CWG 2022: ಕಾಮನ್ವೆಲ್ತ್ ಗೇಮ್ಸ್ 2022ಕ್ಕೆ ಅದ್ಧೂರಿ ಚಾಲನೆ: ಭಾರತದ ಧ್ವಜ ಹಿಡಿದು ಸಾಗಿದ ಸಿಂಧು, ಮನ್‌ಪ್ರೀತ್
Birmingham Commonwealth Games 2022: ಕಾಮನ್‍ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಥ್ಲೆಟಿಕ್ ಪರೇಡ್ನಲ್ಲಿ ಓಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಭಾರತದ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜವನ್ನ ಹಿಡಿದು ಸಾಗಿದರು.
ಬಹುನಿರೀಕ್ಷಿತ ಕಾಮನ್ವೆಲ್ತ್ ಗೇಮ್ಸ್ 2022ಕ್ಕೆ (Commonwealth Games 2022 ) ಗುರುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಬರ್ಮಿಂಗ್‌ಹ್ಯಾಮ್‌ನ ಅಲೆಗ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದ ಅಥ್ಲೆಟಿಕ್ ಪರೇಡ್ನಲ್ಲಿ ಓಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು (PV Sindhu) ಹಾಗೂ ಭಾರತದ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ (Manpreet Singh) ಭಾರತದ ಧ್ವಜವನ್ನ ಹಿಡಿದು ಸಾಗಿದರು. ವರ್ಣರಂಜಿತ ಕಾರ್ಯಕ್ರಮಕ್ಕೆ ಇಂಗ್ಲೆಂಡ್ ರಾಜಕುಮಾರ ಚಾರ್ಲ್ಸ್ ಚಾಲನೆ ನೀಡಿದರು. ಪ್ರತೀ ದೇಶದ ಧ್ವಜಾಧಾರಿಯಾಗಿ ಓರ್ವ ಪುರುಷ ಮತ್ತು ಮಹಿಳಾ ಆಟಗಾರರಿಬೇಕು ಎಂದು ಸಂಘಟಕರು ಕೊನೆಯ ಕ್ಷಣದಲ್ಲಿ ಸೂಚನೆ ನೀಡಿದರು. ಹೀಗಾಗಿ ಸಿಂಧು ಜೊತೆಗೆ ಮನ್ ಪ್ರೀತ್ ಸಿಂಗ್ ಕೂಡಾ ಸಾಥ್ ನೀಡಿದರು.
ಇತ್ತೀಚೆಗೆ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಜಾವೆಲಿನ್ ಪಟು ನೀರಜ್ ಛೋಪ್ರಾ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಧ್ವಜಧಾರಿಯಾಗಬೇಕಿತ್ತು. ಆದರೆ, ಗಾಯಾಳುವಾಗಿರುವ ಅವರು ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದಕ್ಕೂ ಮುನ್ನ ಡ್ರಮ್ಮರ್– ತಾಳವಾದಕ ಅಬ್ರಹಾಂ ಪಾಡ್ಡಿ ಟೆಥ್ ಅವರು ವರ್ಣರಂಜಿತ ಸ್ಟೇಡಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತೀಯ ಗಾಯಕ ಮತ್ತು ಸಂಗೀತ ಸಂಯೋಜಕ ರಂಜನ್ ಘಾಟಕ್ ಕೂಡಾ ಪ್ರೇಕ್ಷಕರನ್ನು ರಂಜಿಸಿದರು. 2012ರ ಲಂಡನ್ ಒಲಿಂಪಿಕ್ಸ್ ಬಳಿಕ ಈ ಕೂಟ ಅತಿದೊಡ್ಡ ಹಾಗೂ ಅತ್ಯಂತ ದುಬಾರಿ ಕ್ರೀಡಾಕೂಟವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜಕುಮಾರ ಚಾರ್ಲ್ಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
Here come our champions!
Har haath mein Tiranga ?? Har dil mein Tiranga ??
Indian contingent walks out with confidence at #Birmingham2022 #Birmingham #CWG2022 #CommonwealthGames2022 #IndianContingent ?? pic.twitter.com/8vLkzBm84w
— Hardeep Singh Puri (@HardeepSPuri) July 29, 2022
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 72 ರಾಷ್ಟ್ರಗಳ 5000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ವಿಶೇಷ. ಇದರಲ್ಲಿ ಭಾರತದಿಂದ 214 ಸ್ಪರ್ಧಿಗಳು ಕಣಕ್ಕಿಳಿಯುತ್ತಿದ್ದಾರೆ. ಇನ್ನು ಈ ಕ್ರೀಡಾಕೂಟಗಳಲ್ಲಿ 134 ಪುರುಷರ ಪದಕ ಸ್ಪರ್ಧೆಗಳು ಮತ್ತು 136 ಮಹಿಳೆಯರ ಪದಕ ಸ್ಪರ್ಧೆಗಳು ನಡೆಯಲಿವೆ.
ಮೊದಲ ದಿನ ಪದಕದ ನಿರೀಕ್ಷೆ:
ಇಂದು ಮೊದಲ ದಿನವೇ ಭಾರತ ಅನೇಕ ಕ್ರೀಡೆಯಲ್ಲಿ ಕಣಕ್ಕಿಳಿಯಲಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಅಗ್ನಿ ಪರೀಕ್ಷೆಗೆ ಇಳಿಯಲಿದೆ. ಬಹಳ ಸಮಯದ ನಂತರ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟಕ್ಕೆ ಅವಕಾಶ ಸಿಕ್ಕಿದ್ದು ಚಿನ್ನ ಗೆಲ್ಲುವ ನೆಚ್ಚಿನ ತಂಡದಲ್ಲಿ ಭಾರತ ಕೂಡ ಇದೆ. ಹರ್ಮನ್ಪ್ರೀತ್ ಕೌರ್ ಭಾರತ ಮಹಿಳಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರ ಜೊತೆಗೆ ಶಫಾಲಿ ವರ್ಮಾ, ಸ್ಮೃತಿ ಮಂದಾನ, ಯಸ್ತಿಕಾ ಭಾಟಿಯ, ಜಮಿಯಾ ರೋಡ್ರಿಗಸ್, ರಿಚ್ಚಾ ಘೋಷ್, ದೀಪ್ತಿ ಶರ್ಮಾ, ಸ್ನೇಹ್ ರಾಣ, ರಾಜೇಶ್ವರ್ ಗಾಯಕ್ವಾಡ್, ಪೂನಮ್ ಯಾದವ್, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ಹರ್ಲೀನ್ ಡ್ಯೂಲ್, ಮೆಘನಾ ಸಿಂಗ್, ರಾಧಾ ಯಾದವ್, ತನಿಯಾ ಭಾಟಿಯ ಇದ್ದಾರೆ.
ಇನ್ನು ಟೇಬಲ್ ಟೆನ್ನಿಸ್ನ ಪುರುಷರ ತಂಡದಲ್ಲಿ ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ, ಅಚಂತ ಶರತ್ ಕಮಲ್, ಜಿ ಸತ್ಯನ್ ಆಡಲಿದ್ದಾರೆ. ಅಂತೆಯೆ ಮಹಿಳಾ ತಂಡದಲ್ಲಿ ದಿಯಾ ಚಿತಾಲೆ, ಮನಿಕಾ ಬಾತ್ರಾ, ರೀಟ್ ಟೆನ್ನಿಸನ್, ಶ್ರೀಜಾ ಅಕುಲಾ ಕಣಕ್ಕಿಳಿಯಲಿದ್ದಾರೆ. ಇಂದು ಬ್ಯಾಡ್ಮಿಂಟನ್ ಪಂದ್ಯ ಕೂಡ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಆಗಲಿದೆ. ಹಾಕಿಯಲ್ಲಿ ಭಾರತ ಮಹಿಳಾ ತಂಡ ಘಾನಾವನ್ನು ಎದುರಿಸಲಿದೆ.
Published On - 10:47 am, Fri, 29 July 22