Australia Tour of New Zealand: ಎರಡನೇ ಟಿ-20ಐ ಪಂದ್ಯದಲ್ಲಿ ನ್ಯೂಜಿಲೆಂಡ್ಗೆ 4 ರನ್ಗಳ ರೋಚಕ ಜಯ
ಬಹಳ ದಿನಗಳಿಂದ ಗಪ್ಟಿಲ್ ಸುದ್ದಿಯಲ್ಲಿ ಇರಲಿಲ್ಲ. ಇಂದು ಅಕ್ರಮಣಕಾರಿ ಆಟಕ್ಕೆ ಅತ್ಯುತ್ತಮ ಉದಾಹರಣೆ ಎನಿಸುವ ಬ್ಯಾಟಿಂಗ್ ಪ್ರದರ್ಶನ ನೀಡಿದರು. 50 ಎಸೆತಗಳಲ್ಲಿ 97 ರನ್ ಬಾರಿಸಿದ ಅವರು ತಮ್ಮ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ಗಳನ್ನು ಬಾರಿಸಿದರು.
ಡ್ಯುನೆಡಿನ್: ಆರನ್ ಫಿಂಚ್ ನೇತೃತ್ವದ ಅಸ್ಟ್ರೇಲಿಯಾ ತಂಡ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನ ನೀಡುವುದನ್ನು ಮುಂದುವರೆಸಿದ್ದು ಕ್ರಿಕೆಟ್ ಆಸ್ಟ್ರೇಲಿಯಾಗೆ ದೊಡ್ಡ ತಲೆನೋವಿನ ಸಂಗತಿಯಾಗಿದೆ. ಪ್ರಸ್ತುತವಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಕಾಂಗರೂಗಳ ಪಡೆ 5-ಟಿ20ಐ ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲೂ ಅತಿಥೇಯರಿಂದ ಪರಾಭವಗೊಂಡಿದೆ. ಡ್ಯುನೆಡಿನ್ನ ಯೂನಿವರ್ಸಿಟಿ ಮೈದಾನದಲ್ಲಿ ಗುರುವಾರದಂದು ನಡೆದ ಪಂದ್ಯದಲ್ಲಿ ಆಲ್-ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಮತ್ತು ಬೌಲಿಂಗ್ ಆಲ್-ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರ ಬಿರುಗಾಳಿ ವೇಗದ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ಗೆಲುವಿನ ಸನಿಹಕ್ಕೆ ಬಂದಿತ್ತಾದರೂ ಅಂತಿಮವಾಗಿ 4 ರನ್ಗಳ ಅಪಜಯ ಅನುಭವಿಸಿತು. ಅತಿಥೇಯರ ಪರ ಫಾರ್ಮ್ಗೆ ಮರಳಿದ ಆರಂಭ ಆಟಗಾರ ಮಾರ್ಟಿನ್ ಗಪ್ಟಿಲ್ (97) ಅಸ್ಸೀ ಬೌಲರ್ಗಳನ್ನು ಮನಬಂದಂತೆ ಚಚ್ಚಿ, ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಪಾತ್ರರಾದರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಫಿಂಚ್ ನಾಲ್ಕನೆ ಓವರಿನಲ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾದರೂ ಎರಡನೇ ವಿಕೆಟ್ಗೆ ಗಪ್ಟಿಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರ ನಡುವೆ ಬಂದ 131 ರನ್ಗಳ ಜೊತೆಯಾಟ ಅವರ ನಿರ್ಧಾರ ತಪ್ಪೆನಿಸುವಂತೆ ಮಾಡಿತು. ಬಹಳ ದಿನಗಳಿಂದ ಸುದ್ದಿಯಲ್ಲಿರದ ಗಪ್ಟಿಲ್ ಇಂದು ಅಕ್ರಮಣಕಾರಿ ಆಟಕ್ಕೆ ಅತ್ಯುತ್ತಮ ಉದಾಹರಣೆ ಎನಿಸುವ ಬ್ಯಾಟಿಂಗ್ ಪ್ರದರ್ಶನ ನೀಡಿದರು. 50 ಎಸೆತಗಳಲ್ಲಿ 97ರನ್ ಬಾರಿಸಿದ ಅವರು ತಮ್ಮ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ಗಳನ್ನು ಬಾರಿಸಿದರು. ಅವರಿಗೆ ಪರಿಪಕ್ವ ಜೊತೆಗಾರನ ಪಾತ್ರ ನಿರ್ವಹಿಸಿದ ವಿಲಿಯಮ್ಸನ್ 53 ರನ್ (35 ಎಸೆತ, 2ಬೌಂಡರಿ 3 ಸಿಕ್ಸರ್) ಬಾರಿಸಿದರು. ಕೇವಲ 11.3 ಓವರ್ಗಳಲ್ಲಿ ಇವರಿಬ್ಬರು 131 ರನ್ ಸೇರಿದರು.
ಗಪ್ಟಿಲ್ ಔಟಾದ ನಂತರ ಬಡ್ತಿ ಪಡೆದು 5ನೇ ಕ್ರಮಾಂಕದಲಲ್ಲಿ ಆಡಲು ಬಂದ ಅಲ್-ರೌಂಡರ್ ಜೇಮ್ಸ್ ನೀಷಮ್ ಕೇವಲ 16 ಎಸೆತಗಳಲ್ಲಿ ಅಜೇಯ 45 ರನ್ ಬಾರಿಸಿದರು. ಅವರ ಸ್ಕೋರಿನಲ್ಲಿ 1ಬೌಂಡರಿ ಮತ್ತು 6 ಸಿಕ್ಸರ್ಗಳಿದ್ದವು. ಗಪ್ಟಿಲ್-ವಿಲಿಯಮ್ಸನ್ ಜೊತೆಯಾಟ ಮತ್ತು ನೀಷಮ್ ಅವರ ನಿರ್ದಯಿ ಹೊಡೆತಗಳ ಬ್ಯಾಟಿಂಗ್ ನೆರವಿನಿಂದ ಅತಿಥೇಯರು 200 ರನ್ ಗಡಿ (219/7) ದಾಟಿದರು.
ಆಸ್ಟ್ರೇಲಿಯಾ ಪರ ವೇಗದ ಬೌಲರ್ ಕೇನ್ ರಿಚರ್ಡ್ಸನ್ 43 ರನ್ಗಳಿಗೆ 3 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿದರು. ಆಡಂ ಜಂಪಾ, ಜಾಯ್ ರಿಚರ್ಡ್ಸನ್ ಮತ್ತು ಡೇನಿಯಲ್ ಸ್ಯಾಮ್ಸ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾದ ಆರಂಭ ಉತ್ತಮವಾಗೇ ಇತ್ತು. ಮೊದಲ 7 ಓವರ್ಗಳಲ್ಲಿ 70 ರನ್ ಬಂದವು. ಫಿಂಚ್ 24 ರನ್ ಬಾರಿಸಿದರೆ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಜೊಷ್ ಫಿಲಿಪ್ 45 ರನ್ (32 ಎಸೆತ 2ಬೌಂಡರಿ, 3 ಸಿಕ್ಸರ್) ಬಾರಿಸಿದರು. ಒಂದು ಹಂತದಲ್ಲಿ 73/2 ಆಗಿದ್ದ ಆಸ್ಟ್ರೇಲಿಯಾದ ಸ್ಕೋರ್ ನಂತರ ಕುಸಿತ ಕಂಡಿತು.
ಫಿಂಚ್ ಮತ್ತು ಫಿಲಿಪ್ ಔಟಾದ ನಂತರ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಿಂದ ಉಲ್ಲೇಖಾರ್ಹ ಕಾಣಿಕೆ ಸಿಗಲಿಲ್ಲ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಮತ್ತೊಮ್ಮೆ ಭಾರೀ ಮೊತ್ತಕ್ಕೆ ಬಿಕರಿಯಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 3 ರನ್ ಗಳಿಸಿ ಔಟಾದರು. ಆಷ್ಟನ್ ಅಗರ್ ಮತ್ತು ಮಿಚೆಲ್ ಮಾರ್ಷ್ ಖಾತೆ ತೆರೆಯಲು ವಿಫಲರಾಗಿ ಪೆವಿಲಿಯನ್ಗೆ ಮರಳಿದರು. ಆ ಹಂತದಲ್ಲಿ ಆಸ್ಟ್ರೇಲಿಯಾದ ಸ್ಕೋರ್ 13 ನೇ ಓವರಿನಲ್ಲಿ 113/6 ಆಗಿತ್ತು ಮತ್ತು ಪ್ರವಾಸಿಗರ ಶಿಬಿರದಲ್ಲಿ ಗೆಲ್ಲುವ ಆಸೆಯೂ ಕಮರಿತ್ತು.
ಆದರೆ ನಂತರ ನಡೆದಿದ್ದು ಮಾತ್ರ ಪವಾಡಕ್ಕಿಂತ ಕಮ್ಮಿಯಾಗಿರಲಿಲ್ಲ. 7ನೇ ವಿಕೆಟ್ಗೆ ಜೊತೆಗೂಡಿದ ಸ್ಟಾಯ್ನಿಸ್ ಮತ್ತು ಸ್ಯಾಮ್ಸ್ ಕೇವಲ ಮೂರು ಓವರ್ಗಳ ಆಟದಲ್ಲಿ ಪಂದ್ಯದ ಸ್ವರೂಪವನ್ನೇ ಬದಲಿಸಿದರು. ಕೊನೆಯ 6 ಓವರ್ಗಳಲ್ಲಿ ಆಸ್ಸೀಗಳಿಗೆ ಗೆಲ್ಲಲು 98 ರನ್ ಬೇಕಿತ್ತು. ಇಶ್ ಸೋಧಿ ಎಸೆದ ಇನ್ನಿಂಗ್ಸ್ನ 15ನೇ ಓವರಿನಲ್ಲಿ ಸ್ಟಾಯ್ನಿಸ್ 20 ರನ್ ಚಚ್ಚಿದರು. ನಂತರ ಬೌಲ್ ಮಾಡಿದ ಟಿಮ್ ಸೌಥೀ ತಮ್ಮ ಓವರ್ನಲ್ಲಿ 25 ರನ್ ನೀಡಿದರು. ಕೇವಲ 12 ಎಸೆತಗಳಲ್ಲಿ ಇವರಿಬ್ಬರ ಬ್ಯಾಟ್ಗಳಿಂದ 45 ರನ್ ಸಿಡಿದವು.
ಏತನ್ಮಧ್ಯೆ, ಸ್ಟಾಯ್ನಿಸ್ ಕೇವಲ 22 ಎಸೆತಗಳಲ್ಲಿ ತಮ್ಮ ಅರ್ಧ ಶತಕ ಪೂರೈಸಿದರು. 17ನೇ ಓವರಿನಲ್ಲಿ ಅವರು ಮತ್ತು ಸ್ಯಾಮ್ಸ್ 17 ರನ್ ಗಳಿಸಿದ ನಂತರ ಕೊನೆಯ 3 ಓವರಿನಲ್ಲಿ ಗೆಲ್ಲಲು 36 ರನ್ ಬೇಕಾಗಿತ್ತು. ಆ ಹಂತದಲ್ಲಿ ಅತಂಕಕ್ಕೊಳಗಾಗದೆ 18ನೇ ಓವರ್ ಬೌಲ್ ಮಾಡಿದ ಟ್ರೆಂಟ್ ಬೌಲ್ಟ್ ಕೇವಲ 6 ರನ್ ನೀಡಿದರು. ಅಂದರೆ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾಗೆ ಕೊನೆಯ 12 ಎಸೆತಗಳಲ್ಲಿ 30 ರನ್ ಬೇಕಿದ್ದವು.
Marcus Stoinis is lifting off for Australia ?#NZvAUSpic.twitter.com/V3MTb3av78
— ICC (@ICC) February 25, 2021
19ನೇ ಓವರ್ ಬೌಲ್ ಮಾಡಿದ ಸೌಥೀ 15ರನ್ ನೀಡಿದರು. ಕೊನೆಯ ಓವರ್ ಎಸೆಯಲು ವಿಲಿಯಮ್ಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ನೀಷಮ್ ಅವರನ್ನು ಕರೆದರು. ನಾಯಕನ ವಿಶ್ವಾಸವನ್ನು ಸಂಫೂರ್ಣವಾಗಿ ಉಳಿಸಿಕೊಂಡ ಅವರು ಆ ಓವರ್ನಲ್ಲಿ ಕೇವಲ 10 ರನ್ ನೀಡಿ ಸ್ಟಾಯ್ನಿಸ್ (78, 37 ಎಸೆತ, 7 ಬೌಂಡರಿ, 5 ಸಿಕ್ಸರ್) ಮತ್ತು ಸ್ಯಾಮ್ಸ್ (41, 15 ಎಸೆತ 2 ಬೌಂಡರಿ, 4 ಸಿಕ್ಸರ್) ಅವರ ವಿಕೆಟ್ಗಳನ್ನೂ ಪಡೆದು, ತಮ್ಮ ತಂಡಕ್ಕೆ 4 ರನ್ಗಳ ರೋಚಕ ಗೆಲುವು ದೊರಕಿಸಿದರು.
ಅಂತಿಮ ಸ್ಕೋರ್ಗಳು: ನ್ಯೂಜಿಲೆಂಡ್ 20 ಓವರ್ಗಳಲ್ಲಿ 219/7 (ಮಾರ್ಟಿನ್ ಗಪ್ಟಿಲ್ 97, ಕೇನ್ ವಿಲಿಯಮ್ಸನ್ 53, ಜೇಮ್ಸ್ ನೀಷಮ್ 45*, ಕೇನ್ ರಿಚರ್ಡ್ಸನ್ 3/43)
ಆಸ್ಟ್ರೇಲಿಯಾ 20ಓವರ್ಗಳಲ್ಲಿ 215/8 (ಮಾರ್ಕಸ್ ಸ್ಟಾಯ್ನಿಸ್ 78, ಡೇನಿಯಲ್ ಸ್ಯಾಮ್ಸ್ 41, ಮಿಚೆಲ್ ಸ್ಯಾಂಟ್ನರ್ 4/31)
ಫಲಿತಾಂಶ: ನ್ಯೂಜಿಲೆಂಡ್ಗೆ 4 ರನ್ಗಳ ಗೆಲುವು, ಸರಣಿಯಲ್ಲಿ 2-0 ಮುನ್ನಡೆ
ಇದನ್ನೂ ಓದಿ: Australia vs New Zealand: ಕಾನ್ವೆ ಬ್ಯಾಟಿಂಗ್ಗೆ ತತ್ತರಿಸಿದ ಆಸ್ಟ್ರೇಲಿಯಾ: ಟಿ-20 ಮೊದಲ ಪಂದ್ಯದಲ್ಲಿ 53 ರನ್ ಸೋಲು
Published On - 6:46 pm, Thu, 25 February 21