ಬಿಗ್ ಶಾಕ್… ವಿಶ್ವಕಪ್​ನಿಂದ ಬ್ರೆಝಿಲ್ ಔಟ್!

FIFA World Cup 2026: ಫಿಫಾ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಫಲಿತಾಂಶವೊಂದಕ್ಕೆ 2026ರ ಫಿಫಾ ವಿಶ್ವಕಪ್ ಸಾಕ್ಷಿಯಾಗಿದೆ. ಮಾಂತ್ರಿಕ ಆಟಗಾರರ ದಂಡನ್ನೇ ಹೊಂದಿರುವ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ತಂಡವು, ನಾರ್ವೆ ವಿರುದ್ಧದ ರೌಂಡ್ ಆಫ್-16 ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಸೋತು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.

ಬಿಗ್ ಶಾಕ್... ವಿಶ್ವಕಪ್​ನಿಂದ ಬ್ರೆಝಿಲ್ ಔಟ್!
Brazil
Image Credit source: GettyImages

Updated on: Jul 06, 2026 | 7:41 AM

ಫಿಫಾ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಬ್ರೆಝಿಲ್ ತಂಡವು ಕ್ವಾರ್ಟರ್ ಫೈನಲ್​ಗೂ ಮುನ್ನವೇ ಹೊರಬಿದ್ದಿದೆ. ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೌಂಡ್ ಆಫ್-16 ನಾಕೌಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಾರ್ವೆ ತಂಡವು 2-1 ಗೋಲುಗಳ ಅಂತರದಿಂದ ಬ್ರೆಝಿಲ್ ತಂಡವನ್ನು ಮಣಿಸಿದೆ. ಈ ಸೋಲಿನೊಂದಿಗೆ ಬ್ರೆಝಿಲ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿದೆ.

ಮಿಂಚಿದ ಹಾಲಂಡ್:

ಈ ಪಂದ್ಯದ ಆರಂಭಕ್ಕೂ ಮುನ್ನ ಗೆಲ್ಲುವ ಫೇವರೇಟ್ ತಂಡವಾಗಿ ಬ್ರೆಝಿಲ್ ಗುರುತಿಸಿಕೊಂಡಿತ್ತು. ಅದರಲ್ಲೂ ವಿನೀಶಿಯಸ್ ಜೂನಿಯರ್, ಗೇಬ್ರಿಯಲ್ ಮಾರ್ಟಿನೆಲ್ಲಿ, ಎಂಡ್ರಿಕ್ , ನೇಮಾರ್ ಜೂನಿಯರ್ ನಂತಹ ಬಲಿಷ್ಠ ಮುನ್ಪಡೆ ಆಟಗಾರರನ್ನು ಹೊಂದಿದ್ದ ಬ್ರೆಝಿಲ್ ತಂಡ ನಾರ್ವೆ ವಿರುದ್ಧ ಪ್ರಾಬಲ್ಯ ಮೆರೆಯಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು.

ಆದರೆ ಮೊದಲಾರ್ಧದಲ್ಲಿ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ ನಾರ್ವೆ ಪಡೆ ಬ್ರೆಝಿಲ್ ತಂಡಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡಲಿಲ್ಲ. ಪರಿಣಾಮ ಮೊದಲಾರ್ಧ 0-0 ಅಂತರದಿಂದ ಕೊನೆಗೊಂಡಿತು.

ದ್ವಿತೀಯಾರ್ಧದಲ್ಲಿ ತನ್ನ ರಣತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸಿ ಅಟ್ಯಾಕಿಂಗ್‌ಗೆ ಇಳಿದ ನಾರ್ವೆ ಪರ ಎರ್ಲಿಂಗ್ ಹಾಲಂಡ್ ಬ್ಯಾಕ್ ಟು ಬ್ಯಾಕ್ ಎರಡು ಗೋಲು ಬಾರಿಸಿದರು.

  •  79ನೇ ನಿಮಿಷ: ಎರ್ಲಿಂಗ್ ಹಾಲಂಡ್ ನಾರ್ವೆ ಪರ ಮೊದಲ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
  •  90ನೇ ನಿಮಿಷ: ಪಂದ್ಯ ಮುಗಿಯಲು ಕೇವಲ ಕೆಲವೇ ನಿಮಿಷಗಳಿದ್ದಾಗ ಹಾಲಂಡ್ ಮತ್ತೊಂದು ಆಕರ್ಷಕ ಗೋಲು ಸಿಡಿಸಿ ಬ್ರೆಝಿಲ್ ಸೋಲನ್ನು ಖಚಿತಪಡಿಸಿದರು.

ಕೈಚೆಲ್ಲಿದ ಪೆನಾಲ್ಟಿ ಅವಕಾಶ!

ಪಂದ್ಯದ ಆರಂಭದಲ್ಲೇ (13ನೇ ನಿಮಿಷದಲ್ಲಿ) ಬ್ರೆಝಿಲ್‌ಗೆ ಪೆನಾಲ್ಟಿ ಮೂಲಕ ಗೋಲು ಗಳಿಸುವ ಸುವರ್ಣ ಅವಕಾಶ ಸಿಕ್ಕಿತ್ತು. ಆದರೆ ಬ್ರೂನೋ ಗಿಮರೇಶ್ ಹೊಡೆದ ಈ ಕಿಕ್ ಅನ್ನು ನಾರ್ವೆ ಗೋಲ್‌ಕೀಪರ್ ಓರ್ಜಾನ್ ನೈಲ್ಯಾಂಡ್ ಅದ್ಭುತವಾಗಿ ತಡೆದರು.

ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ನೇಮಾರ್ ಜೂನಿಯರ್, ಪಂದ್ಯದ ಇಂಜುರಿ ಟೈಮ್‌ನಲ್ಲಿ (90+10ನೇ ನಿಮಿಷ) ಸಿಕ್ಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಆದರೆ, ಇದು ಬ್ರೆಝಿಲ್ ತಂಡಕ್ಕೆ ಸಮಾಧಾನ ತಂದಿತೇ ವಿನಃ ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.

ಬ್ರೆಝಿಲ್​ಗೆ ಆಘಾತ:

2022ರಲ್ಲಿ ಕ್ವಾರ್ಟರ್ ಫೈನಲ್​ಗೆ ತಲುಪಿದ್ದ ಬ್ರೆಝಿಲ್ ತಂಡವು ಇದೀಗ ದ್ವಿತೀಯ ನಾಕೌಟ್ ಹಂತದಲ್ಲೇ ಹೊರಬಿದ್ದಿದೆ. ಅದು ಕೂಡ 36 ವರ್ಷಗಳ ಬಳಿಕ. ಅಂದರೆ ಬ್ರೆಝಿಲ್ ತಂಡವು ಕೊನೆಯ ಬಾರಿ ಕ್ವಾರ್ಟರ್ ಫೈನಲ್ ತಲುಪದೇ ಹೊರಬಿದ್ದಿದ್ದು 1990 ರಲ್ಲಿ. ಇದಾದ ಬಳಿಕ 8 ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದರ ನಡುವೆ 2 ಬಾರಿ ಚಾಂಪಿಯನ್ ಪಟ್ಟವನ್ನೂ ಕೂಡ ಅಲಂಕರಿಸಿದ್ದರು. ಆದರೆ ಈ ಬಾರಿ ನಾರ್ವೆ ಪಡೆಯ ಮುಂದೆ ಲಯ ತಪ್ಪಿದ ಬ್ರೆಝಿಲ್ ಆಘಾತಕಾರಿ ಸೋಲಿನೊಂದಿಗೆ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದೆ.

 

Follow Us