‘ಸನ್​ರೈಸರ್ಸ್’ ಪರ ಪಾಕ್ ಆಟಗಾರ ಕಣಕ್ಕಿಳಿಯುವುದು ಡೌಟ್!

Abrar Ahmed: ಅಬ್ರಾರ್ ಅಹ್ಮದ್ ಪಾಕಿಸ್ತಾನ್ ಮೂಲದ ಕ್ರಿಕೆಟಿಗ. ಈ ಹಿಂದೆ ಭಾರತವನ್ನು ಅಣಕಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು. ಇತ್ತ ವಿರೋಧಿ ಮನಸ್ಥಿತಿ ಹೊಂದಿದ್ದರೂ ಪಾಕ್ ಮೂಲದ ಆಟಗಾರನನ್ನು ಸನ್​ರೈಸರ್ಸ್ ಹೈದರಾಬಾದ್ ಒಡೆತನದ ಸನ್​ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಖರೀದಿಸಿರುವುದು ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸನ್​ರೈಸರ್ಸ್ ಪರ ಪಾಕ್ ಆಟಗಾರ ಕಣಕ್ಕಿಳಿಯುವುದು ಡೌಟ್!
Abrar Ahmed

Updated on: Mar 18, 2026 | 8:54 AM

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್​ಗೆ ಆಯ್ಕೆಯಾಗಿರುವ ಪಾಕಿಸ್ತಾನ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಮುಂಬರುವ ಟೂರ್ನಿಯಲ್ಲಿ ಸನ್​ರೈಸರ್ಸ್​ ಲೀಡ್ಸ್ ಪರ ಕಣಕ್ಕಿಳಿಯುವುದು ಅನುಮಾನ. ದಿ ಹಂಡ್ರೆಡ್ ಲೀಗ್​​ ಟೂರ್ನಿಗೆ ದಿನಾಂಕ ನಿಗದಿಯಾಗಿದ್ದು, ಇದೇ ವೇಳೆ ಪಾಕಿಸ್ತಾನ್ ತಂಡ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಅಬ್ರಾರ್ ಆಯ್ಕೆಯಾದರೆ ಅವರು ಸನ್​ರೈಸರ್ಸ್ ಲೀಡ್ಸ್​ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಮಾರ್ಚ್ 12, 2026 ರಂದು ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರನ್ನುಎಸ್​ಆರ್​ಹೆಚ್ ಮಾಲೀಕತ್ವದ ಸನ್​ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಬರೋಬ್ಬರಿ £1,90,000 (ಸುಮಾರು ₹2.34 ಕೋಟಿ) ಮೊತ್ತಕ್ಕೆ ಖರೀದಿಸಿದೆ.

ಭಾರತೀಯ ವಿರೋಧಿ ಮನಸ್ಥಿತಿ ಹೊಂದಿರುವ ಪಾಕ್ ಆಟಗಾರನನ್ನು ಖರೀದಿಸಿರುವುದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಆಕ್ರೋಶದೊಂದಿಗೆ ಸನ್​ರೈಸರ್ಸ್​ ಲೀಡ್ಸ್‌ನ ‘X’ (ಟ್ವಿಟರ್) ಖಾತೆಯನ್ನು ರಿಪೋರ್ಟ್ ಮಾಡಿದ್ದ ಪರಿಣಾಮ ಎಸ್​ಆರ್​ಎಲ್​ ತಂಡದ ಸೋಷಿಯಲ್ ಮೀಡಿಯಾ ಖಾತೆಯು ತಾತ್ಕಾಲಿಕ ಸ್ಥಗಿತವಾಗಿತ್ತು.

ಇತ್ತ ಭಾರತ ಸೇರಿದಂತೆ ಎಲ್ಲೆಡೆಯಿಂದ ಎಸ್​ಆರ್​ಹೆಚ್​ ಅಭಿಮಾನಿಗಳ ಒತ್ತಡ ಹೆಚ್ಚಾಗುತ್ತಿರುವುದರಿಂದ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪಾಕ್ ಆಟಗಾರನನ್ನು ಕೈ ಬಿಡಲಿದ್ದಾರೆ ಎಂದು ವರದಿಯಾಗಿತ್ತು.

ಇದೀಗ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಏಕೆಂದರೆ ಅಬ್ರಾರ್ ಅಹ್ಮದ್​ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದರೆ, ದಿ ಹಂಡ್ರೆಡ್ ಲೀಗ್​ಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಜುಲೈ ತಿಂಗಳವರೆಗೆ ಎಸ್​ಆರ್​ಹೆಚ್ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ.

ಪಾಕಿಸ್ತಾನ್-ವೆಸ್ಟ್ ಇಂಡೀಸ್ ಸರಣಿ ಯಾವಾಗ?

ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯು 2026ರ ಜುಲೈ 15 ರಿಂದ ಆಗಸ್ಟ್ 7 ರವರೆಗೆ ನಡೆಯಲಿದೆ. ಇತ್ತ ‘ದಿ ಹಂಡ್ರೆಡ್’ ಟೂರ್ನಿಯು ಜುಲೈ 21 ರಿಂದ ಆಗಸ್ಟ್ 16 ರವರೆಗೆ ನಡೆಯಲಿದೆ.

ಅಬ್ರಾರ್ ಅಹ್ಮದ್ ಅವರು ಆಗಸ್ಟ್ 7 ರವರೆಗೆ ವೆಸ್ಟ್ ಇಂಡೀಸ್‌ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಬೇಕಿರುವುದರಿಂದ, ಅವರು ಸನ್​ರೈಸರ್ಸ್​ ಲೀಡ್ಸ್ ತಂಡದ ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಳ್ಳುವುದು ಖಚಿತವಾಗಿದೆ.

ಇದೇ ನೆಪವಿಟ್ಟುಕೊಂಡು ಸನ್​ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಅಬ್ರಾರ್ ಬದಲಿಗೆ ಮತ್ತೋರ್ವ ವಿದೇಶಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.

ನೇರವಾಗಿ ಕೈ ಬಿಡಲು ಯಾಕೆ ಸಾಧ್ಯವಿಲ್ಲ?

ಕಾನೂನು ಮತ್ತು ಆರ್ಥಿಕ ಸಮಸ್ಯೆ: ಅಬ್ರಾರ್ ಅಹ್ಮದ್ ಅವರನ್ನು ಹರಾಜಿನಲ್ಲಿ £190,000 (ಸುಮಾರು ₹2.34 ಕೋಟಿ) ನೀಡಿ ಅಧಿಕೃತವಾಗಿ ಖರೀದಿಸಲಾಗಿದೆ. ಯಾವುದೇ ಬಲವಾದ ಶಿಸ್ತುಕ್ರಮದ ಕಾರಣವಿಲ್ಲದೆ ಅವರನ್ನು ಕೈಬಿಟ್ಟರೆ, ಫ್ರಾಂಚೈಸಿ ಅವರಿಗೆ ಪೂರ್ಣ ಹಣವನ್ನು ನೀಡಬೇಕಾಗುತ್ತದೆ.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿಯಮ: ‘ದಿ ಹಂಡ್ರೆಡ್’ ಟೂರ್ನಿಯು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿಯಮದಡಿ ನಡೆಯುತ್ತದೆ. ಕೇವಲ ಸೋಶಿಯಲ್ ಮೀಡಿಯಾ ಆಕ್ರೋಶದ ಕಾರಣಕ್ಕೆ ಆಟಗಾರನನ್ನು ತೆಗೆದುಹಾಕಲು ಇಸಿಬಿ ಅನುಮತಿ ನೀಡುವುದಿಲ್ಲ.

ಹೀಗಾಗಿಯೇ ಇದೀಗ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಅದರಂತೆ ಅಬ್ರಾರ್ ಅಹ್ಮದ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆಯಾದರೆ, ಸನ್​ರೈಸರ್ಸ್ ಲೀಡ್ಸ್ ತಂಡದಿಂದ ಹೊರಬೀಳುವುದು ಖಚಿತ.,

ಸನ್‌ರೈಸರ್ಸ್ ಲೀಡ್ಸ್ ತಂಡದ ಆಟಗಾರರು:

ವಿದೇಶಿ ಆಟಗಾರರು: ಅಬ್ರಾರ್ ಅಹ್ಮದ್ (ಪಾಕಿಸ್ತಾನ್), ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ), ನಾಥನ್ ಎಲ್ಲಿಸ್ (ಆಸ್ಟ್ರೇಲಿಯಾ), ಮತ್ತು ರಯಾನ್ ರಿಕೆಲ್ಟನ್ (ಸೌತ್ ಆಫ್ರಿಕಾ).

ಇನ್ನೂ ಓದಿ: ಕೆಎಲ್​ ರಾಹುಲ್​ಗಾಗಿ ಇಂಗ್ಲೆಂಡ್ ಆಟಗಾರನ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

ಇಂಗ್ಲೆಂಡ್ ಆಟಗಾರರು: ಹ್ಯಾರಿ ಬ್ರೂಕ್ (ನಾಯಕ), ಝಾಕ್ ಕ್ರಾಲಿ, ಬೆನ್ ಹೌವೆಲ್, ಬ್ರೈಡನ್ ಕಾರ್ಸ್, ಡಾನ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೀಸ್ ಟೋಪ್ಲಿ, ಟಾಮ್ ಅಲ್ಸೊಪ್, ಎಡ್ ಬರ್ನಾರ್ಡ್, ಟಾಮ್ ಲಾಸ್, ಮತ್ತು ಲಿಯಾಮ್ ಪ್ಯಾಟರ್ಸನ್-ವೈಟ್.

 

 

 

Follow Us