ಕೊವಿಡ್​ ಸಂಕಷ್ಟಕ್ಕೆ ಅನುಷ್ಕಾ-ವಿರಾಟ್​ 2 ಕೋಟಿ ರೂ. ದೇಣಿಗೆ; ನಿಧಿ ಸಂಗ್ರಹಕ್ಕೆ ಮುಂದಾದ ದಂಪತಿ

Anushka Sharma | Virat Kohli: ಈ ಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿರಬೇಕು. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ನಾವು ಕಾಪಾಡಬೇಕು ಎಂದು ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಯ್ಲಿ ದಂಪತಿ ಹೇಳಿದ್ದಾರೆ.

ಕೊವಿಡ್​ ಸಂಕಷ್ಟಕ್ಕೆ ಅನುಷ್ಕಾ-ವಿರಾಟ್​ 2 ಕೋಟಿ ರೂ. ದೇಣಿಗೆ; ನಿಧಿ ಸಂಗ್ರಹಕ್ಕೆ ಮುಂದಾದ ದಂಪತಿ
ಅನುಷ್ಕಾ ಶರ್ಮಾ - ವಿರಾಟ್ ಕೊಯ್ಲಿ

Updated on: May 07, 2021 | 12:26 PM

ದೇಶದಲ್ಲಿ ಕೊರೊನಾ ವೈರಸ್​ ಹಾವಳಿ ಮಿತಿಮೀರಿದೆ. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗ ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ವಿರಾಟ್​ ಕೊಯ್ಲಿ ಕೂಡ ನಿಧಿ ಸಂಗ್ರಹಕ್ಕೆ ಅಭಿಯಾನ ಶುರು ಮಾಡಿದ್ದಾರೆ. ಇದರ ಮೊದಲ ಹೆಜ್ಜೆ ಎಂಬಂತೆ 2 ಕೋಟಿ ರೂ.ಗಳನ್ನು ಈ ಸ್ಟಾರ್​ ದಂಪತಿ ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಯ್ಲಿ ಮಾಹಿತಿ ನೀಡಿದ್ದಾರೆ.

‘ಕೊವಿಡ್​ನಿಂದಾಗಿ ಭಾರತದ ಪರಿಸ್ಥಿತಿ ಕಷ್ಟದಲ್ಲಿದೆ. ದೇಶವನ್ನು ಈ ರೀತಿ ನೋಡಲು ನೋವಾಗುತ್ತದೆ. ಈ ಸಂದರ್ಭದಲ್ಲಿ ಹಗಲು-ರಾತ್ರಿ ಹೋರಾಡುತ್ತಿರುವ ಎಲ್ಲರಿಗೂ ನಾವು ಆಭಾರಿ ಆಗಿದ್ದೇವೆ. ಅವರ ಬದ್ಧತೆಯನ್ನು ಮೆಚ್ಚಲೇಬೇಕು. ಈ ಸಂದರ್ಭದಲ್ಲಿ ಅವರಿಗೆ ನಮ್ಮ ಬೆಂಬಲ ಬೇಕು. ಈ ಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿರಬೇಕು. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ನಾವು ಕಾಪಾಡಬೇಕು’ ಎಂದು ಈ ದಂಪತಿ ಹೇಳಿದ್ದಾರೆ.

‘ಕಳೆದ ವರ್ಷದಿಂದಲೂ ಜನರು ಪಡುತ್ತಿರುವ ಕಷ್ಟ ನೋಡಿ ನಮಗೆ ಶಾಕ್​ ಆಗಿದೆ. ನಮ್ಮ ಕೈಲಾದ ಸಹಾಯವನ್ನು ಮಾಡಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶಕ್ಕೆ ಎಲ್ಲಕ್ಕಿಂತ ಹೆಚ್ಚು ಬೆಂಬಲ ಬೇಕಾಗಿದೆ. ಅವಶ್ಯಕತೆ ಇರುವವರಿಗೆ ಸೂಕ್ತ ಸಹಾಯ ಒದಗಿಸಲು ಈ ನಿಧಿ ಸಂಗ್ರಹ ಅಭಿಯಾನ ಯಶಸ್ವಿ ಆಗುತ್ತದೆ ಎಂಬ ನಂಬಿಕೆ ನಮಗಿದೆ. ಪರಸ್ಪರರ ಸಹಾಯಕ್ಕೆ ದೇಶದ ಜನರು ಮುಂದೆ ಬರುತ್ತಾರೆ ಎಂಬ ನಂಬಿಕೆ ಇದೆ’ ಎಂದು ವಿರಾಟ್​ ಕೊಯ್ಲಿ ಹೇಳಿದ್ದಾರೆ.

ಮೇ 1ರಂದು ಅನುಷ್ಕಾ ಶರ್ಮಾ ಅವರ ಜನ್ಮದಿನ. ಆದರೆ ಈ ಬಾರಿ ಕೊರೊನಾ ವೈರಸ್​ನಿಂದ ದೇಶವೇ ಕಷ್ಟದಲ್ಲಿರುವ ಕಾರಣ ಅವರು ಯಾವುದೇ ಸಂಭ್ರಮಾಚರಣೆ ಮಾಡಿಕೊಳ್ಳಲಿಲ್ಲ. ‘ನಿಮ್ಮೆಲ್ಲರಿಂದಾಗಿ ಈ ದಿನ ನನಗೆ ನಿಜಕ್ಕೂ ಸ್ಪೆಷಲ್​ ಎನಿಸಿದೆ. ಆದರೆ ಈ ಕಷ್ಟದ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎಂದು ನನಗೆ ಅನಿಸಿತು. ನೀವು ಮಾಡಿದ ಎಲ್ಲ ಮೆಸೇಜ್​ ನೋಡಿದ್ದೇನೆ. ಅದೇ ರೀತಿ ನಿಮಗಾಗಿ ನನ್ನ ಕಡೆಯಿಂದ ಒಂದು ಮುಖ್ಯವಾದ ಮೆಸೇಜ್​ ಇದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಜೊತೆಯಾಗಿದ್ದು ದೇಶಕ್ಕೆ ಬೆಂಬಲ ನೀಡಬೇಕು’ ಎಂದು ಅನುಷ್ಕಾ ಹೇಳಿದ್ದರು.

‘ನಾನು ಮತ್ತು ವಿರಾಟ್​ ಕೂಡ ತಮ್ಮ ಪಾಲಿನ ಕೆಲಸ ಮಾಡುತ್ತಿದ್ದೇವೆ. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ. ನೀವು ಕೂಡ ಈ ಅಭಿಯಾನದಲ್ಲಿ ಭಾಗಿ ಆಗಬಹುದು. ಈ ಸಂದರ್ಭದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂಬುದು ನೆನಪಿರಲಿ. ಎಲ್ಲರೂ ಸುರಕ್ಷಿತವಾಗಿರಿ. ನಿಮ್ಮ ಕಾಳಜಿ ವಹಿಸಿ’ಎಂದು ಅನುಷ್ಕಾ ಹೇಳಿದ್ದರು. ಕೊಟ್ಟ ಮಾತಿಗೆ ತಕ್ಕಂತೆಯೇ ಇಂದು ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ, 2 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ:

Anushka Sharma: ಕೊವಿಡ್​ ಸಂಕಷ್ಟದಲ್ಲಿ ಕೊಯ್ಲಿ-ಅನುಷ್ಕಾ ಕೈಕಟ್ಟಿ ಕೂತಿದ್ದಾರಾ? ಕಡೆಗೂ ಬಾಯ್ಬಿಟ್ಟ ನಟಿ

ಸೋನು ಸೂದ್​ಗೆ ಫ್ರಾಡ್​ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್​ ಹೀರೋ?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us