ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಭಾರತದ ವೇಟ್‌ಲಿಫ್ಟರ್‌ಗಳು ಮತ್ತೊಮ್ಮೆ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಅನುಭವಿ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ (Gururaja Pujari) ಬರ್ಮಿಂಗ್‌ಹ್ಯಾಮ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕಂಚು ಗೆದ್ದರು. ವೇಟ್‌ಲಿಫ್ಟಿಂಗ್‌ನೊಂದಿಗೆ ಖಾತೆಯನ್ನು ತೆರೆದ ನಂತರ, ಭಾರತಕ್ಕೆ ಅದೇ ಸ್ಪರ್ಧೆಯಲ್ಲಿ ಮತ್ತೊಂದು ಪದಕ ಸಿಕ್ಕಿತು. ಈ ಬಾರಿ ಭಾರತದ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. 29ರ ಹರೆಯದ ವೇಟ್ ಲಿಫ್ಟರ್ ಪುರುಷರ 61 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಲಾರಿ ಚಾಲಕನ ಮಗ ಗುರುರಾಜ
ಗುರುರಾಜ ಟ್ರಕ್ ಚಾಲಕನ ಮಗನಾಗಿದ್ದು ಗುರುರಾಜನಿಗೆ ಇನ್ನೂ ನಾಲ್ವರು ಸಹೋದರರಿದ್ದಾರೆ. ಬಡತನದಲ್ಲೇ ಬದುಕಿದ ಗುರುರಾಜ ಅವರಿಗೆ ಈ ಸ್ಪರ್ಧೆಗೆ ಬೇಕಾದ ಅವಶ್ಯಕತೆಗಳನ್ನು ಪೂರ್ಣಗೊಳಿಸಿಕೊಳ್ಳು ಕಷ್ಟಸಾಧ್ಯವಾಗಿತ್ತು. ಅಲ್ಲದೆ ಗುರುರಾಜ ಅವರ ತಂದೆಗೆ ವೇಟ್‌ಲಿಫ್ಟರ್‌ಗೆ ಬೇಕಾಗುವ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಜೊತೆಗೆ ಈ ಸ್ಪರ್ಧೆ ನಿಂತಿರುವದೇ ತೂಕ ಎತ್ತುವುದರ ಮೇಲೆ ಹಾಗಾಗಿ ಈ ತೂಕ ಎತ್ತಲು ಅದೇ ರೀತಿಯ ಆಹಾರ ಬೇಕು, ಆದರೆ ಈ ಬಡ ಕುಟುಂಬದ ಹುಡುಗನಿಗೆ ಆ ರೀತಿಯ ಪ್ರೋಟಿನ್ಯುಕ್ತ ಆಹಾರ ಸೇವಿಸಲು ಹಣದ ಕೊರತೆಯಿತ್ತು. ಆದರೆ ಛಲ ಬಿಡದ ಗುರುರಾಜ ಇಂದು ಕಾಮನ್ವೆಲ್ತ್ನಲ್ಲಿ ಕಂಚು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Unbelievable weight lifting by Gururaj pujari..what a moment for india..??? jai hind..! #Gururajpujari#CommonwealthGames#weightlifting pic.twitter.com/DaQ69TTS33
— Dr.Rohan Sahu ?? (@drrohansahu) July 30, 2022
ವೇಟ್ ಲಿಫ್ಟರ್ ಆಗಿ ಮಾರ್ಪಟ್ಟ ಕುಸ್ತಿಪಟು
ಈಗ ವೇಟ್ ಲಿಫ್ಟರ್ ಆಗಿರುವ ಗುರುರಾಜ ಮೊದಲು ಕುಸ್ತಿಪಟು ಆಗಿದ್ದರು. 2008ರಲ್ಲಿ ಸುಶೀಲ್ ಕುಮಾರ್ ಒಲಂಪಿಕ್ ಪದಕ ಗೆದ್ದಿದ್ದನ್ನು ಕಂಡ ಈ ಆಟಗಾರ ತುಂಬಾ ಪ್ರಭಾವಿತರಾಗಿದ್ದರು. ಕರ್ನಾಟಕದ ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ ವಾಸವಾಗಿರುವ ಗುರುರಾಜ ಅವರೂ ದೇಶಕ್ಕೆ ಪದಕ ಗೆಲ್ಲಲೇಬೇಕು ಎಂಬ ದೃಢಸಂಕಲ್ಪ ಹೊಂದಿದ್ದರು. ಹೀಗಾಗಿ ಕುಸ್ತಿಯಲ್ಲಿ ಮೊದಲು ಅಭ್ಯಾಸ ಪ್ರಾರಂಭಿಸಿದ ಗುರುರಾಜ ಅಖಾಡಕ್ಕೆ ಹೋಗಲು ಪ್ರಾರಂಭಿಸಿದರು. ಆದರೆ ಶಾಲೆಯ ಶಿಕ್ಷಕರ ಸಲಹೆಯ ನಂತರ ಅವರು ಈ ಕ್ರೀಡೆಯನ್ನು ಬಿಟ್ಟು ವೇಟ್ಲಿಫ್ಟಿಂಗ್ನಲ್ಲಿ ತೊಡಗಿಕೊಂಡರು.
ಗುರುರಾಜ ಕಳೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದರು. ಈ ಆಟಗಾರ 249 ಕೆಜಿ ಎತ್ತುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ 5 ಕೆ.ಜಿ ತೂಕ ಹೆಚ್ಚಿಸಿಕೊಂಡು ದೊಡ್ಡ ವಿಭಾಗದಲ್ಲಿ ಭಾಗವಹಿಸಿದ್ದ ಗುರುರಾಜ ಪದಕ ಹಾಗೂ ಭಾರತೀಯರ ಹೃದಯ ಎರಡನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ. ಗುರುರಾಜ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಅವರ ಎತ್ತರದ ಕೊರತೆಯಿಂದಾಗಿ, ಅವರಿಗೆ ಸೈನ್ಯದಲ್ಲಿ ಕೆಲಸ ಸಿಗಲಿಲ್ಲ. ಆದರೆ ಅವರಿಗೆ ವಾಯುಪಡೆಯಲ್ಲಿ ಕೆಲಸ ನೀಡಲಾಯಿತು. ಇದೀಗ ಗುರುರಾಜ ಪೂಜಾರಿ ಸತತ ಎರಡನೇ ಕಾಮನ್‌ವೆಲ್ತ್ ಪದಕ ಗೆದ್ದಿದ್ದಾರೆ.
Published On - 6:44 pm, Sat, 30 July 22