‘ವಿರಾಟ್ ದಯವಿಟ್ಟು’; ಕೊಹ್ಲಿ ಬಳಿ ವಿಶೇಷ ಮನವಿ ಮಾಡಿದ ಅಂಬಟಿ ರಾಯುಡು

Virat Kohli Retirement Rumours: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸುದ್ದಿಗೆ ಪ್ರತಿಕ್ರಿಯಿಸಿ, ಮಾಜಿ ಆಟಗಾರ ಅಂಬಟಿ ರಾಯುಡು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಕೊಹ್ಲಿಯ ಅನುಭವ ಮತ್ತು ಕೌಶಲ್ಯ ಭಾರತಕ್ಕೆ ಅತ್ಯವಶ್ಯಕ ಎಂದು ರಾಯುಡು ಒತ್ತಿ ಹೇಳಿದ್ದಾರೆ. ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಯುಡು ಮನವಿ ಮಾಡಿದ್ದಾರೆ.

‘ವಿರಾಟ್ ದಯವಿಟ್ಟು; ಕೊಹ್ಲಿ ಬಳಿ ವಿಶೇಷ ಮನವಿ ಮಾಡಿದ ಅಂಬಟಿ ರಾಯುಡು
Virat Kohli

Updated on: May 10, 2025 | 9:45 PM

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಇತ್ತೀಚೆಗಷ್ಟೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ತಂಡದ ಮತ್ತೊಬ್ಬ ಅನುಭವಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಕೂಡ ಈ ಸ್ವರೂಪದಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಕೊಹ್ಲಿಯ ಈ ನಿರ್ಧಾರ ಅಭಿಮಾನಿಗಳಿಗೆ ಆಘಾತ ನೀಡಿರುವುದರ ಜೊತೆಗೆ ಬಿಸಿಸಿಐಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದರೆ ಈ ಆಲೋಚನೆಯನ್ನು ಬದಲಾಯಿಸಬೇಕೆಂದು ಎಲ್ಲರೂ ಮನವಿ ಮಾಡುತ್ತಿದ್ದಾರೆ. ಈಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದ್ದು, ವಿರಾಟ್ ನಿವೃತ್ತಿ ಹೊಂದದಂತೆ ಅಂಬಟಿ ರಾಯುಡು ಮನವಿ ಮಾಡಿದ್ದಾರೆ. ಯಾವಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಕಾರುವ ರಾಯುಡು, ಕೊಹ್ಲಿ ಬಳಿ ಮನವಿ ಮಾಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಅಂಬಟಿ ರಾಯುಡು ಮನವಿ

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಮುಂದಾಗಿದ್ದಾರೆ ಎಂಬ ಸುದ್ದಿ ತಿಳಿದು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಆಘಾತಕ್ಕೊಳಗಾಗಿದ್ದಾರೆ. ವಿರಾಟ್ ಕೊಹ್ಲಿ ಅವರ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇರುವುದರಿಂದ ಅಂತಹ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ರಾಯುಡು ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಾಯುಡು, ‘ವಿರಾಟ್ ಕೊಹ್ಲಿ, ದಯವಿಟ್ಟು ನಿವೃತ್ತಿ ಹೊಂದಬೇಡಿ.. ಭಾರತ ತಂಡಕ್ಕೆ ನಿಮ್ಮ ಅವಶ್ಯಕತೆ ಎಂದಿಗಿಂತಲೂ ಹೆಚ್ಚು ಇದೆ. ನಿಮ್ಮಲ್ಲಿ ಇನ್ನೂ ಬಹಳಷ್ಟು ಆಟ ಉಳಿದಿದೆ. ನೀವು ಇಲ್ಲದೆ ಟೆಸ್ಟ್ ಕ್ರಿಕೆಟ್ ಮೊದಲಿನಂತೆ ಇರುವುದಿಲ್ಲ.. ದಯವಿಟ್ಟು ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಿ’ ಎಂದಿದ್ದಾರೆ.

ಆರ್‌ಸಿಬಿ ಬಗ್ಗೆ ರಾಯುಡು ಕಾಮೆಂಟ್

ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವ ಅಂಬಟಿ ರಾಯುಡು, ಕೊಹ್ಲಿ ತಂಡ ಆರ್​ಸಿಬಿ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧ ಗೆದ್ದಾಗ, ಅಂಬಟಿ ರಾಯುಡು, ‘ಆರ್‌ಸಿಬಿ ತಂಡ ಪ್ರಶಸ್ತಿ ಗೆದ್ದಂತೆ ಸಂಭ್ರಮಿಸುತ್ತಿದೆ’ ಎಂದು ಹೇಳಿದ್ದರು.

IPL 2025: ಎಲ್ಲಾ ಹಣ ವಾಪಸ್; ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್​ಸಿಬಿ

ಕೆಲವು ದಿನಗಳ ಹಿಂದೆ, ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಬಗ್ಗೆ ಅವರು, ‘ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ರೋಫಿ ಗೆಲ್ಲುವ ಕನಸು ಶೀಘ್ರದಲ್ಲೇ ನನಸಾಗಬಹುದು ಆದರೆ ಈ ಸೀಸನ್‌ನಲ್ಲಿ ಆ ಕನಸು ನನಸಾಗದಿರಲಿ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದರು. ರಾಯುಡು ಅವರ ಹೇಳಿಕೆಗೆ ಆರ್‌ಸಿಬಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೊಹ್ಲಿ ಪರ ಬ್ಯಾಟ್ ಬೀಸಿರುವ ರಾಯುಡು ಮೇಲೆ ಆರ್​ಸಿಬಿ ಅಭಿಮಾನಿಗಳು ಕೊಂಚ ಕೋಪ ಕಡಿಮೆ ಮಾಡಿಕೊಳ್ಳಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 pm, Sat, 10 May 25