ತಂಡದ ನಾಯಕತ್ವವನ್ನು ಧೋನಿಗೆ ನೀಡಿ ನನ್ನನ್ನು ಅವರೊಂದಿಗೆ ಹೋಲಿಸಬೇಡಿ ಎಂದ ಡಿವಿಲಿಯರ್ಸ್
AB de Villiers: 2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಪ್ರಶಸ್ತಿಯನ್ನು ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್, ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

2025 ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಡಬಲ್ ಸಂತೋಷ ಸಿಕ್ಕಿದೆ. 2023-25 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪ್ರಶಸ್ತಿಯನ್ನು ಗೆದ್ದ ನಂತರ, ಇದೀಗ ತಂಡವು ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) 2025 ರ ಟ್ರೋಫಿಯನ್ನು ಸಹ ತನ್ನದಾಗಿಸಿಕೊಂಡಿದೆಗೆ. ಡಬ್ಲ್ಯೂಸಿಎಲ್ನ ಫೈನಲ್ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್, ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ವಾಸ್ತವವಾಗಿ ಆಫ್ರಿಕಾ ತಂಡವನ್ನು ಚಾಂಪಿಯನ್ ಮಾಡುವಲ್ಲಿ ನಾಯಕ ಎಬಿ ಡಿವಿಲಿಯರ್ಸ್ (AB de Villiers) ಪ್ರಮುಖ ಪಾತ್ರವಹಿಸಿದರು. ಟೂರ್ನಿಯಲ್ಲಿ ಬರೋಬ್ಬರಿ 3 ಶತಕ ಬಾರಿಸಿದ್ದ ಡಿವಿಲಿಯರ್ಸ್, ಇದೀಗ ಸಂದರ್ಶನವೊಂದರಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದು, ಇದೀಗ ಅದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಎಬಿ ಡಿವಿಲಿಯರ್ಸ್ ಹೇಳಿದ್ದೇನು?
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಟೀಮ್ ಇಂಡಿಯಾದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿರುವಂತೆ ಮೊದಲಿಗೆ ಡಿವಿಲಿಯರ್ಸ್ ನನಗೆ ಪ್ರಸ್ತುತ 41 ವರ್ಷ ವಯಸ್ಸು ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಸಂದರ್ಶನಕಾರ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ 44 ವರ್ಷ ವಯಸ್ಸು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವಿಲಿಯರ್ಸ್, ‘ನನ್ನನ್ನು ಅವರೊಂದಿಗೆ ಹೋಲಿಸಬೇಡಿ, ನಾನು ಅವರಿಗಿಂತ ಹೆಚ್ಚು ಕೆಲಸ ಮಾಡುತ್ತೇನೆ’ ಎಂದು ಹೇಳಿದರು. ಇದರ ನಂತರ ನಕ್ಕು, ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಹೇಳಿದರು. ಡಿವಿಲಿಯರ್ಸ್ ಯಾವ ಕಾರಣಕ್ಕಾಗಿ ಹೀಗೆ ಹೇಳಿದರು ಎಂಬುದು ಸ್ಪಷ್ಟವಾಗದಿದ್ದರೂ ಅವರು ಗಂಭೀರವಾಗಿ ಈ ವಿಚಾರವನ್ನು ಪ್ರಸ್ತಾಪಿಸಿರುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬಹುದು.
“Dont compare me with him i work a lot more harder” 😭pic.twitter.com/CyKsvHqPwU https://t.co/ndm3rpzFQ0
— Advit’ (@Advitxvirat) August 3, 2025
ತಮ್ಮ ಐಪಿಎಲ್ ತಂಡಕ್ಕೆ ಧೋನಿ ನಾಯಕ
ಇದು ಮಾತ್ರವಲ್ಲದೆ ಇದೇ ಸಂದರ್ಶನದಲ್ಲಿ, ತಮ್ಮ ಸಾರ್ವಕಾಲಿಕ ಐಪಿಎಲ್ ಇಲೆವೆನ್ ಅನ್ನು ಸಹ ಆಯ್ಕೆ ಮಾಡಿದ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ದಂತಕಥೆ ಆಟಗಾರರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಈ ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್ ಧೋನಿಗೆ ನೀಡಿರುವ ಡಿವಿಲಿಯರ್ಸ್, ಈ ತಂಡದಲ್ಲಿ ಏಳು ಭಾರತೀಯ ಮತ್ತು ನಾಲ್ವರು ವಿದೇಶಿ ಆಟಗಾರರಿಗೆ ಸ್ಥಾನ ನೀಡಿದ್ದಾರೆ.
WCL 2025: 39 ಎಸೆತಗಳಲ್ಲಿ ಸ್ಫೋಟಕ ಶತಕ; ಆಸೀಸ್ ಬೌಲರ್‌ಗಳ ಹೆಡೆಮುರಿ ಕಟ್ಟಿದ ಎಬಿ ಡಿವಿಲಿಯರ್ಸ್
ಧೋನಿ ಅವರಲ್ಲದೆ, ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ವಿದೇಶಿ ಆಟಗಾರರಲ್ಲಿ, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್, ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ, ನ್ಯೂಜಿಲೆಂಡ್‌ನ ಮಾಜಿ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಮತ್ತು ಡಿವಿಲಿಯರ್ಸ್ ತಮ್ಮನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
