
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2025 (IPL 2025) ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಆರು ರನ್‌ಗಳಿಂದ ಮಣಿಸಿ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿತ್ತು. ಆರ್‌ಸಿಬಿ ಚಾಂಪಿಯನ್ ಆಗುತ್ತಿದ್ದಂತೆ ದೇಶದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಅದರಲ್ಲೂ ಆರ್‌ಸಿಬಿ ತವರಾದ ಕರ್ನಾಟಕದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕೋಟ್ಯಾಂತರ ಅಭಿಮಾನಿಗಳು ರಸ್ತೆಗಿಳಿದು ಸಂಭ್ರಮಿಸಿದ್ದರು. ಇತ್ತ ಆರ್‌ಸಿಬಿ ಕೂಡ ಅಭಿಮಾನಿಗಳನ್ನು ಇನ್ನಷ್ಟು ರಂಜಿಸಲು ಮೆರವಣಿಗೆಯ ಕಾರ್ಯಕ್ರಮ ಕೂಡ ಹಮ್ಮಿಕೊಂಡಿತ್ತು. ಆದರೆ ಮೆರವಣಿಗೆ ನಡೆಯುವುದಕ್ಕೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ 11 ಅಮಾಯಕರು ಸಾವನ್ನಪ್ಪಿದರು. ಸರ್ಕಾರ ಕೂಡ ಹಲವರ ವಿರುದ್ಧ ಕ್ರಮ ಕೈಗೊಂಡಿದೆ. ಇದೆಲ್ಲದರ ನಡುವೆ #ArrestKohli ಹ್ಯಾಶ್‌ಟ್ಯಾಗ್ ಕಳೆದ 24 ಗಂಟೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ.
ಜೂನ್ 4 ರಂದು ನಡೆದ ಈ ಘಟನೆಯ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈ ಅವಘಡದಲ್ಲಿ ಕೊಹ್ಲಿಯ ಪಾತ್ರವಿಲ್ಲದಿದ್ದರೂ, ಒಂದು ರೀತಿಯಲ್ಲಿ ಕೊಹ್ಲಿ ಕೂಡ ಈ ದುರಂತಕ್ಕೆ ಕಾರಣ ಎಂಬುದು ಕೆಲವರ ಅಭಿಪ್ರಾಯ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿಯ ಬಂಧನಕ್ಕೆ ಒತ್ತಾಯ ಜೋರಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ #ArrestKohli ಟ್ರೆಂಡ್ ಆಗುತ್ತಿದೆ.
ಮೇಲೆ ಹೇಳಿದಂತೆ ವಿರಾಟ್ ಕೊಹ್ಲಿಯಿಂದಾಗಿ ಈ ಕಾಲ್ತುಳಿತ ಸಂಭವಿಸಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಹೀಗಾಗಿ ಕೊಹ್ಲಿ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸಹ ಬಂಧಿಸಬೇಕು ಒಂದು ಒತ್ತಾಯಿಸಲಾಗುತ್ತಿದೆ. ಅವಘಡ ನಡೆದ ಮಾರನೇ ದಿನವೇ ವಿರಾಟ್ ಕೊಹ್ಲಿ ಮುಂಬೈಗೆ ಮರಳಿದರು. ಅದರ ಬದಲು ವಿರಾಟ್ ಕೊಹ್ಲಿ ಸಂತ್ರಸ್ಥರ ಕುಟುಂಬಗಳನ್ನು ಭೇಟಿ ಮಾಡಬೇಕಿತ್ತು. ಮೃತರ ಕುಟುಂಬಗಳಿಗೆ ನೆರವಾಗಬೇಕಿತ್ತು ಎಂಬುದು ಕೆಲವರ ವಾದವಾಗಿದೆ. ಹೀಗಾಗಿಯೇ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ #ArrestKohli ಅನ್ನು ಟ್ರೆಂಡ್ ಮಾಡುತ್ತಿದ್ದಾರೆ.
Virat Kohli: ಭಾರದ ಮನಸ್ಸಿನಲ್ಲಿ ಬೆಂಗಳೂರು ತೊರೆದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ
ಇದು ಮಾತ್ರವಲ್ಲದೆ ಈ ದುರಂತಕ್ಕೆ ವಿರಾಟ್ ಕೊಹ್ಲಿಯೂ ಕಾರಣರೆಂದು ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಆರೋಪ ಹೊರಿಸುತ್ತಿದ್ದು,ಇದೀಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೊಹ್ಲಿ ವಿರುದ್ಧವೂ ದೂರು ದಾಖಲಾಗಿದೆ. ಈಗಾಗಲೇ ಆರ್‌ಸಿಬಿ ವಿರುದ್ದ ದಾಖಲಾಗಿರುವ ಎಫ್ಐಆರ್ ಜೊತೆಗೆ ಕೊಹ್ಲಿ ವಿರುದ್ಧದ ದೂರನ್ನು ಪರಿಗಣಿಸುವುದಾಗಿ ಕಬ್ಬನ್ ಪಾರ್ಕ್ ಪೊಲೀಸರು ಹಿಂಬರಹ ನೀಡಿದ್ದಾರೆ.
ಈಗಾಗಲೇ ಈ ದುರಂತಕ್ಕೆ ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೆ ಆರ್‌ಸಿಬಿ ಫ್ರಾಂಚೈಸಿಯ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ಅಲ್ಲದೆ ರಾಜ್ಯ ಪೊಲೀಸ್ ಇಲಾಖೆಯಲ್ಲೂ ಕೆಲವರ ತಲೆದಂಡವಾಗಿದೆ. ರಾಜ್ಯ ಸರ್ಕಾರ ಕೂಡ ಮಡಿದವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಕೆಎಸ್ಸಿಎ ಹಾಗೂ ಆರ್‌ಸಿಬಿ ಫ್ರಾಂಚೈಸಿ ಕೂಡ ಪರಿಹಾರ ಘೋಷಿಸಿದ್ದು, ಗಾಯಾಳುಗಳ ನೆರವಿಗೆ ನಿಲ್ಲುವುದಾಗಿ ತಿಳಿಸಿದೆ. ಇದೆಲ್ಲದರ ನಡುವೆ ಕೊಹ್ಲಿಯನ್ನು ಬಂಧಿಸುವಂತೆ ಒತ್ತಾಯಿಸುತ್ತಿರುವುದು ಮುಂದಿನ ದಿನಗಳಲ್ಲಿ ಯಾವ ರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ