ಔಟ್ ಮಾಡುವ ಅವಕಾಶವಿದ್ದರೂ, ರನೌಟ್ ಮಾಡದ ಬೌಲರ್: ಫಿಕ್ಸಿಂಗ್ ಎಂದ ನೆಟ್ಟಿಗರು..!

| Updated By: ಝಾಹಿರ್ ಯೂಸುಫ್

Updated on: Jul 30, 2022 | 11:04 AM

India vs West Indies 1st T20: 191 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾದ ಕರಾರುವಾಕ್ ದಾಳಿ ಮುಂದೆ ರನ್​ಗಳಿಸಲು ಪರದಾಡಿದರು. ಪರಿಣಾಮ 101 ರನ್​ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು.

ಔಟ್ ಮಾಡುವ ಅವಕಾಶವಿದ್ದರೂ, ರನೌಟ್ ಮಾಡದ ಬೌಲರ್: ಫಿಕ್ಸಿಂಗ್ ಎಂದ ನೆಟ್ಟಿಗರು..!
obed-ashwin
Follow us on

ಭಾರತ-ವೆಸ್ಟ್ ಇಂಡೀಸ್ (India vs West Indies 1st T20) ನಡುವಣ ಮೊದಲ ಟಿ20 ಪಂದ್ಯವನ್ನು ಟೀಮ್ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಭರ್ಜರಿ ಅರ್ಧಶತಕ ಸಿಡಿಸಿದ್ದರು. ಕೇವಲ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಹಿಟ್​ಮ್ಯಾನ್ 64 ರನ್ ಬಾರಿಸಿದ್ದರು. ಇದಾಗ್ಯೂ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ.

ಅಂತಿಮ ಓವರ್​ ವೇಳೆ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್​​ಗಳೊಂದಿಗೆ 41 ರನ್ ಬಾರಿಸಿ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾಗಿದ್ದರು. ಮತ್ತೊಂದೆಡೆ 8ನೇ ಕ್ರಮಾಂಕದಲ್ಲಿ ಆಡಿದ ಆರ್ ಅಶ್ವಿನ್ ಕೂಡ 10 ಎಸೆತಗಳಲ್ಲಿ 13 ರನ್ಗಳಿಸಿ ಉಪಯುಕ್ತ ಕಾಣಿಕೆ ನೀಡಿದ್ದರು. ಆದರೆ ಇಲ್ಲಿ ಕುತೂಹಲಕಾರಿ ಅಂಶ ಎಂದರೆ ಅಂತಿಮ ಓವರ್​ಗಳ ವೇಳೆ ಅಶ್ವಿನ್ ಅವರನ್ನು ಔಟ್ ಮಾಡುವ ಅವಕಾಶವಿದ್ದರೂ ರನೌಟ್ ಮಾಡದೇ ವಿಂಡೀಸ್ ಬೌಲರ್ ಒಬೆಡ್ ಮೆಕಾಯ್ ನಾಟಕೀಯ ಸನ್ನಿವೇಶ ಸೃಷ್ಟಿಸಿದ್ದರು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಮೆಕಾಯ್ ಎಸೆದ 18ನೇ ಓವರ್ನಲ್ಲಿ ದಿನೇಶ್ ಕಾರ್ತಿಕ್ ಸ್ಟ್ರೈಟ್ ಹಿಟ್​ ಶಾಟ್ ಬಾರಿಸಿದ್ದರು. ಅತ್ತ ಮತ್ತೆ ಸ್ಟ್ರೈಕ್ ಪಡೆಯಲು ಡಿಕೆ 2 ರನ್​ಗಳನ್ನು ಓಡಿದರು. ಇತ್ತ ಕಡೆ ಅಶ್ವಿನ್ ಕ್ರೀಸ್ ತಲುಪುವ ಮೊದಲೇ ಮೆಕಾಯ್ ಕೈಗೆ ಫೀಲ್ಡರ್ ಚೆಂಡೆಸೆದಿದ್ದರು.

ಚೆಂಡನ್ನು ಕ್ಲೀನ್ ಆಗಿ ಕಲೆಕ್ಟ್ ಮಾಡಿದ ಒಬೆಡ್ ಮೆಕಾಯ್ ಬೇಲ್ಸ್ ಎಗರಿಸದೇ ಬಾಲ್ ಅನ್ನು ಕೈಯಲ್ಲೇ ಹಿಡಿದುಕೊಂಡರು. ಇದಾಗ್ಯೂ ಅಶ್ವಿನ್ ಕ್ರೀಸ್ ತಲುಪದಿರುವುದು ಸ್ಪಷ್ಟವಾಗಿತ್ತು. ಅಂದರೆ ಡೈವ್ ಹೊಡೆದರೂ ಅಶ್ವಿನ್ ಕ್ರೀಸ್​ನಿಂದ ಹೊರಗಿರುವುದನ್ನು ಗಮನಿಸಿಯೂ ಮೆಕಾಯ್ ರನೌಟ್ ಮಾಡದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಇಬ್ಬರು ಆಟಗಾರರು ಐಪಿಎಲ್​ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ಕಾರಣ ಹೊಂದಾಣಿಕೆಯ ಆಟವಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಹೌದು, ಅಶ್ವಿನ್ ಹಾಗೂ ಒಬೆಡ್ ಮೆಕಾಯ್ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು. ಹೀಗಾಗಿಯೇ ಅಶ್ವಿನ್ ಅವರನ್ನು ರನೌಟ್ ಮಾಡಲು ಮೆಕಾಯ್ ಹಿಂದೇಟು ಹಾಕಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ. ಮತ್ತೊಂದೆಡೆ ಒಬೆಡ್ ಮೆಕಾಯ್ ಅವರ ನಾಟಕೀಯ ಆಟಗಳನ್ನು ಗಮನಿಸಿದರೆ, ಮ್ಯಾಚ್ ಫಿಕ್ಸಿಂಗ್ ಆಗಿದೆಯಾ ಎಂಬ ಅನುಮಾನಗಳು ಮೂಡುತ್ತವೆ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರನೌಟ್ ಮಾಡುವ ಅತ್ಯುತ್ತಮ ಅವಕಾಶವಿದ್ದರೂ, ಮೆಕಾಯ್ ಆಡಿದ ಆಟ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕ ಹಾಗೂ ದಿನೇಶ್ ಕಾರ್ತಿಕ್ ಅವರ ಸ್ಪೋಟಕ 41 ರನ್​ಗಳ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್​ ಕಲೆಹಾಕಿತು. 191 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾದ ಕರಾರುವಾಕ್ ದಾಳಿ ಮುಂದೆ ರನ್​ಗಳಿಸಲು ಪರದಾಡಿದರು. ಪರಿಣಾಮ 101 ರನ್​ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು.

ಇದಾಗ್ಯೂ 20 ಓವರ್​ಗಳ ಬ್ಯಾಟಿಂಗ್ ಪೂರ್ಣಗೊಳಿಸಿದ ವಿಂಡೀಸ್ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 122 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಟೀಮ್ ಇಂಡಿಯಾ 68 ರನ್​ಗಳ ಭರ್ಜರಿ ಜಯ ಸಾಧಿಸಿತು. ಕೇವಲ 19 ಎಸೆತಗಳಲ್ಲಿ 4 ಫೋರ್ ಹಾಗೂ 2 ಭರ್ಜರಿ ಸಿಕ್ಸ್ ಸಿಡಿಸಿ 41 ರನ್​ ಬಾರಿಸಿದ್ದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.