ರೋಹನ್ ಬೋಪಣ್ಣಗೆ ರಾಜ್ಯ ಸರ್ಕಾರದಿಂದ ಸನ್ಮಾನ; ಬಹುಮಾನ ಘೋಷಣೆ
Rohan Bopanna: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ರೋಹನ್ ಬೋಪಣ್ಣ ಅವರನ್ನು ಅಭಿನಂದಿಸಿದರು ಮತ್ತು ಸ್ಟಾರ್ ಟೆನಿಸ್ ಆಟಗಾರನಿಗೆ 50 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಹ ಘೋಷಿಸಿದರು.
ಇತ್ತೀಚೆಗಷ್ಟೇ ಆಸ್ಟ್ರೇಲಿಯನ್ ಓಪನ್ (Australian Open Men’s Doubles Final) ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ (Rohan Bopanna) ಅವರನ್ನು ಕರ್ನಾಟಕ ಸರ್ಕಾರ ಗೌರವಿಸಿದೆ. ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka Chief Minister Siddaramaiah) ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ರೋಹನ್ ಬೋಪಣ್ಣ ಅವರನ್ನು ಅಭಿನಂದಿಸಿದರು ಮತ್ತು ಸ್ಟಾರ್ ಟೆನಿಸ್ ಆಟಗಾರನಿಗೆ 50 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಹ ಘೋಷಿಸಿದರು. ಸ್ವತಃ ಈ ವಿಚಾರವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತದ ಸ್ಟಾರ್ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರನ್ನು ಇಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಕುಟುಂಬದವರೂ ಉಪಸ್ಥಿತರಿದ್ದರು ಎಂದು ಬರೆದುಕೊಂಡಿದ್ದಾರೆ.
ಬೋಪಣ್ಣ ತಮ್ಮ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಕಳೆದ ಜನವರಿ 27ರಂದು ಮೆಲ್ಬೋರ್ನ್ನಲ್ಲಿ ನಡೆದ ಆಸ್ಟ್ರೇಲಿಯಾ ನಡೆದ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. ಈ ಮೂಲಕ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡರು. ಅಷ್ಟೇ ಅಲ್ಲ, ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಬೋಪಣ್ಣ ಪಾತ್ರರಾದರು. ಇದಕ್ಕೂ ಮುನ್ನ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಈ ಸಾಧನೆ ಮಾಡಿದ್ದರು. ಮಹಿಳಾ ಟೆನಿಸ್ನಲ್ಲಿ ಸಾನಿಯಾ ಮಿರ್ಜಾ ಈ ಸಾಧನೆ ಮಾಡಿದ್ದಾರೆ.
ಸಿದ್ದರಾಮಯ್ಯ ಟ್ವೀಟ್
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ @rohanbopanna ಅವರನ್ನು ಮುಖ್ಯಮಂತ್ರಿ @siddaramaiah ಅವರು ಇಂದು ಅಭಿನಂದಿಸಿ, 50 ಲಕ್ಷ ರೂ.ಗಳ ಬಹುಮಾನ ಘೋಷಿಸಿದರು. ಸಚಿವರಾದ @PriyankKharge, ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು… pic.twitter.com/8l5IQ4Bgfk
— CM of Karnataka (@CMofKarnataka) February 13, 2024
ಬೋಪಣ್ಣಗೆ ಪದ್ಮಶ್ರೀ ಪ್ರಶಸ್ತಿ ಗೌರವ
ಕಳೆದ 20 ವರ್ಷಗಳಲ್ಲಿ, ಬೋಪಣ್ಣ 1000 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 25 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2003 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಬೋಪಣ್ಣ, ಪುರುಷರ ಡಬಲ್ಸ್‌ನಲ್ಲಿ ಇದುವರೆಗೂ ಒಂದೇ ಒಂದು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ಬೋಪಣ್ಣ ಆ ಬರವನ್ನು ನೀಗಿಸಿಕೊಂಡಿದ್ದರು. ಇದಕ್ಕೂ ಮುನ್ನ ಬೋಪಣ್ಣ 2017 ರಲ್ಲಿ ನಡೆದ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಏಕೈಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಇತ್ತೀಚೆಗಷ್ಟೇ ಭಾರತ ಸರ್ಕಾರ ರೋಹನ್ ಬೋಪಣ್ಣ ಸೇರಿದಂತೆ ಭಾರತದ 7 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 pm, Tue, 13 February 24