
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಟಿ20 ಕ್ರಿಕೆಟ್ನಲ್ಲಿ ನಿಧಾನವಾಗಿ ಬ್ಯಾಟ್ ಬೀಸಿ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ 47 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅತ್ಯಂತ ಕೆಟ್ಟ ದಾಖಲೆಯನ್ನು ಸಹ ಬರೆದಿದ್ದಾರೆ. ಆದರೆ ಈ ಬಾರಿ ಬಾಬರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದಾಗ್ಯೂ ಪೇಶಾವರ್ ಝಲ್ಮಿ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ನ 27ನೇ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಹಾಗೂ ಕರಾಚಿ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಕರಾಚಿ ಕಿಂಗ್ಸ್ ಪರ ನಾಯಕ ಡೇವಿಡ್ ವಾರ್ನರ್ ಸ್ಪೋಟಕ ಇನಿಂಗ್ಸ್ ಆಡಿದರು. 50 ಎಸೆತಗಳನ್ನು ಎದುರಿಸಿದ ವಾರ್ನರ್ 2 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 86 ರನ್ ಬಾರಿಸಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೇಮ್ಸ್ ವಿನ್ಸ್ 42 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 72 ರನ್ ಚಚ್ಚಿದರು. ಈ ಎರಡು ಭರ್ಜರಿ ಅರ್ಧಶತಕಗಳ ನೆರವಿನೊಂದಿಗೆ ಕರಾಚಿ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 237 ರನ್ ಕಲೆಹಾಕಿತು.
238 ರನ್ಗಳ ಕಠಿಣ ಗುರಿ ಪಡೆದ ಪೇಶಾವರ್ ಝಲ್ಮಿ ತಂಡಕ್ಕೆ ಸೈಮ್ ಅಯ್ಯೂಬ್ (47) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಬಾಬರ್ ಆಝಂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ತಾನೆದುರಿಸಿದ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಬಾಬರ್ ಮೈದಾನದ ಮೂಲೆ ಮೂಲೆಗೂ ಬೌಂಡರಿಗಳನ್ನು ಬಾರಿಸಿದರು.
ಅಲ್ಲದೆ 49 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 94 ರನ್ಗಳಿಸಿದ್ದ ಬಾಬರ್ ಆಝಂ ರನೌಟ್ಗೆ ಬಲಿಯಾಗಬೇಕಾಯಿತು. ಪೇಶಾವರ್ ಝಲ್ಮಿ ತಂಡದ ನಾಯಕನ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರಾಚಿ ಕಿಂಗ್ಸ್ ಬೌಲರ್ಗಳು ರನ್ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಪರಿಣಾಮ ಪೇಶಾವರ್ ಝಲ್ಮಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕರಾಚಿ ಕಿಂಗ್ಸ್ ತಂಡವು 23 ರನ್ಗಳ ಜಯ ಸಾಧಿಸಿದೆ.
ಇದನ್ನೂ ಓದಿ: IPL 2025: ಹೀಗಾದ್ರೆ RCB ಐಪಿಎಲ್ನಿಂದ ಹೊರಬೀಳುವುದು ಖಚಿತ..!
ಇನ್ನು ಈ ಪಂದ್ಯದಲ್ಲಿ 50 ಎಸೆತಗಳಲ್ಲಿ 86 ರನ್ ಬಾರಿಸಿ ಮಿಂಚಿದ್ದ ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅಲ್ಲದೆ ಈ ಗೆಲುವಿನೊಂದಿಗೆ ಕರಾಚಿ ಕಿಂಗ್ಸ್ ತಂಡ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.