Rama Navami 2023: ರಾಮನ ಪೂಜೆಗೆ ಯಾವ ದಿನ ಅತ್ಯಂತ ಮಹತ್ವ? ಶ್ರೀರಾಮ ನವಮಿ ಯಾವಾಗ? ಪೂಜಾಫಲವೇನು?

ಶ್ರೀರಾಮನಿಗೆ ಅವನ ಜನ್ಮದಿನಂದು ವಿಶೇಷವಾಗಿ ಪೂಜಿಸಿದರೆ ಅಮೋಘವಾದ ಫಲವಿದೆ ಎಂದು ಪುರಾಣ ಹೇಳುತ್ತದೆ. ಶ್ರೀರಾಮನೇ ಈ ಕುರಿತಾಗಿ ಹೇಳಿದ ಮಾತು ಹೀಗಿದೆ "ಅಭಯಂ ಸರ್ವ ಭೂತೇಭ್ಯಃ ದದಾಮಿ ಏತತ್ ವ್ರತಂ ಮಮ" ಎಂದು.

Rama Navami 2023: ರಾಮನ ಪೂಜೆಗೆ ಯಾವ ದಿನ ಅತ್ಯಂತ ಮಹತ್ವ? ಶ್ರೀರಾಮ ನವಮಿ ಯಾವಾಗ? ಪೂಜಾಫಲವೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2023 | 10:31 AM

ಅರ್ಚ ಪೂಜಾಯಂ ಎಂಬ ಕ್ರಿಯಾ ರೂಪದ ಪ್ರಕಾರ ಭಗವಂತನ ಕುರಿತಾಗಿ ಅಥವಾ ಭಗವಂತನನ್ನೇ ಶ್ರದ್ಧೆಯಿಂದ ಅರ್ಚಿಸುವುದು ಪೂಜೆ ಅಂತ ಕರೆಯಲ್ಪಡುತ್ತದೆ. ದೇವರಿಗೆ ನಾವು ಅತ್ಯಂತ ಪ್ರೀತಿಯಿಂದ ಏನನ್ನು ಕೊಟ್ಟರೂ ಅವನು ನಮಗೆ ಅನುಗ್ರಹಿಸುವನು ಎಂಬುದು ಅತ್ಯಂತ ಪ್ರಾಮಾಣಿಕವಾದ ಮಾತು. ತಾಯಿ ಶಬರಿ ಶ್ರದ್ಧೆಯಿಂದ ಕಚ್ಚಿ ಕೊಟ್ಟ ನೇರಳೇ ಹಣ್ಣು ಶ್ರೀರಾಮನಿಗೆ ಅತ್ಯಂತ ಪ್ರಿಯವಾಯಿತು. ಆ ಕಾರಣಕ್ಕಾಗಿ ಅವನು ಅತ್ಯಂತ ದುರ್ಲಭವಾದ ಪರಮಾನಂದ ಮೋಕ್ಷವನ್ನೇ ಅವಳಿಗೆ ಕರುಣಿಸುತ್ತಾನೆ ಎಂಬುದು ರಾಮಾಯಣದ ಕಥೆ. ಹಾಗಾದರೆ ಅಂತಹ ರಾಮನನ್ನು ನಾವು ಎಂದು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂಬ ಯೋಚನೆ ಬರುವುದು ಸಹಜವಾದದ್ದೇ ಆಗಿದೆ. ರಾಮನ ಪೂಜೆಗೆ ಅತ್ಯಂತ ಪ್ರಶಸ್ತ ಕಾಲ ನವಮಿ ತಿಥಿ. ಅದು ಅಮವಾಸ್ಯೆ ಕಳೆದ ನಂತರ ಬರುವ ನವಮಿ ತಿಥಿ ಅರ್ಥಾತ್ ಅಮಾವಾಸ್ಯೆಯ ನಂತರದ ಒಂಭತ್ತನೇ ದಿನ. ರಾಮನ ಪೂಜೆಗೆ ಅತ್ಯಂತ ಪ್ರಶಸ್ತ ಕಾಲ. ಅದರಲ್ಲೂ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಅತ್ಯಂತ ವಿಶೇಷ ರಾಮಪೂಜೆಗೆ. ಯಾಕೆಂದರೆ ಆ ದಿನಂದು ರಾಮನ ಅವತಾರವಾದ (ಜನನವಾದ) ದಿನ. ಅದನ್ನು ಕಾಳಿದಾಸ ಈ ರೀತಿಯಾಗಿ ವರ್ಣಿಸಿದ್ದಾನೆ.

“ಉಚ್ಚಸ್ತೇ ಗ್ರಹ ಪಂಚಕೇ ಸುರಗುರೌ ಸೇಂದೌ ನವಮ್ಯಾಂ ತಿಥೌ” ಎಂಬುದಾಗಿ. ಅಂದರೆ ರಾಮನ ಜನನವು ಚಂದ್ರ ಸಹಿತನಾದ ನವಮಿಯಂದು ಆಯಿತು ಅರ್ಥಾತ್ ಶುಕ್ಲ ಪಕ್ಷದ ನವಮಿಯಂದು. ಅತಿದುರ್ಲಭವಾದ ಗ್ರಹಸ್ಥಿತಿ ಅಂದು ನಿರ್ಮಾಣವಾಗಿತ್ತಂತೆ. ಹೇಗೆಂದರೆ ಐದು ಗ್ರಹರು ಉಚ್ಚಸ್ಥಾನದಲ್ಲಿ ಅಂದರೆ ಕುಂಡಲಿಯಲ್ಲಿ ಅತ್ಯಂತ ಉತ್ತಮ ಫಲಕೊಡುವ ಸ್ಥಾನದಲ್ಲಿದ್ದರಂತೆ. ಹಾಗೆಯೇ ಕರ್ಕಟ ಲಗ್ನದಲ್ಲಿ ಪುನರ್ವಸು ನಕ್ಷತ್ರದಲ್ಲಿ ಶ್ರೀರಾಮ ಅಭೇಧ್ಯವಾದ ಸ್ಥಾನ ಎಂಬ ಅರ್ಥವುಳ್ಳ ಅಯೋಧ್ಯೆಯಲ್ಲಿ ಜನ್ಮತಾಳಿದ.

ಅಂತಹ ಶ್ರೀರಾಮನಿಗೆ ಅವನ ಜನ್ಮದಿನಂದು ವಿಶೇಷವಾಗಿ ಪೂಜಿಸಿದರೆ ಅಮೋಘವಾದ ಫಲವಿದೆ ಎಂದು ಪುರಾಣ ಹೇಳುತ್ತದೆ. ಶ್ರೀರಾಮನೇ ಈ ಕುರಿತಾಗಿ ಹೇಳಿದ ಮಾತು ಹೀಗಿದೆ “ಅಭಯಂ ಸರ್ವ ಭೂತೇಭ್ಯಃ ದದಾಮಿ ಏತತ್ ವ್ರತಂ ಮಮ” ಎಂದು. ಯಾರು ತನ್ನನ್ನು ಶ್ರದ್ಧೆಯಿಂದ ನಿಷ್ಕಲ್ಮಷ ಮನಸ್ಸಿಂದ ಪೂಜಿಸುತ್ತಾರೋ ಅವರಿಗೆ ನಾನು ಈ ರೀತಿಯಾದ ಅಭಯವನ್ನು ನೀಡುತ್ತೇನೆ ಅದೇನೆಂದರೆ ಯಾರು ನನಗೆ ಶರಣಾಗಿ ನನ್ನನ್ನು ಸೇವಿಸಿರುವರೋ ಅವರ ಸಂಪೂರ್ಣ ರಕ್ಷಣೆ ಮಾಡುವುದೇ ನನ್ನ ವ್ರತ ರೂಪವಾದ ಕರ್ತವ್ಯವೆಂದು. ತಾತ್ಪರ್ಯವಿಷ್ಟೇ ಯಾರು ನನ್ನ ವ್ರತ ಮಾಡುವರೋ ಅವರನ್ನು ರಕ್ಷಿಸುವುದೇ ನನ್ನ ವ್ರತ ಎಂಬುದು ರಾಮನ ಪ್ರತಿಜ್ಞೆ.

ಶ್ರೀರಾಮನ ಪ್ರತಿಜ್ಞೆ ಎಂಬುದು ಎಂದೂ ಸುಳ್ಳಾಗದು. ಆದ್ದರಿಂದ ಯಾರು ಶ್ರೀರಾಮನನ್ನು ನವಮಿಯಂದು ಪೂಜಿಸುತ್ತಾರೋ ಅವರಿಗೆ ಅತ್ಯಂತ ವಿಶೇಷ ಫಲವಿದೆ. ಈ ದಿನ ಯಾವ ಸಮಯದಲ್ಲಿ ಪೂಜಿಸಬೇಕೆಂದರೆ ಅಪರಾಹ್ಣ ಕಾಲದಲ್ಲಿ ನವಮಿ ತಿಥಿ ಇರುವಾಗ ಶ್ರೀರಾಮನ ಪೂಜೆ ಮಾಡಬೇಕು. ಯಾಕೆಂದರೆ ರಾಮನ ಜನನ ಲಗ್ನ ಕರ್ಕಟವಾದ್ದರಿಂದ ಇದು ಮಧ್ಯಾಹ್ನದ ಸಮಯದಲ್ಲಿ ಬಂದಿರುವುದರಿಂದ ಅಪರಾಹ್ಣದ ಸಮಯ ರಾಮ ಪೂಜೆಗೆ ವಿಶೇಷ.

ಇದನ್ನೂ ಓದಿ: Ramanavami : ಕೃಷ್ಣ ದಕ್ಕಿದಂತೇ ರಾಮ ದಕ್ಕಲಾರ

ವ್ರತದ ಸ್ವರೂಪ ಹೇಗೆಂದರೆ ವ್ರತದ ಪೂರ್ವದಿನದಲ್ಲಿ ಅಂದರೆ ರಾಮನವಮಿಯ ಮುಂಚಿನ ದಿನ ರಾತ್ರಿ ಫಲಾಹಾರವನ್ನು ಮಾಡಿರಬೇಕು. ಮರುದಿನ ಬೆಳಗ್ಗೆ ಬೇಗನೆ ಎದ್ದು ತಲೆಸ್ನಾನ ಮಾಡಿ ಶುಭ್ರ ಬಟ್ಟೆಯುಟ್ಟು ಶ್ರೀರಾಮನ ಚಿತ್ರದ ಮುಂದೆ ಕಲಶಸ್ಥಾಪನೆ ಮಾಡಿ ಸಾಧ್ಯವಿದ್ದಲ್ಲಿ ಸುಂದರಕಾಂಡ ಪಾರಾಯಣ ಅಥವಾ ರಾಮಸಹಸ್ರನಾಮ ಅಥವಾ ವಿಷ್ಣುಸಹಸ್ರನಾಮ ಅಥವಾ ಶ್ರೀರಾಮ ತಾರಕ ಮಂತ್ರ ಜಪ ಮಾಡಿರಿ. ಆ ನಂತರ ಅಂದು ಸಾಧ್ಯವಿದ್ದಲ್ಲಿ ಮಧ್ಯಾಹ್ನ ಪೂಜೆಯ ತನಕ ಉಪವಾಸವಿರಬೇಕು. ಉಪವಾಸದ ಸಮಯದಲ್ಲಿ ಭಜನೆ ಸಂಕೀರ್ತನೆ ರಾಮಾಯಣ ಕಥಾ ಶ್ರವಣ ಇತ್ಯಾದಿಗಳು ಅತ್ಯಂತ ಫಲದಾಯಕ. ಅಪರಾಹ್ಣ ಅಂದರೆ ಸುಮಾರು ಹನ್ನೆರಡು ಗಂಟೆಯ ನಂತರ ಮನೆಯಲ್ಲೇ ತಯಾರಿಸಿದ ವಿಶೇಷ ಭಕ್ಷ್ಯಗಳನ್ನು ಶ್ರೀರಾಮನಿಗೆ ನೈವೇದ್ಯಮಾಡಿ ಮಂಗಳರಾತಿಯನ್ನು ಮಾಡಿ ತದನಂತರ ಪ್ರಸಾದ ಭೋಜನವನ್ನು ಮಾಡಿರಿ. ಈ ಸಮಯದಲ್ಲಿ ರಾಮಭಕ್ಷ್ಯವೆಂಬ ವಿಶೇಷ ಸಿಹಿಯನ್ನು ಮಾಡುವ ರೂಢಿ ಇದೆ.

ಹಾಗೆಯೇ ರಾಮ ಎಂಬ ಎರಡಕ್ಷರ ಅತ್ಯಂತ ಫಲದಾಯಕವಾದ ಮಂತ್ರ. ಇದನ್ನು ಉಚ್ಚರಿಸುವುದರಿಂದ ಯೋಗಿಗಳಿಗೂ ಅತ್ಯಂತ ಆನಂದ ಉಂಟಾಗುತ್ತದೆ ಎಂಬುದು ಪುರಾಣದ ಮಾತು. ಅದಕ್ಕೋಸ್ಕರ ಈ ದಿನದಂದು ಸಂಪೂರ್ಣ ರಾಮ ನಾಮ ಸ್ಮರಣೆ ಮಾಡಲು ದೇಹಕ್ಕೆ ಆಯಾಸವಾಗಬಾರದು ಎಂಬ ಕಾರಣಕ್ಕೆ ಕೆಲವು ಕಡೆ ರಾಮಪಾನಕವನ್ನು ಮಾಡಿ ಅದನ್ನು ಸೇವಿಸಿಕೊಂಡು ರಾಮ ನಾಮಸ್ಮರಣೆ ಮಾಡುವ ರೂಢಿ ಕೆಲವೆಡೆ ಇತ್ತು. ಅಲ್ಲದೇ ಹೆಚ್ಚಾದ ಆಹಾರ ಸ್ವೀಕಾರ ಮಾಡುವುದರಿಂದ ದೇಹಕ್ಕೆ ಆಲಸ್ಯ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ ಉಪವಾಸ ಅಥವಾ ದ್ರವ ರೂಪದ ಆಹಾರ ಅಥವಾ ಹಣ್ಣನ್ನು ಮಾತ್ರ ತಿಂದುಕೊಂಡು ಶ್ರೀರಾಮನ ನಾಮ ಸ್ಮರಣೆ ಮಾಡುವವರು ಇದ್ದಾರೆ ಮತ್ತು ಮಾಡಿದರೆ ಉತ್ತಮವೂ ಹೌದು.

ಶ್ರೀರಾಮನ ನಡೆ ಅತ್ಯಂತ ಪವಿತ್ರವಾದದ್ದು. ಅದಕ್ಕಾಗಿ ರಾಮಾಯಣ ಅಂದರೆ ರಾಮನ ಅಯನ ಅತ್ಯಂತ ಪ್ರಸಿದ್ಧ. ಅಂತಹ ಶ್ರೀರಾಮನ ಜನ್ಮ ದಿನ ಈ ಸಲ 30/3/23ರಂದು ಈ ದಿನದಂದು ಪ್ರಭು ಶ್ರೀರಾಮನ ಪೂಜೆಯನ್ನು ಭಕ್ತಿಯಿಂದ ಮಾಡೋಣ. ಪೂರ್ಣಫಲವನ್ನು ಪಡೆಯೋಣ.

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು