Afghanistan: ಬಾಂಗ್ಲಾ ತಂಡವನ್ನು ಬಗ್ಗು ಬಡಿದ ಅಫ್ಘಾನಿಸ್ತಾನ್
Bangladesh vs Afghanistan: ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ತೌಹಿದ್ ಹೃದಯ್ 69 ಎಸೆತಗಳಲ್ಲಿ 51 ರನ್ ಬಾರಿಸಿದರು.
Bangladesh vs Afghanistan: ಚಟ್ಟೋಗ್ರಾಮ್ನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ (Afghanistan) ತಂಡವು ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಎಡಗೈ ವೇಗಿ ಫಝಲ್ಹಕ್ ಫಾರೂಖಿ ಆರಂಭಿಕ ಆಘಾತ ನೀಡಿದ್ದರು. 13 ರನ್ಗಳಿಸಿದ್ದ ನಾಯಕ ತಮೀಮ್ ಇಕ್ಬಾಲ್ ವಿಕೆಟ್ ಪಡೆಯುವ ಮೂಲಕ ಶುಭಾರಂಭ ಮಾಡಿದ್ದ ಅಫ್ಘಾನಿಸ್ತಾನ್ ತಂಡಕ್ಕೆ ಆ ಬಳಿಕ ಮುಜೀಬ್ ಉರ್ ರೆಹಮಾನ್ 2ನೇ ಯಶಸ್ಸು ತಂದುಕೊಟ್ಟರು. ಇನ್ನು ಶಾಂಟೋ (12) ಹಾಗೂ ಶಕೀಬ್ ಅಲ್ ಹಸನ್ (15) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು.
ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ತೌಹಿದ್ ಹೃದಯ್ 69 ಎಸೆತಗಳಲ್ಲಿ 51 ರನ್ ಬಾರಿಸಿದರು. ಈ ವೇಳೆ ಮತ್ತೆ ದಾಳಿಗಿಳಿದ ಫಝಲ್ಹಕ್ ತೌಹಿದ್ ವಿಕೆಟ್ ಪಡೆದರು. ಅತ್ತ 43 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 169 ರನ್ಗಳಿಸಿ ಬಾಂಗ್ಲಾದೇಶ್ ತಂಡವು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಳೆ ಅಡ್ಡಿಪಡಿಸಿದ್ದರಿಂದ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಇನ್ನು ಮಳೆ ನಿಂತ ಬಳಿಕ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಅಫ್ಘಾನಿಸ್ತಾನ್ ತಂಡಕ್ಕೆ 43 ಓವರ್ಗಳಲ್ಲಿ 164 ರನ್ಗಳ ಟಾರ್ಗೆಟ್ ನೀಡಲಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಅಫ್ಘಾನ್ ಪರ ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಅರ್ಧಶತಕದ ಜೊತೆಯಾಟವಾಡಿದರು.
ಇನ್ನು 22 ರನ್ಗಳಿಸಿ ಗುಬಾರ್ಝ್ ಶಕೀಬ್ಗೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ರಹಮತ್ ಶಾ ತಸ್ಕಿನ್ ಅಹ್ಮದ್ ಎಸೆತದಲ್ಲಿ ಔಟಾದರು. ಮತ್ತೊಂದೆಡೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಇಬ್ರಾಹಿಂ ಝದ್ರಾನ್ 41 ರನ್ ಬಾರಿಸಿದರೆ, ನಾಯಕ ಶಾಹಿದಿ 9 ರನ್ಗಳಿಸಿದ್ದರು.
ಇದೇ ವೇಳೆ ಮತ್ತೆ ಮಳೆಯಾಗಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ ಫಲಿತಾಂಶವನ್ನು ನಿರ್ಧರಿಸಲು ಡರ್ಕ್ವರ್ಥ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಬಾಂಗ್ಲಾದೇಶ್ಗಿಂತ ಸ್ಕೋರ್ಗಳಿಕೆಯಲ್ಲಿ ಅಫ್ಘಾನ್ ತಂಡವು 17 ರನ್ಗಳಿಂದ ಮುಂದಿತ್ತು. ಹೀಗಾಗಿ 21.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 83 ರನ್ಗಳಿಸಿದ್ದ ಅಫ್ಘಾನಿಸ್ತಾನ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅಫ್ಘಾನಿಸ್ತಾನ್ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಬಾಂಗ್ಲಾದೇಶ್ ಪ್ಲೇಯಿಂಗ್ 11: ತಮೀಮ್ ಇಕ್ಬಾಲ್ (ನಾಯಕ) , ಲಿಟ್ಟನ್ ದಾಸ್ , ನಜ್ಮುಲ್ ಹೊಸೈನ್ ಶಾಂಟೋ , ಶಕೀಬ್ ಅಲ್ ಹಸನ್ , ತೌಹಿದ್ ಹೃದಯ್ , ಮುಶ್ಫಿಕರ್ ರಹೀಮ್ ( ವಿಕೆಟ್ ಕೀಪರ್ ) , ಅಫೀಫ್ ಹೊಸೈನ್ , ಮೆಹಿದಿ ಹಸನ್ ಮಿರಾಜ್ , ತಸ್ಕಿನ್ ಅಹ್ಮದ್ , ಮುಸ್ತಾಫಿಜುರ್ ರಹಮಾನ್.
ಇದನ್ನೂ ಓದಿ: Team India: ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಫುಲ್ ಬ್ಯುಸಿ: ಇಲ್ಲಿದೆ ವೇಳಾಪಟ್ಟಿ
ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ರಹಮತ್ ಶಾ , ಹಶ್ಮತುಲ್ಲಾ ಶಾಹಿದಿ (ನಾಯಕ) , ಮೊಹಮ್ಮದ್ ನಬಿ , ನಜೀಬುಲ್ಲಾ ಝದ್ರಾನ್ , ರಶೀದ್ ಖಾನ್ , ಮುಜೀಬ್ ಉರ್ ರಹಮಾನ್ , ಫಝಲ್ಹಕ್ ಫಾರೂಕಿ , ಅಜ್ಮತುಲ್ಲಾ ಮೊಹಮ್ಮದಾಯಿ.