Ashes 2023: ಆಸ್ಟ್ರೇಲಿಯಾ ಉತ್ತಮ ಆರಂಭ: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್
England vs Australia, 5th Test: ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲದಿದ್ದರೆ ಸರಣಿ ಆಸ್ಟ್ರೇಲಿಯಾ ಪಾಲಾಗಲಿದೆ. ಹೀಗಾಗಿ ಅಂತಿಮ ದಿನದಾಟದಲ್ಲಿ ಆಂಗ್ಲ ಬೌಲರ್ಗಳು 249 ರನ್ಗಳ ಒಳಗೆ 10 ವಿಕೆಟ್ಗಳನ್ನು ಕಬಳಿಸಬೇಕಿದೆ.
Ashes 2023: ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 5ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಆರಂಭಿಕರು ಭರ್ಜರಿ ಪ್ರದರ್ಶಿಸಿದ್ದಾರೆ. 2ನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 384 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭದಿಂದಲೇ ಇಂಗ್ಲೆಂಡ್ ಬೌಲರ್ಗಳ ದಿಟ್ಟ ಉತ್ತರ ನೀಡಿದ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಪ್ರತಿ ಓವರ್ಗೆ 3 ರ ಸರಾಸರಿಯಲ್ಲಿ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಮೊದಲ 25 ಓವರ್ಗಳಲ್ಲೇ ತಂಡದ ಮೊತ್ತ 75 ರ ಗಡಿದಾಟಿತು. ಇದಾದ ಬಳಿಕ ರನ್ ಗಳಿಕೆ ವೇಗವನ್ನು ಹೆಚ್ಚಿಸಿದ ಈ ಜೋಡಿ ಶತಕದ ಜೊತೆಯಾಟವಾಡಿದರು.
ಇತ್ತ ಆಸ್ಟ್ರೇಲಿಯಾ ತಂಡದ ಆರಂಭಿಕರುವ ಶತಕದ ಜೊತೆಯಾಟದೊಂದಿಗೆ ಮುಂದುವರೆದರೂ ಇಂಗ್ಲೆಂಡ್ ಬೌಲರ್ಗಳು ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾಗಲಿಲ್ಲ. ನಾಯಕ ಬೆನ್ ಸ್ಟೋಕ್ಸ್ 6 ಬೌಲರ್ಗಳನ್ನು ಪರೀಕ್ಷಿಸಿದರೂ ಫಲ ಮಾತ್ರ ಶೂನ್ಯವಾಗಿತ್ತು.
ಭೋಜನ ವಿರಾಮದ ಬಳಿಕ ಪಂದ್ಯಕ್ಕೆ ಮಳೆ ಅಡಚಣೆಯುಂಟು ಮಾಡಿದ್ದರಿಂದ 4ನೇ ದಿನದಾಟವನ್ನು ಸ್ಥಗಿತಗೊಳಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಆಸ್ಟ್ರೇಲಿಯಾ ಆರಂಭಿಕರು 38 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 135 ರನ್ ಕಲೆಹಾಕಿದ್ದರು.
ಇನ್ನು ಕೊನೆಯ ದಿನದಾಟ ಬಾಕಿಯಿದ್ದು, ಆಸ್ಟ್ರೇಲಿಯಾ ತಂಡದ ಮುಂದೆ ಕೇವಲ 249 ರನ್ಗಳ ಗುರಿಯಿದೆ. ಕ್ರೀಸ್ನಲ್ಲಿ 58 ರನ್ ಬಾರಿಸಿರುವ ಡೇವಿಡ್ ವಾರ್ನರ್ ಹಾಗೂ 69 ರನ್ ಕಲೆಹಾಕಿರುವ ಉಸ್ಮಾನ್ ಖ್ವಾಜಾ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಹೀಗಾಗಿ ಅಂತಿಮ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲುವ ಉತ್ತಮ ಅವಕಾಶವಿದೆ.
ಸೋಲಿನ ಸುಳಿಯಲ್ಲಿ ಇಂಗ್ಲೆಂಡ್:
ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲದಿದ್ದರೆ ಸರಣಿ ಆಸ್ಟ್ರೇಲಿಯಾ ಪಾಲಾಗಲಿದೆ. ಹೀಗಾಗಿ ಅಂತಿಮ ದಿನದಾಟದಲ್ಲಿ ಆಂಗ್ಲ ಬೌಲರ್ಗಳು 249 ರನ್ಗಳ ಒಳಗೆ 10 ವಿಕೆಟ್ಗಳನ್ನು ಕಬಳಿಸಬೇಕಿದೆ. ಈ ಮೂಲಕ ಸರಣಿಯನ್ನು 2-2 ಅಂತರದಿಂದ ಸಮಗೊಳಿಸಬಹುದು.
ಆಸ್ಟ್ರೇಲಿಯಾಗೆ ಸರಣಿ ಗೆಲ್ಲುವ ಅವಕಾಶ:
ಒಂದು ವೇಳೆ ಸೋಮವಾರ ಕೂಡ ಮಳೆ ಬಂದು ಕೊನೆಯ ದಿನದಾಟ ನಡೆಯದಿದ್ದರೆ, ಮ್ಯಾಚ್ ಡ್ರಾ ಆಗಲಿದೆ. ಇತ್ತ ಈಗಾಗಲೇ ಸರಣಿಯಲ್ಲಿ 2-1 ಅಂತರದಿಂದ ಆಸ್ಟ್ರೇಲಿಯಾ ತಂಡವು ಮುನ್ನಡೆ ಹೊಂದಿದೆ. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆದ್ದರೂ ಅಥವಾ ಡ್ರಾ ಸಾಧಿಸಿದರೂ ಆ್ಯಶಸ್ ಸರಣಿ ಆಸ್ಟ್ರೇಲಿಯಾ ಪಾಲಾಗಲಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ಪ್ಯಾಟ್ ಕಮಿನ್ಸ್ (ನಾಯಕ) , ಜೋಶ್ ಹ್ಯಾಝಲ್ವುಡ್ , ಟಾಡ್ ಮರ್ಫಿ.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂಬರುವ ಸರಣಿಗಳ ವೇಳಾಪಟ್ಟಿ ಪ್ರಕಟ
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಮೊಯಿನ್ ಅಲಿ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಮಾರ್ಕ್ ವುಡ್ , ಸ್ಟುವರ್ಟ್ ಬ್ರಾಡ್ , ಜೇಮ್ಸ್ ಅ್ಯಂಡರ್ಸನ್.
Published On - 10:53 pm, Sun, 30 July 23