ಕುಜದೋಷ ಎಂಬ ಪದವನ್ನು ಯಾರು ಕೇಳಿಲ್ಲ ಹೇಳಿ . ವಿವಾಹಕ್ಕೆ ಅಣಿ ಆದರೆ ಹುಡುಗಿಗೆ / ಹುಡುಗನಿಗೆ ಕುಜದೋಷ ಇದೆಯೇ? ಎಂದು ವಿಚಾರಿಸುವವರೇ ಹೆಚ್ಚು. ಏನೀ ಕುಜದೋಷವೆಂದರೆ? ಇದಕ್ಕೆ ಮೇಲ್ನೋಟದ ಉತ್ತರ ನೀಡುವುದಾದರೆ ನಮ್ಮ ಜನ್ಮ ಕುಂಡಲಿಯಲ್ಲಿ ಲಗ್ನ ಎಂದು ಬರೆದ ಒಂದು ಕೋಣೆಯಿದೆ. ಅದರಿಂದ ಏಳನೇ ಮನೆಯಲ್ಲಿ ಕುಜ/ಅಂಗಾರಕನಿದ್ದರೆ ಅಥವಾ ಚಂದ್ರನಿರುವ ಕೋಣೆಯಿಂದ ಏಳನೇ ಮನೆಯಲ್ಲಿ ಕುಜನಿದ್ದರೆ .. ಅಂತಹ ಸಂದರ್ಭದಲ್ಲಿ ಕುಜದೋಷವನ್ನು ಹೇಳಬೇಕು ಎಂದು ಜೋತಿಷ್ಯ ಹೇಳುತ್ತದೆ. ಶಾಸ್ತ್ರದ ಪ್ರಕಾರ ಗಂಭೀರವಾದ ಚಿಂತನೆ ಈ ವಿಚಾರದ ಕುರಿತಾಗಿ ಮಾಡಿದಾಗ ಕೆಲವೊಂದು ಸಲ ಆ ಏಳನೇ ಮನೆಗೆ ಶುಭಗ್ರಹಗಳ ರಕ್ಷೆ ಇದ್ದರೆ ಆ ಕುಜದೋಷದ ಅಶುಭಫಲದ ಪ್ರಮಾಣ ಕಡಿಮೆ ಇರುತ್ತದೆ.
ಈ ದೋಷದಿಂದ ಆಗುವ ಅಶುಭವೇನು ಎಂದು ಹೇಳುವುದಾದರೆ ಮುಖ್ಯವಾಗಿ ಇದರ ಅಶುಭಫಲ ವಿಯೋಗ (ಕಳೆದುಕೊಳ್ಳುವಿಕೆ). ಇದು ಹೆಚ್ಚಾಗಿ ವಿವಾಹ ವಿಚಾರದಲ್ಲಿ ಉಂಟಾಗುವ ಸಮಸ್ಯೆ. ಈ ದೋಷ ಬರಲು ಕಾರಣವೇನು ಎಂಬುದಾಗಿ ಚಿಂತನೆ ಮಾಡಿದರೆ ಕಾರಣವೊಂದೇ ಜನ್ಮಾಂತರೀಯ ಕರ್ಮಫಲ. ಮನುಷ್ಯ ಬುದ್ಧಿಪೂರ್ವಕವಾಗಿ ಪರರಿಗೆ ಕೇಡನ್ನು ಬಯಸುವುದು, ಜಮೀನು (ಭೂಸಂಬಂಧಿತ) ವ್ಯಾಜ್ಯಗಳಲ್ಲಿ ಮೋಸಮಾಡುವುದು ಮತ್ತು ಸುಬ್ರಹ್ಮಣ್ಯನ,ನಾಗನ ಕುರಿತಾಗಿ ಅಪಚಾರವೆಸಗುವುದು, ಅಶುದ್ಧ ಚಿತ್ತರಾಗಿ ವ್ಯವಹರಿಸುವುದು. ಈ ಎಲ್ಲಾ ಸಾಮಾನ್ಯ ಕಾರಣಗಳಿಂದ ಮತ್ತು ಇನ್ನೂ ಹಲವು ಕಾರಣಗಳಿಂದ ಈ ದೋಷ ಬರುತ್ತದೆ. ಇದಲ್ಲದೆ ಭೂ ಸಂಬಂಧ ಬರುವ ಸಮಸ್ಯೆಗೂ ಪರೋಕ್ಷವಾಗಿ ಕಾರಣ.
ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ ಪರಿಹಾರವಿಲ್ಲದ ದೋಷ, ಸಮಸ್ಯೆಗಳು ಇಲ್ಲವೇ ಇಲ್ಲ. ಸರಿ ದಾರಿ ನಾವು ಹುಡಕಬೇಕು. ಹುಡುಕುವುದರಲ್ಲಿ ಎಡವಿದರೆ ತಪ್ಪು ದೇವರದ್ದಲ್ಲ. ವಿವಾಹ ವಿಚಾರದಲ್ಲಿ ನೋಡುವುದಾದರೆ ಸಪ್ತಮ ಸ್ಥಾನದಲ್ಲಿ ಕುಜನು ಬಲವಾಗಿದ್ದರೆ ಅರ್ಕವಿವಾಹ, ರಂಭಾವಿವಾಹ, ಕುಂಭವಿವಾಹ ಎಂಬ ಕರ್ಮಾಂಗವನ್ನು ಮಾಡಿಸಬೇಕು. ಇದರ ಅರ್ಥವೇನೆಂದರೆ ಉದಾಹರಣೆಗೆ ಕುಂಭವಿವಾಹದ ಕುರಿತಾಗಿ ಹೇಳುವುದಾದರೆ ಕುಂಭವನ್ನು ಪುರುಷನಾಗಿ ಕಲ್ಪಿಸಿ , ಅದರೊಂದಿಗಿ ಕನ್ಯೆಯ ವಿವಾಹ ಮಾಡಿಸಿ , ನಂತರದ ಕ್ಷಣದಲ್ಲಿ ಆ ಕುಂಭದೊಂದಿಗೆ ವಿಯೋಗ ಮಾಡಿಸುವುದು. ಇದರಿಂದ ಆ ಕನ್ಯೆ ಕುಜದೋಷದಿಂದಾಗುವ ವಿಯೋಗವನ್ನು ಅನುಭವಿಸಿದಂತಾಯಿತು. ಇದೇ ರೀತಿ ಸಪ್ತಮದ ಕುಜನ ಪ್ರಭಾವ ಕಡಿಮೆ ಇದ್ದಲ್ಲಿ ಕುಜಶಾಂತಿಯನ್ನು ಮಾಡಿ ಕಾರ್ಯವನ್ನು ಮಾಡುವ ಪದ್ಧತಿಯಿದೆ. ಇದರೊಂದಿಗೆ ವರ ಮತ್ತು ಕನ್ಯೆಯ ಕುಂಡಲಿಯ ಸಪ್ತಮದಲ್ಲಿ ಸಮವಾದ ಬಲವುಳ್ಳ ಕುಜನು ಇದ್ದರೆ ಅಂತಹ ವ್ಯಕ್ತಿಗಳ ವಿವಾಹ ಸಂಘಟನೆ ಉತ್ತಮವಾಗುತ್ತದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : “ಯಜ್ಞ” ಎಂದರೇನು? ಯಜ್ಞವನ್ನು ಹೇಗೆ ಮಾಡಬೇಕು ? ಇಲ್ಲಿದೆ ಮಾಹಿತಿ
ಮೇಲಿನ ವಿಚಾರವು ಅಶುಭಫಲ ಕುರಿತಾಗಿದೆ. ಅದೇ ರೀತಿ ಕುಜನು ನಮ್ಮ ಕುಂಡಲಿಯಲ್ಲಿ ಉತ್ತಮಸ್ಥಾನದಲ್ಲಿದ್ದರೆ ಅತ್ಯುತ್ತಮ ಫಲವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೇ ಅವನನ್ನು ಶಾಸ್ತ್ರಕಾರರು “ಕಾಂತಿಪ್ರದೋ ಮಂಗಲಃ” ಎಂದಿದ್ದಾರೆ. ನವಗ್ರಹ ಮಂಡಲದಲ್ಲಿ ಸೂರ್ಯನ ಬಲಭಾಗದಲ್ಲಿ ತ್ರಿಕೋಣಾಕಾರ ಮಂಡಲದಲ್ಲಿ ಕೆಂಪುಬಣ್ಣದಿಂದ ಆರಾಧಿಸಲ್ಪಡುವವನೇ ಕುಜ. ಇವನಿಗೆ ಖದಿರ (ಕಾಚಿ ಮರ) ಸಮಿಧೆ ಅತ್ಯಂತ ಪ್ರಿಯ. ಇದರಲ್ಲಿ ಔಷಧೀಯ ಗುಣಗಳೂ ಇವೆ. ಈ ಮರದ ತೊಗಟೆಯ ಕಷಾಯದ ಸ್ನಾನ ಮತ್ತು ಪಾನ ಅತ್ಯಂತ ಉತ್ತಮ (ನಿಯಮಿತವಾಗಿ ಸರಿಯಾದ ಸಲಹೆ ಮೇರೆಗೆ ಮಾಡಿ) . ಕುಜನ ವಿಶೇಷತೆಯೆಂದರೆ ಇವನು ಭೂಕಾರತ್ವವನ್ನು ಹೊಂದಿರುವಂತವನು. ಸ್ವಾಭಾವಿಕವಾಗಿ ಹೇಳುವುದಾದರೆ ಕುಜನ ಮತ್ತು ಈ ಗ್ರಹದ ಕುರಿತಾದ ದೇವತೆಯಾದ ಸುಬ್ರಹ್ಮಣ್ಯನ ಸೇವೆ, ಪೂಜೆ, ಆರಾಧನೆ, ಜಪಗಳಿಂದ ನಮ್ಮ ಜೀವನದಲ್ಲಿ ಕಾಂತಿಯನ್ನು ಹಾಗಯೇ ಭೂ ಲಾಭವನ್ನು ಹೊಂದುವುದರಲ್ಲಿ ಸಂಶಯವೇ ಇಲ್ಲ. ಯಾರು ಧರ್ಮ ಮಾರ್ಗದಲ್ಲಿ ಶ್ರದ್ಧೆಯಿಂದ ಕುಜನ ಆರಾಧನೆ ಮಾಡುತ್ತಾರೋ ಅವರು ಭೂಲಾಭಾದಿ ಶುಭಫಲವನ್ನು ಹೊಂದುತ್ತಾರೆ ಮತ್ತು ಕುಜದೋಷದಂತಹ ಕ್ಲೇಶದಿಂದ ಪರಿಹಾರವನ್ನು ಪಡೆಯುತ್ತಾರೆ.
ಧರಣೀಗರ್ಭಸಂಭೂತಂ ವಿದ್ಯುತ್ಕಾಂಚನ ಸನ್ನಿಭಂ |
ಕುಮಾರಂ ಶಕ್ತಿಹಸ್ತಂ ಚ ಲೋಹಿತಾಂಗಂ ನಮಾಮ್ಯಹಮ್ ||
ಇದು ಕುಜನ ಕುರಿತಾದ ಮಂತ್ರ ಇದನ್ನು ಭಾವಪೂರ್ಣವಾಗಿ ಜಪಿಸಿ ಸಾರ್ಥಕ್ಯವನ್ನು ಹೊಂದೋಣ ಎಂದು ಹೇಳುತ್ತಾ ಈ ಸಲದ ಸಂಚಿಕೆ ಮುಗಿಸುತ್ತೇನೆ.
(ಶುಕ್ರನ ಕುರಿತಾಗಿ ಮುಂದಿನ ಸಲ ಚಿಂತನೆ ಮಾಡೋಣ)
ಡಾ.ಕೇಶವ ಕಿರಣ ಬಿ,
ಪ್ರಾಧ್ಯಾಪಕರು,
S.R.B.S.S College ಹೊನ್ನಾವರ,
kkmanasvi@gamail.com