ದೊಡ್ಡಣ್ಣನ ನಾಡಲ್ಲಿ ಅರಳಿದ ಕನ್ನಡದ ಪ್ರತಿಭೆ; ಅಮೆರಿಕ ಕ್ರಿಕೆಟ್ ತಂಡದಲ್ಲಿ ಮೂಡಿಗೆರೆ ಯುವಕನ ಕಮಾಲ್..!
ಮಯಾಂಕ್ ಆಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಕ್ಲಬ್ ಕ್ರಿಕೆಟ್ನಲ್ಲಿ ಒಂದೇ ತಂಡವನ್ನ ಪ್ರತಿನಿಧಿಸುತ್ತಿದ್ದ ನೋಸ್ತುಶ್, ಬೇರೆ ದೋಣಿಯಲ್ಲಿ ಪಯಣಿಸುವ ತರ ಅಮೆರಿಕದ ಪರ ಕ್ರಿಕೆಟ್ ಆಡುವಂತಾಗಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ಪ್ರಪಂಚದ ಕ್ರೀಡಾಪ್ರೇಮಿಗಳ ಮನಗೆದ್ರೆ, ಎಬಿ ಡಿವಿಲಿಯರ್ಸ್ ಕೋಟ್ಯಾಂತರ ಭಾರತೀಯರಿಗೆ ಇಷ್ಟವಾಗ್ತಾರೆ. ಅಂದ್ರೆ ಕ್ರಿಕೆಟ್ಗೆ ದೇಶ-ಭಾಷೆಯ ಹಂಗಿಲ್ಲ, ಗಡಿಯ ರೇಖೆಯನ್ನ ಮೀರಿ ಕ್ರಿಕೆಟ್ ಆಟ, ಕ್ರಿಕೆಟಿಗರು ಎಲ್ಲರ ಮನಗೆದ್ದಿದ್ದಾರೆ. ಕ್ರಿಕೆಟನ್ನೇ ಫ್ಯಾಶನ್ ಅಂತಾ ಪ್ರೀತಿಸ್ತಿರೋ ಇಲ್ಲೊಬ್ಬ ಕಾಫಿನಾಡಿನ ಯುವಕ, ಕಳೆದ ನಾಲ್ಕು ವರ್ಷದಿಂದಲೂ ಸದ್ದಿಲ್ಲದೇ ಅಮೆರಿಕ ತಂಡವನ್ನ ಪ್ರತಿನಿಧಿಸುತ್ತ ಭಾರತೀಯರನ್ನೇ ಬೆರಗುಗೊಳಿಸಿದ್ದಾನೆ.. ಅಷ್ಟಕ್ಕೂ ಯಾರು ಆ ಪ್ರತಿಭೆ..? ಕಾಫಿನಾಡಿನಿಂದ ಅಮೆರಿಕಕ್ಕೆ ಹಾರಿದ ಇಂಟರೆಸ್ಟಿಂಗ್ ಸ್ಟೋರಿ ಏನು ಅಂತೀರಾ.?
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರದೀಪ್-ಶೃತಿಕೀರ್ತಿ ದಂಪತಿಯ ಸುಪುತ್ರ ಈ ನೋಸ್ತುಶ್. ಎಡಗೈ ಸ್ಪಿನರ್ ಆಗಿರೋ ನೋಸ್ತುಶ್ ಅಮೆರಿಕ ಕ್ರಿಕೆಟ್ ತಂಡದ ಫರ್ಮನೆಂಟ್ ಸದಸ್ಯ. 2017ರಲ್ಲಿ ಅಮೆರಿಕ ತಂಡದ ಪರ ಅಂತರರಾಷ್ಟ್ರೀಯ ಪಂದ್ಯ ಆಡಿದ ನೋಸ್ತುಶ್, ಈಗಾಗಲೇ 60 ಓಡಿಐ, ಟಿ20 ಪಂದ್ಯಗಳನ್ನಾಡಿ ಗಮನ ಸೆಳೆದಿದ್ದಾರೆ. ಕಾಫಿನಾಡಿನ ಈ ಪ್ರತಿಭೆ ಎಡಗೈಯಲ್ಲಿ ಬೌಲ್ ಮಾಡಿದ್ರೂ ಬ್ಯಾಟ್ ಬೀಸೋದು ಬಲಗೈಯಲ್ಲೇ. ಸದ್ಯ ವಿಶ್ರಾಂತಿ ಪಡೆದು ತವರೂರಿಗೆ ಆಗಮಿಸಿರುವ ನೋಸ್ತುಶ್, ಇಲ್ಲೂ ಕೂಡ ಪ್ರಾಕ್ಟಿಸ್ ಮಾಡೋದನ್ನ ಮಿಸ್ ಮಾಡ್ತಿಲ್ಲ. ರಾಹುಲ್ ದ್ರಾವಿಡ್ ರನ್ನ ಮಾದರಿಯಾಗಿ ತೆಗೆದುಕೊಂಡಿರುವ ನೋಸ್ತುಶ್, ಬಿಸಿಲ ಬೇಗೆಯಲ್ಲೇ ಗೆಳೆಯರ ಜೊತೆ ನೆಟ್ ಪ್ರಾಕ್ಟಿಸ್ ಮಾಡ್ತಾ ತಮ್ಮ ಕ್ರಿಕೆಟ್ ಆಟವನ್ನ ಮುಂದುವರೆಸಿದ್ದಾರೆ.
ಜೂನ್ನಲ್ಲಿ ಕ್ವಾಲಿಫೈಯರ್ ಮ್ಯಾಚ್ ಇದೆ ಮಯಾಂಕ್ ಆಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಕ್ಲಬ್ ಕ್ರಿಕೆಟ್ನಲ್ಲಿ ಒಂದೇ ತಂಡವನ್ನ ಪ್ರತಿನಿಧಿಸುತ್ತಿದ್ದ ನೋಸ್ತುಶ್, ಬೇರೆ ದೋಣಿಯಲ್ಲಿ ಪಯಣಿಸುವ ತರ ಅಮೆರಿಕದ ಪರ ಕ್ರಿಕೆಟ್ ಆಡುವಂತಾಗಿದೆ. ಬೆಂಗಳೂರಲ್ಲೇ ಕ್ರಿಕೆಟ್ ಆಟವನ್ನ ಅಭ್ಯಾಸ ಮಾಡಿದ್ರೂ ಹೆಚ್ಚು ಅವಕಾಶ ಇಲ್ಲಿ ಸಿಗದೇ ಇದ್ದಿದ್ದರಿಂದ ಅಮೆರಿಕ ದೇಶದ ಪರ ಆಡುವಂತಾಗಿದೆ ಅನ್ನುವ ನೋಸ್ತುಶ್, ನಾನು ಕ್ರಿಕೆಟ್ ಲವರ್, ಅಮೆರಿಕದ ಪರ ಆಡ್ತಿದ್ರೂ ಕ್ರಿಕೆಟನ್ನ ಎಂಜಾಯ್ ಮಾಡ್ತಿದ್ದೇನೆ ಅಂತಾ ಟಿವಿ9 ಬಳಿ ಮನಬಿಚ್ಚಿ ಮಾತನಾಡಿದ್ದಾರೆ. ಮುಂದಿನ ಜೂನ್ನಲ್ಲಿ ಕ್ವಾಲಿಫೈಯರ್ ಮ್ಯಾಚ್ ಇದೆ, 2023ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಲ್ಡ್ ಕಪ್ ಆಡುವ ಆಸೆಯಿದೆ ಅಂತಾ ಟಿವಿ9 ಜೊತೆ ತಮ್ಮ ಕನಸನ್ನ ಬಿಚ್ಚಿಟ್ಟಿದ್ದಾರೆ. ಇನ್ನೂ ಇದೇ ವೇಳೆ ಮಾತನಾಡಿದ ನೋಸ್ತುಶ್ ಸ್ನೇಹಿತರು, ತಮ್ಮೂರಿನ ಪ್ರತಿಭೆ ಅಮೆರಿಕದಲ್ಲಿ ಅರಳಿದ ಬಗ್ಗೆ ಹೆಮ್ಮೆ ಪಡ್ತಿದ್ದಾರೆ.
ಸಾಧನೆ ಮಾಡಬೇಕು ಅಂತಾ ಹೊರಟ್ರೆ ಎಲ್ಲಿ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ನಿಜಕ್ಕೂ ನೋಸ್ತುಶ್ ಮಾದರಿಯಾಗಿದ್ದಾರೆ. ಕ್ರಿಕೆಟ್ ಅಂದ್ರೆ ಜೀವ ಬಿಡುವ ನೋಸ್ತುಶ್, ನಮ್ಮಲ್ಲಿ ಅವಕಾಶ ಸಿಗಲಿಲ್ಲ ಅಂತಾ ಕುಗ್ಗಲಿಲ್ಲ, ಸುಮ್ಮನೇ ಕೂರಲಿಲ್ಲ, ಬದಲಿಗೆ ಅಮೆರಿಕಕ್ಕೆ ಹೋಗಿ ಆ ದೇಶವನ್ನ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ತೋರಿಸಿದ್ದಾರೆ. ಅಮೆರಿಕ ಕ್ರಿಕೆಟ್ ತಂಡದಲ್ಲಿ ಕಾಫಿನಾಡ ಯುವಕನ ಕಮಾಲ್ ನೋಡಿ ಕ್ರಿಕೆಟ್ ಪ್ರೇಮಿಗಳು ಸಂತಸ ಪಡುತ್ತಿದ್ದಾರೆ. ಅದಕ್ಕೆ ಹೇಳೋದಲ್ವಾ ಕ್ರಿಕೆಟ್, ದೇಶ-ಭಾಷೆಯನ್ನೂ ಮೀರಿದ್ದು ಅಂತಾ..! ಆಲ್ ದಿ ಬೆಸ್ಟ್ ನೋಸ್ತುಶ್..!!