“ಯಜ್ಞ” ಎಂದರೇನು? ಯಜ್ಞವನ್ನು ಹೇಗೆ ಮಾಡಬೇಕು ? ಇಲ್ಲಿದೆ ಮಾಹಿತಿ
ಯಜ್ಞ – ಯಾಗ – ಹೋಮ ಇವೆಲ್ಲ ಸಾಮಾನ್ಯ ಒಂದೇ ಅರ್ಥಕೊಡುವ ಬೇರೆ ಬೇರೆ ಶಬ್ದಗಳು. ದೈನಂದಿನ ಬದುಕಿನಲ್ಲಿ ನಾವು ಹೋಮ ಸುಟ್ಟೆವು , ಹೋಮ ಹಾಕಿದ್ರು ಎಂಬ ಮಾತನ್ನು ಕೇಳುತ್ತೇವೆ. ಆದರೆ ಅದೇ ಹೋಮ , ಅದೇ ಹವನ ನಮ್ಮ ಸನಾತನ ಸಂಸ್ಕೃತಿಯ ತ್ಯಾಗದ ಬುನಾದಿ ಎಂಬುದು ನಮಗೇ ತಿಳಿಯದಿರುವ ಸತ್ಯ.
ಸ್ವಚ್ಛವಾದ ವಾತಾವರಣ , ನೆಮ್ಮದಿಯ ಬದುಕು, ಯಾವುದೇ ಗೊಂದಲವಿಲ್ಲದ ಒತ್ತಡವಿಲ್ಲದ ಬದುಕು ಬಾಳುವ ಕನಸು ಯಾರಿಗಿಲ್ಲ ಹೇಳಿ, ಸೃಷ್ಟಿಯಲ್ಲಿ ಪ್ರತೀ ಜೀವಿಯು ಬಯಸುವುದು ಇದನ್ನೇ, ಆದರೆ ಎಲ್ಲರೂ ಆ ಮಾರ್ಗದೆಡೆಗೆ ಸಾಗಲು ದಾರಿ ಕಾಣದೇ ಅಥವಾ ದೊರೆತ ದಾರಿಯಲ್ಲಿ ಸರಿಯಾಗಿ ಸಾಗದೇ ಏನೇನೋ ಮಾಡಿ ಕೊನೆಗೆ ವಾಸ್ತವಿಕತೆಯನ್ನೇ ಮರೆತು ಅಸಂಕಲ್ಪಿತರಂತೆ ಬದುಕು ಸವೆಯುತ್ತಾರೆ. ಹಾಗಾದರೆ ಏನಿದಕ್ಕೆ ಪರಿಹಾರ? ನಾವು ಇದನ್ನು ದೃಢವಾಗಿ ನಂಬಲೇಬೇಕು ಪರಿಹಾರವಾಗದ ಅಥವಾ ಪರಿಹಾರವಿಲ್ಲದ ಸಮಸ್ಯೆ ಇಲ್ಲವೇ ಇಲ್ಲ ಎಂದು. ಅರ್ಥಾತ್ ನಾವು ಮೊದಲು ನೆಮ್ಮದಿಯ ಹುಡುಕುವ ಬದಲು ತ್ಯಾಗ ಜೀವನವನ್ನು ಅಭ್ಯಸಿಸಬೇಕು. ಅದನ್ನೇ ಉಪನಿಷತ್ ಹೇಳುತ್ತದೆ – “ತ್ಯಾಗೇನೈಕೇ ಅಮೃತತ್ವಮಾನಶುಃ” ಎಂದು. ಅಮೃತಪ್ರಾಯ ಜೀವನಕ್ಕೆ ತ್ಯಾಗವೊಂದೇ ಮಾರ್ಗ. ಇಲ್ಲಿ ತ್ಯಾಗವೆಂದರೆ ಕೇವಲ ಬಿಟ್ಟುಕೊಡುವುದು ಎಂದರ್ಥವಲ್ಲ. ಸಂಪೂರ್ಣವಾಗಿ ನನ್ನದೆಂಬ ಭಾವವನ್ನು ತೊರೆಯುವುದು ಎಂಬರ್ಥ. ಈಗ ಮನಸ್ಸಿನಲ್ಲಿ ಪ್ರಶ್ನೆ ಉದಯವಾಗಬಹುದು ಮೇಲಿನ “ಯಜ್ಞ” ಎಂಬ ಶೀರ್ಷಿಕೆಗೂ ಇದಕ್ಕು ಎತ್ತಣ ಸಂಬಂಧವೆಂದು.
ಯಜ್ಞ – ಯಾಗ – ಹೋಮ ಇವೆಲ್ಲ ಸಾಮಾನ್ಯ ಒಂದೇ ಅರ್ಥಕೊಡುವ ಬೇರೆ ಬೇರೆ ಶಬ್ದಗಳು. ದೈನಂದಿನ ಬದುಕಿನಲ್ಲಿ ನಾವು ಹೋಮ ಸುಟ್ಟೆವು , ಹೋಮ ಹಾಕಿದ್ರು ಎಂಬ ಮಾತನ್ನು ಕೇಳುತ್ತೇವೆ. ಆದರೆ ಅದೇ ಹೋಮ , ಅದೇ ಹವನ ನಮ್ಮ ಸನಾತನ ಸಂಸ್ಕೃತಿಯ ತ್ಯಾಗದ ಬುನಾದಿ ಎಂಬುದು ನಮಗೇ ತಿಳಿಯದಿರುವ ಸತ್ಯ. ಯಾವುದೇ ಯಜ್ಞವಿರಲಿ ಅಲ್ಲಿ ಕೇವಲ ಭಕ್ತಿ ಇದ್ದರೆ ಸಾಲದು. ಸಮರ್ಪಿಸುವ ದ್ರವ್ಯ ನನ್ನದಲ್ಲ ಎನ್ನುವ ಅಪೂರ್ವವಾದ ಭಾವ ನಮ್ಮಲ್ಲಿರಬೇಕು.
ಛೇ ಇದೆಲ್ಲಾ ಕಷ್ಟಕಣ್ರೀ ಎನ್ನುವ ಉದ್ಗಾರ ಬರಬಹುದು ಕೆಲವರಲ್ಲಿ. ಆದರೆ ಇದು ಕಟು ಸತ್ಯ. ಏನೆಂದರೆ ಅದೆಷ್ಟೋ ಜನ ಅಭಿವೃದ್ಧಿಯ ಸಲುವಾಗಿ, ವಿದ್ಯೆಯ ಕುರಿತಾಗಿ, ಆರೋಗ್ಯದ ರಕ್ಷಣೆಗಾಗಿ ಹೋಮವನ್ನು ಮಾಡಿಸಿರುತ್ತಾರೆ. ಕೆಲವರಿಗೆ ಅದರ ಪೂರ್ಣಫಲ ಪ್ರಾಪ್ತವಾಗದೇ ಇದ್ದಿರಬಹುದು. ಅದಕ್ಕೆ ಮುಖ್ಯ ಕಾರಣ ಮಾಡುವ ಕಾರ್ಯದಲ್ಲಿ ತ್ಯಾಗಭಾವವಿಲ್ಲದಿರುವುದು.
ನಾವು ನವಗ್ರಹರನ್ನು ಸಾಮಾನ್ಯವಾಗಿ ತಿಳಿದಿದ್ದೇವೆ. ಅವರ ಕುರಿತಾಗಿ ಶಾಂತಿ/ಯಜ್ಞವನ್ನೂ ಮಾಡಿರುತ್ತೇವೆ. ಅಲ್ಲಿ ಸಮರ್ಪಿಸುವ ದ್ರವ್ಯಗಳ ಬಗ್ಗೆ ಆಳವಾಗಿ ತಿಳಿಯುವುದೇ ಇಲ್ಲ. ಇಲ್ಲಿಂದ ಆರಂಭ ಆಗುತ್ತದೆ ನಮ್ಮ ತ್ಯಾಗದ ಕೊರತೆ. ನಾವು ಆ ದ್ರವ್ಯಗಳ ಬಗ್ಗೆ ತಿಳಿದರೆ ಹಾಗೇ ಯಜ್ಞದಲ್ಲಿ ಹವಿಸ್ಸನ್ನು ಸಮರ್ಪಿಸುವಾಗ “ಇದಂ ನ ಮಮ” ಎಂಬ ವಾಕ್ಯವನ್ನು ಹೇಳುತ್ತಾರೆ (ಹೋಮಿಸಿದ ವಸ್ತು ನನ್ನದಲ್ಲ ಎಂದರ್ಥ) ಇದನ್ನು ಶ್ರದ್ಧೆಯಿಂದ ಗ್ರಹಿಸಿ ಭಾವ ತುಂಬಿ ಮಾಡಿದಾಗ ಗ್ರಹರ ಅನುಗ್ರಹ ಸಂಪೂರ್ಣ ಪ್ರಾಪ್ತವಾಗುತ್ತದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಅಪ್ಪಿತಪ್ಪಿಯೂ ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡಬೇಡಿ, ಇಲ್ಲ ಅಂದ್ರೆ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ
ಈ ಯಜ್ಞವೆಂಬ ಪದ ಕೇವಲ ಅಗ್ನಿಯನ್ನು ಆಧರಿಸಿ ಮಾಡುವ ಕ್ರಿಯೆಗೆ ಮಾತ್ರ ಸೀಮಿತವಲ್ಲ. ಉದಾಹರಣೆಗೆ ನವಗ್ರಹರ ಶಕ್ತಿಯನ್ನರಿತು, ಅಲ್ಲಿ ಅವರ ಬಗ್ಗೆ ಬಳಸುವ ಸಮಿಧೆ ಮುಂತಾದ ದ್ರವ್ಯಗಳ ಕುರಿತಾಗಿ ತಿಳಿದು ತಾನೊಂದು ನೆಪಮಾತ್ರ ಎಂಬ ಭಾವದೊಂದಿಗೆ ಯಾಗವನ್ನು ಮಾಡಿದರೆ ಹೇಗೆ ಸಫಲವೋ ಅದೇ ರೀತಿ ನಾವು ಮಾಡುವ ಪ್ರತೀ ಕಾರ್ಯದಲ್ಲೂ ಆ ರೀತಿಯ ಭಾವವಿದ್ದರೆ ಜೀವನ ತ್ಯಾಗಮಯ ಯಜ್ಞವಾಗಿ ನೆಮ್ಮದಿ ನಮ್ಮನ್ನರಸಿ ಬರುವುದರಲ್ಲಿ ಸಂಶಯವಿಲ್ಲ.
(ಸೂರ್ಯನ ಕುರಿತಾದ ಆರಾಧನೆ ಹೇಗಿದ್ದರೆ ಚೆನ್ನ, ಅದರ ಸಾರ್ಥಕ್ಯ ಹೇಗೆ ಎಂದು ಮುಂದಿನ ಲೇಖನದಲ್ಲಿ ತಿಳಿಯೋಣ)
ಡಾ.ಕೇಶವ ಕಿರಣ ಬಿ
ಪ್ರಾಧ್ಯಾಪಕರು
S.R.B.S.S College, kkmanasvi@gamail.com