
ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 13ನೇ ಸೀಸನ್ನಲ್ಲಿ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಮೈಕಾ ಕಿಂಗ್ಸ್‌ಮೆನ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿದಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಮೈಕಾ ಕಿಂಗ್ಸ್‌ಮೆನ್ ತಂಡಕ್ಕೆ ಆರಂಭಿಕ ಆಟಗಾರ ಮಾಝ್ ಸದಾಕತ್ ಸ್ಫೋಟಕ ಆರಂಭ ಒದಗಿಸಿದ್ದರು. ಅಲ್ಲದೆ ಕೇವಲ 58 ಎಸೆತಗಳನ್ನು ಎದುರಿಸಿದ ಸದಾಕತ್ 8 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ 114 ರನ್ ಚಚ್ಚಿದರು. ಇದು ಸಿಪಿಎಲ್ ಫೈನಲ್ ಇತಿಹಾಸದಲ್ಲೇ ದಾಖಲಾದ ಮೊದಲ ಶತಕ ಎಂಬುದು ವಿಶೇಷ.
ಮಾಝ್ ಬಳಿಕ ಸೈಮ್ ಅಯೂಬ್ (29) ಮಾತ್ರ ಎರಡಂಕಿ ದಾಟಲು ಯಶಸ್ವಿಯಾದರು. ಆದರೆ ಉಳಿದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಜಮೈಕಾ ಕಿಂಗ್ಸ್‌ಮೆನ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಪಾಕಿಸ್ತಾನದ ಯುವ ಲೆಗ್ ಸ್ಪಿನ್ನರ್ ಸುಫ್ಯಾನ್ ಮುಖೀಮ್ ಕೇವಲ 14 ರನ್ ನೀಡಿ 4 ಪ್ರಮುಖ ವಿಕೆಟ್ ಉರುಳಿಸಿದರು. ಇನ್ನು ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರು.
171 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ರಹಕೀಮ್ ಕಾರ್ನ್‌ವಾಲ್ (6 ಎಸೆತಗಳಲ್ಲಿ 20 ರನ್) ಬಿರುಸಿನ ಆರಂಭ ಒದಗಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಎವಿನ್ ಲೆವಿಸ್ 38 ರನ್ ಗಳಿಸಿ ಔಟಾದರೆ, ಆ ಬಳಿಕ ಜೊತೆಯಾದ ಅಮೀರ್ ಜಂಗೂ ಮತ್ತು ಹಸನ್ ನವಾಝ್ ಜಮೈಕಾ ಕಿಂಗ್ಸ್‌ಮೆನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ಅಮೀರ್ ಜಂಗೂ (57) ಮತ್ತು ಹಸನ್ ನವಾಝ್ (47) ಮೂರನೇ ವಿಕೆಟ್‌ಗೆ ಮುರಿಯದ 89 ರನ್‌ಗಳ ಜೊತೆಯಾಟವಾಡುವ ಮೂಲಕ 16.4 ಓವರ್‌ಗಳಲ್ಲೇ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪ್ಲೇಯಿಂಗ್ 11: ರಹಕೀಮ್ ಕಾರ್ನ್‌ವಾಲ್ , ಎವಿನ್ ಲೆವಿಸ್ , ಅಮೀರ್ ಜಂಗೂ (ವಿಕೆಟ್ ಕೀಪರ್) , ಹಸನ್ ನವಾಝ್ , ಮೊಯಿನ್ ಅಲಿ (ನಾಯಕ) , ಶಾದಾಬ್ ಖಾನ್ , ಜೋಶುವಾ ಜೇಮ್ಸ್ , ಸುಫ್ಯಾನ್ ಮುಖೀಮ್ , ಅಲ್ಜಾರಿ ಜೋಸೆಫ್ , ಜೇಡೆನ್ ಸೀಲ್ಸ್ , ಶಮರ್ ಸ್ಪ್ರಿಂಗರ್.
ಇದನ್ನೂ ಓದಿ: ಸೆಂಚುರಿ ಮೇಲೆ ಸೆಂಚುರಿ: ಹೊಸ ಇತಿಹಾಸ ಬರೆದ ಮಾಝ್ ಸದಾಕತ್!
ಜಮೈಕಾ ಕಿಂಗ್ಸ್‌ಮೆನ್ ಪ್ಲೇಯಿಂಗ್ 11: ಮಾಝ್ ಸದಾಕತ್ , ಕಿರ್ಕ್ ಮೆಕೆಂಜಿ , ಕೀಸಿ ಕಾರ್ಟಿ , ಸೈಮ್ ಅಯೂಬ್ , ರೋವ್‌ಮನ್ ಪೊವೆಲ್ (ನಾಯಕ) , ಆ್ಯಂಡ್ರೆ ರಸೆಲ್ , ಹಸನ್ ಖಾನ್ , ರೊಮೈನ್ ಮಾರಿಸ್ (ವಿಕೆಟ್ ಕೀಪರ್ ) ಕೀಮೊ ಪೌಲ್ ,
ವಿಟೆಲ್ ಲಾವೆಸ್ , ಹುನೈನ್ ಶಾ.