ಭಾರತದ ಚಾಂಪಿಯನ್ ಬಾಕ್ಸರ್‌ನ 19 ವರ್ಷದ ಮಗ ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022) ರಲ್ಲಿ ಅದ್ಭುತ ಸಾಧನೆ ಮಾಡಿದ್ದಾನೆ. ಪುರುಷರ 67 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಜೆರೆಮಿ ಲಾಲ್ರಿನ್ನುಂಗಾ (Jeremy Lalrinnunga) ಚಿನ್ನದ ಪದಕ ಗೆದ್ದಿದ್ದಾರೆ. ಯೂತ್ ಒಲಿಂಪಿಕ್ಸ್‌ನಲ್ಲಿ (Youth Olympic Games) ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೆರೆಮಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಒಟ್ಟು 300 ಕೆ.ಜಿ. ಭಾರ ಎತ್ತುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಒಮ್ಮೆ ರಿಂಗ್‌ನಲ್ಲಿ ಪಂಚ್‌ಗಳ ಸುರಿಮಳೆಗೈದ ಜೆರೆಮಿ, ವೇಟ್‌ಲಿಫ್ಟಿಂಗ್‌ಗೆ ಕಾಲಿಟ್ಟ ಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ.
ಜೆರೆಮಿ ತಂದೆ ಮಾಜಿ ರಾಷ್ಟ್ರೀಯ ಚಾಂಪಿಯನ್
ವಾಸ್ತವವಾಗಿ ಜೆರೆಮಿ ಅವರ ತಂದೆ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಬಾಕ್ಸರ್ ಆಗಿದ್ದಾರೆ. ಜೆರೆಮಿ ಮತ್ತು ಅವರ 4 ಸಹೋದರರು ಸಹ ತಮ್ಮ ತಂದೆಯ ಹಾದಿ ಹಿಡಿದು, ಬಾಕ್ಸಿಂಗ್ ರಿಂಗ್‌ಗೆ ಪ್ರವೇಶಿಸಿದರು. ಆದರೆ ಜೆರೆಮಿ ಮಾತ್ರ ಬಾಕ್ಸಿಂಗ್ ತೊರೆದು ವೇಟ್‌ಲಿಫ್ಟಿಂಗ್ ಕಡೆ ಗಮನಹರಿಸಿದರು. ಕೆಲವು ಸಮಯದ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜೆರೆಮಿ, ನನ್ನ ಹಳ್ಳಿಯಲ್ಲಿ ಒಂದು ಅಕಾಡೆಮಿ ಇತ್ತು. ಅಲ್ಲಿ ತರಬೇತುದಾರ ವೇಟ್‌ಲಿಫ್ಟಿಂಗ್‌ನಲ್ಲಿ ತರಬೇತಿ ನೀಡುತ್ತಿದ್ದರು. ನನ್ನ ಸ್ನೇಹಿತರ ತರಬೇತಿಯನ್ನು ನೋಡಿದ ನನಗೆ ಈ ಕ್ರೀಡೆಯ ಮೇಲೆ ಆಸಕ್ತಿ ಬೆಳೆಯಿತು ಎಂದು ಹೇಳಿಕೊಂಡಿದ್ದರು.
2011 ರಲ್ಲಿ ವೃತ್ತಿಜೀವನ ತಿರುವು ಪಡೆಯಿತು
2011 ರಲ್ಲಿ ಆರ್ಮಿ ಇನ್‌ಸ್ಟಿಟ್ಯೂಟ್ ಟ್ರಯಲ್ಸ್‌ಗೆ ಆಯ್ಕೆಯಾದಾಗ ಜೆರೆಮಿ ಅವರ ವೃತ್ತಿಜೀವನವು ತಿರುವು ಪಡೆದುಕೊಂಡಿತು. ಇದು ಜೆರೆಮಿ ಅವರ ವೃತ್ತಿಪರ ವೇಟ್‌ಲಿಫ್ಟಿಂಗ್ ಪ್ರಯಾಣದ ಆರಂಭವನ್ನು ಗುರುತಿಸಿತು. ಇದರ ನಂತರ, ಅವರು 2016 ರಲ್ಲಿ ವಿಶ್ವ ಯೂತ್ ಚಾಂಪಿಯನ್‌ಶಿಪ್‌ನಲ್ಲಿ 56 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಮರುವರ್ಷ ಅವರು ಅದೇ ಸ್ಪರ್ಧೆಯಲ್ಲಿ ಮತ್ತೊಂದು ಬೆಳ್ಳಿ ಗೆದ್ದರು. ಜೆರೆಮಿ ನಂತರ ಜೂನಿಯರ್ ಏಷ್ಯನ್ ಚಾಂಪಿಯನ್‌ಶಿಪ್ 2018 ರಲ್ಲಿ ಕಂಚಿನ ಪದಕವನ್ನು ಗೆದ್ದರು. ಜೆರೆಮಿ 7 ನೇ ವಯಸ್ಸಿನಲ್ಲಿ ಬಾಕ್ಸಿಂಗ್ ಪ್ರಾರಂಭಿಸಿದರೆ, ಅವರ ತಂದೆ 1988 ರಲ್ಲಿ ಬಾಕ್ಸಿಂಗ್ ಪ್ರಾರಂಭಿಸಿದ್ದರು. ಜೆರೆಮಿಯ ತಂದೆಯ ಪ್ರಕಾರ, ಅವರ ಕನಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಭಾರತವನ್ನು ಪ್ರತಿನಿಧಿಸಬೇಕೆಂಬುದಾಗಿತ್ತು, ಆದರೆ ಅವರ ಕನಸು ಈಡೇರುವುದಿಲ್ಲ. ಈ ಕಾರಣಕ್ಕಾಗಿ ಅವರು ತಮ್ಮ ಮಗ ಬಾಕ್ಸರ್ ಆಗಬೇಕೆಂದು ಬಯಸಿದ್ದರು.
ಫೈನಲ್‌ನಲ್ಲಿ ಕಠಿಣ ಪೈಪೋಟಿ
ಫೈನಲ್‌ನಲ್ಲಿ ಜೆರೆಮಿ ಕಠಿಣ ಹೋರಾಟ ನಡೆಸಿದರು. ಅವರು ಸ್ನ್ಯಾಚ್‌ನಲ್ಲಿ 140 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 160 ಕೆಜಿ ಎತ್ತಿದರು. 293 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಗೆದ್ದ ಸಮೋವಾದ ನೆವೊ ಅವರಿಗೆ ಕಠಿಣ ಹೋರಾಟ ನೀಡಿದರು. ನೆವೊ ಕೊನೆಯ ಪ್ರಯತ್ನದಲ್ಲಿ 174 ಕೆಜಿ ತೂಕವನ್ನು ಎತ್ತಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಅವರು ಬೆಳ್ಳಿಗೆ ತೃಪ್ತಿಪಡಬೇಕಾಯಿತು.
Published On - 5:31 pm, Sun, 31 July 22