ಒಲಂಪಿಕ್ಸ್ನಲ್ಲಿ ಎರಡು ಬಾರಿ ಪದಕ ಗೆದ್ದ ವಿಶ್ವ ಚಾಂಪಿಯನ್ ರೆಸ್ಲರ್ ಸುಶೀಲ್ ಕುಮಾರ್ ಕೊಲೆ ಆರೋಪ ಹೊತ್ತು ತಲೆಮರೆಸಿಕೊಂಡಿರುವುದು ದುರಂತ
ಒಲಂಪಿಕ್ಸ್ ಕ್ರೀಡೆಗಳಲ್ಲಿ ಭಾರತಕ್ಕೆ ಎರಡು ಬಾರಿ ಪದಕ ಗೆದ್ದಿರುವ ಸುಶೀಲ್ ಕುಮಾರ್ ನಜಫ್ಗಢ್ನಲ್ಲಿರುವ ಬಾಪ್ರೊಲಾ ಹೆಸರಿನ ಹಳ್ಳಿಯಲ್ಲಿ ಹುಟ್ಟಿದವರು. ಕುಸ್ತಿಯಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆದ್ದ ಏಕೈಕ ಭಾರತೀಯನೆಂದರೆ ಸುಶೀಲ್.
ನವದೆಹಲಿ: ಮಾಜಿ ಜ್ಯೂನಿಯರ್ ಕುಸ್ತಿ ಚಾಂಪಿಯನ್ 23-ವರ್ಷ ವಯಸ್ಸಿನ ಸಾಗರ್ ರಾಣಾ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಭಾರತದ ಖ್ಯಾತ ಕುಸ್ತಿಪಟು ಮತ್ತು ಎರಡು ಬಾರಿ ಒಲಂಪಿಕ್ಸ್ನಲ್ಲಿ ದೇಶಕ್ಕೆ ಪದಕ ಗೆದ್ದು ಕೊಟ್ಟಿರುವ ಸುಶೀಲ್ ಕುಮಾರ ಅವರು ದೆಹಲಿ ಪೊಲೀಸರ ನಿದ್ರೆಗೆಡಿಸಿದ್ದಾರೆ. ಸೋಮವಾರದಂದು ದೆಹಲಿ ಪೊಲೀಸ್ ಸುಶೀಲ್ ಬಗ್ಗೆ ಸುಳಿವು ಕೊಡುವವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವ ಪ್ರಕಟಣೆ ಮಾಡಿದೆ. ಇದೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಅಜಯ ಹೆಸರಿನ ಮತ್ತೊಬ್ಬ ಆರೋಪಿಯ ಸುಳಿವು ನೀಡಿದರೆ 50,000 ಬಹುಮಾನ ನೀಡುವ ಘೋಷಣೆಯನ್ನೂ ದೆಹಲಿ ಪೊಲೀಸ್ ಮಾಡಿದೆ. ಸುಶೀಲ್, ಅಜಯ್ ಅವರನ್ನೊಳಗೊಂಡಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ 9 ಜನರನ್ನು ಪತ್ತೆ ಮಾಡಲು ಪೊಲೀಸರು ಹಲವಾರು ಕಡೆ ಶೋಧಗಳನ್ನು ನಡೆಸಿದ್ದಾರೆ.
ಕಳೆದ ಶನಿವಾರದಂದೇ ದೆಹಲಿಯ ನ್ಯಾಯಾಲಯವೊಂದು ಸುಶೀಲ್ ಮತ್ತು ಇತರ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ ಮತ್ತು ದೆಹಲಿ ಪೊಲೀಸ್ ಒಲಂಪಿಯನ್ ಮತ್ತು ಅವರ ಸಹಚರರೆನ್ನಲಾಗಿರುವ ಇತರರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.
ಒಲಂಪಿಕ್ಸ್ ಕ್ರೀಡೆಗಳಲ್ಲಿ ಭಾರತಕ್ಕೆ ಎರಡು ಬಾರಿ ಪದಕ ಗೆದ್ದಿರುವ ಸುಶೀಲ್ ಕುಮಾರ್ ನಜಫ್ಗಢ್ನಲ್ಲಿರುವ ಬಾಪ್ರೊಲಾ ಹೆಸರಿನ ಹಳ್ಳಿಯಲ್ಲಿ ಹುಟ್ಟಿದವರು. ಕುಸ್ತಿಯಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆದ್ದ ಏಕೈಕ ಭಾರತೀಯನೆಂದರೆ ಸುಶೀಲ್. ಅವರ ಸಾಧನೆಗಳ ಬಗ್ಗೆ ಇಡೀ ದೇಶವೇ ಹೆಮ್ಮೆಪಟ್ಟುಕೊಂಡಿರುವ ಸಂದರ್ಭದಲ್ಲಿ ಅವರು ಹಣೆಮೇಲೆ ಕೊಲೆಗಾರನ ಆರೋಪ ಹೊತ್ತು ತಿರುಗುತ್ತಿದ್ದಾರೆ.
ಛತ್ರಶಾಲಾ ಸ್ಟೇಡಿಯಂನಲ್ಲಿ ಮೇ 4ರಂದು ನಡೆದ ಸಾಗರ್ ರಾಣಾ ಹತ್ಯೆಯಲ್ಲಿ ತಮ್ಮ ಹೆಸರು ಕೇಳಿಬಂದ ನಂತರ ಸುಶೀಲ್ ನಾಪತ್ತೆಯಾಗಿದ್ದಾರೆ. ಅದು ಎರಡು ಕುಸ್ತಿಪಟು ಗುಂಪುಗಳ ನಡುವೆ ನಡೆದ ಘರ್ಷಣೆಯಾಗಿತ್ತು. ಎರಡು ತಂಡಗಳ ಸದಸ್ಯರಲ್ಲೂ ಆಯುಧಗಳಿದ್ದವು. ಅವೆರಡರ ಮಧ್ಯೆ ಗುಂಡಿನ ಚಕಮಕಿ ನಡೆದಾಗ ಕೆಲವು ಕುಸ್ತಿಪಟುಗಳು ಗಾಯಗೊಂಡರೆ ಗಂಭೀರವಾಗಿ ಗಾಯಗೊಂಡಿದ್ದ ಸಾಗರ್ ಸತ್ತಿದ್ದಾನೆ.
ಆದರೆ, ಸುಶೀಲ್ ಅವರು, ತನಗೂ ಸದರಿ ಘಟನೆಗೂ ಯಾವುದೇ ಸಂಬಂಧವಿಲ್ಲ, ಪಿಸ್ತೂಲ್ಗಳಿಂದ ಕಾದಾಟಕ್ಕಿಳಿದ ಎರಡೂ ಗುಂಪುಗಳಲ್ಲಿ ಯಾರೂ ತನಗೆ ಪರಿಚಿತರಲ್ಲ ಎಂದು ಹೇಳಿದ್ದರು. ‘ಅವರು ಕುಸ್ತಿಪಟುಗಳಲ್ಲ, ಘಟನೆ ಮಧ್ಯರಾತ್ರಿಯ ನಂತರ ನಡೆದಿದೆ. ಕೆಲ ಅಪರಿಚಿತ ಜನ ನಮ್ಮ ಆವರಣದೊಳಗೆ ಬಂದು ಹೊಡೆದಾಡಲಾರಂಭಿಸಿದರು ಮತ್ತು ವಿಷಯವನ್ನು ನಾವು ಕೂಡಲೇ ಪೊಲೀಸರ ಗಮನಕ್ಕೆ ತಂದೆವು. ಈ ಘಟನೆ ಮತ್ತು ನಮ್ಮ ಸ್ಟೇಡಿಯಂ ನಡುವೆ ಯಾವುದೇ ಸಂಬಂಧವಿಲ್ಲ, ಎಂದು ಕೊಲೆ ನಡೆದ ಮರುದಿನ ಸುಶೀಲ್ ಕುಮಾರ್ ಹೇಳಿದ್ದರು.
ಸುಶೀಲ್ ಅವರು ಭಾರತದ ಪ್ರತಿಷ್ಠಿತ ಕುಸ್ತಿಪಟುವಾಗಿರುವುದರಿಂದ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ ಐ) ಸದರಿ ಘಟನೆಯ ಬಗ್ಗೆ ತೀವ್ರ ಕಳವಳ ಮತ್ತು ಗಾಬರಿ ವ್ಯಕ್ತಪಡಿಸಿದೆ.
‘ಹೌದು, ಭಾರತದ ಕುಸ್ತಿ ವರ್ಚಸ್ಸಿಗೆ ತೀವ್ರವಾದ ಹಾನಿಯುಂಟಾಗಿದೆ, ಅದರೆ, ಕುಸ್ತಿ ಅಖಾಡದಾಚೆ ಅವರೇನು ಮಾಡುತ್ತಾರೆ ಎನ್ನುವುದು ನಮಗೆ ಸಂಬಂಧಿಸಿಲ್ಲ. ಅವರು ಅಖಾಡದಲ್ಲಿ ಏನು ಮಾಡುತ್ತಾರೆ ಎನ್ನುವುದನ್ನು ಮಾತ್ರ ನಾವು ಗಮನಿಸುತ್ತೇವೆ,’ ಎಂದು ಫೆಡರೇಶನ್ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸುಶೀಲ್ ಕುಮಾರ್ ಅವರು 2008ರ ಬೀಜಿಂಗ್ ಒಲಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಕುಸ್ತಿಯಲ್ಲಿ ಭಾರತಕ್ಕೆ 56 ವರ್ಷಗಳ ಪದಕದ ಬರವನ್ನು ನೀಗಿಸಿದ್ದರು. ಅವರ ಸಾಧನೆ ಭಾರತದ ಕುಸ್ತಿಪಟುಗಳು ಮತ್ತು ಅದರ ತರಬೇತಿಯಲ್ಲಿ ತೊಡಗಿದವರ ಮೇಲೆ ಭಾರಿ ಪ್ರಭಾವ ಬೀರಿತ್ತು. ಯೋಗೇಶ್ವರ್ ದತ್, ಗೀತಾ, ಬಬಿತಾ ಫೋಗಟ್, ಅವರ ಕಸಿನ್ ವಿನೇಶ್ ರಿಯೋ ಒಲಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲ್ಲಿಕ್, ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕಗಳನ್ನು ಗೆದ್ದ ಬಜರಂಗ್ ಪೂನಿಯಾ, ರವಿ ದಹಿಯಾ ಮತ್ತು ದೀಪಕ್ ಪೂನಿಯಾ ಮುಂತಾದವರೆಲ್ಲ ಸುಶೀಲ್ ಅವರಿಂದಲೇ ಪ್ರೇರಣೆ ಹೊಂದಿದ್ದರು. ಸುಶೀಲ್ ಅವರ ಸಾಧನೆ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತ್ತು.
ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಅವರು ಒಟ್ಟು ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ದೆಹಲಿ ಸಾರಿಗೆ ನಿಗಮದಲ್ಲಿ ಬಸ್ ಕಂಡಕ್ಟರೊಬ್ಬರ ಮಗನಾಗಿರುವ ಸುಶೀಲ್ 14ನೇ ವಯಸ್ಸಿನಿಂದಲೇ ಕುಸ್ತಿ ಆಖಾಡಕ್ಕಿಳಿದು ಛತ್ರಶಾಲಾ ಸ್ಟೇಡಿಯಂನಲ್ಲಿ ಪೈಲ್ವಾನ್ ಯಶ್ವೀರ್, ರಾಂಪಾಲ್ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಮಹಾಬಲಿ ಸತ್ಪಾಲ್ ಸಿಂಗ್ ಅವರ ಯೋಗ್ಯ ಮಾರ್ಗದರ್ಶನದಲ್ಲಿ ಉತ್ತಮ ಕುಸ್ತಿಪಟುವಾಗಿ ರೂಪುಗೊಂಡರು. ಆದರೆ ಅವರಲ್ಲೊಬ್ಬ ಚಾಂಪಿಯನ್ ಅಡಗಿರುವುದನ್ನು ಗುರುತಿಸಿದ್ದು ಮಾಜಿ ಕುಸ್ತಿ ಪಟು ಮತ್ತು ಕೋಚ್ ಸತ್ಪಾಲ್ ಸಿಂಗ್. ಸುಶೀಲ್, 13 ವರ್ಷಗಳ ಕಾಲ ತನಗೆ ತರಬೇತಿ ನೀಡಿ ಚಾಂಪಿಯನ್ ರೆಸ್ಲರ್ ಆಗಿ ರೂಪಿಸಿದ ಸತ್ಪಾಲ್ ಅವರನ್ನು ತಂದೆಯಂತೆ ಗೌರವಿಸುತ್ತಾರೆ. ಅವರ ಮಗಳನ್ನೇ ಸುಶೀಲ್ ಮದುವೆಯಾಗಿದ್ದು ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಈಗಿನ ಕೊಲೆ ಆರೋಪ ಎದುರಿಸುವ ಮೊದಲು ಸಹ ಸುಶೀಲ್ ಅವರು ಕೆಲವು ವಿವಾದಗಳಲ್ಲಿ ಸಿಲುಕಿದ್ದರು. ಇತ್ತೀಚಿನ ಬೆಳವಣಿಗೆಯ ಪ್ರಕಾರ ಸುಶೀಲ್ ಕುಮಾರ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಆರ್ಜಿಯನ್ನು ದೆಹಲಿ ನ್ಯಾಯಾಲಯವೊಂದು ಮಂಗಳವಾರದಂದು ತಿರಸ್ಕರಿಸಿದೆ. ಪ್ರಕರಣದಲ್ಲಿ ಅವರು ಪ್ರಮುಖ ಆರೋಪಿಯಾಗಿದ್ದಾರೆ ಮತ್ತು ಅವರು ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ಕೋರ್ಟ್ ಹೇಳಿದೆ.
ಸುಶೀಲ್ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ನ್ಯಾಯಾಲಯದಲ್ಲಿ ಸಾಬೀತಾಗಬೇಕು ನಿಜ, ಆದರೆ ಅವರು ತಲೆಮರೆಸಿಕೊಂಡಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಅವರ ಖ್ಯಾತಿ, ವರ್ಚಸ್ಸುಗಳಿಗೆ ಭಾರೀ ಹೊಡೆತ ಬಿದ್ದಿರುವುದಂತೂ ಸತ್ಯ.
ಇದನ್ನೂ ಓದಿ: ಕುಸ್ತಿಪಟು ಸುಶೀಲ್ ಬಂಧನಕ್ಕೆ ಡೆಲ್ಲಿ ಪೊಲೀಸ್ ಮಾಸ್ಟರ್ ಪ್ಲಾನ್; ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ