Garuda purana: ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬ ಹಿರಿಯರ ಕಟ್ಟುಪಾಡು ಎಷ್ಟು ಸರಿ, ಇದಕ್ಕಿರುವ ಸಕಾರಣವೇನು?
Death: ಪ್ರೇತಕಾಂಡವೆಂಬ ಅಧ್ಯಾಯದಲ್ಲಿ ಬರುವುದು... ಸಾವಿನ ನಂತರದ ಬಗ್ಗೆ ಇರುವ ವಿಚಾರಗಳು. ಆದರೆ ಪ್ರೇತಕಾಂಡವು ವಾಸ್ತವವಾಗಿ ಗರುಡ ಪುರಾಣವೆಂಬ ಮಹಾನ್ ಸಮುದ್ರದಲ್ಲಿ ಒಂದು ಸಣ್ಣ ಚೊಂಬಿನ ನೀರಿನಷ್ಟು ಮಾತ್ರವೇ ಹೊರತು, ಸಂಪೂರ್ಣವಾಗಿ ಅದೇ ಅಲ್ಲ.
ಸಂಪೂರ್ಣ ಗರುಡ ಪುರಾಣದಲ್ಲಿ ಸರಿ ಸುಮಾರು 19,000 ಶ್ಲೋಕಗಳಿವೆ. ಅದರಲ್ಲಿ ಜ್ಞಾನಕಾಂಡ, ಧರ್ಮಕಾಂಡ, ಹಾಗು ಕರ್ಮಕಾಂಡ (ಪ್ರೇತಕಾಂಡ) ಎಂಬ 3 ವಿಭಾಗಗಳಿವೆ. ಅವು ಕ್ರಮವಾಗಿ ವಿಶ್ವದ ಸೃಷ್ಠಿ, ಸ್ಥಿತಿ, ಹಾಗೂ ಲಯದ ಬಗೆಗಿನ ವಿವರಗಳನ್ನು ತಿಳಿಸುತ್ತದೆ.
ಕ್ರಮವಾಗಿ, ಮನುಷ್ಯನ ಜನನ, ಜೀವನ, ಮರಣ, ಹಾಗೂ ಮರಣದ ನಂತರದ ಬಗೆಗಿನ ಹಲವಾರು ಮಾಹಿತಿಗಳನ್ನು ಕೊಡುವ ಏಕೈಕ ಹೊತ್ತಿಗೆಯೇ ಗರುಡ ಪುರಾಣ. ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬ ಹಿರಿಯರ ಈ ಕಟ್ಟುಪಾಡು ಬರಲು ಕಾರಣ, ಗರುಡ ಪುರಾಣದ ಬಗ್ಗೆ ಇರುವ ಅಲ್ಪಜ್ಞಾನ. ಏಕೆಂದರೆ ಗರುಡ ಪುರಾಣ ಎಂದೊಡನೆ, ನೆನಪಿಗೆ ಬರುವುದು ಪ್ರೇತಕಾಂಡವೆಂಬ ಅಧ್ಯಾಯ ಹಾಗೂ ಅದರಲ್ಲಿ ಬರುವ, ಸಾವಿನ ನಂತರದ ಬಗ್ಗೆ ಇರುವ ವಿಚಾರಗಳು. ಆದರೆ ಪ್ರೇತಕಾಂಡವು ವಾಸ್ತವವಾಗಿ ಗರುಡ ಪುರಾಣವೆಂಬ ಮಹಾನ್ ಸಮುದ್ರದಲ್ಲಿ ಒಂದು ಸಣ್ಣ ಚೊಂಬಿನ ನೀರಿನಷ್ಟು ಮಾತ್ರವೇ ಹೊರತು, ಸಂಪೂರ್ಣವಾಗಿ ಅದೇ ಅಲ್ಲ.
ಜನರಿಗೆ ಹೆಚ್ಚು ತಿಳಿದಿರುವುದು ಇಲ್ಲಿನ ಪ್ರೇತಕಾಂಡ ಹಾಗೂ ಅಲ್ಲಿ ಬರುವ ಕೆಲವು ಸಾವಿನ ನಂತರದ ವರ್ಣನೆಗಳು. ಹಾಗಾಗಿ ಇದನ್ನು ಸಣ್ಣ ವಯಸ್ಸಿನ ವ್ಯಕ್ತಿಗಳು ಕೇಳಿದರೆ ವೈರಾಗ್ಯ ಉಂಟಾಗಿ, ವಂಶಾಭಿವೃದ್ಧಿಗೆ ತೊಂದರೆ ಆಗುವುದೆಂದು ನಮ್ಮ ಹಿರಿಯರು ಈ ಕಟ್ಟುಪಾಡನ್ನು ಹೇರಿದರೆ ಹೊರತು ಬೇರೆ ಯಾವುದೇ ಬೇರೆ ಕಾರಣಕ್ಕೂ ಅಲ್ಲ.
ಗರುಡ ಮಂತ್ರ: ಕುಂಕುಮಾಂಕಿತ ವರ್ಣಾಯ ಕುದೆಂದು ಧವಳಾಯಚ | ವಿಷ್ಣುವಾಹನ ನಮಸ್ತುಭ್ಯಂ ಪಕ್ಷೀರಾಜಾಯ ತೇ ನಮಃ ||
ಸಾಮಾನ್ಯವಾಗಿ ಗರುಡ ಪುರಾಣವನ್ನು ಮನೆಯಲ್ಲಿ ಯಾರದಾದರೂ ಸಾವು ಸಂಭವಿಸಿದಾಗ ಓದಿಸುತ್ತಿದ್ದರು. ಏಕೆಂದರೆ ಇದು ಮಹತ್ತರವಾದ ಪುರಾಣವಾಗಿದ್ದು ಇದರಲ್ಲಿನ ಪ್ರೇತಕಾಂಡವು ಸ್ಮಶಾನ ವೈರಾಗ್ಯವನ್ನು ತರುವಂತಹದು. ಇದನ್ನು ಸಾವು ಸಂಭವಿಸಿದಾಗ ಓದುವುದರಿಂದ 15 ದಿನಗಳ ಅಪರ ಕಾರ್ಯದ ವೇಳೆಯಲ್ಲಿ ಸಂಬಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಮಹತ್ತರವಾದುದು ಅಲ್ಲ ಎಂಬ ಅರಿವುಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನೂ ಇಲ್ಲ. ಹಾಗಾಗಿ ಇದು ಕಾಲಾನಂತರದಲ್ಲಿ ವಾಡಿಕೆಯಾಯಿತೇ ಹೊರತು ಬೇರೆ ಏನು ಅಲ್ಲ.
ಪಿತೃಗಳಿಗೆ ತಿಲ ತರ್ಪಣವೇಕೆ ?
ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ). ಅವು ಅವನ ವೃದ್ಧಿಗೂ ಕಾರಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ. ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾಲವು ನಡೆಯಲು ಕಾರಣವಾಗಿವೆ.
ಭೂಮಿಯಲ್ಲಿ 24 ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ಶುಕ್ಲಪಕ್ಷದ 15 ದಿನ ರಾತ್ರಿ, ಕೃಷ್ಣಪಕ್ಷದ 15 ದಿನ ಹಗಲು… ಹೀಗೆ ಒಂದು ತಿಂಗಳ ನಮ್ಮ ಕಾಲವು ಅವರಿಗೆ ಒಂದು ದಿನವಾಗುವುದು. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ಣ ಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. (ಪೂರ್ಣ ದಿನರಾತ್ರಿ) ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.
ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ?
ದರ್ಬೆ, ಕುಶ, ಕಾಶ, ಬರ್ಹಿ ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು. ಒಮ್ಮೆ ಗರುಡನು ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದ್ರುವಿನಿಂದ ದಾಸ್ಯದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ನೀವೆಲ್ಲರೂ ಸ್ನಾನ ಮಾಡಿ ಶುದ್ಧರಾಗಿ ಬರಲು ಹೇಳುತ್ತಾನೆ. ಮತ್ತು ಆ ಸರ್ಪಗಳು ಪುನಃ ಬರುವವರೆಗೂ ಅಮೃತವನ್ನು ದರ್ಬೆಯ ಮೇಲೆ ಇಟ್ಟಿರುತ್ತಾನೆ.
ಅಷ್ಟರಲ್ಲಿ ದೇವೇಂದ್ರನು ಬಂದು ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಭೆಯ ಮೇಲೆ ಬೀಳುತ್ತದೆ. ಆದ್ದರಿಂದ ದರ್ಭೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.ಅಲ್ಲದೇ ಯಜ್ಞ ವರಾಹ ರೂಪೀ ಭಗವಂತನ ರೋಮದಿಂದ ದರ್ಭೆಯೂ, ಬೆವರಿನಿಂದ ಎಳ್ಳು ಹೊರ ಬಂದ ಕಾರಣ ಇವು ಎಲ್ಲಾ ಕಾರ್ಯಗಳಿಗೂ ಪಾವಿತ್ರ್ಯತೆ ನೀಡಲು ಬೇಕಾಗುತ್ತವೆ. (ಸಂಗ್ರಹ -ಸತ್ಸಂಗ)
(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)