ಪಾಕಿಸ್ತಾನದ 7 ಆಟಗಾರರಿಗೆ 2 ವರ್ಷಗಳ ನಿಷೇಧ!

ಆಫ್ರಿಕಾ ನೆಲದಲ್ಲಿ ನಡೆದ ಅನಧಿಕೃತ ಟಿ20 ಲೀಗ್‌ನಲ್ಲಿ ಆಡಿದ ಪಾಕಿಸ್ತಾನದ ಆಟಗಾರರಿಗೆ ಪಾಕ್ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ. ಈ ಟೂರ್ನಿಯಲ್ಲಿ ಕಣಕ್ಕಿಳಿದ ಪ್ರಮುಖ 7 ಆಟಗಾರರ ಮೇಲೆ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿದ್ದು, ನಿಯಮ ಉಲ್ಲಂಘಿಸಿದ ಇತರ ಹಲವರಿಗೆ ಎಚ್ಚರಿಕೆ ನೀಡಲಾಗಿದೆ. ಈ ಕಠಿಣ ನಿಷೇಧದ ಬೆನ್ನಲ್ಲೇ, ಶಿಕ್ಷೆಗೆ ಒಳಗಾಗಿರುವ ಆಟಗಾರರು ತಮ್ಮ ಮೇಲಿನ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಪಿಸಿಬಿಗೆ ಮನವಿ ಮಾಡಿದ್ದಾರೆ.

ಪಾಕಿಸ್ತಾನದ 7 ಆಟಗಾರರಿಗೆ 2 ವರ್ಷಗಳ ನಿಷೇಧ!
PCB

Updated on: Aug 09, 2026 | 2:08 PM

ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು (PCB) ನಿಯಮ ಉಲ್ಲಂಘಿಸಿದ ತನ್ನ ದೇಶದ ಹಲವು ಮಾಜಿ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಝಾಂಬಿಯಾದಲ್ಲಿ ನಡೆದ ಅನಧಿಕೃತ ಟಿ20 ಲೀಗ್‌ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸ್ಟಾರ್ ಆಟಗಾರರಾದ ಯಾಸಿರ್ ಶಾ, ಇಮ್ರಾನ್ ನಝೀರ್ ಮತ್ತು ಮೊಹಮ್ಮದ್ ಇರ್ಫಾನ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರಿಗೆ ಪಿಸಿಬಿ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.

ಏನಿದು ವಿವಾದ?

ಝಾಂಬಿಯಾದ ಲುಸಾಕಾದಲ್ಲಿ ‘ಏಷ್ಯನ್ ಲೆಜೆಂಡ್ಸ್ ಲೀಗ್‌’ ಎಂಬ ಟಿ20 ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ ಈ ಲೀಗ್‌ಗೆ ಝಾಂಬಿಯಾ ಕ್ರಿಕೆಟ್ ಸಂಸ್ಥೆಯಾಗಲಿ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಾಗಲಿ (ICC) ಯಾವುದೇ ಅಧಿಕೃತ ಮಾನ್ಯತೆ ನೀಡಿರಲಿಲ್ಲ.

ನಿಯಮಗಳ ಪ್ರಕಾರ, ಯಾವುದೇ ವಿದೇಶಿ ಲೀಗ್‌ನಲ್ಲಿ ಆಡಬೇಕಾದರೂ ಆಟಗಾರರು ತಮ್ಮ ಸ್ವದೇಶಿ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯುವುದು ಕಡ್ಡಾಯ. ಆದರೆ, ಈ ಪಾಕಿಸ್ತಾನಿ ಆಟಗಾರರು ಪಿಸಿಬಿಯಿಂದ ಯಾವುದೇ ಅನುಮತಿ ಪಡೆಯದೆ ‘ಪಾಕಿಸ್ತಾನ್ ಪ್ಯಾಂಥರ್ಸ್’ ತಂಡದ ಪರವಾಗಿ ಕಣಕ್ಕಿಳಿದಿದ್ದರು.

ನಿಷೇಧಕ್ಕೊಳಗಾದ ಪ್ರಮುಖ ಆಟಗಾರರು:

ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯಿಂದ ಯಾವುದೇ ನಿರಾಕ್ಷೇಪಣಾ ಪತ್ರ ಪಡೆಯದೇ ‘ಏಷ್ಯನ್ ಲೆಜೆಂಡ್ಸ್ ಲೀಗ್‌’ನಲ್ಲಿ ಕಣಕ್ಕಿಳಿದ ಹಲವು ಆಟಗಾರರ ಮೇಲೆ ಪಿಸಿಬಿ 2 ವರ್ಷಗಳ ನಿಷೇಧ ಹೇರಿದೆ. ಹೀಗೆ ಟೂರ್ನಿಯಲ್ಲಿ ಕಣಕ್ಕಿಳಿದು ಬ್ಯಾನ್ ಆದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ…

  • ಇಮ್ರಾನ್ ನಝೀರ್
  • ಯಾಸಿರ್ ಶಾ
  • ಮೊಹಮ್ಮದ್ ಇರ್ಫಾನ್
  • ರಾಹತ್ ಅಲಿ
  • ಹಸನ್ ರಾಝ
  • ಯಾಸಿರ್ ಬಟ್
  • ರಾಣಾ ನಯೀಮ್ ಅನ್ವರ್

ಈ ಆಟಗಾರರು ಮುಂದಿನ ಎರಡು ವರ್ಷಗಳ ಕಾಲ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸುವ ಯಾವುದೇ ಪಂದ್ಯಾವಳಿಗಳು, ಕೋಚಿಂಗ್ ಕ್ಯಾಂಪ್‌ಗಳು ಅಥವಾ ಕ್ರಿಕೆಟ್ ಸಂಬಂಧಿತ ಹುದ್ದೆಗಳನ್ನು ವಹಿಸಿಕೊಳ್ಳುವಂತಿಲ್ಲ.

ಪಾರಾದ ಹಫೀಝ್, ಅಕ್ಮಲ್!

ವಿಶೇಷವೆಂದರೆ, ಈ ಟೂರ್ನಿಯಲ್ಲಿ ಆಡಲು ಮೊಹಮ್ಮದ್ ಹಫೀಝ್, ಕಮ್ರಾನ್ ಅಕ್ಮಲ್, ಸೊಹೇಲ್ ತನ್ವೀರ್ ಮತ್ತು ಉಮರ್ ಅಕ್ಮಲ್ ಕೂಡ ಝಾಂಬಿಯಾಗೆ ತೆರಳಿದ್ದರು. ಆದರೆ, ಟೂರ್ನಿಗೆ ಐಸಿಸಿ ಮಾನ್ಯತೆ ಇಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ, ಇವರು ಯಾವುದೇ ಪಂದ್ಯವನ್ನು ಆಡದೆ ತವರಿಗೆ ಮರಳಿದ್ದರು. ಹೀಗಾಗಿ ಇವರು ಪಿಸಿಬಿ ಶಿಕ್ಷೆಯಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ವಿಶ್ವಕಪ್ ಭವಿಷ್ಯ: ಅಗರ್ಕರ್, ಬಿಸಿಸಿಐಗೆ ರಹಾನೆ ಖಡಕ್ ಸಂದೇಶ!

ಮನವಿಗೆ ಮುಂದಾದ ಆಟಗಾರರು:

ಕ್ರಿಕೆಟ್ ತಮಗೆ ಪ್ರಮುಖ ಆದಾಯದ ಮೂಲವಾಗಿರುವುದರಿಂದ, ಈ ಕಠಿಣ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ನಿಷೇಧಿತ ಆಟಗಾರರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಜಂಟಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಉಮರ್ ಅಕ್ಮಲ್ ಕೂಡ ಸಹ ಆಟಗಾರರ ಬೆಂಬಲಕ್ಕೆ ನಿಂತಿದ್ದು, ಬೇರೆ ದೇಶಗಳ ಆಟಗಾರರಿಗೆ ಇಲ್ಲದ ನಿಷೇಧ ಪಾಕಿಸ್ತಾನಿ ಆಟಗಾರರಿಗೆ ಏಕೆ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಪಿಸಿಬಿಯ ಈ ಕಠಿಣ ನಿರ್ಧಾರವು ಅನುಮತಿ ಇಲ್ಲದೆ ಅನಧಿಕೃತ ಲೀಗ್‌ಗಳಲ್ಲಿ ಆಡುವ ಆಟಗಾರರಿಗೆ ಬಿಸಿ ಮುಟ್ಟಿಸಿದೆ.

 

Loading...
Unable to load recommendations.
Follow Us