IND vs WI: ‘ಯಾವ ಆಧಾರದ ಮೇಲೆ ಆಯ್ಕೆ ಮಾಡಿದ್ರಿ’; ಟಿ20 ತಂಡದಲ್ಲಿ ಈ ಇಬ್ಬರ ಆಯ್ಕೆಗೆ ನೆಟ್ಟಿಗರ ಆಕ್ರೋಶ!

IND vs WI: ಕಳಪೆ ಪ್ರದರ್ಶನದ ಹೊರತಾಗಿಯೂ ಈ ಆಟಗಾರರ ಆಯ್ಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಯಾವ ಆಧಾರದ ಮೇಲೆ ಈ ಆಟಗಾರರನ್ನು ಆಯ್ಕೆ ಮಾಡಿದ್ದೀರಿ ಎಂದು ಬಿಸಿಸಿಐ ವಿರುದ್ಧ ಹರಿಹಾಯ್ದಿದ್ದಾರೆ.

IND vs WI: ‘ಯಾವ ಆಧಾರದ ಮೇಲೆ ಆಯ್ಕೆ ಮಾಡಿದ್ರಿ’; ಟಿ20 ತಂಡದಲ್ಲಿ ಈ ಇಬ್ಬರ ಆಯ್ಕೆಗೆ ನೆಟ್ಟಿಗರ ಆಕ್ರೋಶ!
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Jul 06, 2023 | 12:05 PM

ವೆಸ್ಟ್ ಇಂಡೀಸ್ ವಿರುದ್ಧದ (India vs West Indies) ಐದು ಪಂದ್ಯಗಳ ಟಿ20 ಸರಣಿಗೆ ನಿನ್ನೆ ಅಂದರೆ, ಜುಲೈ 5 ರಂದು ಬಿಸಿಸಿಐ (BCCI) 15 ಸದಸ್ಯರ ಯುವ ಪಡೆಯನ್ನು ಪ್ರಕಟಿಸಿದೆ. ಮೊದಲೇ ಹೇಳಿದಂತೆ ಆಯ್ಕೆ ಮಂಡಳಿ ಆಯ್ಕೆ ಮಾಡಿರುವ ತಂಡದಲ್ಲಿ ಭಾಗಶಃ ಯುವ ಆಟಗಾರರೆ ತುಂಬಿ ತುಳುಕುತ್ತಿದ್ದಾರೆ. ಒಂದರ್ಥದಲ್ಲಿ ಹೇಳಬೇಕೆಂದರೆ ದೇಶೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನು ಬದಿಗೊತ್ತಿ, ಐಪಿಎಲ್​ನಲ್ಲಿ (IPL 2023) ಮಿಂಚಿದವರಿಗೆ ಮಣೆ ಹಾಕಲಾಗಿದೆ. ಹಾಗೆಯೇ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿ, ಸೀಸನ್ ಮಧ್ಯದಲ್ಲಿಯೇ ತಂಡದಿಂದ ಗೇಟ್​ಪಾಸ್ ಪಡೆದುಕೊಂಡಿದ್ದ ಕೆಲವು ಆಟಗಾರರು ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೀಗ ಕಳಪೆ ಪ್ರದರ್ಶನದ ಹೊರತಾಗಿಯೂ ಈ ಆಟಗಾರರ ಆಯ್ಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಯಾವ ಆಧಾರದ ಮೇಲೆ ಈ ಆಟಗಾರರನ್ನು ಆಯ್ಕೆ ಮಾಡಿದ್ದೀರಿ ಎಂದು ಬಿಸಿಸಿಐ ವಿರುದ್ಧ ಹರಿಹಾಯ್ದಿದ್ದಾರೆ.

ವಾಸ್ತವವಾಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವೂ ಇದ್ದು, ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಿಂಕು ಸಿಂಗ್, ಜಿತೇಶ್ ಶರ್ಮಾ, ಆಕಾಶ ಮಧ್ವಲ್​ರಂತಹ ಆಟಗಾರರನ್ನು ಕಡೆಗಣಿಸಿ, ಕಳಪೆ ಪ್ರದರ್ಶನ ನೀಡಿ ತಂಡದಿಂದ ಡ್ರಾಪ್ ಔಟ್ ಆಗಿದ್ದ ಆವೇಶ್ ಖಾನ್ ಹಾಗೂ ಉಮ್ರಾನ್ ಮಲಿಕ್​ರಂತಹ ಆಟಗಾರರಿಗೆ ಬಿಸಿಸಿಐ ಮಣೆ ಹಾಕಿದೆ. ಹೀಗಾಗಿ ನೆಟ್ಟಿಗರು ಆಯ್ಕೆ ಮಂಡಳಿಯ ವಿರುದ್ಧ ಕಿಡಿಕಾರುತ್ತಿದ್ದಾರೆ.

IND vs WI: ಅಭ್ಯಾಸ ಪಂದ್ಯದಲ್ಲೂ ಅದೇ ತಪ್ಪು; ಕೇವಲ 3 ರನ್​ಗಳಿಗೆ ಸುಸ್ತಾದ ಕೊಹ್ಲಿ! ವಿಡಿಯೋ ನೋಡಿ

ಹಾಂಗ್ ಕಾಂಗ್ ವಿರುದ್ಧ ದುಬಾರಿ

ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಭಾರತ ಪರ ಕೊನೆಯ ಪಂದ್ಯವನ್ನಾಡಿದ್ದ ಆವೇಶ್ ಖಾನ್, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ 13.25 ಎಕಾನಮಿ ದರದಲ್ಲಿ 53 ರನ್‌ ಬಿಟ್ಟುಕೊಟ್ಟಿದ್ದರು. ಹೀಗಾಗಿ ಆ ನಂತರ ಆವೇಶ್​ರನ್ನು ತಂಡದಿಂದ ಕೈಬಿಡಲಾಯಿತು. ಇನ್ನು ಐಪಿಎಲ್​ನಲ್ಲೂ ಮಂಕಾಗಿದ್ದ ಆವೇಶ್ 9.75 ರ ಎಕಾನಮಿಯಲ್ಲಿ ಕೇವಲ ಎಂಟು ವಿಕೆಟ್‌ಗಳನ್ನು ಪಡೆದಿದ್ದರು. ಹೀಗಾಗಿ ದುಬಾರಿಯಾಗುತ್ತಿದ್ದ ಆವೇಶ್​ರನ್ನು ಲಕ್ನೋ ಸೂಪರ್ ಜೈಂಟ್ಸ್‌ ತಂಡದಿಂದ ಕೈಬಿಟ್ಟಿತ್ತು. ಆದರೀಗ ಆಶ್ಚರ್ಯಕರ ರೀತಿಯಲ್ಲಿ ಆವೇಶ್ ಖಾನ್ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಐಪಿಎಲ್​ನಲ್ಲಿ ಕಳಪೆ ಬೌಲಿಂಗ್

ಇವರೊಂದಿಗೆ 15 ಸದಸ್ಯರ ತಂಡದಲ್ಲಿ ಉಮ್ರಾನ್ ಮಲಿಕ್ ಅವರ ಹೆಸರನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಉಮ್ರಾನ್ ಮೇಲೆ ಭಾರಿ ನಿರೀಕ್ಷೆ ಇಟ್ಟಿತ್ತು. ಆದರೆ ಉಮ್ರಾನ್ ಕೇವಲ ಎಂಟು ಐಪಿಎಲ್ ಪಂದ್ಯಗಳಲ್ಲಿ 10.85 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಫಲವಾಗಿ ಕೇವಲ ಐದು ವಿಕೆಟ್ಗಳನ್ನು ಮಾತ್ರ ಪಡೆದಿದ್ದರು. ಹೀಗಾಗಿ ಉಮ್ರಾನ್​ರನ್ನು ಸನ್‌ರೈಸರ್ಸ್ ಹೈದರಾಬಾದ್‌ ಫ್ರಾಂಚೈಸ್ ಬೆಂಚ್ ಕಾಯಲು ಬಿಟ್ಟಿತ್ತು. ಇದೀಗ ಉಮ್ರಾನ್ ಮಲಿಕ್ ಕೂಡ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದ್ದು ಟ್ವಿಟರ್​ನಲ್ಲಿ ಈ ರೀತಿಯಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.