ಬಿಸಿಸಿಐಗೆ ಬಳೆ ತೊಡಿಸಿ: ಪಾಕ್ ಕ್ರಿಕೆಟಿಗನಿಂದ ನಿಂದನೆ..!
Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಅದರಂತೆ ಭಾರತ, ಪಾಕಿಸ್ತಾನ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಇಂಗ್ಲೆಂಡ್, ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಲಿದೆ. ಇನ್ನು 2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೈಯಲ್ಲಿದ್ದು, ಹೀಗಾಗಿ ಭಾರತ ತಂಡ ಪಾಕ್ಗೆ ತೆರಳಲು ಹಿಂದೇಟು ಹಾಕಿದೆ.
2025ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿದೆ. ಈ ಟೂರ್ನಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರವನ್ನು ಪ್ರಕಟಿಸಿದಾಗಿನಿಂದ, ಹೊಸ ಚರ್ಚೆ ಶುರುವಾಗಿದೆ. ಈ ಚರ್ಚೆಯ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಎಲ್ಲಾ ಮಿತಿಗಳನ್ನು ದಾಟಿ ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ.
ತನ್ವೀರ್ ಅಹಮದ್ ಹೇಳಿದ್ದೇನು?
ಕಳೆದ ಕೆಲವು ದಿನಗಳಿಂದ ಭಾರತ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಸಿಸಿಐ ನೀವು ಬಳೆಗಳನ್ನು ಧರಿಸುವುದು ಉತ್ತಮ ಎಂದು ತನ್ವೀರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇಷ್ಟಕ್ಕೇ ನಿಲ್ಲದೆ ಭಾರತೀಯ ಕ್ರಿಕೆಟ್ ಮಂಡಳಿಗೆ ಸುಳ್ಳುಗಾರ, ಕೊಳಕು, ದುಷ್ಟ, ದ್ವಂದ್ವ ನೀತಿಯಂತಹ ಆಕ್ಷೇಪಾರ್ಹ ಪದಗಳನ್ನೂ ಬಳಸಿದ್ದಾರೆ. ಬಿಸಿಸಿಐ ಅನ್ನು ನಂಬುವ ಬದಲು ಮೋಸ ಮಾಡದ ಕತ್ತೆಯನ್ನು ನಂಬುವುದು ಉತ್ತಮ ಎಂದು ತನ್ವೀರ್ ಹೇಳಿದ್ದಾರೆ.
ಐಸಿಸಿ ಅಂಗಳದಲ್ಲಿ ಚಾಂಪಿಯನ್ಸ್ ಟ್ರೋಫಿ ಚೆಂಡು:
ಬಿಸಿಸಿಐ ನಿರ್ಧಾರದ ನಂತರ, ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು ಯಾವುದೇ ಪಂದ್ಯಾವಳಿಯಲ್ಲಿ ಭಾರತದ ಜೊತೆ ಆಡುವುದಿಲ್ಲ ಎಂದು ಬೆದರಿಕೆಯೊಡ್ಡಿದೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಆತಿಥ್ಯವನ್ನು ಕಸಿದುಕೊಂಡರೆ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ತಿಳಿಸಿದೆ.
ಈ ಬಗ್ಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನವೆಂಬರ್ 12, ಮಂಗಳವಾರ ಐಸಿಸಿಗೆ ಇಮೇಲ್ ಕಳುಹಿಸಲಾಗಿದ್ದು, ಅದರಲ್ಲಿ ಟೀಮ್ ಇಂಡಿಯಾವನ್ನು ಕಳುಹಿಸದಿರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸ್ಪಷ್ಟ ಕಾರಣಗಳನ್ನು ನೀಡುವಂತೆ ಒತ್ತಾಯಿಸಲಾಗಿದೆ. ಅದೇ ಸಮಯದಲ್ಲಿ, ಐಸಿಸಿ ಎಲ್ಲಾ ತಂಡಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದು, ಪಂದ್ಯಾವಳಿಯ ವೇಳಾಪಟ್ಟಿಯ ಬಗ್ಗೆ ಕೂಡ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಅಂದರೆ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಅಂತಿಮ ನಿರ್ಧಾರ ಇದೀಗ ಐಸಿಸಿ ಮುಂದಿದ್ದು, ಒಂದು ವೇಳೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಸಿದ್ಧವಿಲ್ಲದರೆ, ಚಾಂಪಿಯನ್ಸ್ ಟ್ರೋಫಿಯು ಸೌತ್ ಆಫ್ರಿಕಾಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ.