ರಸ್ತೆ ಅಪಘಾತದಲ್ಲಿ ರಾಜ್ಯದ ಖ್ಯಾತ ಫುಟ್ಬಾಲ್ ಪಟು ಮೃತ್ಯು; ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ

|

Updated on: Jan 22, 2024 | 7:20 PM

ರಾಮಮೂರ್ತಿನಗರದ ಮೇಲ್ಸೇತುವೆ ಮೇಲೆ ಬೈಕ್​ನಲ್ಲಿ ತೆರೆಳುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೋನಿಶ್. ಕೆ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೋನಿಶ್ ಸಾವಿಗೀಡಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ರಾಜ್ಯದ ಖ್ಯಾತ ಫುಟ್ಬಾಲ್ ಪಟು ಮೃತ್ಯು; ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಮೋನಿಶ್.ಕೆ
Follow us on

ಬೆಂಗಳೂರಿನ ಕೆಆರ್ ಪುರಂ ಬಳಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ (Road Accident) ಕರ್ನಾಟಕದ 27 ವರ್ಷದ ರಾಜ್ಯ ಮಟ್ಟದ ಫುಟ್ಬಾಲ್ ಪಟು (Karnataka footballer) ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಮಮೂರ್ತಿನಗರದ ಮೇಲ್ಸೇತುವೆ ಮೇಲೆ ಬೈಕ್​ನಲ್ಲಿ ತೆರೆಳುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೋನಿಶ್. ಕೆ (Monish K) ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೋನಿಶ್ ಸಾವಿಗೀಡಾಗಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು

ಪೊಲೀಸರ ಪ್ರಕಾರ, ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಮೂರ್ತಿನಗರ ಮೇಲ್ಸೇತುವೆಯಲ್ಲಿ ಶನಿವಾರ ತಡರಾತ್ರಿ ಮೋನಿಶ್ ಕೆ ಅವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಅದೇ ಮಾರ್ಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಈ ಅಪಘಾತದ ಕುರಿತು ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಬೆಂಗಳೂರು ಎಫ್‌ಸಿ ಪರ ಆಡಿದ್ದರು

ಮೋನಿಶ್ ಬೆಂಗಳೂರಿನ ಬಾಬುಸಾಪಾಳ್ಯ ನಿವಾಸಿಯಾಗಿದ್ದು, 2019 ರಲ್ಲಿ, ಮೋನಿಶ್ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಇಎಫ್) ನಿಂದ ತರಬೇತಿ ಪರವಾನಗಿಯನ್ನು ಪಡೆದಿದ್ದರು. ಹಾಗಾಗಿ ಯುವಕರಿಗೆ ಫುಟ್ಬಾಲ್ ತರಬೇತಿ ನೀಡುತ್ತಿದ್ದರು. ಇನ್ನು ಬೆಂಗಳೂರು ಎಫ್‌ಸಿ ಆಡಿರುವ ಮೋನಿಶ್, ಪರಿಕ್ರಮ ಎಫ್‌ಸಿ, ಡೆಕ್ಕನ್ ಎಫ್‌ಸಿ ಮತ್ತು ಯಂಗ್ ಚಾಲೆಂಜರ್ಸ್ ಎಫ್‌ಸಿ ಸೇರಿದಂತೆ ಇತರ ಕ್ಲಬ್‌ ಫುಟ್ಬಾಲ್ ತಂಡಗಳನ್ನು ಪ್ರತಿನಿಧಿಸಿದ್ದರು.

ಸಂತಾಪ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯಮಟ್ಟದ ಯುವ ಪ್ರತಿಭಾವಂತ ಆಟಗಾರನ ಅಗಲಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. “ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರ. ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ