ಆಫ್ರೊ-ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಮತ್ತೆ ಚಾಲನೆ ದೊರೆಯುವ ಸಾಧ್ಯತೆಯಿದೆ. ಆಫ್ರಿಕಾ ಮತ್ತು ಏಷ್ಯಾ ಖಂಡಗಳ ನಡುವಣ ಈ ಟೂರ್ನಿಯಲ್ಲಿ ಏಷ್ಯನ್ ಇಲೆವೆನ್ ಹಾಗೂ ಆಫ್ರಿಕಾ ಇಲೆವೆನ್ ಕಣಕ್ಕಿಳಿಯಲಿದೆ. 2007 ರಲ್ಲಿ ಕೊನೆಯ ಬಾರಿ ಆಯೋಜನೆಗೊಂಡಿದ್ದ ಈ ಟೂರ್ನಿಗೆ ಮತ್ತೆ ಚಾಲನೆ ನೀಡಲು ಆಯೋಜಕರು ಮುಂದಾಗಿದ್ದಾರೆ.
ಈ ಟೂರ್ನಿಗೆ ಚಾಲನೆ ನೀಡಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ನಲ್ಲಿ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ ಆಫ್ರಿಕನ್ ತಂಡಗಳು ಆಫ್ರೋ-ಏಷ್ಯಾ ಕಪ್ ಅನ್ನು ಪುನರುಜ್ಜೀವನಗೊಳಿಸಬೇಕೆಂದು ಬಯಸುತ್ತಿದ್ದಾರೆ ಎಂದು ಝಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷರೂ ಆಗಿರುವ ACA ಯ ಹಂಗಾಮಿ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ತಿಳಿಸಿದ್ದಾರೆ.
ನಾವು ಆಫ್ರೊ-ಏಷ್ಯಾ ಕಪ್ ಅನ್ನು ಮತ್ತೆ ಶುರು ಮಾಡಲು ಪ್ರಯತ್ನಿಸಿದ್ದೇವೆ. ಈ ಬಗ್ಗೆ ನಡೆದ ಚರ್ಚೆಗಳಲ್ಲಿ ಜಯ್ ಶಾ ಮತ್ತು ಮಹಿಂದಾ ವಲ್ಲಿಪುರಂ (ಮಲೇಷ್ಯಾ ಕ್ರಿಕೆಟ್ ಮುಖ್ಯಸ್ಥ ಮತ್ತು ಪ್ರಸ್ತುತ ಐಸಿಸಿ ನಿರ್ದೇಶಕ) ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಈ ಹಿಂದೆ ಸುಮೋದ್ ದಾಮೋದರ್ ತಿಳಿಸಿದ್ದರು.
ಸುಮಾರು 17-18 ವರ್ಷಗಳ ಹಿಂದೆ ಈ ಕಲ್ಪನೆಯನ್ನು ಮೊದಲ ಬಾರಿಗೆ ರೂಪಿಸಿದಾಗ ಮತ್ತು ಕಾರ್ಯಗತಗೊಳಿಸಿದಾಗ ಇದರಲ್ಲಿ ಭಾಗಿಯಾಗಿದ್ದವರಲ್ಲಿ ಸುಮೋದ್ ದಾಮೋದರ್ ಕೂಡ ಒಬ್ಬರು. ಇದೀಗ ಅವರೇ ಆಫ್ರೊ-ಏಷ್ಯಾ ಕಪ್ ಮತ್ತೆ ಚಾಲನೆ ನೀಡುವ ಬಗ್ಗೆ ಚರ್ಚೆಗಳನ್ನು ಶುರು ಮಾಡಿದ್ದಾರೆ.
ಇತ್ತ ಜಯ್ ಶಾ ಐಸಿಸಿ ಅಧ್ಯಕ್ಷರಾಗಿದ್ದು, ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ (ಎಸಿಸಿ) ಅಧ್ಯಕ್ಷರಾಗುವ ಸಾಧ್ಯತೆಯಿದೆ. ಹೀಗಾಗಿಯೇ ಈ ಟೂರ್ನಿಗೆ ಮತ್ತೆ ಚಾಲನೆ ದೊರೆಯುವ ನಿರೀಕ್ಷೆಯಿದೆ.
ಈ ಟೂರ್ನಿಯಲ್ಲಿ ಏಷ್ಯನ್ ಕ್ರಿಕೆಟ್ ತಂಡಗಳ ಆಟಗಾರರು ಏಷ್ಯಾ ಇಲೆವೆನ್ನಲ್ಲಿ ಕಾಣಿಸಿಕೊಂಡರೆ, ಆಫ್ರಿಕಾ ಖಂಡದ ಆಟಗಾರರು ಆಫ್ರಿಕಾ ಇಲೆವೆನ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಅದರಂತೆ ಏಷ್ಯನ್ ಇಲೆವೆನ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಜೊತೆಯಾಗಿ ಆಡಲಿದ್ದಾರೆ.
ಈ ಟೂರ್ನಿಯನ್ನು ಕೇವಲ 2 ಬಾರಿ ಮಾತ್ರ ಆಯೋಜಿಸಲಾಗಿದೆ. 2005 ರಲ್ಲಿ ನಡೆದ ಚೊಚ್ಚಲ ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಆಫ್ರಿಕಾ ಇಲೆವೆನ್ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಏಷ್ಯಾ ಇಲೆವೆನ್ ಗೆಲುವು ದಾಖಲಿಸಿತ್ತು. ಆದರೆ ಮೂರನೇ ಪಂದ್ಯವು ಮಳೆಗೆ ಅಹುತಿಯಾದ ಕಾರಣ ಟೂರ್ನಿಯು 1-1 ಅಂತರದಲ್ಲಿ ಕೊನೆಗೊಂಡಿತು. ಇನ್ನು 2007 ರಲ್ಲಿ ನಡೆದ 3 ಪಂದ್ಯಗಳ ಆಫ್ರೊ-ಏಷ್ಯಾ ಕಪ್ ಟೂರ್ನಿಯಲ್ಲಿ ಏಷ್ಯನ್ ಇಲೆವೆನ್ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದ್ದರು.
ಆಫ್ರಿಕಾ ಇಲೆವೆನ್ ತಂಡ: ಎಬಿ ಡಿವಿಲಿಯರ್ಸ್, ವುಸಿ ಸಿಬಂದ, ಬೋಟಾ ಡಿಪ್ಪೆನಾರ್, ಸ್ಟೀವ್ ಟಿಕೊಲೊ, ಜಸ್ಟಿನ್ ಕೆಂಪ್ (ನಾಯಕ), ಮಾರ್ಕ್ ಬೌಚರ್ (ವಿಕೆಟ್ ಕೀಪರ್), ಶಾನ್ ಪೊಲಾಕ್, ಎಲ್ಟನ್ ಚಿಗುಂಬುರ, ಜೋಹಾನ್ ಬೋಥಾ, ಮೋರ್ನೆ ಮೊರ್ಕೆಲ್, ಪೀಟರ್ ಒಂಗೊಂಡೋ.
ಇದನ್ನೂ ಓದಿ: Team India: 55 ವರ್ಷಗಳ ಬಳಿಕ ಯಾಕೆ ಹೀಗಾಯ್ತು..!
ಏಷ್ಯಾ ಇಲೆವೆನ್ ತಂಡ: ವೀರೇಂದ್ರ ಸೆಹ್ವಾಗ್, ಸನತ್ ಜಯಸೂರ್ಯ, ಉಪುಲ್ ತರಂಗ, ಯುವರಾಜ್ ಸಿಂಗ್, ಮೊಹಮ್ಮದ್ ಯೂಸುಫ್, ಮಹೇಲ ಜಯವರ್ಧನೆ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಮುಶ್ರಫೆ ಮೊರ್ತಜಾ, ಹರ್ಭಜನ್ ಸಿಂಗ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಆಸಿಫ್.