ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್ ಕ್ರೀಡಾ (Commonwealth Games) ಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಶಕ್ತಿ ಪ್ರದರ್ಶನ ಮುಂದುವರಿದಿದೆ. ಯುವ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ (Achinta Sheuli ) ಅವರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಪುರುಷರ 73kg ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ 20 ವರ್ಷದ ವೇಟ್‌ಲಿಫ್ಟರ್ ಬಂಗಾರಕ್ಕೆ (Gold) ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಆರಕ್ಕೇರಿದೆ. ವಿಶೇಷ ಎಂದರೆ ಇದುವರೆಗೆ ಬಂದಿರುವ ಎಲ್ಲ ಪದಕಗಳು ವೇಟ್ಲಿಫ್ಟಿಂಗ್ನಿಂದಲೇ ಆಗಿದೆ. ಸ್ನಾಚ್ ರೌಂಡ್ನಲ್ಲಿ ದಾಖಲೆಯ 140kg ಮತ್ತು 143kg ಎತ್ತಿದರೆ ಜೆರ್ಜ್ ರೌಂಡ್ನಲ್ಲಿ 166kg ಮತ್ತು 170kg ಬಾರ ಎತ್ತುವ ಮೂಲಕ ಅಚಿಂತಾ ಶೆಯುಲಿ ಚಿನ್ನವನ್ನು ಬಾಜಿಕೊಂಡಿದ್ದಾರೆ. ಈ ಬಂಗಾರದ ಪದಕವನ್ನು ನಾನು ನನ್ನ ಕೋಚ್ ಹಾಗೂ ಸಹೋದರನಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಚಿನ್ನ ಗೆದ್ದ ಜೆರೆಮಿ
ಜೆರೆಮಿ ಲಾಲ್ರಿನ್ನುಂಗಾ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು. ಮೀರಾಬಾಯಿ ಚಾನು ನಂತರ, ಜೆರೆಮಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಜೆರೆಮಿ ಸ್ನ್ಯಾಚ್‌ನಲ್ಲಿ 140 ಕೆಜಿ ಭಾರ ಹಾಗೂ ಜರ್ಕ್ನಲ್ಲಿ 160 ಕೆಜಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 165 ಕೆಜಿ ಎತ್ತಲು ಬಯಸಿದ್ದರು, ಆದರೆ ಜೆರೆಮಿಗೆ ಅದು ಸಾಧ್ಯವಾಗಲಿಲ್ಲ. 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 3 ಚಿನ್ನ, 2 ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ ಒಟ್ಟು 6 ಪದಕಗಳು ಬಂದಿವೆ.
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ಕ್ರಿಕೆಟ್ ಪ್ರೇಮಿಗಳು ಯಾವ ರೀತಿಯ ಫಲಿತಾಂಶವನ್ನು ನಿರೀಕ್ಷಿಸಿದ್ದರು ಅದೇ ದೃಶ್ಯ ಎಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಕಂಡುಬಂದಿದೆ.
ಮಳೆಯಿಂದಾಗಿ ತಡವಾದ ಕಾರಣ, ಪಂದ್ಯವನ್ನು 18-18 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು, ಆದರೆ ಈ ನಿರ್ಧಾರವು ಇಡೀ ಪಂದ್ಯದಲ್ಲಿ ಸರಿ ಎಂದು ಸಾಬೀತಾಗಲಿಲ್ಲ ಮತ್ತು ಇಡೀ ತಂಡ 99 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರ ಅಬ್ಬರದ ಇನ್ನಿಂಗ್ಸ್‌ನ ಪರಿಣಾಮ ಭಾರತ 12 ಓವರ್‌ಗಳಲ್ಲಿ 100 ರನ್‌ಗಳ ಸಾಧಾರಣ ಗುರಿಯನ್ನು ಸಾಧಿಸಿತು.
Published On - 7:21 am, Mon, 1 August 22