ಲೋಕಲ್ ಕ್ರಿಕೆಟ್​ಗೆ ‘ವೇದಿಕೆ’ ನಿರ್ಮಿಸುವ ಪಿಚ್ ಮಲ್ಲೇಶ್​ರ ಶ್ರಮ ಮತ್ತು ಸವಾಲು

|

Updated on: Jul 19, 2024 | 12:36 PM

ಕ್ರಿಕೆಟ್ ಪಂದ್ಯ ಎಲ್ಲಿಯೇ ನಡೆಯಲಿ ಪಿಚ್ ಇಲ್ಲದೆ ಆಟ ನಡೆಯಲು ಸಾಧ್ಯವೇ ಇಲ್ಲ. ಭಾರತದಲ್ಲಿ ಕ್ರಿಕೆಟ್ ಎಂಬುದು ಧರ್ಮವೇ ಆಗಿಬಿಟ್ಟಿದೆ. ಭಾರತದ ಮೂಲೆ-ಮೂಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತವೆ. ಮೊದಲೆಲ್ಲ ಇಂಥಹಾ ಟೂರ್ನಿಗಳ ಪಿಚ್​ನ ಗುಣಮಟ್ಟದ ಬಗ್ಗೆ ಹೆಚ್ಚು ತಲೆಕೆಡೆಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪಿಚ್ ಕ್ಯುರೇಟರ್​ಗಳನ್ನು ಕರೆಸಿ ಗುಣಮಟ್ಟದ ಪಿಚ್ ತಯಾರಿಸಿಕೊಳ್ಳಲಾಗುತ್ತಿದೆ. ಅಂಥಹಾ ಪಿಚ್ ಕ್ಯುರೇಟರ್ ಒಬ್ಬರ ಪರಿಚಯ, ಅವರ ಕೆಲಸದ ವಿಧಾನ, ಶ್ರಮ, ಸವಾಲುಗಳು ಇನ್ನಿತರೆ ಮಾಹಿತಿ ಇಲ್ಲಿದೆ.

ಲೋಕಲ್ ಕ್ರಿಕೆಟ್​ಗೆ ‘ವೇದಿಕೆ’ ನಿರ್ಮಿಸುವ ಪಿಚ್ ಮಲ್ಲೇಶ್​ರ ಶ್ರಮ ಮತ್ತು ಸವಾಲು
Follow us on

ಇತ್ತೀಚೆಗಷ್ಟೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿತು. ಕಪ್ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಪಂದ್ಯ ನಡೆದ ವೆಸ್ಟ್ ಇಂಡೀಸ್​ನ ಬಾರ್ಬಡೋಸ್ ಕ್ರೀಡಾಂಗಣದ ಪಿಚ್​ ಬದಿ ಕುಳಿತು ಪಿಚ್​ನ ಮಣ್ಣನ್ನು ಬಾಯಿಗೆ ಹಾಕಿಕೊಂಡು ಸಂಭ್ರಮಿಸಿದರು. ಅದಾದ ಬಳಿ ಪ್ರಧಾನಿ ಮೋದಿವರೊಂದಿಗಿನ ಅಭಿನಂದನಾ ಸಭೆಯಲ್ಲಿಯೂ ರೋಹಿತ್ ಶರ್ಮಾ, ಬಾರ್ಬೊಡೋಸ್​ನ ಪಿಚ್​ನ ಬಗ್ಗೆ ಮಾತನಾಡಿದರು. 2011 ರಲ್ಲಿ ಭಾರತ ತಂಡ ವಾಂಖಡೆಯಲ್ಲಿ ವಿಶ್ವಕಪ್ ಗೆದ್ದಾಗಲೂ ಸಹ ಭಾರತ ತಂಡ ಪಿಚ್ ಕ್ಯುರೇಟರ್​ಗಳನ್ನು ಅಪ್ಪಿಕೊಂಡು ಸಂಭ್ರಮಿಸಿತ್ತು. ಬಿಸಿಸಿಐ, ವಾಂಖಡೆ ಪಿಚ್​ ಸಿದ್ಧ ಪಡಿಸಿದ್ದ ಕ್ಯುರೇಟರ್ ಹಾಗೂ ಸಹಾಯಕ ಸಿಬ್ಬಂದಿಗೆ ನಗದು ಪ್ರಶಸ್ತಿಗಳನ್ನು ಘೋಷಿಸಿತ್ತು. ಒಂದು ಕ್ರಿಕೆಟ್ ಪಂದ್ಯಕ್ಕೆ ಪಿಚ್ ಅದೆಷ್ಟು ಅವಶ್ಯಕ ಎಂಬುದಕ್ಕೆ ಈ ಎರಡು ಉದಾಹರಣೆಗಳು ಸಾಕ್ಷಿ.

ಕ್ರಿಕೆಟ್ ಪಂದ್ಯ ಎಲ್ಲಿಯೇ ನಡೆಯಲಿ ಪಿಚ್ ಇಲ್ಲದೆ ಆಟ ನಡೆಯಲು ಸಾಧ್ಯವೇ ಇಲ್ಲ. ಭಾರತದಲ್ಲಿ ಕ್ರಿಕೆಟ್ ಎಂಬುದು ಧರ್ಮವೇ ಆಗಿಬಿಟ್ಟಿದೆ. ಭಾರತದ ಮೂಲೆ-ಮೂಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತವೆ. ಈ ಯೂಟ್ಯೂಬ್ ಕಾಲದಲ್ಲಿ ಸ್ಥಳೀಯ ಟೂರ್ನಮೆಂಟ್​ಗಳನ್ನೂ ಲೈವ್ ಮಾಡಲಾಗುತ್ತಿದೆ, ಅವಕ್ಕೆ ಲಕ್ಷಾಂತರ ವೀವ್ಸ್ ದೊರೆಯುತ್ತಿವೆ. ಲಕ್ಷಾಂತರ ರೂಪಾಯಿ ಬಹುಮಾನವಿಟ್ಟು ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲ ಊರುಗಳಲ್ಲಿಯೂ ಅಚ್ಚುಕಟ್ಟಾದ ಮೈದಾನಗಳು ಇರುವುದಿಲ್ಲ. ಬಹುತೇಕ ಊರುಗಳಲ್ಲಿ ಪಂದ್ಯಾವಳಿಗಳು ಒಣಗಿದ ಕೆರೆಯಲ್ಲಿಯೋ, ಖಾಲಿ ಬಿಟ್ಟಿರುವ ಜಮೀನುಗಳಲ್ಲಿಯೋ ನಡೆಯುತ್ತವೆ. ಮೊದಲೆಲ್ಲ ಇಂಥಹಾ ಟೂರ್ನಿಗಳ ಪಿಚ್​ಗಳಿಗೆ ಅಷ್ಟೋಂದು ಪ್ರಾಧಾನ್ಯತೆ ನೀಡಲಾಗುತ್ತಿರಲಿಲ್ಲ. ಆಟಗಾರರೆ ಪೊರಕೆ ಹಿಡಿದು ಗುಡಿಸಿ ಅದನ್ನೇ ಪಿಚ್ ಎಂದು ಕರೆದು ಆಟವಾಡುತ್ತಿದ್ದರು. ಆದರೆ ಈಗ ಇಂಥಹಾ ಸ್ಥಳೀಯ ಟೂರ್ನಮೆಂಟ್​ಗಳಿಗೂ ಪಿಚ್​ ತಯಾರು ಮಾಡಿಕೊಡುವ ಕ್ಯುರೇಟರ್​ಗಳು ಇದ್ದಾರೆ. ಅವರು ಇಂಥಹಾ ಲೋಕಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಸೂಕ್ತ ಪಿಚ್​ಗಳನ್ನು ತಯಾರು ಮಾಡಿಕೊಡುತ್ತಾರೆ. ಅಂಥಹವರಲ್ಲಿ ಪಿಚ್ ಮಲ್ಲೇಶ್ ಮೊದಲಿಗರು.

ಹಾಸನದ ಅರಸಿಕೆರೆಯ ಮಲ್ಲೇಶ್ 2009 ರಿಂದಲೂ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳಿಗೆ ಪಿಚ್​ಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ. ಹತ್ತನೇ ತರಗತಿಯಷ್ಟೆ ಮುಗಿಸಿರುವ ಮಲ್ಲೇಶ್​ಗೆ ಕ್ರಿಕೆಟ್ ಎಂದರೆ ಪಂಚ ಪ್ರಾಣ. ಅವರ ಈ ಕ್ರಿಕೆಟ್ ಪ್ರೀತಿಯೇ ಅವರನ್ನು ಪಿಚ್ ನಿರ್ಮಾಣದತ್ತ ಸೆಳೆದಿರುವುದು. ಅರಸಿಕೆರೆಯಲ್ಲೊಮ್ಮೆ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆದಿತ್ತಂತೆ. ಅಲ್ಲಿ ವಾಲಿಬಾಲ್ ಕೋರ್ಟ್​ ನಿರ್ಮಾಣ ಮಾಡಲು ಸಂದೀಪ್ ಮಂಡೇಲ ಹೆಸರಿನ ಪರಿಣಿತರೊಬ್ಬರು ಬಂದಿದ್ದರಂತೆ. ಅವರಿಗೆ ಸಹಾಯಕನಾಗಿ ಮಲ್ಲೇಶ್ ದುಡಿದಿದ್ದರು. ಯಾವುದೇ ಹೊರಾಂಗಣ ಆಟಕ್ಕೆ ಅಂಕಣಗಳು ಎಷ್ಟು ಮಹತ್ವದ್ದು ಎಂದು ಅರಿತುಕೊಂಡ ಮಲ್ಲೇಶ್, ಪಿಚ್ ನಿರ್ಮಾಣದ ಕೆಲವು ಸೂಕ್ಷ್ಮಗಳನ್ನು ಅವರಿಂದಲೇ ಕಲಿತು, ಬಳಿಕ ಸ್ವಂತ ಅನುಭವವನ್ನೂ ಬಳಸಿ ಪಿಚ್ ನಿರ್ಮಾಣಕ್ಕೆ ಇಳಿದಿದ್ದಾರೆ.

ಪಿಚ್ ತಯಾರಿಯಲ್ಲಿ ನಿರತ ಮಲ್ಲೇಶ್

2009 ರಿಂದ ಇಲ್ಲಿವರೆಗೆ ಸುಮಾರು 2000 ಕ್ರಿಕೆಟ್ ಪಂದ್ಯಾವಳಿಗಳಿಗೆ ಉತ್ಕೃಷ್ಟ ಗುಣಮಟ್ಟದ ಪಿಚ್​ಗಳನ್ನು ನಿರ್ಮಾಣ ಮಾಡಿಕೊಟ್ಟಿರುವುದಾಗಿ ಮಲ್ಲೇಶ್ ಹೇಳುತ್ತಾರೆ. ಎಳೆವೆಯಿಂದಲೂ ಮಣ್ಣಿನೊಂದಿಗೆ ಸಂಬಂಧವುಳ್ಳ ಮಲ್ಲೇಶ್​ಗೆ ಮಣ್ಣಿನ ಗುಣ, ಅದರ ಬಳಕೆ ಬಗ್ಗೆ ಜ್ಞಾನವಿದೆ. ಜೊತೆಗೆ ಅನುಭವದಿಂದಲೂ ಸಾಕಷ್ಟು ಕಲಿತಿದ್ದಾರೆ. ಮೊದಲಿಗೆ ಪಿಚ್ ನಿರ್ಮಾಣಕ್ಕೆ ನಿಗದಿಯಾದ ಸ್ಥಳವನ್ನು ಅಳತೆ ಮಾಡಿಕೊಳ್ಳುತ್ತಾರೆ. ಬಳಿಕ ಎರಡು ಅಡಿಗಳಷ್ಟು ಆಳಕ್ಕೆ ಅಗೆದುಕೊಳ್ಳುತ್ತಾರೆ. ಅಗೆದ ಜಾಗವನ್ನು ಕೆಂಪು ಮಣ್ಣಿನಿಂದ (ಕೆಮ್ಮಣ್ಣು) ತುಂಬುತ್ತಾರೆ. ವೈಬ್ರೇಟರ್ ಬಳಸಿ ಗ್ಯಾಪ್​ ಬರದಂತೆ ಫಿಲ್ ಮಾಡುತ್ತಾರೆ. ಬಳಿಕ ಅದನ್ನು ಚೆನ್ನಾಗಿ ಹದ ಮಾಡುತ್ತಾರೆ. ಸಮತಟ್ಟು ಹಾಗೂ ಪಿಚ್​ಗೆ ಗಟ್ಟಿತನ ಬರಲೆಂದು ಹಲವು ಸುತ್ತು ರೋಲರ್​ನಿಂದ ರೋಲ್ ಮಾಡುತ್ತಾರೆ. ಅದಾದ ಬಳಿಕ ಒಣಗಲು ಬಿಟ್ಟು, ಮತ್ತೆ ಪಿಚ್​ನ ಮೇಲೆ ದೂಳು ಉದುರಿಸಿ ಬಳಿಕ ಸ್ಕ್ರೀಜ್ ಮಾರ್ಕಿಂಗ್ ಮಾಡುತ್ತಾರೆ. ಅಲ್ಲಿಗೆ ಟೆನ್ನಿಸ್ ಬಾಲ್ ಪಿಚ್ ತಯಾರು. ಆಟದ ನಡುವೆ ಮಳೆ ಬಂದರೆ ಶೀಘ್ರವೇ ಮರದ ಹೊಟ್ಟು, ಡೀಸೆಲ್ ಬಳಸಿ ಪಿಚ್​ ಅನ್ನು ಕೇವಲ 20 ನಿಮಿಷದಲ್ಲಿ ಮತ್ತೆ ಆಡಲು ರೆಡಿ ಮಾಡಿಬಿಡುತ್ತಾರಂತೆ ಮಲ್ಲೇಶ್.

ಲೆದರ್ ಬಾಲ್ ಪಿಚ್ ನಿರ್ಮಾಣ

ಪಂದ್ಯಾವಳಿ ಆಯೋಜಕರ ಆದೇಶದಂತೆ ಪಿಚ್​ ಅನ್ನು ಬ್ಯಾಟಿಂಗ್​ಗೆ ಅಥವಾ ಬೌಲಿಂಗ್​ಗೆ ಅನುಕೂಲವಾಗುವಂತೆ ಬದಲಾಯಿಸಬಲ್ಲರು ಮಲ್ಲೇಶ್. ಬ್ಯಾಟಿಂಗ್​ ಪಿಚ್ ಮಾಡಲು ಪಿಚ್​ನ ಮೇಲೆ ಮರದ ಹೊಟ್ಟಿನ ಒಂದು ಪದರ ಹಾಸುತ್ತಾರೆ. ಇದರಿಂದ ಚೆಂಡು ಸ್ವಲ್ಪ ತಡೆದು ಬರುತ್ತದೆ. ಅದೇ ಬೌಲಿಂಗ್ ಪಿಚ್ ಬೇಕೆಂದರೆ ಮರಳಿನ ಹುಡಿಯನ್ನು ಪಿಚ್​ ಮೇಲೆ ಉದುರಿಸುತ್ತಾರೆ. ಆಗ ಚೆಂಡು ಹೆಚ್ಚು ವೇಗ ಪಡೆದುಕೊಳ್ಳುತ್ತದೆ ಮತ್ತು ಬೌನ್ಸ್ ಸಹ ಪಡೆದುಕೊಳ್ಳುತ್ತದೆ. ಕಳೆದ ಕೆಲ ವರ್ಷದಿಂದ ಲೆದರ್ ಬಾಲ್ ಪಿಚ್​ಗಳನ್ನೂ ನಿರ್ಮಿಸುತ್ತಿದ್ದಾರೆ ಮಲ್ಲೇಶ್, ಅದಕ್ಕೆ ಬೇರೆಯದೇ ವಿಧಾನ ಅನುಸರಿಸುತ್ತಾರೆ. ಲೆದರ್ ಬಾಲ್ ಪಿಚ್​ ಮಾಡುವುದು ಶ್ರಮದ ಕೆಲಸ ಎನ್ನುವ ಮಲ್ಲೇಶ್, ಅದಕ್ಕಾಗಿ ಜಲ್ಲಿಕಲ್ಲು, ಜೆಡಿ ಮಣ್ಣು ಇನ್ನಿತರೆಗಳನ್ನು ಬಳಸುವ ಜೊತೆಗೆ ಪಿಚ್​ ತಯಾರು ಮಾಡಲು ತುಸು ಹೆಚ್ಚು ಸಮಯವೂ ಹಿಡಿಯುತ್ತದೆ ಎನ್ನುತ್ತಾರೆ.

ಕರ್ನಾಟಕದ ಹಲವು ರಾಜ್ಯಗಳಲ್ಲಿ ಮಲ್ಲೇಶ್ ಪಿಚ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಮೈಸೂರು, ಭದ್ರಾವತಿ, ಹಾಸನ, ಕಡೂರು, ತಿಪಟೂರು, ಬೆಂಗಳೂರು, ಹೊಸಕೋಟೆ, ಕುಂದಾಪುರ, ಕೋಲಾರ, ಕೆಜಿಎಫ್, ಮಂಗಳೂರು ಇನ್ನೂ ಹಲವು ನಗರ, ತಾಲ್ಲೂಕು ಕೇಂದ್ರಗಳಲ್ಲಿ ದೊಡ್ಡ ದೊಡ್ಡ ಟೂರ್ನಿಮೆಂಟ್​ಗಳಿಗೆ ಪಿಚ್ ಮಾಡಿಕೊಟ್ಟಿದ್ದಾರೆ ಮಲ್ಲೇಶ್. ‘ಎಂಟು ಲಕ್ಷ ರೂಪಾಯಿ ಬಹುಮಾನವಿದ್ದ ಟೂರ್ನಿಯೊಂದಕ್ಕೆ ಪಿಚ್ ಮಾಡಿಕೊಟ್ಟಿದ್ದೆ. ಅದು ನಾನು ಪಿಚ್ ನಿರ್ಮಿಸಿಕೊಟ್ಟ ಅತಿದೊಡ್ಡ ಮೊತ್ತದ ಟೂರ್ನಿ’ ಎನ್ನುತ್ತಾರೆ ಅವರು. ಮಲ್ಲೇಶ್​ಗೆ ಕೇವಲ ಯುವಕರ ತಂಡದ ಪಂದ್ಯಾವಳಿಗಳಿಗೆ ಪಿಚ್ ನಿರ್ಮಿಸಲು ಮಾತ್ರವೇ ಕರೆ ಬರುವುದಿಲ್ಲ, ಬದಲಿಗೆ ಪೊಲೀಸ್ ಕ್ರಿಕೆಟ್ ಟೂರ್ನಿ, ಡಾಕ್ಟರ್​ಗಳ ಕ್ರಿಕೆಟ್ ಟೂರ್ನಿ, ಕೆಲವು ಅಂತರ್ಕಾಲೇಜು ಕ್ರಿಕೆಟ್ ಪಂದ್ಯಾವಳಿಗಳಿಗೂ ಪಿಚ್ ನಿರ್ಮಾಣ ಮಾಡಿಕೊಟ್ಟಿದ್ದಾರೆ ಮಲ್ಲೇಶ್.

ಪಿಚ್ ನಿರ್ಮಾಣದ ಮೊದಲು-ನಂತರ

ಇವರ ಪ್ರತಿಭೆ ಕಂಡು ಕೆಲ ಕೆಎಸ್​ಸಿಎ ಸಿಬ್ಬಂದಿ ಪಿಚ್ ಕ್ಯುರೇಟರ್​ ತಂಡದಲ್ಲಿ ಕೆಲಸ ಮಾಡಲು ಸಹ ಕರೆದಿದ್ದರಂತೆ. ‘ಅಲ್ಲಿ ವಾರ ಪೂರ್ತಿ ಅಲ್ಲಿಯೇ ಇರಬೇಕು, ಭಾನುವಾರ ಮಾತ್ರ ರಜೆ, ತಿಂಗಳಿಗೆ 22 ಸಾವಿರ ಸಂಬಳ ಕೊಡುತ್ತೇವೆ ಎಂದರು. ಆದರೆ ಕುಟುಂಬ ನಿರ್ವಹಣೆಗೆ ಅದು ಸಾಕಾಗುವುದಿಲ್ಲ ಎಂದು ಹೇಳಿ ಹೋಗಲಿಲ್ಲ’ ಎನ್ನುತ್ತಾರೆ. ಅಷ್ಟಕ್ಕೂ ಮಲ್ಲೇಶ್​ಗೆ ವರ್ಷಪೂರ್ತಿ ಕೆಲಸ ಇರುವುದಿಲ್ಲ. ಬೇಸಗೆ ಕಾಲದಲ್ಲಿ ಟೂರ್ನಿಮೆಂಟ್​ಗಳು ಹೆಚ್ಚು ಮಳೆಗಾಲ, ಚಳಿಗಾಲದಲ್ಲಿ ಬಹುತೇಕ ಖಾಲಿ ಇರುವ ಮಲ್ಲೇಶ್ ಆ ಸಮಯದಲ್ಲಿ ಜೀವನ ನಿರ್ವಹಣೆಗೆ ಗಾರೆ ಕೆಲಸಕ್ಕೆ ಹೋಗುತ್ತಾರೆ.

ತಾವು ನಿರ್ಮಿಸಿದ ಪಿಚ್ ಜೊತೆ ಪಿಚ್ ಮಲ್ಲೇಶ್ ಸೆಲ್ಫಿ

ಮಲ್ಲೇಶ್​ ಹಲವು ವರ್ಷಗಳಿಂದಲೂ ಕ್ರಿಕೆಟ್ ಪಿಚ್ ತಯಾರು ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ ಹಲವು ಬಾರಿ ಪಿಚ್ ನಿರ್ಮಾಣಕ್ಕೆ ಹೋದಾಗ ಕಹಿ ಘಟನೆಗಳು ಸಹ ನಡೆದಿವೆಯಂತೆ. ಒಮ್ಮೊಮ್ಮೆ ಕರೆಸಿಕೊಂಡು ಪಿಚ್ ನಿರ್ಮಾಣ ಮಾಡಿಸಿಕೊಳ್ಳುತ್ತಾರೆ ಅದಾದ ಮೇಲೆ ಹಣ ಕೊಡದೆ ಬೆದರಿಸಿ ಕಳಿಸಿದ್ದೂ ಇದೆಯಂತೆ. ಒಮ್ಮೊಮ್ಮೆ ಒಪ್ಪಂದಕ್ಕಿಂತಲೂ ಕಡಿಮೆ ಹಣ ಕೊಡುತ್ತಾರೆ. ಆದರೆ ಎಲ್ಲರೂ ಹೀಗೆ ಇರುವುದಿಲ್ಲ ಹಲವು ಕಡೆಗಳಲ್ಲಿ ವೇದಿಕೆಗಳಿಗೆ ಕರೆದು ಸನ್ಮಾನ ಮಾಡಿ ಪ್ರಶಸ್ತಿ ಫಲಕ ನೀಡಿ ಕಳಿಸುತ್ತಾರೆ. ನನ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗೆಲ್ಲ ನನ್ನ ಕೆಲಸದ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎನ್ನುತ್ತಾರೆ ಮಲ್ಲೇಶ್. ಮಲ್ಲೇಶ್​ರ ಪ್ರತಿಭೆಯನ್ನು ಮೆಚ್ಚಿ ಹಲವು ವೇದಿಕೆಗಳಲ್ಲಿ ಅವರನ್ನು ಸನ್ಮಾನಿಸಲಾಗಿದೆ. ಅದರ ಚಿತ್ರಗಳನ್ನು, ವಿಡಿಯೋಗಳನ್ನು ಭದ್ರವಾಗಿರಿಸಿಕೊಂಡಿರುವ ಮಲ್ಲೇಶ್ ಹೆಮ್ಮೆಯಿಂದ ಅವನ್ನು ತೋರಿಸುತ್ತಾರೆ. ಅದಮ್ಯ ಕ್ರಿಕೆಟ್ ಪ್ರೀತಿ ಹೊಂದಿರುವ ಮಲ್ಲೇಶ್ ತಮ್ಮದೇ ರೀತಿಯಲ್ಲಿ ಕ್ರೀಡಾಸೇವೆ ಮಾಡುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ