ಕೊನೆಗೂ ತನ್ನ ಕಷ್ಟ-ದುಃಖ ವಿಚಾರಿಸಿದ ಬಿಸಿಸಿಐಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ ದುಃಖತಪ್ತೆ ವೇದಾ ಕೃಷ್ಣಮೂರ್ತಿ
ಒಬ್ಬ ವಿದೇಶೀ ಮೂಲದ ಆಟಗಾರ್ತಿಯ ಕಾಮೆಂಟ್ಗಳನ್ನು ಕೇಳಿದ ನಂತರ ಬಿಸಿಸಿಐ ಪ್ರತಿಕ್ರಿಯಿಸಿರುವುದು ಅದರ ಹೃದಯಹೀನತೆ ಮತ್ತು ಧಾರ್ಷ್ಟ್ಯತೆಗೆ ಹಿಡಿದ ಕನ್ನಡಿಯಾಗಿದೆ.

ನವದೆಹಲಿ: ಕೊವಿಡ್-19 ಮಹಾಮಾರಿಗೆ ತನ್ನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿರುವ ಭಾರತದ ಮಹಿಳಾ ಕ್ರಿಕೆಟರ್ ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರು, ದುಃಖದ ಸಮಯದಲ್ಲಿ ಸಂಪರ್ಕಿಸಿ ಸಂತೈಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ವೇದಾ ಅವರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡದಿರುವುದಕ್ಕೆ ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ನ ಮಾಜಿ ಕ್ಯಾಪ್ಟನ್ ಲಿಸಾ ಸ್ಥಾಲೇಕರ್ ಅವರು ಬಿಸಿಸಿಐ ಅನ್ನು ತೀವ್ರವಾಗಿ ಟೀಕಿಸಿದ್ದು ಈ ಸಂದರ್ಭದಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ. ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಆಟಗಾರ್ತಿಯಾಗಿರುವ ವೇದಾ ಅವರು ಕಳೆದ ತಿಂಗಳು ತಮ್ಮ ಹಿರಿಯ ಸಹೋದರಿಯನ್ನು ಕೊರೊನಾ ಸೋಂಕಿನಿಂದ ಕಳೆದುಕೊಂಡ ಎರಡು ವಾರಗಳ ನಂತರ ಅವರ ತಾಯಿ ಸಹ ಮಾಹಾಮಾರಿಗೆ ಬಲಿಯಾದರು.
ತನ್ನ ಅತ್ಯಂತ ಕೆಟ್ಟ ಸಮಯದಲ್ಲಿ ಸಾಂತ್ವನ ನೀಡಿದ ಬಿಸಿಸಿಐಯನ್ನು ವೇದಾ ಟ್ವಿಟ್ಟರ್ ಮೂಲಕ ಧನ್ಯವಾದಗಳನ್ನು ಹೇಳಿದ್ದಾರೆ.
ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ ತಿಂಗಳು ಬಹಳ ದಾರುಣವಾಗಿತ್ತು, ಇಂಥ ಕಷ್ಟ ಮತ್ತು ನೋವಿನ ಸಮಯದಲ್ಲಿ ನನಗೆ ಬೆಂಬಲ ಸೂಚಿಸಿದ ಬಿಸಿಸಿಐ ಮತ್ತು ಶ್ರೀ ಜಯ್ ಶಾ ಅವರಿಗೆ ಹೃದಯಾಂತರಾಳದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಧನ್ಯವಾದಗಳು ಸರ್ @BCCIWomen,’ ಎಂದು ವೇದಾ ಟ್ವೀಟ್ ಮಾಡಿದ್ದಾರೆ.
Have been tough last month for me and family and I’d like to sincerely thank the @BCCI & Mr @jayshah sir for calling me few days back and extending support in these unprecedented times. Many thanks sir @BCCIWomen
— Veda Krishnamurthy (@vedakmurthy08) May 18, 2021
ಮುಂದಿನ ತಿಂಗಳು ಯುನೈಟೆಡ್ ಕಿಂಗ್ಡಮ್ ಪ್ರವಾಸ ತೆರಳಿ ಟೆಸ್ಟ್ ಮತ್ತು ಒಂದು ದಿನ ಪಂದ್ಯಗಳನ್ನಾಡಲಿರುವ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಕಳೆದ ವಾರ ಪ್ರಕಟಿಸಿದ ಬಿಸಿಸಿಐ ವೇದಾ ಅವರನ್ನು ಆಯ್ಕೆ ಮಾಡಿಲ್ಲ.
ಮಂಡಳಿಯ ಈ ಕ್ರಮವನ್ನು ಆಸ್ಟ್ರೇಲಿಯ ಮಹಿಳಾ ತಂಡದ ಮಾಜಿ ನಾಯಕಿ ಸ್ಥಾಲೇಕರ್ ಖಂಡಿಸಿದ್ದಾರೆ. ‘ವೇದಾ ಅವರು ಯಾವ ಸ್ಥಿತಿಯಲ್ಲಿದ್ದಾರೆ ಅಂತ ಕಂಡುಕೊಳ್ಳುವ ಗೋಜಿಗೆ ಬಿಸಿಸಿಐ ಹೋಗಲಿಲ್ಲ ಮತ್ತು ಅವರನ್ನು ಸಂಪರ್ಕಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಇಂಗ್ಲೆಂಡ್ ಪ್ರವಾಸಕ್ಕೆ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ತಿಳಿಸುವ ಸೌಜನ್ಯತೆ ಬಿಸಿಸಿಐ ತೋರಿಲ್ಲ,’ ಎಂದು ಸ್ಥಾಲೇಕರ್ ಹೇಳಿದ್ದರು.
‘ಬಿಸಿಸಿಐ ದೃಷ್ಟಿಯಲ್ಲಿ ವೇದಾ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು ಸಮರ್ಥನೀಯವಿರಬಹುದೇನೋ, ಆದರೆ ನನಗೆ ಬೇಸರ ಮೂಡಿಸಿರುವ ಸಂಗತಿಯೆಂದರೆ ಮಂಡಳಿಯೊಂದಿಗೆ ಕರಾರಿಗೊಳಪಟ್ಟಿರುವ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ವೇದಾರನ್ನು ಬಿಸಿಸಿಐ ಸಂಪರ್ಕಿಸುವ ಪ್ರಯತ್ನವೇ ಮಾಡಿಲ್ಲ. ಆಕೆ ತನ್ನ ಈಗಿನ ಪರಿಸ್ಥಿತಿಯೊಂದಿಗೆ ಹೇಗೆ ಏಗುತ್ತಿದ್ದಾಳೆ ಅಂತ ತಿಳಿದುಕೊಳ್ಳುವ ಉಮೇದಿಗೆ ಬಿಸಿಸಿಐ ಹೋಗಿಲ್ಲ,’ ಎಂದು ಸ್ಥಾಲೇಕರ್ ಹೇಳಿದ್ದರು.
‘ಕ್ರೀಡಾ ಮಂಡಳಿ ಯಾವುದೇ ಆಗಿರಲಿ, ಅದು ತನ್ನ ಆಟಗಾರರ ಬಗ್ಗೆ ತೀವ್ರವಾದ ಕಾಳಜಿ ಹೊಂದಿರಬೇಕು, ಕೇವಲ ಕ್ರೀಡೆಯ ಮೇಲೆ ಮಾತ್ರ ಗಮನ ಕೇಂದ್ರೀಕೃತವಾಗಿದ್ದರೆ ಅದರಿಂದ ಪ್ರಯೋಜನವಾಗದು, ನನಗೆ ಬಹಳ ನಿರಾಶೆ ಮತ್ತು ಬೇಸರವಾಗಿದೆ,’ ಎಂದು ಸ್ಥಾಲೇಕರ್ ಹೇಳಿದ್ದಾರೆ.
ಒಬ್ಬ ವಿದೇಶೀ ಮೂಲದ ಆಟಗಾರ್ತಿಯ ಕಾಮೆಂಟ್ಗಳನ್ನು ಕೇಳಿದ ನಂತರ ಬಿಸಿಸಿಐ ಪ್ರತಿಕ್ರಿಯಿಸಿರುವುದು ಅದರ ಹೃದಯಹೀನತೆ ಮತ್ತು ಧಾರ್ಷ್ಟ್ಯತೆಗೆ ಹಿಡಿದ ಕನ್ನಡಿಯಾಗಿದೆ. ದುಃಖದಲ್ಲಿರುವ ತನ್ನ ಆಟಗಾರ್ತಿಯ ಯೋಗಕ್ಷೇಮ ವಿಚಾರಿಸಿಕೊಳ್ಳುವ ಸೌಜನ್ಯತೆ ಮಂಡಳಿಗಿಲ್ಲವೆಂದರೆ ಅದು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಮಂಡಳಿಗಳಲ್ಲೊಂದಾಗಿದ್ದರೂ, ಹೃದಯವಂತಿಕೆಯೇ ಇಲ್ಲದ ಬಂಡೆಯಂತೆ ಗೋಚರಿಸುತ್ತಿದೆ.
ಇದನ್ನೂ ಓದಿ: ಕೊರೊನಾ ನಡುವೆ ಆಕ್ಸಿಜನ್ ಪೂರೈಸಲು Sachin Tendulkar ಸಹಾಯ | ಸೋಂಕಿತರ ಕಷ್ಟಕ್ಕೆ ಮಿಡಿದ Cricket Legend
