ಧೋನಿಗೆ ಮಾತ್ರ ನಿಜವಾದ ಅಭಿಮಾನಿಗಳಿದ್ದಾರೆ, ಉಳಿದವರು ದುಡ್ಡು ಕೊಟ್ಟು ಖರೀದಿಸಿದ ಫ್ಯಾನ್ಸ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಕಣಕ್ಕಿಳಿದಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಹೊಗಳುವ ಭರದಲ್ಲಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ (Harbhajan Singh) ನೀಡಿದ ಹೇಳಿಕೆಯೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್ನ 58ನೇ ಪಂದ್ಯದ ವೇಳೆ ಚಾನೆಲ್ ಚರ್ಚೆಯಲ್ಲಿ ಕಾಣಿಸಕೊಂಡಿದ್ದ ಭಜ್ಜಿ, ಮಹೇಂದ್ರ ಸಿಂಗ್ ಧೋನಿಗೆ ಮಾತ್ರ ನಿಜವಾದ ಅಭಿಮಾನಿಗಳಿದ್ದಾರೆ. ಉಳಿದವರೆಲ್ಲರಿಗೂ ದುಡ್ಡು ಕೊಟ್ಟು ಖರೀದಿಸಿದ ಅಭಿಮಾನಿಗಳಿರುವುದು ಎಂದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯವು ಮಳೆಯಿಂದಾಗಿ ಶುರುವಾಗಿರಲಿಲ್ಲ. ಈ ವೇಳೆ ಚಾನೆಲ್ ಚರ್ಚೆಯಲ್ಲಿ ಧೋನಿಯ ನಿವೃತ್ತಿ ಬಗ್ಗೆ ಚರ್ಚಿಸಲಾಗಿತ್ತು.
ಇದೇ ವೇಳೆ ಮಾತನಾಡಿದ ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಸಾಧ್ಯವಾದಷ್ಟು ಕಾಲ ಆಡಬೇಕು. ನನ್ನ ತಂಡವಿದ್ದರೆ ನಾನು ಅವರಿಗೆ ಎಷ್ಟು ಸಾಧ್ಯನೊ ಅಲ್ಲಿಯವರೆಗೆ ಆಡಲು ಅವಕಾಶ ನೀಡುತ್ತಿದ್ದೆ. ಏಕೆಂದರೆ ಅವರ ಅಭಿಮಾನಿಗಳು ಅದನ್ನು ಬಯಸುತ್ತಿದ್ದಾರೆ. ಹೀಗಾಗಿ ಎಲ್ಲಿಯವರೆಗೆ ಸಾಧ್ಯವಾಗುತ್ತದೋ ಅಲ್ಲಿಯವರೆಗೆ ಧೋನಿ ಆಡಬೇಕು .
ಏಕೆಂದರೆ ಧೋನಿಗೆ ಮಾತ್ರ ನಿಜವಾದ ಅಭಿಮಾನಿಗಳಿದ್ದಾರೆ. ಆದರೆ ಇತರ ಕ್ರಿಕೆಟಿಗರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಹುಟ್ಟಿಕೊಂಡಿರುವುದು. ಅದರಲ್ಲಿ ಅರ್ಧ ದುಡ್ಡು ನೀಡಿ ಖರೀದಿಸಿ ಅಭಿಮಾನಿಗಳಾಗಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇದೀಗ ಹರ್ಭಜನ್ ಸಿಂಗ್ ಹೇಳಿಕೆ ವಿರುದ್ಧ ವಿರಾಟ್ ಕೊಹ್ಲಿ ಅಭಿಮಾನಿಗಳು ಹಾಗೂ ರೋಹಿತ್ ಶರ್ಮಾ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ. ಯಾರನ್ನೋ ಮೆಚ್ಚಿಸಲು ಭಜ್ಜಿ ಎಲ್ಲವೂ ಗೊತ್ತಿರುವಂತೆ ಹೇಳಿಕೆ ನೀಡಿರುವುದು ಸರಿಯಲ್ಲ. ಇತರೆ ಕ್ರಿಕೆಟಿಗರಿಗೂ ಅವರದ್ದೇಯಾದ ಅಭಿಮಾನಿ ಬಳಗವಿದೆ. ನೀವು ಚಾನೆಲ್ ಚರ್ಚೆಯೊಂದರಲ್ಲಿ ಕೂತು, ಅವರಿಗೆ ನಿಜವಾದ ಅಭಿಮಾನಿಗಳಿದ್ದಾರೆ, ಉಳಿದವರ ಫ್ಯಾನ್ಸ್ ಅಸಲಿಯಲ್ಲ ಎನ್ನುವುದು ಯಾವ ಆಧಾರದ ಮೇಲೆ ಎಂದು ಅನೇಕರು ಹರ್ಭಜನ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಹರ್ಭಜನ್ ಸಿಂಗ್ ನೀಡಿದ ಹೇಳಿಕೆಯು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಭಜ್ಜಿ ಏನು ಸ್ಪಷ್ಟನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2025: ಹೀಗಾದ್ರೆ RCB ಐಪಿಎಲ್ನಿಂದ ಹೊರಬೀಳುವುದು ಖಚಿತ..!
ಧೋನಿ ನಿವೃತ್ತಿ ಯಾವಾಗ?
ಮಹೇಂದ್ರ ಸಿಂಗ್ ಧೋನಿ ಮುಂದಿನ ಸೀಸನ್ ಐಪಿಎಲ್ನಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಬಾರಿಯ ಐಪಿಎಲ್ನೊಂದಿಗೆ ಧೋನಿ ನಿವೃತ್ತಿ ಘೋಷಿಸುತ್ತಿಲ್ಲ. ಅವರು 2026ರ ಐಪಿಎಲ್ನಲ್ಲೂ ಕಣಕ್ಕಿಳಿಯಲು ಬಯಸಿದ್ದಾರೆ. ಹೀಗಾಗಿ ಐಪಿಎಲ್ ಸೀಸನ್-19 ರಲ್ಲಿ ಮಹೇಂದ್ರ ಸಿಂಗ್ ಧೋನಿ ಯೆಲ್ಲೊ ಜೆರ್ಸಿಯಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
