ವಿದೇಶಿಗರನ್ನು ಅಪಹರಿಸಿ ಸುಲಿಗೆಗೆ ಸಂಚು; ಚಾಂಪಿಯನ್ಸ್ ಟ್ರೋಫಿಗೆ ಭಯೋತ್ಪಾದಕರ ಭೀತಿ
ICC Champions Trophy 2025: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಮೇಲೆ ಐಎಸ್‌ಕೆಪಿ ಗುಂಪು ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿವೆ ಎಂಬ ಮಾಹಿತಿ ಪಾಕಿಸ್ತಾನ ಗುಪ್ತಚರ ಇಲಾಖೆಗೆ ಸಿಕ್ಕಿದ್ದು, ಎಚ್ಚರಿಕೆವಹಿಸುವಂತೆ ಆಯೋಜಕರಿಗೆ ಮಾಹಿತಿ ನೀಡಿವೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ ಭಯೋತ್ಪಾದಕರು ಚಾಂಪಿಯನ್ಸ್ ಟ್ರೋಫಿ ವೀಕ್ಷಿಸಲು ಬಂದ ವಿದೇಶಿಯರನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಾರು 3 ದಶಕಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿಯೊಂದನ್ನು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ. ಈಗಾಗಲೇ ದಿವಾಳಿ ಎದ್ದಿರುವ ಪಾಕಿಸ್ತಾನಕ್ಕೆ ಹಾಗೂ ಪಾಕ್ ಕ್ರಿಕೆಟ್ ಮಂಡಳಿಗೆ ಐಸಿಸಿಯ ಈ ಟೂರ್ನಿ ಉಸಿರಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬುದು ಆಯೋಜಕ ಅಭಿಪ್ರಾಯವಾಗಿತ್ತು. ಆದರೆ ಇಲ್ಲಿಯವರೆಗೆ ನಡೆದಿರುವ ಪಂದ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಹೊರತುಪಡಿಸಿ ಉಳಿದ ಪಂದ್ಯಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಮೈದಾನಕ್ಕೆ ಬಂದಿಲ್ಲ. ಇದು ಆಯೋಜಕರಿಗೆ ದೊಡ್ಡ ಚಿಂತೆಯ ವಿಷಯವಾಗಿದೆ. ಇದೆಲ್ಲದೆ ನಡುವೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಭಯೋತ್ಪಾದಕ ದಾಳಿಯ ಭಯ ಆವರಿಸಿದೆ. ಐಎಸ್‌ಕೆಪಿ ಭಯೋತ್ಪಾದಕ ಗುಂಪು ಚಾಂಪಿಯನ್ಸ್ ಟ್ರೋಫಿಯನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬಂದಿರುವ ವಿದೇಶಿಗರನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿವೆ ಎಂಬ ಮಾಹಿತಿ ಪಾಕ್ ಗುಪ್ತಚರ ಇಲಾಖೆಗೆ ಸಿಕ್ಕಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಾಸ್ತವವಾಗಿ ಇದೇ ಭಯೋತ್ಪಾದಕ ದಾಳಿಯ ಭಯದಿಂದ ಪಾಕಿಸ್ತಾನದಲ್ಲಿ ಯಾವುದೇ ಮಹತ್ವದ ಈವೆಂಟ್ಗಳನ್ನು ಆಯೋಜಿಸಲು ಐಸಿಸಿ ಹಿಂದೇಟು ಹಾಕುತ್ತಿತ್ತು. ಇದರ ಜೊತೆಗೆ ಲಂಕಾ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ ಯಾವ ಕ್ರಿಕೆಟ್ ತಂಡವೂ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲು ಮುಂದೆ ಬರುತ್ತಿರಲಿಲ್ಲ. ಆದರೆ ಸೂಕ್ತ ಭದ್ರತೆ ಕಲ್ಪಿಸುವ ಭರವಸೆ ಸಿಕ್ಕ ಬಳಿಕ ಇದೀಗ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಾಗುತ್ತಿದೆ. ಆದರೆ ಈ ಟೂರ್ನಿ ಆರಂಭವಾಗಿ ಕೆಲವೇ ದಿನಗಳು ಕಳೆದಿರುವಾಗ ಈ ಟೂರ್ನಿಯ ಮೇಲೆ ಭಯೋತ್ಪಾದಕರ ಕರಿನೆರಳು ಆವರಿಸಿದೆ.
Intelligence agencies have picked up chatter about a possible attempt of a TERROR ATTACK on Champions Trophy in Pakistan by ISKP group.
agencies have also been briefed about it by foreign counterparts.
Chatter picked up about a possible kidnapping or a Terror attack. pic.twitter.com/54ykPTViUr
— Vicky Jaiswal (@vickypshiva) February 24, 2025
ISKP ಯ ಯೋಜನೆ ಏನು?
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ವಿದೇಶಿಯರನ್ನು ಅಪಹರಿಸಿ ಸುಲಿಗೆ ಮಾಡಲು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ISKP) ಸಂಚು ರೂಪಿಸಿದೆ ಎಂಬ ಮಾಹಿತಿ ಪಾಕಿಸ್ತಾನದ ಗುಪ್ತಚರ ಬ್ಯೂರೋಗೆ ಸಿಕ್ಕಿದೆ. ಆ ಪ್ರಕಾರ ಭಯೋತ್ಪಾದಕ ಗುಂಪು ನಿರ್ದಿಷ್ಟವಾಗಿ ಚೀನೀ ಮತ್ತು ಅರಬ್ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ದೇಶಗಳ ಸಂದರ್ಶಕರು ಆಗಾಗ್ಗೆ ಬಳಸುವ ಬಂದರುಗಳು, ವಿಮಾನ ನಿಲ್ದಾಣಗಳು, ಕಚೇರಿಗಳು ಮತ್ತು ವಸತಿ ಪ್ರದೇಶಗಳ ಮೇಲೆ ಕಣ್ಣಿಟ್ಟಿವೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಭಾರತೀಯ ಏಜೆನ್ಸಿಗಳು ಕೂಡ ಇಂತಹ ದಾಳಿಯ ಸಾಧ್ಯತೆಯ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿವೆ. ಇಸ್ಲಾಮಿಕ್ ಸ್ಟೇಟ್ – ಖೊರಾಸನ್ ಪ್ರಾಂತ್ಯದ (ISKP) ಭಯೋತ್ಪಾದಕರು ಚಾಂಪಿಯನ್ಸ್ ಟ್ರೋಫಿಯನ್ನು ವೀಕ್ಷಿಸಲು ಬರುವ ವಿದೇಶಿಯರನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಮುಂದಾಗಿವೆ ಎಂಬ ಮಾಹಿತಿಯನ್ನು ಪಾಕ್ ಗುಪ್ತಚರ ಇಲಾಖೆಗೆ ಭಾರತೀಯ ಏಜೆನ್ಸಿಗಳು ನೀಡಿವೆ ಎಂದು ಹೇಳಲಾಗುತ್ತಿದೆ.
ಏನಿದು ISKP?
ಇಸ್ಲಾಮಿಕ್ ಸ್ಟೇಟ್ – ಖೊರಾಸನ್ ಪ್ರಾಂತ್ಯ (ISKP) ಸಲಾಫಿ ಜಿಹಾದಿ ಗುಂಪು, ಇದು ಇಸ್ಲಾಮಿಕ್ ಸ್ಟೇಟ್‌ನ ಪ್ರಾದೇಶಿಕ ಶಾಖೆಯಾಗಿದ್ದು, ದಕ್ಷಿಣ-ಮಧ್ಯ ಏಷ್ಯಾದಲ್ಲಿ, ಮುಖ್ಯವಾಗಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ. ಇದುವರೆಗೂ ಭಯೋತ್ಪಾದಕ ದಾಳಿಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಬಂದಿಲ್ಲವಾದರೂ, ಈ ಗಂಭೀರ ಸ್ವರೂಪದ ಬೆದರಿಕೆಯನ್ನು ನಿರ್ಲಕ್ಷಿಸಿದರೆ ಪಾಕಿಸ್ತಾನ ವಿಶ್ವ ಮಟ್ಟದಲ್ಲಿ ಮುಜುಗರಕ್ಕೀಡಾಗಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Mon, 24 February 25
