ಕರುಣ್ ನಾಯರ್​​ಗೆ ನಿವೃತ್ತಿ ಘೋಷಿಸಲು ಸೂಚಿಸಿದ್ದ ಟೀಮ್ ಇಂಡಿಯಾ ಕ್ರಿಕೆಟಿಗ..!

Karun Nair: ಕರುಣ್ ನಾಯರ್ ಟೀಮ್ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಂದು ತ್ರಿಶತಕದೊಂದಿಗೆ ಒಟ್ಟು 374 ರನ್ ಕಲೆಹಾಕಿದ್ದಾರೆ. 2017 ರಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದ ಕರುಣ್ ನಾಯರ್​ಗೆ ಆ ಬಳಿಕ ಟೀಮ್ ಇಂಡಿಯಾದಲ್ಲಿ ಅವಕಾಶ ದೊರೆತಿರಲಿಲ್ಲ. ಇದೀಗ 8 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರುಣ್ ನಾಯರ್​​ಗೆ ನಿವೃತ್ತಿ ಘೋಷಿಸಲು ಸೂಚಿಸಿದ್ದ ಟೀಮ್ ಇಂಡಿಯಾ ಕ್ರಿಕೆಟಿಗ..!
Karun Nair

Updated on: Jun 16, 2025 | 2:55 PM

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. 5 ಪಂದ್ಯಗಳ ಈ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಈ ಸರಣಿಯು ಕರುಣ್ ನಾಯರ್ ಪಾಲಿಗೆ ನಿರ್ಣಾಯಕ. ಏಕೆಂದರೆ 2017 ರಲ್ಲಿ ಕೊನೆಯ ಬಾರಿ ಭಾರತದ ಪರ ಕಣಕ್ಕಿಳಿದಿದ್ದ ಕರುಣ್ ಇದೀಗ 8 ವರ್ಷಗಳ ಬಳಿಕ ಮತ್ತೊಮ್ಮೆ ವೈಟ್ ಜೆರ್ಸಿಯಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಹೀಗಾಗಿಯೇ ಈ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುವುದು 33 ವರ್ಷದ ಕರುಣ್ ಪಾಲಿಗೆ ಅನಿವಾರ್ಯ.

ಇತ್ತ 8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ಕರುಣ್ ಕಳೆದ ಕೆಲ ವರ್ಷಗಳಲ್ಲಿ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಕ್ರಿಕೆಟಿಗರೊಬ್ಬರು ತನಗೆ ನಿವೃತ್ತಿ ಘೋಷಿಸಲು ಸೂಚಿಸಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಡೈಲಿ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕರುಣ್ ನಾಯರ್, ಭಾರತದ ಪ್ರಮುಖ ಕ್ರಿಕೆಟಿಗರೊಬ್ಬರು ನನಗೆ ಕರೆ ಮಾಡಿ ನೀವು ನಿವೃತ್ತಿ ಹೊಂದುವುದು ಉತ್ತಮ ಎಂದಿದ್ದರು. ಏಕೆಂದರೆ ಲೀಗ್​ ಕ್ರಿಕೆಟ್​ನಲ್ಲಿ ಸಿಗುವ ದುಡ್ಡು ನನ್ನನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಅವರು ಹೇಳಿದ್ದರು. ಅವರ ಆ ಮಾತುಗಳು ನನಗೆ ಇನ್ನೂ ನೆನಪಿದೆ.

ಅಂದು ಅವರು ಹೇಳಿದ ಮಾತುಗಳನ್ನು ಮಾಡುವುದು ನನಗೆ ಸುಲಭವಾಗುತ್ತಿತ್ತು. ನಾನು ಲೀಗ್​ ಕ್ರಿಕೆಟ್​ನತ್ತ ಮುಖ ಮಾಡಲು ಅವಕಾಶವಿತ್ತು. ಆದರೆ ಮುಂದೊಂದು ದಿನ, ಹಣಕ್ಕಾಗಿ ಅಷ್ಟು ಸುಲಭವಾಗಿ ನಿವೃತ್ತಿ ಹೊಂದಿದ್ದಕ್ಕಾಗಿ ನಾನು ನನ್ನನ್ನು ಶಪಿಸುತ್ತಿದ್ದೆ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅಂದು ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಅಲ್ಲದೆ ಭಾರತಕ್ಕಾಗಿ ಮತ್ತೆ ಆಡುವ ಕನಸನ್ನು ಬಿಟ್ಟುಕೊಡಲು ಬಯಸಲಿಲ್ಲ ಎಂದು ಕರುಣ್ ನಾಯರ್ ಹೇಳಿದ್ದಾರೆ.

ಇದೀಗ ನಾನು ಎಲ್ಲಿದ್ದೇನೆ. ಎರಡು ವರ್ಷಗಳ ಹಿಂದೆ ಎಲ್ಲಿದ್ದೆ. ಟೀಮ್ ಇಂಡಿಯಾಗೆ ಮರಳಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನನ್ನಲ್ಲಿತ್ತು. ಆ ನಂಬಿಕೆ ಎಂಬುದೇ ಹುಚ್ಚುತನ. ಆದರೆ ಒಳಗಿನಿಂದ, ನಾನು ಸಾಕಷ್ಟು ಒಳ್ಳೆಯವನೆಂದು ನನಗೆ ತಿಳಿದಿತ್ತು. ಹೀಗಾಗಿಯೇ ಸತತ ಪರಿಶ್ರಮ ಮುಂದುವರೆಸಿದ್ದೆ. ಅದರಂತೆ ಇದೀಗ ಭಾರತ ತಂಡಕ್ಕೆ ಮರಳಿದ್ದೇನೆ ಎಂದು ಕರುಣ್ ನಾಯರ್ ಹೇಳಿದ್ದಾರೆ.

ಇನ್ನು ಕರುಣ್ ನಾಯರ್ ಅವರು ಭಾರತ ತಂಡಕ್ಕೆ ಮರು ಆಯ್ಕೆಯಾಗಲು ಮುಖ್ಯ ಕಾರಣ ಇಂಗ್ಲೆಂಡ್​ನಲ್ಲಿ ನೀಡಿದ ಪ್ರದರ್ಶನ. ಅಂದರೆ ಭಾರತ ತಂಡದಿಂದ ಹೊರಬಿದ್ದ ಬಳಿಕ ಕರುಣ್ ಅವರನ್ನು ಕರ್ನಾಟಕ ತಂಡದಿಂದಲೂ ಕಳಪೆ ಫಾರ್ಮ್ ಕಾರಣ ಕೈ ಬಿಡಲಾಯಿತು. ಈ ವೇಳೆ ಅವರು ವಿದರ್ಭ ಪರ ಕಣಕ್ಕಿಳಿಯಲು ಪ್ರಾರಂಭಿಸಿದರು.

ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ

ಅಷ್ಟೇ ಅಲ್ಲದೆ 2022 ರ ದೇಶೀಯ ಋತುವಿನ ನಂತರ ಕರುಣ್ ನಾಯರ್ ಇಂಗ್ಲೆಂಡ್​ ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದರು. ನಾರ್ಥಾಂಪ್ಟನ್‌ಶೈರ್‌ ಪರ ಕೌಂಟಿ ಚಾಂಪಿಯನ್‌ಶಿಪ್ ಒಪ್ಪಂದವನ್ನು ಪಡೆದ ಅವರು ಇಂಗ್ಲೆಂಡ್ ಪಿಚ್​​ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಇದೀಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಅವಕಾಶವನ್ನು ಕರುಣ್ ನಾಯರ್ ಬಳಸಿಕೊಂಡರೆ ಮತ್ತೊಂದಷ್ಟು ವರ್ಷ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.