Maha Shivratri 2023: ಶಿವರಾತ್ರಿಯಲ್ಲಿ ಆರಾಧಿಸುವ ಲಿಂಗಬೇಧಗಳು, ಕಲ್ಪೋಕ್ತ ಫಲಗಳು, ಚತುರ್ದಶೀ ಪಾರಣೆಯ ಮಹತ್ವ ಏನು?
ಜಗತ್ತಿನಲ್ಲಿ ಮನುಷ್ಯ ತನ್ನ ಆಧ್ಯಾತ್ಮಿಕ ಹಾಗೂ ಲೌಕಿಕ ಜೀವನದಲ್ಲಿ ಉಂಟಾಗುವ ಮತ್ತು ಬರುವ ದುಃಖದ ನಾಶಕ್ಕಾಗಿ ತ್ಯಾಗಮೂರ್ತಿಯಾದ ಶಿವನ ಆರಾಧನೆ ಮಾಡುವುದು ರೂಢಿ.
ಜಗತ್ತಿನಲ್ಲಿ ಮನುಷ್ಯ ತನ್ನ ಆಧ್ಯಾತ್ಮಿಕ ಹಾಗೂ ಲೌಕಿಕ ಜೀವನದಲ್ಲಿ ಉಂಟಾಗುವ ಮತ್ತು ಬರುವ ದುಃಖದ ನಾಶಕ್ಕಾಗಿ ತ್ಯಾಗಮೂರ್ತಿಯಾದ ಶಿವನ ಆರಾಧನೆ ಮಾಡುವುದು ರೂಢಿ. ಶಿವನು ತನ್ನ ವಿಭೂತಿ ಶಕ್ತಿಯಿಂದ ಸಮಸ್ತ ಅನುಭೋಗಗಳನ್ನು ಉಪಭೋಗಿಸುವ ಶಕ್ತಿಯುಳ್ಳವನಾದರೂ ಅದೆಲ್ಲವೂ ಕ್ಷಣಿಕ ಮತ್ತು ದುಃಖಕ್ಕೆ ಕಾರಣವೆಂಬುದನ್ನು ಸಾರುವ ಕಾರಣದಿಂದ ತನ್ನ ಪೂಜೆಯನ್ನು ಲಿಂಗ ರೂಪದಲ್ಲಿ ಮಾಡುವ ಸ್ಥಿತಿಯನ್ನು ಸೃಷ್ಟಿಸಿಕೊಂಡವಂತವನು ಪರಮಶಿವನು. ಅಂತಹ ಪರಮೇಶ್ವರನನ್ನು ಪ್ರತೀದಿನ ಪೂಜಿಸಿದರೆ ಉತ್ತಮ. ಕನಿಷ್ಠ ಶಿವರಾತ್ರಿಯ ದಿನದಂದಾದರೂ ಪೂಜಿಸಲೇಬೇಕು. ಆ ದಿನದಂದು ಪೂಜಿಸಲು ನಾವೇ ಲಿಂಗವನ್ನು ಸಿದ್ಧಪಡಿಸಿಕೊಳ್ಳುವ ವಿಧಾನ ಮತ್ತು ಅದರ ಫಲಗಳನ್ನು ಶಿವಪುರಾಣ ಮತ್ತು ಧರ್ಮಶಾಸ್ತ್ರದಲ್ಲಿ ವಿಶೇಷವಾಗಿ ಹೇಳಿದ್ದಾರೆ. ಅದನ್ನು ತಿಳಿದು ಶಿವರಾತ್ರೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡೋಣ ಅಲ್ಲವೇ ?
ಲಿಂಗಗಳ ಭೇದಗಳು ಮತ್ತು ಫಲಗಳು
ವಜ್ರದ ಲಿಂಗದಿಂದ ಆಯುಷ್ಯ ಪ್ರಾಪ್ತವಾಗುವುದು. ಮುತ್ತಿನ ಲಿಂಗದಿಂದ ರೋಗ ನಾಶವಾಗುವುದು. ವೈಢೂರ್ಯ ಲಿಂಗದಿಂದ ಶತ್ರುನಾಶವಾಗುವುದು. ಪದ್ಮರಾಗ ಲಿಂಗದಿಂದ ಐಶ್ವರ್ಯ ಪ್ರಾಪ್ತಿಯಾಗುವುದು. ಪುಷ್ಯರಾಗ ಲಿಂಗದಿಂದ ಸುಖಪ್ರಾಪ್ತಿಯಾಗುವುದು. ಇಂದ್ರನೀಲ ಲಿಂಗದಿಂದ ಯಶಸ್ಸು ಲಭಿಸುವುದು. ಪಚ್ಚೆ ಮಣಿಯ ಲಿಂಗದಿಂದ ಪುಷ್ಟಿಯಾಗುವುದು. ಸ್ಫಟಿಕ ಲಿಂಗದಿಂದ ಸಕಲ ಕಾಮನೆಗಳು ಸಿದ್ಧಿಸುವುದು. ಬೆಳ್ಳಿಯ ಲಿಂಗದಿಂದ ಭೂಲಾಭವಾಗುವುದು. ತಾಮ್ರ ಲಿಂಗದಿಂದ ಆಯುಷ್ಯ ಪ್ರಾಪ್ತಿ. ಹಿತ್ತಾಳೆಯ ಲಿಂಗದಿಂದ ತುಷ್ಟಿ. ಕಂಚಿನ ಲಿಂಗದಿಂದ ಕೀರ್ತಿ ಲಾಭ. ಬಂಗಾರದ ಲಿಂಗದಿಂದ ಬ್ರಹ್ಮಹತ್ಯಾ ಮತ್ತು ದೇವಸ್ವತ್ತಿನ ಅಪಹರಣದ ಪಾಪ ನಿವಾರಣೆ. ಶ್ರೀಗಂಧದ ಲಿಂಗದಿಂದ ಸೌಭಾಗ್ಯ ಪ್ರಾಪ್ತಿ. ಹಿಟ್ಟಿನ ಲಿಂಗದಿಂದ ವಿದ್ಯಾಪ್ರಾಪ್ತಿ. ಬಿದಿರಿನ ಮೊಳಕೆಯ ಲಿಂಗದ ಪೂಜೆಯಿಂದ ಸಂತಾನಪ್ರಾಪ್ತಿ. ಹುತ್ತದ ಮಣ್ಣಿನ ಲಿಂಗದಿಂದ ಮನೋಭೀಷ್ಟ ಸಿದ್ಧಿ. ಇವು ಪೂಜಿಸುವುದಕ್ಕೋಸ್ಕರ ಹೇಳಿದ ಲಿಂಗ ಭೇದಗಳು ಮತ್ತು ಅವುಗಳ ಫಲಗಳು. ತಮ್ಮ ತಮ್ಮ ವ್ಯಾಪ್ತಿಗನುಗುಣವಾಗಿ ಲಿಂಗವನ್ನು ಮಾಡಿಕೊಂಡೂ ಪೂಜೆ ಮಾಡಬಹುದು. ಆದರೆ ಅದಕ್ಕಿಂತಲೂ ಮುಖ್ಯ ಶ್ರದ್ಧೆಯ ಭಾವದಿಂದ ಶಿವನ ಆರಾಧನೆ ಮಾಡುವುದು. ಅದರಲ್ಲೂ ಶಿವರಾತ್ರಿಯಂದು ಭಕ್ತಿಶ್ರದ್ಧಾಪೂರ್ವಕ ಯಾರು ಶಿವನ ಪೂಜೆ ಮಾಡುತ್ತಾರೋ ಅವರ ಜೀವನ ಸಾರ್ಥಗೊಳಿಸುವನು ಪರಮೇಶ್ವರನು.
ಇದನ್ನೂ ಓದಿ:Maha Shivaratri 2023: ಈ ಬಾರಿ ಮಹಾಶಿವರಾತ್ರಿ ಯಾವಾಗ?; ದಿನಾಂಕ, ಸಮಯ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ
ಹಾಗೆಯೇ ಭಜಕನು ಭಕ್ತಿಯಿಂದ ಶಿವರಾತ್ರಿಯಂದು ಒಂದು ಬಿಲ್ವಪತ್ರೆಯನ್ನಾದರೂ ಶಿವನಿಗೆ ಅರ್ಪಿಸಲೇ ಬೇಕು. ಬಿಲ್ವಪತ್ರೆಯಲ್ಲಿ ಶಿವನ ಸಾನ್ನಿಧ್ಯವಿದೆ. ಇದನ್ನು ಶಿವನಿಗೆ ಅರ್ಪಿಸುವುದರಿಂದ ಶಿವ ಮತ್ತು ಶಕ್ತಿಯನ್ನು ಒಂದು ಮಾಡಿದ ಪುಣ್ಯಪ್ರಾಪ್ತವಾಗುತ್ತದೆ. ಆದಕಾರಣ ಬಿಲ್ವಾರ್ಪಣೆಯಿಂದ ಜೀವಿಯ ಸಮಸ್ತ ಅಮಂಗಲಗಳೂ ದೂರವಾಗುವುದು ಎಂದು ಶಿವಪುರಾಣದಲ್ಲಿ ಹೇಳಲ್ಪಟ್ಟಿದೆ.
ಪಾರಣೆ ಎಂದರೇನು ಮತ್ತು ಫಲವೇನು ?
ಪಾರಣೆ ಎಂಬ ಶಬ್ದ ಅತ್ಯಂತ ಪುರಾತನವಾದದ್ದು. ಪಾರಣಯೆಂದರೆ ಪೂರ್ಣ ಉಪವಾಸದ ಕೊನೆಯಲ್ಲಿ ವ್ರತ ವಿಸರ್ಜನೆಯ ಸಂದರ್ಭದಲ್ಲಿ ಭಗವಂತನಿಗೆ ನೈವೇದ್ಯ ಮಾಡಿದ ನಂತರ ನಾವು ಆಹಾರ ಸ್ವೀಕಾರ ಮಾಡುವುದೇನಿದೆ ಅದಕ್ಕೆ ಪಾರಣೆ ಎನ್ನುವರು. ಈ ಸಮಯ / ವಿಧಿ ಅತ್ಯಂತ ಪುಣ್ಯಪ್ರದಾಯಕವಾದದ್ದು.
ಶಿವರಾತ್ರಿಯ ದಿನ ಏಕಭುಕ್ತ (ಒಂದು ಊಟ) ಅಥವಾ ಪೂರ್ಣತ್ಯಕ್ತ (ನಿರಾಹಾರ) ಅಥವಾ ಫಲಹಾರ ಈ ಮೂರರಲ್ಲಿ ಒಂದನ್ನು ಆಚರಿಸಿ ಮರುದಿನ ಅಂದರೆ ಚತುರ್ದಶಿಯಂದು ಸ್ನಾನ ಮುಗಿಸಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಿ ಆಮೇಲೆ ಶಿವರಾತ್ರಿ ವ್ರತ ವಿಸರ್ಜಿಸುವುದಾಗಿ ಭಗವಂತನಲ್ಲಿ ನಿವೇದಿಸುತ್ತಾ ಬಿಲ್ವಪತ್ರೆ ಮತ್ತು ತುಳಸಿಗೆ ನೀರನ್ನು ಹಾಕಿ ನಾವು ಸ್ಥಾಪಿಸಿದ ಲಿಂಗವಿದ್ದರೆ ಅದಕ್ಕೆ ಇಲ್ಲದಿದ್ದಲ್ಲಿ ನಮ್ಮಮನೆಯಲ್ಲೇ ಇರುವ ದೇವತಾ ಸಾನ್ನಿಧ್ಯಕ್ಕೆ ಅರ್ಪಿಸಿ ಆಹಾರ (ಊಟ) ಸೇವನೆ ಮಾಡಬೇಕು. ಈಗ ಪಾರಣೆಯೊಂದಿಗೆ ವ್ರತ ಸಮಾಪ್ತಿ ಆಗುವುದು. ಈ ರೀತಿ ಪಾರಣೆ ಮಾಡಿ ಸೇವಿಸುವ ಆಹಾರದ ಪ್ರತೀ ಕಣದಲ್ಲೂ ಅತ್ಯಂತ ಪುಣ್ಯಫಲವಿದೆ. ಉತ್ತಮ ಆರೋಗ್ಯದ ಕುರಿತಾಗಿ ಈ ವಿಧಾನ ಅತ್ಯಂತ ಸಹಕಾರಿ ಎಂಬುದಾಗಿ ಪುರಾಗಳ ಮಾತು.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು