
2025 ರ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತ ಭಾಗಶಃ ಮುಗಿದಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಾಳೆ ಅಂದರೆ ಮಾರ್ಚ್ 2 ರಂದು ನಡೆಯುವ ಕೊನೆಯ ಪಂದ್ಯದೊಂದಿಗೆ ಲೀಗ್ ಹಂತ ಮುಗಿಯಲಿದೆ. ಆ ಬಳಿಕ ನಾಕೌಟ್ ಸುತ್ತು ಆರಂಭವಾಗಲಿದೆ. ಇನ್ನು ಭಾರತ ಹಾಗೂ ಕಿವೀಸ್ ನಡುವಿನ ಮುಖಾಮುಖಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಹಳ ವಿಶೇಷವಾಗಿದೆ. ಏಕೆಂದರೆ ಬರೋಬ್ಬರಿ 25 ವರ್ಷಗಳ ನಂತರ ಉಭಯ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಎದುರುಬದುರಾಗುತ್ತಿವೆ.
ವಾಸ್ತವವಾಗಿ 8 ತಂಡಗಳ ನಡುವೆ ನಡೆಯುತ್ತಿರುವ ಈ ಐಸಿಸಿ ಚಾಂಪಿಯನ್ಸ್ ಟ್ರೋಫಿ 1998 ರಲ್ಲಿ ಪ್ರಾರಂಭವಾಯಿತ. ಈ ಟೂರ್ನಿಯನ್ನು ಪ್ರತಿ 4 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಆದರೆ ಕೊರೊನಾ ಕಾರಣದಿಂದಾಗಿ 2017 ರ ನಂತರ ಈ ಟೂರ್ನಿಯನ್ನು ನಡೆಸಿರಲಿಲ್ಲ. ಆದರೆ ಇದೀಗ 6 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿಯಲ್ಲಿ ಭಾರತ ತಂಡ 25 ವರ್ಷಗಳ ಬಳಿಕ ಕಿವೀಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ಗುಂಪು ಹಂತದಲ್ಲಿ ತನ್ನ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ರೋಹಿತ್ ಪಡೆ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ, ಆ ನಂತರದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲು ಟೀಂ ಇಂಡಿಯಾ ಸಿದ್ಧವಾಗಿದೆ. ಮೇಲೆ ಹೇಳಿದಂತೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 25 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪರಸ್ಪರ ಎದುರಾಗಲಿವೆ. ಈ ಟೂರ್ನಿಯಲ್ಲಿ ಈ ಎರಡೂ ತಂಡಗಳ ನಡುವೆ ಇಲ್ಲಿಯವರೆಗೆ ಒಂದೇ ಒಂದು ಪಂದ್ಯ ನಡೆದಿದೆ. ಈ ಪಂದ್ಯವನ್ನು 2000 ನೇ ಇಸವಿಯಲ್ಲಿ ಆಡಲಾಗಿತ್ತು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಎಂಟ್ರಿ? NCA ಯಿಂದ ಹೊರಬಿತ್ತು ಗುಡ್ ನ್ಯೂಸ್
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿದ್ದು 2000ನೇ ಇಸವಿಯಲ್ಲಿ. ಆ ಆವೃತ್ತಿಯ ಫೈನಲ್ನಲ್ಲಿ ಈ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಎರಡು ಎಸೆತಗಳು ಬಾಕಿ ಇರುವಂತೆ 6 ವಿಕೆಟ್‌ಗಳನ್ನು ಕಳೆದುಕೊಂಡು ಜಯ ಸಾಧಿಸಿದಲ್ಲದೆ ಚಾಂಪಿಯನ್ ಕೂಡ ಆಗಿತ್ತು. ಇದಾದ ನಂತರ, ಈ ಟೂರ್ನಿಯಲ್ಲಿ ಈ ಎರಡೂ ತಂಡಗಳ ನಡುವೆ ಯಾವುದೇ ಪಂದ್ಯ ನಡೆದಿಲ್ಲ. ಆದಾಗ್ಯೂ, ಈಗ 25 ವರ್ಷಗಳ ನಂತರ, ಈ ಎರಡೂ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲು ಸಿದ್ಧವಾಗಿವೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಇಲ್ಲಿಯವರೆಗೆ 118 ಏಕದಿನ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಟೀಂ ಇಂಡಿಯಾ 60 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 50 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಭಾರತ ತಂಡವು ಉಭಯ ತಂಡಗಳ ನಡುವೆ ಆಡಿದ ಕೊನೆಯ 5 ಏಕದಿನ ಪಂದ್ಯಗಳನ್ನು ಗೆದ್ದಿದೆ. ಇದರರ್ಥ ಈ ಪಂದ್ಯದಲ್ಲೂ ಟೀಂ ಇಂಡಿಯಾ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Sat, 1 March 25