ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಗೆ ಬಂಧನದ ಭೀತಿ

Arjuna Ranatunga: ಅರ್ಜುನ ರಣತುಂಗ ಶ್ರೀಲಂಕಾ ಕ್ರಿಕೆಟ್ ಕಂಡಂತಹ ಶ್ರೇಷ್ಠ ನಾಯಕ. ಲಂಕಾ ಪರ 93 ಟೆಸ್ಟ್ ಮತ್ತು 293 ಏಕದಿನ ಪಂದ್ಯಗಳನ್ನಾಡಿರುವ ಅವರು 10,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.  ಅಲ್ಲದೆ ಅರ್ಜುನ ರಣತುಂಗ ಅವರ ನಾಯಕತ್ವದಲ್ಲಿ ಶ್ರೀಲಂಕಾ ತಂಡವು ಚೊಚ್ಚಲ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು.

ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಗೆ ಬಂಧನದ ಭೀತಿ
Arjuna Ranatunga

Updated on: Dec 16, 2025 | 8:53 AM

1996 ರ ಏಕದಿನ ವಿಶ್ವಕಪ್‌ ಚಾಂಪಿಯನ್ ಶ್ರೀಲಂಕಾ ತಂಡದ ನಾಯಕ ಅರ್ಜುನ ರಣತುಂಗಗೆ ಬಂಧನದ ಭೀತಿ ಎದುರಾಗಿದೆ. 2017 ರಲ್ಲಿ ಶ್ರೀಲಂಕಾ ಸರ್ಕಾರದಲ್ಲಿ ಸಚಿವರಾಗಿದ್ದ ರಣತುಂಬ ಕಚ್ಚಾ ತೈಲ ಖರೀದಿಯಲ್ಲಿ ಭ್ರಷ್ಟಾಚಾರ ಎಸೆಗಿರುವುದು ಸಾಬೀತಾಗಿದ್ದು, ಹೀಗಾಗಿ ಅವರ ಬಂಧನಕ್ಕೆ ಲಂಕಾ ಸರ್ಕಾರ ಮುಂದಾಗಿದೆ.

ಎಂಟು ವರ್ಷಗಳ ಹಿಂದೆ ಅರ್ಜುನ ರಣತುಂಗ ಶ್ರೀಲಂಕಾ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಸರ್ಕಾರಿ ಸಂಸ್ಥೆಯಾದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ಕಚ್ಚಾ ತೈಲ ಖರೀದಿಯ ಟೆಂಡರ್​ನಲ್ಲಿ ಲಂಚ ಹಾಗು ಭ್ರಷ್ಟಾಚಾರ ನಡೆಸಿರುವುದು ತನಿಖೆಯಲ್ಲಿ ಕಂಡು ಬಂದಿದೆ.

ಅರ್ಜುನ ರಣತುಂಗ ಅವರ ಜೊತೆಗೆ, ಅವರ ಹಿರಿಯ ಸಹೋದರ ದಮ್ಮಿಕಾ ಕೂಡ ಈ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ರಣತುಂಗ ಸಚಿವರಾಗಿದ್ದ ವೇಳೆ ದಮ್ಮಿಕಾ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್‌ನ ಅಧ್ಯಕ್ಷರಾಗಿದ್ದರು. ಡಿಸೆಂಬರ್ 15 ರಂದು, ಪೊಲೀಸರು ರಣತುಂಗ ಅವರ ಹಿರಿಯ ಸಹೋದರ ದಮ್ಮಿಕಾ ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ಬಂಧಿಸಿ ಜೈಲಿಗೆ ಕಳುಹಿಸಿದರು. ಆದಾಗ್ಯೂ, ನಂತರ ಅವರಿಗೆ ಜಾಮೀನು ನೀಡಲಾಯಿತು.

ಅಮೆರಿಕ ಹಾಗೂ ಶ್ರೀಲಂಕಾ ಪೌರತ್ವ ಹೊಂದಿರುವ ದಮ್ಮಿಕಾ ಅವರಿಗೆ ಮ್ಯಾಜಿಸ್ಟ್ರೇಟ್ ತಾತ್ಕಾಲಿಕವಾಗಿ ಪ್ರಯಾಣ ನಿಷೇಧ ಹೇರಿದ್ದಾರ., ಅಂದರೆ ನ್ಯಾಯಾಲಯದ ಆದೇಶವಿಲ್ಲದೆ ಅವರು ಎಲ್ಲಿಗೂ ಪ್ರಯಾಣಿಸುವಂತಿಲ್ಲ.

800 ಮಿಲಿಯನ್ ಶ್ರೀಲಂಕನ್ ರೂ. ನಷ್ಟ:

ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್‌ಗೆ ಕಚ್ಚಾ ತೈಲ ಖರೀದಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿನ ಲಂಚ ಹಾಗು ಭ್ರಷ್ಟಾಚಾರದಿಂದಾಗಿ ಸಿಪಿಸಿಗೆ 800 ಮಿಲಿಯನ್ ಶ್ರೀಲಂಕಾ ರೂಪಾಯಿ ನಷ್ಟವಾಗಿದೆ ಎಂದು ಭ್ರಷ್ಟಾಚಾರ ತನಿಖಾ ಆಯೋಗ ಹೇಳಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ಆಯೋಗವು ಕೊಲಂಬೊದ ಮ್ಯಾಜಿಸ್ಟ್ರೇಟ್‌ಗೆ ತಿಳಿಸಿದ್ದು, ದಮ್ಮಿಕಾ ಅವರ ಕಿರಿಯ ಸಹೋದರ ಅರ್ಜುನ ರಣತುಂಗ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದು, ಪ್ರಸ್ತುತ ದೇಶದಿಂದ ಹೊರಗಿದ್ದಾರೆ. ಅವರು ಹಿಂದಿರುಗಿದ ನಂತರವೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದೆ.

ಅರ್ಜುನ ರಣತುಂಗ ಮತ್ತು ಅವರ ಸಹೋದರನ ವಿರುದ್ಧ ನಡೆಯುತ್ತಿರುವ ಪ್ರಕರಣವು ಪ್ರಸ್ತುತ ಸರ್ಕಾರ ನಡೆಸಿದ ತನಿಖೆಯ ಫಲಿತಾಂಶವಾಗಿದೆ.  2024 ರಲ್ಲಿ ಶ್ರೀಲಂಕಾದಲ್ಲಿ ಅನುರ ಕುಮಾರ ದಿಸಾನಾಯಕ ನೇತೃತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಲಲಾಗಿದೆ. ಈ ಸರ್ಕಾರ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ ದೇಶದ ಜನರಿಗೆ ಭರವಸೆ ನೀಡಿದ್ದು, ಅದರಂತೆ ಇದೀಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದೆ.

ಇದನ್ನೂ ಓದಿ: ಐಪಿಎಲ್ ಹೊಸ ನಿಯಮ: 25 ಕೋಟಿಗೆ ಖರೀದಿಸಿದರೂ ಸಿಗುವುದು 18 ಕೋಟಿ ರೂ.

ಅರ್ಜುನ ರಣತುಂಗ ಅವರ ಕ್ರಿಕೆಟ್ ವೃತ್ತಿಜೀವನ:

ಅರ್ಜುನ ರಣತುಂಗ ಶ್ರೀಲಂಕಾ ಕ್ರಿಕೆಟ್ ಕಂಡಂತಹ ಶ್ರೇಷ್ಠ ನಾಯಕ. ಲಂಕಾ ಪರ 93 ಟೆಸ್ಟ್ ಮತ್ತು 293 ಏಕದಿನ ಪಂದ್ಯಗಳನ್ನಾಡಿರುವ ಅವರು 10,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.  ಅಲ್ಲದೆ ಅರ್ಜುನ ರಣತುಂಗ ಅವರ ನಾಯಕತ್ವದಲ್ಲಿ ಶ್ರೀಲಂಕಾ ತಂಡವು ಚೊಚ್ಚಲ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. ಹೀಗೆ ಹಲವು ರೀತಿಯಲ್ಲಿ ಲಂಕನ್ನರ ಪಾಲಿಗೆ ಹೀರೋ ಆಗಿದ್ದ ಅರ್ಜುನ ರಣತುಂಬ ಇದೀಗ ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದಾರೆ.