Argentina
Image Credit source: FIFA
2026ರ ಫಿಫಾ ವಿಶ್ವಕಪ್‌ನ ರಣಾಂಗಣದಲ್ಲಿ ಅರ್ಜೆಂಟೀನಾ ಕೇವಲ ಫುಟ್‌ಬಾಲ್ ಆಡುತ್ತಿಲ್ಲ, ಬದಲಿಗೆ ಮೈದಾನದಲ್ಲಿ ಮಹಾಕಾವ್ಯವೊಂದನ್ನು ಬರೆಯುತ್ತಿದೆ. ಅದು ಕೂಡ ಇಡೀ ಜಗತ್ತೇ ಉಸಿರು ಬಿಗಿಹಿಡಿದು ನೋಡುವಂತೆ! ಇದಕ್ಕೆ ಸಾಕ್ಷಿ ಕಳೆದ 4 ಪಂದ್ಯಗಳು. ನಾಕೌಟ್ ಹಂತದಲ್ಲಿ ಮೆಸ್ಸಿ ಪಡೆ ಪಂದ್ಯ ಮುಗಿಯಲು ಇನ್ನೇನು ಕೆಲವೇ ನಿಮಿಷಗಳಿರುವಾಗ ಇಡೀ ಮ್ಯಾಚ್ನ ಚಿತ್ರಣವನ್ನೇ ಬದಲಿಸುತ್ತಿದೆ. ಹೀಗೆ ಅಂತಿಮ ನಿಮಿಷಗಳಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ, ತಮಗೆ ‘ಕಿಂಗ್ಸ್ ಆಫ್ ಲೇಟ್ ಗೇಮ್’ ಎಂಬ ಬಿರುದು ಏಕೆ ಸೂಕ್ತ ಎಂಬುದನ್ನು ಜಗತ್ತಿಗೆ ಸಾರಿದೆ.
ಹೀಗೆ ಕಳೆದ ನಾಲ್ಕು ಪಂದ್ಯಗಳ ಅಂತಿಮ ನಿಮಿಷಗಳಲ್ಲಿ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ, ಈ ಮಹಾ ವೇದಿಕೆಗೆ ಲಗ್ಗೆ ಇಡುವ ಮುನ್ನ ಅವರು ನಡೆಸಿದ ಕೊನೆಯ ಕ್ಷಣದ ರೋಮಾಂಚಕ ಹೋರಾಟದ ಸಂಕ್ಷಿಪ್ತ ವರದಿ ಇಲ್ಲಿದೆ.
- ಕೇಪ್ ವರ್ಡೆ ವಿರುದ್ಧ ಚುರುಕಿನ ಆಟ: ಹೆಚ್ಚುವರಿ ಸಮಯದ (Extra Time) 111ನೇ ನಿಮಿಷದಲ್ಲಿ ಡಿಫೆಂಡರ್ ಕ್ರಿಸ್ಟಿಯನ್ ರೊಮೆರೊ ಗೋಲು ಬಾರಿಸಿದರು. ಸ್ಟ್ರೈಕರ್‌ಗಳು ಮಾತ್ರವಲ್ಲದೆ ತಂಡದ ರಕ್ಷಣಾತ್ಮಕ ಆಟಗಾರರೂ ಗೋಲು ಗಳಿಸುವ ಸಾಮರ್ಥ್ಯ ಹೊಂದಿರುವುದು ತಂಡದ ಅರ್ಜೆಂಟೀನಾ ತಂಡ ಪ್ಲಸ್ ಪಾಯಿಂಟ್. ಈ ಮೂಲಕ ಅಂತಿಮ ನಿಮಿಷಗಳ ವೇಳೆ 3-2 ಅಂತರದಿಂದ ಮುನ್ನಡೆ ಕಾಯ್ದುಕೊಂಡು ಅರ್ಜೆಂಟೀನಾ ತಂಡ ಮುಂದಿನ ಹಂತಕ್ಕೇರಿತು.
- ಈಜಿಪ್ಟ್ ವಿರುದ್ಧ ಮಿಂಚಿನಾಟ: ನಾಕೌಟ್ ಹಂತದ ಈ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 2-0 ಅಂತರದಿಂದ ಹಿನ್ನಡೆಯಲ್ಲಿದ್ದರು. ಪಂದ್ಯ ಇನ್ನೇನು ಮುಗಿಯಲಿದೆ ಅನ್ನುವಷ್ಟರಲ್ಲಿ ಕ್ರಿಸ್ಟಿಯನ್ ರೊಮೇರೊ (79ನೇ ನಿಮಿಷ), ಲಿಯೋನೆಲ್ ಮೆಸ್ಸಿ (83ನೇ ನಿಮಿಷ) ಹಾಗೂ ಎಂಝೋ ಫೆರ್ನಾಂಡಿಸ್ (92ನೇ ನಿಮಿಷ) ಗೋಲು ದಾಖಲಿಸಿ ಈಜಿಪ್ಟ್ ತಂಡವನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೇರಿದ್ದರು.
- ಸ್ವಿಟ್ಜರ್ಲೆಂಡ್ ವಿರುದ್ಧ ರೋಚಕ ಹೋರಾಟ: ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 10ನೇ ನಿಮಿಷದಲ್ಲೇ ಗೋಲು ದಾಖಲಿಸಿದ್ದರು. ಆದರೆ ಆ ಬಳಿಕ 67ನೇ ನಿಮಿಷದಲ್ಲಿ ಗೋಲು ಬಾರಿಸಿದ ಸ್ವಿಟ್ಜರ್ಲೆಂಡ್ ಸಮಬಲ ಸಾಧಿಸಿದರು. 90 ನಿಮಿಷಗಳವರೆಗೆ ಸಮಬಲ ಹೊಂದಿದ್ದ ಕಾರಣ ಈ ಮ್ಯಾಚ್ ಪೆನಾಲ್ಟಿ ಶೂಟೌಟ್ಗೆ ಹೋಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ 112ನೇ ನಿಮಿಷದಲ್ಲಿ ಜೂಲಿಯನ್ ಅಲ್ವಾರೆಝ್ ಸಿಡಿಸಿದ ಸ್ಟನ್ನರ್ ಗೋಲು ಅರ್ಜೆಂಟೀನಾದ ದಣಿವರಿಯದ ಹೋರಾಟಕ್ಕೆ ಸಾಕ್ಷಿಯಾಯಿತು. ಇದರ ಬೆನ್ನಲ್ಲೇ ಲೌಟಾರೊ ಮಾರ್ಟಿನೆಝ್ (121ನೇ ನಿಮಿಷ) ಮತ್ತೊಂದು ಗೋಲು ಬಾರಿಸಿ 3-1 ಅಂತರದಿಂದ ಅರ್ಜೆಂಟೀನಾ ತಂಡ ಗೆಲುವನ್ನು ಖಚಿತಪಡಿಸಿದರು.
- ಇಂಗ್ಲೆಂಡ್ ವಿರುದ್ಧ ಜಿದ್ದಾಟ: ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವು ಮೊದಲು ಗೋಲು ಬಾರಿಸಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು. 85ನೇ ನಿಮಿಷದವರೆಗೂ 0-1 ಹಿನ್ನಡೆಯಲ್ಲಿದ್ದ ಅರ್ಜೆಂಟೀನಾ ತಂಡವು ಟೂರ್ನಿಯಿಂದ ಹೊರಬೀಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಮುಂದಿನ 7 ನಿಮಿಷಗಳಲ್ಲಿ ಮೆಸ್ಸಿ ಮ್ಯಾಜಿಕ್ ಶುರುವಾಯಿತು. 85ನೇ ಎಂಝೋ ಮಾರ್ಟಿನೆಝ್ ಗೋಲು ದಾಖಲಿಸಿ ಪಂದ್ಯವನ್ನು ಸಮಬಲಕ್ಕೆ ಕೊಂಡೊಯ್ದರು. ಇದರ ಬೆನ್ನಲ್ಲೇ ಮೆಸ್ಸಿ ನೀಡಿದ ಮತ್ತೊಂದು ಪಾಸ್ ಅನ್ನು ಲೌಟಾರೊ ಮಾರ್ಟಿನೆಝ್ ( 92ನೇ ನಿಮಿಷ) ಗೋಲು ಬಲೆಯೊಳಗೆ ತಲುಪಿಸಿದರು. ಈ ಮೂಲಕ ಕೊನೆಯ ನಿಮಿಷಗಳಿರುವಾಗ 2-1 ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಅರ್ಜೆಂಟೀನಾ ಫೈನಲ್ಗೇರಿದೆ.
ಅರ್ಜೆಂಟೀನಾದ ‘ರಣ’ಧೀರರು:
ಕೊನೆಯ ಕ್ಷಣಗಳ ವೇಳೆಯ ಅತಿಮಾನುಷ ಗೆಲುವುಗಳ ಹಿಂದಿನ ರಹಸ್ಯ ಆಟಗಾರರಲ್ಲಿನ ಮಾನಸಿಕ ದೃಢತೆ. ಸ್ಕಲೋನಿ ಅವರ ಮಾರ್ಗದರ್ಶನದಲ್ಲಿ ಕಣಕ್ಕಿಳಿಯುತ್ತಿರುವ ತಂಡವು ರೆಫ್ರಿ ಕೊನೆಯ ವಿಸ್ಲ್ ಊದುವವರೆಗೂ ಧೈರ್ಯ ಕಳೆದುಕೊಳ್ಳುತ್ತಿಲ್ಲ. ಒತ್ತಡವನ್ನು ಮೆಟ್ಟಿ ನಿಂತು ಸತತ ಕೌಂಟರ್ ಅಟ್ಯಾಕ್ ಮಾಡುತ್ತಿದ್ದಾರೆ. ಅದು ಕೂಡ ಸೋಲನ್ನು ಒಪ್ಪಿಕೊಳ್ಳಲು ತಯಾರಿಲ್ಲದ ರಣಧೀರರಂತೆ.
39 ವರ್ಷದ ಲಿಯೋನೆಲ್ ಮೆಸ್ಸಿಯೇ ಮೈದಾನದಲ್ಲಿ ವೀರಾವೇಶದಿಂದ ಹೋರಾಡುತ್ತಿರುವುದನ್ನು ನೋಡುತ್ತಿರುವ ಅರ್ಜೆಂಟೀನಾದ ಯುವ ಆಟಗಾರರು, ತಮ್ಮ ನೆಚ್ಚಿನ ನಾಯಕನಿಗಾಗಿ ಕೊನೆಯ ಬಾರಿಗೆ ವಿಶ್ವಕಪ್ ಗೆಲ್ಲುವ ಏಕೈಕ ಧ್ಯೇಯೋದ್ದೇಶದೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮುನ್ನುಗ್ಗುತ್ತಿದ್ದಾರೆ.
ಅರ್ಜೆಂಟೀನಾ ಪಡೆಯ ಈ ಅಸಾಮಾನ್ಯ ಹಠ ಮತ್ತು ಧಗಧಗಿಸುವ ಉತ್ಸಾಹವನ್ನು ಕಾಣುತ್ತಿರುವ ಎದುರಾಳಿ ಆಟಗಾರರು ಅಕ್ಷರಶಃ ಮೈದಾನದಲ್ಲೇ ಶರಣಾಗುತ್ತಿದ್ದಾರೆ. ಅವರ ರಣತಂತ್ರಗಳು ಮೆಸ್ಸಿ ಪಡೆಯ ರೌದ್ರಾವತಾರದ ಮುಂದೆ ಧೂಳೀಪಟವಾಗುತ್ತಿವೆ!
ಇದನ್ನೂ ಓದಿ: ಈ ಪುಟ್ಟ ಪುಟಾಣಿಯೇ ಈಗ ಮೆಸ್ಸಿಯ ಎದುರಾಳಿ!
ಹೀಗೆ ಎಲ್ಲಾ ತಂಡಗಳ ಲೆಕ್ಕಾಚಾರಗಳನ್ನು ಕೊನೆಯ ನಿಮಿಷಗಳಲ್ಲಿ ತಲೆಕೆಳಗಾಗಿಸಿ ಮುನ್ನುಗ್ಗಿ ಬಂದಿರುವ ಅರ್ಜೆಂಟೀನಾ ಪಡೆ ಇದೀಗ ವಿಶ್ವಕಪ್ ಇತಿಹಾಸದ ಸುವರ್ಣ ಪುಟಗಳಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. 39ರ ಹರೆಯದಲ್ಲೂ ಧೃತಿಗೆಡದ ಮೆಸ್ಸಿಯ ಅದಮ್ಯ ಚೇತನ ಮತ್ತು ಯುವ ಪಡೆಯ ಈ ಉಕ್ಕಿನಂತಹ ಹಠ, ಅರ್ಜೆಂಟೀನಾವನ್ನು ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಲಿದೆಯಾ ಕಾದು ನೋಡಬೇಕಿದೆ.