ಕ್ರೈಸ್ಟ್ಚರ್ಚ್ (ನ್ಯೂಜಿಲೆಂಡ್): ಭಾರತದ ವಿರುದ್ಧ ಅವಹೇಳನಕಾರಿ ರೀತಿಯಲ್ಲಿ ಟೆಸ್ಟ್ ಸರಣಿ ಸೋತಿರುವ ಅಸ್ಟ್ರೇಲಿಯಾ ಇದುವರೆಗೆ ಆ ಸೋಲಿನ ಆಘಾತದಿಂದ ಚೇತರಿಕೊಳ್ಳಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಆಸ್ಸೀಗಳು ಇಂದು ಕ್ರೈಸ್ಟ್ಚರ್ಚ್ನ ಹೇಗ್ಲೀ ಓವಲ್ ಮೈದಾನದಲ್ಲಿ ನಡೆದ ಮೊದಲ ಟಿ-20ಐ ಪಂದ್ಯದಲ್ಲಿ 53 ರನ್ಗಳ ಸೋಲು ಅನುಭವಿಸಿದರು. ದಕ್ಷಿಣ ಆಫ್ರಿಕಾದಿಂದ ವಲಸೆ ಬಂದು ಕಳೆದ ಸೆಪ್ಟೆಂಬರ್ನಿಂದ ನ್ಯೂಜಿಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಡೆವೆನ್ ಕಾನ್ವೆ ಬಿರುಗಾಳಿ ವೇಗದ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 59 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ ಅಜೇಯ 99ರನ್ ಬಾರಿಸಿ, ಅತಿಥೇಯರ ಗೆಲುವಿನಲ್ಲಿ ದೊಡ್ಡ ಪಾತ್ರ ನಿರ್ವಹಿದರು. ಅವರು ಶತಕ ದಾಖಲಿಸದೆ ಹೋಗಿದ್ದು ದುರದೃಷ್ಟಕರ. ಪ್ರವಾಸಿಗರ ಪರ ಕೇವಲ ಮಿಚೆಲ್ ಮಾರ್ಷ್ ಮಾತ್ರ ಉತ್ತಮ ಪ್ರದರ್ಶನ ನೀಡಿ 33 ಎಸೆತಗಳಲ್ಲಿ 45 ರನ್ ಬಾರಿಸಿದರು.
ಟಾಸ್ ಗೆದ್ದ ಕಾಂಗರೂಗಳ ನಾಯಕ ಆರನ್ ಫಿಂಚ್ ಮೊದಲು ಬೌಲ್ ಮಾಡುವ ನಿರ್ಧಾರ ತೆಗೆದುಕೊಂಡರು. ಹಾಗೆ ನೋಡಿದರೆ ಅವರ ನಿರ್ಧಾರ ಸ್ಪಾಟ್-ಅನ್ ಆಗಿತ್ತು. 4 ಓವರ್ಗಳಾಗಿವಷ್ಟರಲ್ಲಿ ಈ ಸೀಸನ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ತಂಡದ ಮೂವರು ಪ್ರಮುಖ ಬ್ಯಾಟ್ಸ್ಮನ್ಗಳು ಪೆವಿಲಿಯನ್ಗೆ ಮರಳಿದರು. ಆಗ ಅತಿಥೇಯರ ಸ್ಕೋರ್ 19/3 ಆಗಿತ್ತು. ವಿಲಿಯಮ್ಸನ್ 12 ರನ್ ಗಳಿಸಿದರೆ, ಆರಂಭ ಆಟಗಾರರರಾದ ಮಾರ್ಟಿನ್ ಗಪ್ಟಿಲ್ ಖಾತೆ ತರೆಯದೆ ಮತ್ತು ಟಿಮ್ ಸೀಲ್ಫರ್ಟ್ 1 ರನ್ ಗಳಿಸಿ ಔಟಾದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕ್ರೀಸಿಗೆ ಬಂದ ಕಾನ್ವೆ, 4ನೇ ವಿಕೆಟ್ಗೆ ಗ್ಲೆನ್ ಫಿಲಿಪ್ಸ್ (30, 20 ಎಸೆತ, 3X6) ಜೊತೆ ಸುಮಾರು 8 ಓವರ್ಗಳಲ್ಲಿ 72 ರನ್ ಸೇರಿಸಿದರು. ಆಮೇಲೆ, ಆಲ್-ರೌಂಡರ್ ಜೊತೆ ಜೇಮ್ಸ್ ನೀಷಮ್ ಅವರೊಂದಿಗೆ 5 ನೇ ವಿಕೆಟ್ಗೆ ಕೇವಲ 27 ಎಸೆತಗಳಲ್ಲಿ 47ರನ್ ಸೇರಿಸಿದರು. ಆದರೆ ಅದುವರೆಗೆ ಬಿರುಸಿನ ಅಟವಾಡಿದ ಕಾನ್ವೆ ಇನ್ನಿಂಗ್ಸ್ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಲು ವಿಫಲರಾಗಿ 99 ರನ್ಗಳೊಂದಿಗೆ ಅಜೇಯರಾಗಿ ಉಳಿದರು. ನಿಗದಿತ 20 ಓವರ್ಗಳಲ್ಲಿ ಅತಿಥೇಯರು 5 ವಿಕೆಟ್ ಕಳೆದುಕೊಂಡು 184 ರನ್ಗಳ ಮೊತ್ತವನ್ನು ಕಲೆ ಹಾಕಿದರು.
ಇಶ್ ಸೋಧಿ
ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯಿಂದ ₹ 14 ಕೋಟಿಗಳಿಗೆ ಖರೀದಿಸಲ್ಪಟ್ಟಿರುವ ವೇಗದ ಬೌಲರ್ ಜಾಯ್ ರಿಚರ್ಡ್ಸನ್ ಮತ್ತು ಎಡಗೈ ಸೀಮರ್ ಡೇನಿಯಲ್ ಸ್ಯಾಮ್ಸ್ ಆಸ್ಟ್ರೇಲಿಯಾ ಪರ ತಲಾ 2 ವಿಕೆಟ್ ಪಡೆದರು. ಅಲ್ರೌಂಡರ್ ಮಾರ್ಕಸ್ ಸ್ಟಾಯ್ನಿಸ್ 1 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾದ ಆರಂಭ ಸಹ ಆಘಾತಕಾರಿಯಾಗಿತ್ತು. ಮೊದಲ ಓವರ್ನಲ್ಲಿ ಆರನ್ ಫಿಂಚ್ 1 ರನ್ ಗಳಿಸಿ ಔಟಾದರೆ ಎರಡನೇ ಓವರ್ನಲ್ಲಿ ಜೋಶ್ ಫಿಲಿಪ್ 2 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ನಂತರ 4 ನೇ ಓವರಿನಲ್ಲಿ ವಿಕೆಟ್ಕೀಪರ್/ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ 12 ರನ್ ಗಳಿಸಿ ಔಟಾದರು. ಆಗ ಆಸ್ಟ್ರೇಲಿಯಾದ ಸ್ಕೋರ್ 16/3.
ನ್ಯೂಜಿಲೆಂಡ್ ತಂಡ
ಮರು ಓವರ್ನಲ್ಲಿಯೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ 2021 ಸೀಸನ್ಗೆ ₹ 14.25 ಕೋಟಿಗೆ ಖರೀದಿಸಿರುವ ಗ್ಲೆನ್ ಮ್ಯಾಕ್ಸ್ವೆಲ್ ಕಿವಿ ವೇಗದ ಟಿಮ್ ಸೌಥೀಗೆ ಎರಡನೇ ಬಲಿಯಾದರು. ಆಸ್ಟ್ರೇಲಿಯಾದ ಸ್ಕೋರ್ 19/4. ಈ ಹಂತದಲ್ಲಿ ಮಾರ್ಷ್ ಮತ್ತು ಸ್ಟಾಯ್ನಿಸ್ ಪ್ರವಾಸಿಗರ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಸ್ಟಾಯ್ನಿಸ್ ಔಟಾದ ಮೇಲೆ ಯೋಗ್ಯ ಜೊತೆಗಾರರ ಅಭಾವ ಎದುರಿಸಿದ ಮಾರ್ಷ್ ಕೆಲ ಬಿರುಸಿನ ಹೊಡತಗಳನ್ನಾಡಿ 45 ರ ಮೊತ್ತಕ್ಕೆ ಔಟಾದರು. ಅವರ ನಿರ್ಗಮಿಸಿದ ನಂತರ ಆಸ್ಸೀ ಬ್ಯಾಟ್ಸ್ಮನ್ನಗಳು ಬೇಕಾಬಿಟ್ಟಿ ಬ್ಯಾಟ್ ಬೀಸಿ ವಿಕೆಟ್ ಕಳೆದುಕೊಂಡರು. ಅಸ್ಟ್ರೇಲಿಯಾ 17.3 ಓವರ್ಗಳಲ್ಲಿ 130 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ನ್ಯೂಜಿಲೆಂಡ್ ಪರ ಭಾರತೀಯ ಮೂಲದ ಇಶ್ ಸೋಧಿ ತಮ್ಮ ಕೋಟಾದ 4 ಓವರ್ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿದರು. ವೇಗದ ಬೌಲರ್ಗಳಾದ ಟ್ರೆಂಟ್ ಬೌಲ್ಟ್ ಮತ್ತು ಸೌಥೀ ತಲಾ 2 ವಿಕೆಟ್ ಪಡೆದರು.ಕೈಲ್ ಜೇಮಿಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ಒಂದೊಂದು ವಿಕೆಟ್ ಪಡೆದರು ಕೇವಲ ಒಂದು ರನ್ನಿಂದ ಶತಕ ತಪ್ಪಿಸಿಕೊಂಡ ಕಾನ್ವೆ ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಅಯ್ಕೆಯಾಗಿದ್ದು ಅತ್ಯಂತ ಸೂಕ್ತವಾಗಿತ್ತು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 184/5 (20 ಓವರ್ಗಳಲ್ಲಿ): ಡೆವೆನ್ ಕಾನ್ವೆ ಆಜೇಯ 99, ಗ್ಲೆನ್ ಫಿಲಿಪ್ಸ್ 30, ನೀಷಮ್ 26, ಡೇನಿಯಲ್ ಸ್ಯಾಮ್ಸ್ 2/40 ಮತ್ತು ಜಾಯ್ ರಿಚರ್ಡ್ಸನ್ 2/31 ಆಸ್ಟ್ರೇಲಿಯ 130/10 (17.3 ಓವರ್ಗಳಲ್ಲಿ): ಮಿಚೆಲ್ ಮಾರ್ಷ್ 45, ಆಷ್ಟನ್ ಅಗರ್ 23, ಇಶ್ ಸೋಧಿ 4/28, ಸೌಥೀ 2/10 ಮತ್ತು ಟ್ರೆಂಟ್ ಬೌಲ್ಟ್ 2/22
ಇದನ್ನೂ ಓದಿ: India vs Australia Test series | ಆಸ್ಟ್ರೇಲಿಯಾದಲ್ಲಿ ಹೊಸ ಇಂಡಿಯಾ ಸಾಧಿಸಿತು ದಿಗ್ವಿಜಯ!