ಏಷ್ಯನ್ ಗೇಮ್ಸ್ ಕ್ರಿಕೆಟ್: ನೇಪಾಳದ ವಿರುದ್ಧ ಸೋತ ಅಫ್ಘಾನಿಸ್ತಾನ

2026ರ ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ನೇಪಾಳ ಅಫ್ಘಾನಿಸ್ತಾನಕ್ಕೆ ಆಘಾತಕಾರಿ ಸೋಲು ನೀಡಿದೆ. ಜಪಾನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ಕೇವಲ 102 ರನ್ ಗಳಿಸಿತು. ನೇಪಾಳದ ಸಂದೀಪ್ ಜೋರಾ (34) ಮತ್ತು ರೋಹಿತ್ ಪೌಡೆಲ್ (33) ಅವರ ನಿರ್ಣಾಯಕ ಜೊತೆಯಾಟದಿಂದ ಐದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಫ್ಘಾನಿಸ್ತಾನದ ಕಳಪೆ ಬ್ಯಾಟಿಂಗ್, ನಾಯಕ ರಸೂಲಿ ಕೆಳಕ್ರಮಾಂಕದಲ್ಲಿ ಆಡಿದ್ದು ಸೋಲಿಗೆ ಕಾರಣವಾಯಿತು.

ಏಷ್ಯನ್ ಗೇಮ್ಸ್ ಕ್ರಿಕೆಟ್: ನೇಪಾಳದ ವಿರುದ್ಧ ಸೋತ ಅಫ್ಘಾನಿಸ್ತಾನ
ನೇಪಾಳ Vs ಅಫ್ಘಾನಿಸ್ತಾನ
Image Credit source: ACB X

Updated on: Sep 25, 2026 | 4:48 PM

2026 ರ ಏಷ್ಯನ್ ಗೇಮ್ಸ್ ಕ್ರಿಕೆಟ್​ನಲ್ಲಿ ನೇಪಾಳದ ವಿರುದ್ಧ ಅಫ್ಘಾನಿಸ್ತಾನ ಹೀನಾಯ ಸೋಲು ಕಂಡಿದೆ. ಜಪಾನ್‌ನ ನಿಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ ಕೇವಲ 102 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ನೇಪಾಳ ಐದು ವಿಕೆಟ್‌ಗಳನ್ನು ಕಳೆದುಕೊಂಡು 18 ನೇ ಓವರ್‌ನಲ್ಲಿ ಜಯದ ನಗೆ ಬೀರಿತು. ನೇಪಾಳ ಪರ, ಸಂದೀಪ್ ಜೋರಾ 34 ರನ್ ಗಳಿಸಿದರೆ, ರೋಹಿತ್ ಪೌಡೆಲ್ 33 ರನ್ ಗಳಿಸಿದರು. ದೀಪೇಂದ್ರ ಸಿಂಗ್ ಏರಿ 15 ರನ್​ಗಳ ಕಾಣಿಕೆ ನೀಡಿದರು.

16 ರನ್‌ಗಳಿಗೆ ಮೂರು ವಿಕೆಟ್‌

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಕಳಪೆ ಆರಂಭ ಪಡೆಯಿತು. ಆರಂಭಿಕ ಆಟಗಾರ ಮೊಹಮ್ಮದ್ ಅಕ್ರಮ್ 2 ರನ್ ಗಳಿಸಿ ಔಟಾದರೆ ಅವರ ಜೊತೆಗಾರ ಹಸನ್ ಇಸಾಖಿಲ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬಂದ ಕರೀಮ್ ಜನತ್ ಕೂಡ ಕೇವಲ 9 ರನ್​ಗಳಿಗೆ ಸುಸ್ತಾದರು. ಹೀಗಾಗಿ ಅಫ್ಘಾನಿಸ್ತಾನ ಐದನೇ ಓವರ್‌ ಮುಗಿಯುವುದರೊಳಗೆ ಕೇವಲ 16 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ನಂತರ ಜೊತೆಯಾದ ಫೈಸಲ್ ಶಿನೋಜಾದಾ ಮತ್ತು ನಜೀಬುಲ್ಲಾ ಜದ್ರಾನ್ ತಂಡದ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಫೈಸಲ್ 33 ಎಸೆತಗಳಲ್ಲಿ 30 ರನ್ ಮತ್ತು ಜದ್ರಾನ್ 40 ಎಸೆತಗಳಲ್ಲಿ 30 ರನ್​ ಕಲೆಹಾಕಿ ಟಿ20 ಕ್ರಿಕೆಟ್​ನಲ್ಲಿ ಟೆಸ್ಟ್​ ಬ್ಯಾಟಿಂಗ್ ಮಾಡಿದರು. ನಂತರ ಬಂದ ಮೊಹಮ್ಮದ್ ಇಶಾಕ್ ಅವರ ಇನ್ನಿಂಗ್ಸ್ ಕೂಡ ಏಳು ರನ್​ಗಳಿಗೆ ಅಂತ್ಯವಾಯಿತು.

ಕೊನೆಯಲ್ಲಿ ಬಂದ ನಾಯಕ

ಏಳನೇ ಕ್ರಮಾಂಕದಲ್ಲಿ ಬಂದ ನಾಯಕ ದರ್ವಿಶ್ ರಸೂಲಿ ರನ್ ಗಳಿಸದೆ ಹಿಂತಿರುಗಿದರು. ನಾಯಕ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ತಂಡದ ದುಸ್ಥಿತಿಗೆ ಪ್ರಮುಖ ಕಾರಣವಾಯಿತು. ಏಕೆಂದರೆ ರಸೂಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಅಗಿದ್ದು, ಅವರು ಬೇಗನೇ ಬಂದಿದ್ದರೆ ಇನ್ನಿಂಗ್ಸ್‌ ಗತಿಯೇ ಬದಲಾಗುತ್ತಿತ್ತು. ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ ಕೇವಲ 102 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ನೇಪಾಳ ಪರ, ಕುಶಾಲ್ ಭುರ್ತೆಲ್ ನಾಲ್ಕು ವಿಕೆಟ್‌ಗಳನ್ನು ಮತ್ತು ಲಲಿತ್ ರಾಜ್‌ಬನ್ಶಿ ಮೂರು ವಿಕೆಟ್‌ಗಳನ್ನು ಪಡೆದರು.

ನೇಪಾಳಕ್ಕೂ ಕಳಪೆ ಆರಂಭ

ಗುರಿ ಬೆನ್ನಟ್ಟಿದ ನೇಪಾಳದ ಆರಂಭವೂ ಉತ್ತಮವಾಗಿರಲಿಲ್ಲ. ಕುಶಾಲ್ ಭುರ್ತೆಲ್ ಸೊನ್ನೆಗೆ ಔಟಾದರೆ, ಆಸಿಫ್ ಶೇಖ್ 2 ರನ್ ಗಳಿಸಿ ಔಟಾದರು. ಇವರಿಬ್ಬರ ವಿಕೆಟ್ ಪತನದ ನಂತರ, ನೇಪಾಳಕ್ಕೆ ರನ್ ಗಳಿಸುವುದು ಹೆಚ್ಚು ಕಷ್ಟಕರವಾಯಿತು. ಇದರ ಜೊತೆಗೆ ಕುಶಾಲ್ ಕೂಡ 12 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಏಳನೇ ಓವರ್‌ ಮುಗಿಯುವುದರೊಳಗೆ ನೇಪಾಳ 31 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಏಷ್ಯನ್ ಗೇಮ್ಸ್‌ ಕ್ರಿಕೆಟ್​ನಲ್ಲಿ ಭಾರತ-ಪಾಕಿಸ್ತಾನ್ ಪಂದ್ಯ ಯಾವಾಗ ನಡೆಯಲಿದೆ?

ಸಂದೀಪ್- ರೋಹಿತ್ ಜೊತೆಯಾಟ

ಆದರೆ ಈ ಹಂತದಲ್ಲಿ ಜೊತೆಯಾದ ಸಂದೀಪ್ ಜೋರಾ ಮತ್ತು ರೋಹಿತ್ ಪೌಡೆಲ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಪೌಡೆಲ್ 32 ಎಸೆತಗಳಲ್ಲಿ 33 ರನ್ ಗಳಿಸಿದರೆ, ಜೋರಾ 35 ಎಸೆತಗಳಲ್ಲಿ 34 ರನ್ ಗಳಿಸಿ ತಮ್ಮ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ನಾಯಕ ಅರಿ ಕೂಡ 15 ರನ್‌ಗಳ ಕೊಡುಗೆ ನೀಡಿ, 18 ನೇ ಓವರ್‌ನಲ್ಲಿ ನೇಪಾಳ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Fri, 25 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us