಮನೆಯಲ್ಲಿ ಇಡುವುದು ಸಾಧುವಲ್ಲ.
ಅಂತೆಯೇ, ಪೂಜೆಯ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿರಬೇಕು. ದೇವರ ಕೋಣೆಯ ನೆಲಕ್ಕೆ ಬಿಳಿ ಅಥವಾ ತಿಳಿ ಹಳದಿ ಬಣ್ಣವನ್ನು ಲೇಪಿಸಿದ್ದರೆ ಅದು ಹೆಚ್ಚು ಪ್ರಶಾಂತತೆಯನ್ನು ಕೊಡುತ್ತದೆ. ಅದಕ್ಕೆ ಪೂರಕವಾಗಿ ಗೋಡೆಗಳ ಬಣ್ಣ ಬಿಳಿ, ತಿಳಿ ಹಳದಿ ಅಥವಾ ತಿಳಿ ನೀಲಿ ಬಣ್ಣದ್ದಾಗಿದ್ದರೆ ಉತ್ತಮ. ಪೂಜಾ ಮನೆಯಲ್ಲಿ ನೀವು ಹವನ ಕುಂಡವನ್ನು ಮಾಡಲು ಬಯಸಿದರೆ, ಅದನ್ನು ಯಾವಾಗಲೂ ಅಗ್ನಿ ಮೂಲೆಯಲ್ಲೇ ಇರಬೇಕು.
ಪೂಜೆ ಮಾಡುವಾಗ ಉತ್ತರ ದಿಕ್ಕಿನಲ್ಲಿ ಕುಳಿತು ದೇವರ ಮೂರ್ತಿಯನ್ನು ಪೂಜಿಸಿದರೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇದೆ. ಸಂಪತ್ತು ಮತ್ತು ಆಹಾರದ ಪ್ರಾಪ್ತಿಗಾಗಿ ಪೂರ್ವ ದಿಕ್ಕಿನಲ್ಲಿ ಕುಳಿತು ಪೂಜೆಯನ್ನು ಮಾಡಬೇಕು ಎನ್ನುವ ವಾಡಿಕೆಯೂ ಇದೆ. ಬ್ರಹ್ಮ, ವಿಷ್ಣು, ಮಹೇಶ್ವರ, ಇಂದ್ರ, ಸೂರ್ಯ ಮತ್ತು ಕಾರ್ತಿಕೇಯರ ಮೂರ್ತಿಗಳನ್ನು ಪೂಜೆಯ ಮನೆಯಲ್ಲಿ ಪ್ರತಿಷ್ಠಾಪಿಸಲು ಬಯಸಿದರೆ ಯಾವಾಗಲೂ ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಿ ಕುಳಿತು ಪೂಜೆ ಮಾಡಬೇಕು.
ದೇವರ ಕೋಣೆಯಲ್ಲಿ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಎಂದಿಗೂ ಮುಚ್ಚಿಡಬಾರದು. ಅದೇ ರೀತಿ ಮಲಗುವ ಕೋಣೆಯಲ್ಲಿ ಪೂಜೆಯ ಮನೆಯನ್ನು ಎಂದಿಗೂ ನಿರ್ಮಿಸಬಾರದು. ಒಂದುವೇಳೆ, ಸ್ಥಳ ಅಭಾವವಿದ್ದು ಅನಿವಾರ್ಯವಾದರೆ ದೇವರ ಕೋಣೆಯನ್ನು ರಾತ್ರಿ ಪರದೆಯಿಂದ ಮುಚ್ಚುವುದು ಸೂಕ್ತ.
ದೇವರ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಶುದ್ಧವಾಗಿ ಇಟ್ಟುಕೊಳ್ಳಬೇಕು. ಯಾವುದೇ ಅಪವಿತ್ರ ವಸ್ತುವನ್ನು ಅಲ್ಲಿ ಇಡಬಾರದು. ದೇವರ ಕೋಣೆ ಬಳಿ ಪೊರಕೆ ಅಥವಾ ಡಸ್ಟ್ ಬಿನ್ ಇಡುವುದಾಗಲೀ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಯಿಂದಲೇ ದೇವರ ಮನೆಯನ್ನು ಗುಡಿಸುವುದಾಗಲೀ ಮಾಡಬಾರದು. ಅದಕ್ಕಾಗಿ ಪ್ರತ್ಯೇಕ ಸ್ವಚ್ಛತಾ ಪರಿಕರಗಳನ್ನು ಉಪಯೋಗಿಸುವುದು ಸೂಕ್ತ.
(Vastu tips to build god room and perform pooja in house)
ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಅಡುಗೆ ಕೋಣೆಯಿಂದ ಅತಿಥಿಗಳ ಕೋಣೆ ತನಕ ಈ ಬಣ್ಣ ಇದ್ದರೆ ಒಳಿತು