ಸೂತಿಕಾ ಗೃಹವೆಂದರೇನು? ಇದು ಯಾವ ದಿಕ್ಕಿನಲ್ಲಿ ಇರಬೇಕು? ಅದರ ಫಲವೇನು?

ಆಶೌಚಗಳಲ್ಲಿ ಎರಡು ವಿಧ ಒಂದು ಜನನವಾದಾಗ ಮತ್ತೊಂದು ಮರಣವಾದಾಗ ಎಂದು. ಮರಣವಾದಾಗ ಬರುವ ಆಶೌಚಕ್ಕೆ ಶಾಸ್ತ್ರೀಯ ಹೆಸರು ಮೃತಕ ಎಂದು. ಜನನವಾದಾಗ ಬರುವ ಆಶೌಚಕ್ಕೆ ಸೂತಕ ಎಂದು ಶಾಸ್ತ್ರೀಯ ಹೆಸರು.

ಸೂತಿಕಾ ಗೃಹವೆಂದರೇನು? ಇದು ಯಾವ ದಿಕ್ಕಿನಲ್ಲಿ ಇರಬೇಕು? ಅದರ ಫಲವೇನು?
ಸಾಂದರ್ಭಿಕ ಚಿತ್ರ

Updated on: Mar 07, 2023 | 6:03 PM

ಆಶೌಚಗಳಲ್ಲಿ ಎರಡು ವಿಧ ಒಂದು ಜನನವಾದಾಗ ಮತ್ತೊಂದು ಮರಣವಾದಾಗ ಎಂದು. ಮರಣವಾದಾಗ ಬರುವ ಆಶೌಚಕ್ಕೆ ಶಾಸ್ತ್ರೀಯ ಹೆಸರು ಮೃತಕ ಎಂದು. ಜನನವಾದಾಗ ಬರುವ ಆಶೌಚಕ್ಕೆ ಸೂತಕ ಎಂದು ಶಾಸ್ತ್ರೀಯ ಹೆಸರು. ಇನ್ನಿರುವ ಹೆಸರುಗಳು ಲೋಕ ರೂಢಿಯಲ್ಲಿ ಬಂದವುಗಳು. ಈಗ ಸೂತಿಕಾ ಎಂದರೆ ಜನನಾಶೌಚ ಎಂದಾಯಿತು. ಹಾಗಾದರೆ ಸೂತಿಕಾ ಗೃಹವೆಂದರೇನು ಎಂದು ತಿಳಿಯೋಣ. ಪ್ರಸವವಾದ ಮೇಲೆ ಬಾಣಂತಿ ಮತ್ತು ಮಗುವು ವಾಸಿಸುವ ಮನೆ ಅಥವಾ ಕೊಠಡಿ ಎಂದರ್ಥ. ಈಗ ನಿಮ್ಮ ಮನಸ್ಸಲ್ಲಿ ಹೀಗೆ ಯೋಚನೆ ಬರಬಹುದು ಅದಕ್ಕೂ ಒಂದು ವಿಶೇಷತೆ ಇದೆಯೇ? ಅದಕ್ಕೂ ದಿಕ್ಕು ನೋಡಬೇಕೇ ಎಂದು.

ಹೌದು ಎಂಬುದೇ ಉತ್ತರ. ನಾವು ಬರೆಯುವಾಗ ಓದುವಾಗ ದಿಕ್ಕು ನೋಡುತ್ತೇವೆ. ಹಾಗಾದರೆ ಇದಕ್ಕೆ ಬೇಡವೇ ದಿಕ್ಕು ಎಂಬ ತರ್ಕವನ್ನು ನಿಮ್ಮ ಮುಂದೆ ಇಡುತ್ತಾ ಈ ಕುರಿತಾಗಿ ಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ. ಒಬ್ಬ ಸ್ತ್ರೀ ತನ್ನ ಜೀವವನ್ನೇ ಪಣಕ್ಕಿಟ್ಟು ತನ್ನ ಗರ್ಭದಿಂದ ಇನ್ನೊಂದು ಪುಟ್ಟ ಜೀವವನ್ನು ಭೂಮಿಗೆ ತರುತ್ತಾಳೆ. ಅದೇನೇ ನೋವು ಬಂದರೂ ತಾನು ತಾಯಿಯಾಗುತ್ತೇನೆ ಎಂಬ ಸಂಭ್ರಮ ಅವಳಲ್ಲಿ ತುಂಬಿರುತ್ತದೆ. ಆ ಸಂಭ್ರಮದ ಮುಂದೆ ಈ ಮಹತ್ತರವಾದ ಪ್ರಸವ ವೇದನೆ ಕಂಡೂ ಕಾಣದಂತಾಗುತ್ತದೆ ಆ ಸ್ತ್ರೀಗೆ.

ವೈಜ್ಞಾನಿಕವಾಗಿಯೂ ಹೌದು ಶಾಸ್ತ್ರೀಯವಾಗಿಯೂ ಹೌದು ಪ್ರಸವ ಪೂರ್ವದ ಒಂದು ತಿಂಗಳು ಮತ್ತು ಪ್ರಸವದ ನಂತರದ ಮೂರು ತಿಂಗಳು ಸ್ತ್ರೀಯ ಮನಸ್ಸು ಒಂದು ರೀತಿಯ ಅಸಮತೋಲನ ಸ್ಥಿತಿಯಲ್ಲಿರುತ್ತದೆ. ಆ ಕಾಲದಲ್ಲಿ ಅವಳು ಕಟುವಾದ ಮಾತನ್ನು ದೊಡ್ಡಾದ ಸದ್ದನ್ನು ವಿಪರೀತವಾದ ಮಾತನ್ನು ಸಹಿಸುವುದಿಲ್ಲ. ಈ ತರಹದ ವಾತಾವರಣ ಅವಳಿಗೆ ತುಂಬಾ ಮಾನಸಿಕ ಹಿಂಸೆಯನ್ನುಂಟು ಮಾಡುತ್ತದೆ ಎಂದು ಪ್ರಾಚೀನ ಶಾಸ್ತ್ರಜ್ಞರು ಹೇಳಿದ್ದಾರೆ ಹಾಗೆಯೇ ನವೀನ ವೈದ್ಯರೂ ಹೇಳುತ್ತಾರೆ.

ಇದನ್ನೂ ಓದಿ:Spiritual: ಪತಿ – ಪತ್ನಿ ಕಲಹ ನಿವಾರಣೆಗೆ ಯಾವ ವ್ರತ ಮಾಡಬೇಕು? ಇಲ್ಲಿದೆ ನೋಡಿ

ಈ ಕಾರಣದಿಂದ ಬಾಣಂತಿಗೆ ಪ್ರತ್ಯೇಕ ವಾಸಸ್ಥಾನ ಕಲ್ಪಿಸಬೇಕು. ಅದಕ್ಕೆ ಪ್ರಶಸ್ತವಾದ ವಾತಾವರಣ ದಿಕ್ಕು ಇತ್ಯಾದಿ ಅತ್ಯವಶ್ಯ. ಏಕೆಂದರೆ ಬಾಣಂತಿ ಯಾವತ್ತೂ ಭಯ ವ್ಯಾಕುಲತೆಗೆ ಒಳಗಾಗಬಾರದು. ಅದರಿಂದ ತುಂಬಾ ತೊಂದರೆಯಾಗುತ್ತದೆ. ಆದ ಕಾರಣದಿಂದ ಹಿಂದಿನವರು ಸೂತಿಕಾ ಗೃಹವೆಂದು ಪ್ರತ್ಯೇಕವಾಗಿ ನಿರ್ಮಾಣ ಮಾಡುತ್ತಿದ್ದರು. ಅದು ಮನೆಯ ನೈಋತ್ಯ ಭಾಗದಲ್ಲಿ ಇರುತ್ತಿತ್ತು. ನೈಋತ್ಯಕ್ಕೆ ನೇರವಾಗಿ ಈಶಾನ್ಯದ ದೃಷ್ಟಿ ಇರುವುದರಿಂದ ಮತ್ತು ಈಶಾನ್ಯವೆಂಬುದು ದೇವಮೂಲೆಯಾದ್ದರಿಂದ ದೇವರ ದೃಷ್ಟಿ ಈ ದಿಕ್ಕಿಗೆ ಇದೆ ಎಂಬ ಮನೋಭಾವದಿಂದ ಈ ದಿಕ್ಕಿನಲ್ಲಿ ಸೂತಿಕಾ ಗೃಹವನ್ನು ನಿರ್ಮಾಣ ಮಾಡುತ್ತಿದ್ದರು. ಅಲ್ಲದೇ ಯಜಮಾನ ಮೂಲೆಯೂ ನೈಋತ್ಯ ಭಾಗವಾಗಿದೆ. ಈ ಎಲ್ಲಾ ಕಾರಣಗಳಿಂದ ಈ ದಿಕ್ಕಿಗೆ ಅತ್ಯಂತ ಪ್ರಾಶಸ್ತ್ಯವನ್ನು ಶಾಸ್ತ್ರದಲ್ಲಿ ಹೇಳಿದ್ದಾರೆ.

ವರ್ತಮಾನದಲ್ಲಿ ಪ್ರತ್ಯೇಕ ಕೊಠಡಿಯ ನಿರ್ಮಾಣ ಕಷ್ಟಸಾಧ್ಯವಾದ್ದರಿಂದ ನಮ್ಮ ಮನೆಯ ಬಾಣನಂತದ ಸಮಯದಲ್ಲಿ ನೈಋತ್ಯ ಭಾಗದಲ್ಲಿ ಬಾಣಂತಿಯ ಸಲುವಾಗಿ ವ್ಯವಸ್ಥೆ ಮಾಡುವುದು ಉತ್ತಮ. ಇದರಿಂದ ಕೆಟ್ಟಕನಸು ವ್ಯಾಕುಲತೆ ಭಯ ಉಂಟಾಗುವುದಿಲ್ಲ. ಅದೇ ರೀತಿ ಆಹಾರವೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಸ್ತ್ರೀಯು ಪ್ರಸವಕ್ಕಿಂತ ಮೊದಲೇ ನಿಗದಿ ಪಡಿಸಿದ ಸೂತಿಕಾ ಗೃಹವನ್ನು ಪ್ರವೇಶಿಸಬೇಕು. ಅದಕ್ಕೆ ಯೋಗ್ಯವಾದ ನಕ್ಷತ್ರಗಳನ್ನು ಜೌತಿಷ್ಯ ಶಾಸ್ತ್ರದಲ್ಲಿ ಹೇಳಿದ್ದಾರೆ. ಅವುಗಳು ಅಶ್ವಿನಿ ರೋಹಿಣಿ ಮೃಗಶಿರ ಪುನರ್ವಸು ಪುಷ್ಯಾ ಉತ್ತರಾ ಉತ್ತರಾಷಾಢಾ ಉತ್ತರಾಭಾದ್ರ ಹಸ್ತ ಚಿತ್ರಾ ಸ್ವಾತಿ ಅನುರಾಧ ಧನಿಷ್ಠಾ ಶತಭಿಷ ನಕ್ಷತ್ರಗಳು. ಸೀಮಂತವಾದ ಮೇಲೆ ಈ ಮೇಲಿನ ನಕ್ಷತ್ರದಂದು ಸೂತಿಕಾ ಗೃಹವನ್ನು ಪ್ರವೇಶಿಸಬೇಕು. ಪ್ರಸವವಾದ ಮೇಲೆ ಮುಹೂರ್ತ ನೋಡಿ ಪ್ರವೇಶಿಸಲು ಆಗುವುದಿಲ್ಲ. ಸೀಮಂತದ ನಂತರ ಮತ್ತು ಪ್ರಸವವಾದ ಮೇಲಿನ ಮೂರು ತಿಂಗಳುಗಳ ಕಾಲ ಭಾಗವತ ಮಹಾಪುರಾಣದಲ್ಲಿ ಬರುವ ಗರ್ಭಸ್ತುತಿಯನ್ನು” ಶ್ರವಣ ಮಾಡುವುದು ಅತ್ಯುತ್ತಮ.

ಡಾ.ಕೇಶವ ಕಿರಣ ಬಿ

Published On - 10:33 am, Mon, 6 March 23