Rama Navami 2023: ಯಾರೀ ರಾಮ ? ಯಾಕೀ ರಾಮ ? ರಾಮ ಶಬ್ದದ ಮಹತ್ವವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 30, 2023 | 9:59 AM

ರಾಮ ಈ ಶಬ್ದದ ಮಹತ್ವ ಅದ್ಭುತ. "ರಮ್ಯತೇ ಅನೇನೇತಿ"” ಎಂದು ಈ ಶಬ್ದದ ಸ್ವರೂಪ. ಯಾವಾತನಿಂದ ಜನರು ಅತ್ಯಂತ ಮನೋಜ್ಞವಾದ ಸ್ಥಿತಿಯನ್ನು ಹೊಂದುವರೋ ಅವನೇ ರಾಮ.

Rama Navami 2023: ಯಾರೀ ರಾಮ ? ಯಾಕೀ ರಾಮ ? ರಾಮ ಶಬ್ದದ ಮಹತ್ವವೇನು?
ಸಾಂದರ್ಭಿಕ ಚಿತ್ರ
Follow us on

ಯಾರು ಈ ರಾಮ ಅಂತ ಕೇಳಿದರೆ ಆಬಾಲ ವೃದ್ಧರ ತನಕ ಬರುವ ಉತ್ತರ ಸಾಮಾನ್ಯವಾಗಿ ಇದೊಂದೇ ಸನಾತನ ಹಿಂದೂ ಧರ್ಮದ ಆರಾಧ್ಯ ದೇವ ಶ್ರೀರಾಮ ಎಂದು. ಇಲ್ಲಿ ಉಲ್ಲೇಖಿಸಿದ ವಿಷಯ ನಿಜವಾದದ್ದೇ ಆಗಿದೆ. ಆದರೆ ಈ ರಾಮನ ಬಗ್ಗೆ ನಾವು ತಿಳಿಯಬೇಕಾದ್ದು ಬಹಳ ಇದೆ. ಜಗತ್ತಿನ ಮೊಟ್ಟಮೊದಲ ಚಕ್ರವರ್ತಿ ಮನು. ಈತನು ಯಾವುದೇ ಫಲಾಪೇಕ್ಷೆಯಿಲ್ಲದೇ ಜಗತ್ತಿನ ಕ್ಷೇಮಕ್ಕಾಗಿ ಜನರ ಜೀವನಕ್ಕೆ ಒಂದು ಚೌಕಟ್ಟು (ನಿಯಮವನ್ನು) ಸಿದ್ಧಪಡಿಸುವ ಸಲುವಾಗಿ ತನ್ನ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಮಗನಾದ ಇಕ್ಷ್ವಾಕುವಿಗೆ ವಹಿಸಿ ಕಠಿಣ ತಪಸ್ಸು ಮತ್ತು ಉತ್ತಮ ಶ್ರಮದಿಂದ ಜನ ಜೀವನ ಹೇಗಿರಬೇಕು ಮತ್ತು ಹೇಗಿರಬಾರದು ಎಂಬ ಪರಿಕಲ್ಪನೆಯನ್ನು ಮಾಡಿಕೊಟ್ಟನು. ಅಲ್ಲಿಂದ ಆರಂಭವಾದದ್ದೇ ಈ ಸೂರ್ಯವಂಶ.

ಸೂರ್ಯ ಯಾವ ರೀತಿ ಸೃಷ್ಟಿಯ ಕಣ ಕಣದಲ್ಲೂ ಆವರಿಸಿ ತನ್ನ ಪ್ರಭಾವ ಬೀರುವನೋ ಅಂತಹದೇ ಪ್ರಭಾವವುಳ್ಳದ್ದು ಈ ಸೂರ್ಯವಂಶ. ಇದರ ಎರಡನೇ ರಾಜ ಇಕ್ಷ್ವಾಕು. ಹೇಗೆ ದೊಡ್ಡ ದೀಪವೊಂದು ತನ್ನಲ್ಲಿರುವ ಚೈತನ್ಯವನ್ನು ಸಣ್ಣ ಸಣ್ಣ ದೀಪಗಳಿಗೂ ಹರಡಿ ಜಗತ್ತು ಬೆಳಗುತ್ತದೋ ಅಂತಯೇ ಮನುವು ತನ್ನ ರಾಜಪರಂಪರೆಯನ್ನು ಜ್ಯೇಷ್ಠ ಪುತ್ರನಾದ ಇಕ್ಷ್ವಾಕುವಿನ ಮೂಲಕ ಜಗತ್ತಿಗೆ ಪರಿಚಯಿಸಿದ. ಈ ಇಕ್ಷ್ವಾಕು ತನ್ನ ನಿಷ್ಕಾಮ ಕರ್ಮದಿಂದ ಮತ್ತು ಶ್ರದ್ಧೆಯ ತಪಸ್ಸಿನಿಂದ ನಾರಾಯಣನನ್ನು ಒಲಿಸಿಕೊಂಡು ತನ್ನ ವಂಶದಲ್ಲಿ ಅವತರಿಸಬೇಕೆಂದು ಪ್ರಾರ್ಥಿಸುತ್ತಾನೆ. ಅದರ ಫಲವೇ ಹಲವು ತಲೆಮಾರುಗಳ ನಂತರ ಈ ರಾಮಾವತಾರ.

ಈಗ ತಿಳಿಯಿತೇ ರಾಮ ಯಾರು ಎಂದು. ಮಹತ್ತರವಾದ ಉತ್ತಮ ಕಾರ್ಯ ಅಥವಾ ಸಮಾರಂಭ ನಡೆಯಬೇಕಾದರೆ ಅದಕ್ಕುಚಿತವಾದ ಸ್ಥಳ ವಾತಾವರಣ ವ್ಯವಸ್ಥೆ ಇತ್ಯಾದಿಗಳು ಸೂಕ್ತ ರೀತಿಯಲ್ಲಿ ಆಗಬೇಕು ಅಲ್ಲವೇ? ಅಂತಯೇ ಭಗವಂತ ಅವತರಿಸಬೇಕಾದರೆ ಆ ವಂಶದಲ್ಲಿ ಬಹಳಷ್ಟು ಧರ್ಮ ಕಾರ್ಯಗಳೂ ತಪಸ್ಸುಗಳು ನಡೆಯಬೇಕಿತ್ತು ಮತ್ತು ಸೂಕ್ತ ಸಂದರ್ಭ ನಿರ್ಮಾಣ ಆಗಬೇಕಿತ್ತು. ಅದಕ್ಕೋ ಎಂಬತೆ ಸಗರ ಮಹಾರಾಜ ನಿರ್ಮಿಸಿದ ಜಲಾಶಯ ಸಾಗರವಾಯಿತು. ರಾಜಾ ಭಗೀರಥ ಜನರ ಕ್ಷೇಮಕ್ಕಾಗಿ ಗಂಗೆಯನ್ನು ಭುವಿಗಿಳಿಸಿದ. ಬೇಧಿಸಲು ಸಾಧ್ಯವಿಲ್ಲದ ನಗರ ಅಯೋಧ್ಯ ಎಂದು ಕರೆಯಲ್ಪಟ್ಟಿತು. ಮಾನಸ ಸರೋವರದಲ್ಲಿ ಹುಟ್ಟಿದ ಸರಯೂ ನದಿ ಈ ನಗರವನ್ನು ಪ್ರದಕ್ಷಿಣಾಕಾರವಾಗಿ ಸುತ್ತುವರಿದು ಗಂಗೆಯನ್ನು ಸೇರಿತು.

ದಿಲೀಪ ಸಂತಾನವಿಲ್ಲದೇ ಗೋಸೇವೆ ಮಾಡಿ ಸಂತಾನ ಹೊಂದಿದ. ಹರಿಶ್ಚಂದ್ರ ಸತ್ಯವನ್ನೇ ಪಣಕ್ಕಿಟ್ಟು ಸತ್ಯದ ಮಹತ್ವವನ್ನು ಪುನರುಜ್ಜೀವಗೊಳಿಸಿದ. ದಶರಥ ಶ್ರೇಷ್ಠವಾದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿ ದೇವಪ್ರಸಾದವಾಗಿ ದೇವರನ್ನೇ ಮಗುವಾಗಿ ಪಡೆದ. ಅಂದರೆ ರಾಮ ಬಂದ ನಮ್ಮ ನಾಡಿಗೆ. ಅದಕ್ಕೋಸ್ಕರ ಆ ಸೂರ್ಯವಂಶದ ಮಹಾರಾಜರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆದರೂ ಅದನ್ನು ಪ್ರೀತಿಯಿಂದ ಮಾಡಿದರು ಫಲವಾಗಿ ಭಗವಂತನೇ ಆ ವಂಶದ ತೊಟ್ಟಿಲ ಮಗುವಾದ. ಅಂತವನು ರಾಮ.

ಇದನ್ನೂ ಓದಿ: Rama Navami 2023: ರಾಮನ ಪೂಜೆಗೆ ಯಾವ ದಿನ ಅತ್ಯಂತ ಮಹತ್ವ? ಶ್ರೀರಾಮ ನವಮಿ ಯಾವಾಗ? ಪೂಜಾಫಲವೇನು?

ಅಭೇಧ್ಯವಾದುದನ್ನು ಭೇಧಿಸಲು ಅಸಾಧ್ಯವಾದುದನ್ನು ಸಾಧ್ಯವಾಗಿಸಲು ನಡೆಯೇ ನುಡಿ ಎಂಬ ತತ್ವಸಾರಲು ಸ್ತ್ರೀಗೆ ಅಭೂತವಾದ ಗೌರವ ನೀಡಲು ಹೀಗೆ ಹಲವಾರು ವಿಷಯಗಳ ಆರಂಭಕ್ಕಾಗಿ ರಾಮ ಬರಬೇಕಾಯಿತು. ಅದು ಸೂರ್ಯವಂಶದ ಪ್ರಾರ್ಥನೆಯಿಂದ ತಪಸ್ಸಿನಿಂದ ಸಾಧ್ಯವಾಯಿತು. ಸೂರ್ಯನಷ್ಟೇ ತೇಜಸ್ಸು ಸೂರ್ಯವಂಶಕ್ಕಿದೆ ಎಂದರೆ ಅತಿಶಯವಲ್ಲ.

ರಾಮ ಈ ಶಬ್ದದ ಮಹತ್ವ ಅದ್ಭುತ. “ರಮ್ಯತೇ ಅನೇನೇತಿ”” ಎಂದು ಈ ಶಬ್ದದ ಸ್ವರೂಪ. ಯಾವಾತನಿಂದ ಜನರು ಅತ್ಯಂತ ಮನೋಜ್ಞವಾದ ಸ್ಥಿತಿಯನ್ನು ಹೊಂದುವರೋ ಅವನೇ ರಾಮ. ರಾಮನನ್ನು ನೋಡಿದಾಕ್ಷಣ ಅಂತಹ ಆನಂದ ಸ್ಥಿತಿ ಉಂಟಾಗುತ್ತಿತ್ತು ಎಂದು ರಾಮಾಯಣದಲ್ಲಿ ಸಾಕಷ್ಟು ಸಲ ಉಲ್ಲೇಖಿಸಲ್ಪಟ್ಟಿದೆ. ಹಾಗೆಯೇ ರಾಮ ಎಂಬ ಎರಡಕ್ಷರ ಮಹತ್ತರವಾದ ಜ್ಞಾನವನ್ನು ನೀಡಬಲ್ಲದು ಎಂದು ಅಧ್ಯಾತ್ಮ ರಾಮಾಯಣದ ಮಾತು.

ಯಾವುದೇ ಕಷ್ಟವಿಲ್ಲದ ಸುಲಭದಲ್ಲಿ ಉಚ್ಚಾರವಾಗುವ ಈ ರಾಮ ಎಂಬ ಎರಡಕ್ಷರ ಅತ್ಯಂತ ಪವಿತ್ರವಾದುದು ಎಂಬುದನ್ನು ಋಷಿಗಳಿಂದ ಆರಂಭಸಿ ಅವಧೂತರವರೆಗಿನ ಎಲ್ಲಾ ಸಜ್ಜನರು ತಮ್ಮದೇ ರೀತಿಯಲ್ಲಿ ಬಣ್ಣಿಸಿದ್ದಾರೆ. ಇನ್ನೇನು ಬೇಕು ಈ ನಾಮದ ಕುರಿತು ಅಲ್ಲವೇ ?

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು