ಭಾರತದಲ್ಲಿ ಟಿ20 ಲೀಗ್ ಆಡಿದ ಮೂವರು ಅಫ್ಘನ್ ಕ್ರಿಕೆಟಿಗರಿಗೆ ನಿಷೇಧದ ಶಿಕ್ಷೆ
Afghan Cricketers Banned: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅನುಮತಿ ಪಡೆಯದೆ ಭಾರತದಲ್ಲಿ ನಡೆದ ಲೆಜೆಂಡ್ಸ್ ಲೀಗ್‌ನಲ್ಲಿ ಭಾಗವಹಿಸಿದ್ದ ಸಮಿಯುಲ್ಲಾ ಶಿನ್ವಾರಿ, ಅಫ್ತಾಬ್ ಅಲಂ ಮತ್ತು ಶಹಜಾದ್ ಮೊಹಮ್ಮದ್ ಅವರಿಗೆ ನಾಲ್ಕು ತಿಂಗಳ ನಿಷೇಧ ಹೇರಿದೆ. ಪಂದ್ಯ ಫಿಕ್ಸಿಂಗ್ ಸಾಧ್ಯತೆಗಳಿರುವ ಲೀಗ್‌ಗಳಲ್ಲಿ ಆಡದಂತೆ ಎಚ್ಚರಿಕೆ ನೀಡಿದ್ದು, ಮಂಡಳಿಯ ನಿಯಮ ಉಲ್ಲಂಘಿಸಿದ್ದಕ್ಕೆ ಈ ಕಠಿಣ ಕ್ರಮ ಜರುಗಿಸಿದೆ.

ಭಾರತದಲ್ಲಿ ಈ ಹಿಂದೆ ನಡೆದಿದ್ದ ಲೆಜೆಂಡ್ಸ್ ಲೀಗ್‌ನಲ್ಲಿ (Legends League) ಭಾಗವಹಿಸಿದ್ದ ಮೂವರು ಅಫ್ಘಾನ್ ಆಟಗಾರರಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (Afghan Cricket Board) ನಿಷೇಧದ ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ. ಮಂಡಳಿಯಿಂದ ನಿಷೇಧಕ್ಕೊಳಗಾದವರಲ್ಲಿ ಸಮಿಯುಲ್ಲಾ ಶಿನ್ವಾರಿ, ಅಫ್ತಾಬ್ ಅಲಂ ಮತ್ತು ಶಹಜಾದ್ ಮೊಹಮ್ಮದ್ ಸೇರಿದ್ದಾರೆ. ಈ ಮೂವರು ಆಟಗಾರರು ಭಾರತದಲ್ಲಿ ನಡೆದ ಲೆಜೆಂಡ್ಸ್ ಲೀಗ್‌ನಲ್ಲಿ ಅಫ್ಘಾನಿಸ್ತಾನ ಮಂಡಳಿಯ ಅನುಮತಿಯಿಲ್ಲದೆ ಭಾಗವಹಿಸಿದ್ದರು. ಹೀಗಾಗಿ ಇದರ ಪರಿಣಾಮವಾಗಿ ಎಸಿಬಿ ಈ ಮೂವರು ಆಟಗಾರರನ್ನು ನಾಲ್ಕು ತಿಂಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸಿದೆ. ಈಗ, ಈ ಮೂವರು ಆಟಗಾರರು ನಾಲ್ಕು ತಿಂಗಳ ಕಾಲ ಯಾವುದೇ ದೇಶೀಯ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಅಫ್ಘನ್ ಕ್ರಿಕೆಟ್ ಮಂಡಳಿಯ ದೊಡ್ಡ ಕ್ರಮ
ಈ ಮೂವರು ಆಟಗಾರರ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ನಡೆದಿದ್ದ ಲೆಜೆಂಡ್ಸ್ ಲೀಗ್ ಅನ್ನು ಐಸಿಸಿಯಾಗಲಿ ಅಥವಾ ಬಿಸಿಸಿಐಯಾಗಲಿ ನಡೆಸುವುದಿಲ್ಲ. ಹೀಗಾಗಿ ಇಂತಹ ಲೀಗ್‌ಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಮಂಡಳಿಯ ಅನುಮತಿ ಪಡೆಯದೆ ಈ ಲೀಗ್‌ನಲ್ಲಿ ಆಡಿದ್ದ ಈ ಮೂವರು ಕ್ರಿಕೆಟಿಗರಿಗೆ ನಿಷೇಧ ಹೇರಲಾಗಿದೆ ಎಂಬುದನ್ನು ಅಫ್ಘನ್ ಮಂಡಳಿ ಸ್ಪಷ್ಟಪಡಿಸಿದೆ. ಈ ಲೀಗ್‌ನಲ್ಲಿ ಈ ಮೂವರು ಅಫ್ಘನ್ ಕ್ರಿಕೆಟಿಗರು ಮಾತ್ರವಲ್ಲದೆ ಅಸ್ಗರ್ ಅಫ್ಘಾನ್ ಕೂಡ ಆಡಿದ್ದರು. ಆದರೆ ಅವರು ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರಿಂದ ಮಂಡಳಿಯು ಅವರಿಗೆ ಈ ಶಿಕ್ಷೆ ವಿಧಿಸಿಲಿಲ್ಲ.
NOC ನೀಡದ ಮಂಡಳಿ
ವರದಿಗಳ ಪ್ರಕಾರ, ಲೆಜೆಂಡ್ಸ್ ಲೀಗ್ ಪ್ರಾರಂಭವಾಗುವ ಮೊದಲು ಆಟಗಾರನೊಬ್ಬ ಎನ್ಒಸಿ ಪಡೆಯುವ ಸಲುವಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿದ್ದರು. ಆದರೆ ಮಂಡಳಿಯ ಸದಸ್ಯರು ಎನ್ಒಸಿ ನೀಡಲು ಪದೇ ಪದೇ ವಿಳಂಬ ಮಾಡಿದರು. ಆ ನಂತರ ಆಟಗಾರರಿಗೆ ಆಡಲು ಅನುಮತಿ ನಿರಾಕರಿಸಿದರು. ಆದ್ದರಿಂದ, ಆಟಗಾರರಿಗೆ ಲೀಗ್‌ನಲ್ಲಿ ಭಾಗವಹಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಇದಲ್ಲದೆ, ಈ ಆಟಗಾರರು ದೀರ್ಘಕಾಲದವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದಾರೆ, ಆದ್ದರಿಂದ ಅವರು ACB ಯಿಂದ ಅನುಮತಿ ಪಡೆಯದೆ ಈ ಲೀಗ್‌ನಲ್ಲಿ ಆಡಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಒಪ್ಪಂದದ ಆಟಗಾರರಿಗೆ ಕೇವಲ ಮೂರು ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ಅಫ್ಘಾನ್ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ಗಿಂತ ಟಿ20 ಲೀಗ್‌ಗಳಿಗೆ ಆದ್ಯತೆ ನೀಡಿರುವುದು, ಎಸಿಬಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ. ರಶೀದ್ ಖಾನ್, ನೂರ್ ಅಹ್ಮದ್ ಮತ್ತು ರಹಮಾನುಲ್ಲಾ ಗುರ್ಬಾಜ್‌ರಂತಹ ಆಟಗಾರರು ಈ ನಿರ್ಧಾರದಿಂದ ಹೆಚ್ಚು ತೊಂದರೆ ಅನುಭವಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




