
ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೇವಲ 18 ವರ್ಷದ ಯುವ ವೇಗಿ ಟಾಮ್ ನಾರ್ಟನ್ ತಮ್ಮ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ 100 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ವೇಲ್ಸ್ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಸಮರ್‌ಸೆಟ್ ವಿರುದ್ಧದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗ್ಲಾಮೋರ್ಗನ್ ಪರ ಕಣಕ್ಕಿಳಿದ ನಾರ್ಟನ್, ತಮ್ಮ ಮಾರಕ ದಾಳಿಯಿಂದ ಎದುರಾಳಿ ಪಡೆಯನ್ನು ಕಟ್ಟಿಹಾಕಿದ್ದಾರೆ.
ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಅಬರ್ಗವೆನ್ನಿ ಮೂಲದ ಟಾಮ್ ನಾರ್ಟನ್ ಐದನೇ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಮೂವರು ಬ್ಯಾಟರ್‌ಗಳನ್ನು ಔಟ್ ಮಾಡಿದರು.
ಈ ಮೂರು ವಿಕೆಟ್ಗಳೊಂದಿಗೆ ಟಾಮ್ ನಾರ್ಟನ್ ಶತಮಾನದ ಬಳಿಕ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: IPL 2026: RCB vs MI ಪಂದ್ಯಕ್ಕೆ 5 ಆಟಗಾರರು ಅಲಭ್ಯ
ದ್ವಿತೀಯ ದಿನದಾಟದ ಅಂತ್ಯಕ್ಕೆ ಸಮರ್‌ಸೆಟ್ ತಂಡವು 157 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಆದರೆ ಟಾಮ್ ನಾರ್ಟನ್ ಅವರ ಮಾರಕ ದಾಳಿಗೆ ತತ್ತರಿಸಿರುವ ಸಮರ್‌ಸೆಟ್ ತಂಡವು ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 32 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಗ್ಲಾಮೋರ್ಗನ್ ತಂಡವು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.