ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ವೈಫಲ್ಯಗಳನ್ನೇ ಎದುರಿಸಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಇದೀಗ ಲಯ ಕಂಡುಕೊಂಡಿದ್ದಾರೆ. ಗೋವಾ ಪರ ಕಣಕ್ಕಿಳಿದಿರುವ ಅರ್ಜುನ್, ಅರುಣಾಚಲ ಪ್ರದೇಶದ ವಿರುದ್ಧ ಅದ್ಭುತ ಪ್ರದರ್ಶನ ನೀಡಿ, ರಣಜಿಯಲ್ಲಿ ಇದೇ ಮೊದಲ ಬಾರಿಗೆ ಐದು ವಿಕೆಟ್ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಮ್ಯಾಜಿಕಲ್ ಸ್ಪೆಲ್ ಮಾಡಿದ ಅರ್ಜುನ್, ಕೇವಲ 9 ಓವರ್ಗಳಲ್ಲಿ 25 ರನ್ ನೀಡಿ 5 ವಿಕೆಟ್ಗಳನ್ನು ಪಡೆದರು. ತಮ್ಮ 17ನೇ ಪ್ರಥಮ ದರ್ಜೆ ಪಂದ್ಯವನ್ನು ಆಡುತ್ತಿರುವ ಅರ್ಜುನ್ ಅವರ ಮಾರಕ ದಾಳಿಯ ನೆರವಿನಿಂದ ಗೋವಾ ತಂಡ, ಅರುಣಾಚಲ ಪ್ರದೇಶವನ್ನು ಕೇವಲ 84 ರನ್ಗಳಿಗೆ ಆಲೌಟ್ ಮಾಡಿದೆ.
ರಣಜಿ ಟ್ರೋಫಿಯ 5ನೇ ಸುತ್ತಿನ ಪಂದ್ಯಗಳು ಶುರುವಾಗಿದ್ದು, ನವೆಂಬರ್ 13 ಬುಧವಾರದಂದು ಗೋವಾ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯ ಆರಂಭವಾಗಿದೆ. ಗೋವಾ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಅರುಣಾಚಲ ಪ್ರದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಅರುಣಾಚಲ ಪ್ರದೇಶ ತಂಡದ ಆಯ್ಕೆಯನ್ನು ತಪ್ಪು ಎಂದು ಸಾಭೀತುಪಡಿಸಿದ ಅರ್ಜುನ್ ತೆಂಡೂಲ್ಕರ್, ಬ್ಯಾಟ್ಸ್ಮನ್ಗಳನ್ನು ಹೆಡೆಮುರಿ ಕಟ್ಟಿದರು. ಅರ್ಜುನ್, ಎರಡನೇ ಓವರ್ನಲ್ಲಿಯೇ ಆರಂಭಿಕ ಬ್ಯಾಟ್ಸ್ಮನ್ ನೀಬಾಮ್ ಹಚಾಂಗ್ ಅವರನ್ನು ಔಟ್ ಮಾಡುವ ಮೂಲಕ ಅರುಣಾಚಲ ಪ್ರದೇಶಕ್ಕೆ ಮೊದಲ ಹೊಡೆತ ನೀಡಿದರು.
ಸ್ವಲ್ಪ ಸಮಯದ ನಂತರ ಮತ್ತೆ ದಾಳಿಗಿಳಿದ ಅರ್ಜುನ್, ನೀಲಂ ಓಬಿಯನ್ನು ಮತ್ತು ಜೈ ಭಾವಸರ್ ಅವರನ್ನು ಪೆವಿಲಿಯನ್ಗಟ್ಟಿದರು. ಇದಾದ ಬಳಿಕ ಚಿನ್ಮಯ್ ಪಾಟೀಲ್, ಮೋಜಿ ಅಟೆ ಅವರ ಬಲಿ ಪಡೆದು 5ನೇ ವಿಕೆಟ್ ಪೂರೈಸಿದರು. ಅರ್ಜುನ್ ಅವರ ಈ ವಿಕೆಟ್ಗಳ ಭೇಟೆಯ ವಿಶೇಷವೆಂದರೆ, ಅವರು ಪಡೆದು ಐದು ವಿಕೆಟ್ಗಳು ಮೊದಲ ಐವರು ಬ್ಯಾಟ್ಸ್ಮನ್ಗಳದ್ದಾಗಿದ್ದವು. ಅದರಲ್ಲೂ ಕೇವಲ 36 ರನ್ಗಳಲ್ಲಿ ಔಟ್ ಮಾಡುವ ಮೂಲಕ ಅರುಣಾಚಲ ಪ್ರದೇಶಕ್ಕೆ ಆರಂಭಿಕ ಆಘಾತ ನೀಡಿದರು. ಇದರ ಫಲವಾಗಿ ಅರುಣಾಚಲ ಪ್ರದೇಶ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 84 ರನ್ ಗಳಿಸಲಷ್ಟೇ ಶಕ್ತವಾಯಿತು.
ಅರ್ಜುನ್ ಇದಕ್ಕೂ ಮುನ್ನ 16 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 32 ವಿಕೆಟ್ಗಳನ್ನು ಉರುಳಿಸಿದ್ದರು. ಈ ಅವಧಿಯಲ್ಲಿ 49 ರನ್ಗಳಿಗೆ 4 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಈ ವೇಳೆ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡಿರುವ ಅವರು 16 ಪಂದ್ಯಗಳಲ್ಲಿ 23 ರ ಸರಾಸರಿಯಲ್ಲಿ 531 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 2 ಅರ್ಧ ಶತಕಗಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Wed, 13 November 24