NZ vs SA: ಐಸಿಸಿ ಟೂರ್ನಿಗಳಲ್ಲಿ ಹೆಚ್ಚು ಶತಕ; ವಿಶ್ವ ದಾಖಲೆ ಸೃಷ್ಟಿಸಿದ ಕನ್ನಡಿಗ ರಚಿನ್ ರವೀಂದ್ರ
Rachin Ravindra's Century: ರಚಿನ್ ರವೀಂದ್ರ ಅವರು ಪಾಕಿಸ್ತಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಅದ್ಭುತವಾದ ಶತಕ (108 ರನ್) ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೇವಲ 13 ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಐಸಿಸಿ ಏಕದಿನ ಪಂದ್ಯಗಳಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರಚಿನ್ ಸರಿಗಟ್ಟಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ (Champions Trophy 2025) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ಆರಂಭಿಕ ಆಟಗಾರ ರಚಿನ್ ರವೀಂದ್ರ (Rachin Ravindra) ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಶತಕ ಬಾರಿಸಿದರು. ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರಚಿನ್ 108 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಶತಕದೊಂದಿಗೆ, ಅವರು ತಮ್ಮ ಹೆಸರಿನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ದಾಖಲೆಯನ್ನು ರೋಹಿತ್ ಮತ್ತು ವಿರಾಟ್‌ರಂತಹ ಶ್ರೇಷ್ಠ ಆಟಗಾರರಿಗೂ ಸಾಧಿಸಲು ಸಾಧ್ಯವಾಗಿರಲಿಲ್ಲ. ವಾಸ್ತವವಾಗಿ, ರಚಿನ್ ರವೀಂದ್ರ ಐಸಿಸಿ ಟೂರ್ನಮೆಂಟ್‌ನಲ್ಲಿ 5 ಶತಕಗಳನ್ನು ಬಾರಿಸಿದ್ದು ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ರವೀಂದ್ರ ವಿಶ್ವ ದಾಖಲೆ
ರಚಿನ್ ರವೀಂದ್ರ ಕೇವಲ 13 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ರಚಿನ್ ಬಾರಿಸಿರುವ ಐದು ಶತಕಗಳು ಏಕದಿನ ಮಾದರಿಯಲ್ಲೇ ಬಂದಿವೆ. ಅದರಲ್ಲೂ ಈ 5 ಶತಕಗಳು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಬಂದಿವೆ ಎನ್ನುವುದು ಅಪರೂಪದ ಸಂಗತಿಯಾಗಿದೆ. ರಚಿನ್ 2023 ರ ವಿಶ್ವಕಪ್‌ನಲ್ಲಿ 3 ಶತಕಗಳನ್ನು ಬಾರಿಸಿದ್ದರೆ, ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಶತಕಗಳನ್ನು ಗಳಿಸಿದ್ದಾರೆ.
ಅಲ್ಲದೆ ಈ ಶತಕದೊಂದಿಗೆ ರಚಿನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ 30 ವರ್ಷಕ್ಕಿಂತ ಮೊದಲು ಐಸಿಸಿ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಇಬ್ಬರೂ ತಲಾ 5 ಶತಕಗಳನ್ನು ಬಾರಿಸಿದ್ದಾರೆ.
ಹಾಗೆಯೇ 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು 50+ ಸ್ಕೋರ್ ದಾಖಲಿಸಿದವರು ಪಟ್ಟಿಯಲ್ಲೂ ರಚಿನ್ 2ನೇ ಸ್ಥಾನಕ್ಕೇರಿದ್ದಾರೆ.
- ಸಚಿನ್ ತೆಂಡೂಲ್ಕರ್ – 9 ಬಾರಿ
- ರಚಿನ್ ರವೀಂದ್ರ- 7 ಬಾರಿ*
- ಜಾಕ್ವೆಸ್ ಕಾಲಿಸ್ – 6 ಬಾರಿ
- ಉಪುಲ್ ತರಂಗ – 6 ಬಾರಿ
- ಎಬಿ ಡಿವಿಲಿಯರ್ಸ್ – 5 ಬಾರಿ
- ಶುಭಮನ್ ಗಿಲ್ – 5 ಬಾರಿ
- ಸ್ಟೀವ್ ಸ್ಮಿತ್ – 5 ಬಾರಿ
- ಯುವರಾಜ್ ಸಿಂಗ್ – 5 ಬಾರಿ
ರಚಿನ್ ಯಾವ್ಯಾವ ತಂಡಗಳ ವಿರುದ್ಧ ಶತಕ ಬಾರಿಸಿದ್ದಾರೆ?
- ದಕ್ಷಿಣ ಆಫ್ರಿಕಾ ವಿರುದ್ಧ 108 ರನ್ (ಚಾಂಪಿಯನ್ಸ್ ಟ್ರೋಫಿ)
- ಬಾಂಗ್ಲಾದೇಶ ವಿರುದ್ಧ 112 (ಚಾಂಪಿಯನ್ಸ್ ಟ್ರೋಫಿ)
- ಪಾಕಿಸ್ತಾನ ವಿರುದ್ಧ 108 ರನ್ (ವಿಶ್ವಕಪ್)
- ಆಸ್ಟ್ರೇಲಿಯಾ ವಿರುದ್ಧ 116 ರನ್ (ವಿಶ್ವಕಪ್)
- ಇಂಗ್ಲೆಂಡ್ ವಿರುದ್ಧ 123 ರನ್ (ವಿಶ್ವಕಪ್)
ಏಕದಿನ ಕ್ರಿಕೆಟ್‌ನಲ್ಲಿ ರವೀಂದ್ರ ಅವರ ಸಾಧನೆ
ರಚಿನ್ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳನ್ನು ಗಳಿಸಿದ್ದಾರೆ. ಆದರೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡಿರುವ 15 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಶತಕವನ್ನು ಗಳಿಸಲು ಅವರಿಗೆ ಸಾಧ್ಯವಾಗಿಲ್ಲ. ದೊಡ್ಡ ಟೂರ್ನಿಗಳಲ್ಲಿ ಮಾತ್ರ ರಚಿನ್ ಬ್ಯಾಟ್ ಘರ್ಜಿಸುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Wed, 5 March 25