ಏಷ್ಯಾಕಪ್ 2022ರ (Asia Cup 2022) ಟೂರ್ನಿಗಾಗಿ ಬಲಿಷ್ಠ ಭಾರತ ತಂಡವನ್ನು (Team India) ಬಿಸಿಸಿಐ ಪ್ರಕಟಿಸಿದೆ. ಈ ತಂಡದಲ್ಲಿ ಒಟ್ಟು 15 ಸದಸ್ಯರು ಸ್ಥಾನ ಪಡೆದಿದ್ದರೆ, ಮೀಸಲು ಆಟಗಾರರಾಗಿ ಮೂವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಪ್ರಮುಖ ಟೂರ್ನಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್ ಮತ್ತು ಅವೇಶ್ ಖಾನ್ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ. ಈ ಮೂವರು ಆಟಗಾರರು ಈ ಹಿಂದೆ ಹಲವು ಸರಣಿಗಳಲ್ಲಿ ಆಡಿದ್ದರೂ, ಪ್ರಮುಖ ಟೂರ್ನಿಯಲ್ಲಿ ಸ್ಥಾನ ಪಡೆಯುತ್ತಿರುವುದು ಇದೇ ಮೊದಲ ಬಾರಿಗೆ ಎಂಬುದು ವಿಶೇಷ.
ಇನ್ನು ಏಷ್ಯಾಕಪ್ ಟೂರ್ನಿ ಮೂಲಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಂಡಕ್ಕೆ ಮರಳಿದ್ದಾರೆ. ಕೆಎಲ್ಆರ್ ಐಪಿಎಲ್ ಬಳಿಕ ಯಾವುದೇ ಪಂದ್ಯವಾಡಿಲ್ಲ ಎಂಬುದು ಇಲ್ಲಿ ವಿಶೇಷ. ಹಾಗೆಯೇ ಇಂಗ್ಲೆಂಡ್ ವಿರುದ್ದದ ಸರಣಿಯ ಬಳಿಕ ಸಂಪೂರ್ಣ ವಿಶ್ರಾಂತಿಗೆ ಜಾರಿದ್ದ ಕೊಹ್ಲಿ ಏಷ್ಯಾಕಪ್ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷ ಎಂದರೆ ಮೀಸಲು ಆಟಗಾರರ ಆಯ್ಕೆ. ಅಂದರೆ 2021ರ ಟಿ20 ವಿಶ್ವಕಪ್ ತಂಡದ ಆಯ್ಕೆ ವೇಳೆ ಯಾವ ಆಟಗಾರರನ್ನು ಮೀಸಲು ಸ್ಥಾನದಲ್ಲಿ ಆಯ್ಕೆ ಮಾಡಲಾಗಿತ್ತೋ, ಅದೇ ಆಟಗಾರರು ಏಷ್ಯಾಕಪ್ ತಂಡದಲ್ಲೂ ಮೀಸಲು ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಅಂದರೆ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ವೇಳೆ ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದರು.
ಇದೀಗ ಇದೇ ಮೂವರು ಆಟಗಾರರು ಏಷ್ಯಾಕಪ್ ತಂಡದಲ್ಲೂ ಮೀಸಲು ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ ನಾಲ್ಕೈದು ತಿಂಗಳಿಂದ ಗಾಯದ ಕಾರಣ ಮೈದಾನದಿಂದಲೇ ಹೊರಗುಳಿದಿದ್ದ ದೀಪಕ್ ಚಹರ್ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
ಏಕೆಂದರೆ ಇಲ್ಲಿ ಮೀಸಲು ಆಟಗಾರರು ಟೀಮ್ ಇಂಡಿಯಾಗೆ ನೇರವಾಗಿ ಆಯ್ಕೆಯಾಗಬಹುದು. ಅಂದರೆ 15 ಸದಸ್ಯರ ತಂಡದಲ್ಲಿ ಯಾರಾದರೂ ಗಾಯಗೊಂಡರೆ ಮೀಸಲು ಆಟಗಾರರ ಪಟ್ಟಿಯಿಂದ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ಅಕ್ಷರ್ ಪಟೇಲ್, ದೀಪಕ್ ಚಹರ್ ಹಾಗೂ ಶ್ರೇಯಸ್ ಅಯ್ಯರ್ ಏಷ್ಯಾಕಪ್ ವೇಳೆ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಆದರೆ ಟಿ20 ವಿಶ್ವಕಪ್ ಮುಗಿದು ವರ್ಷ ಕಳೆದರೂ ಟೀಮ್ ಇಂಡಿಯಾ ಪರ ಮೀಸಲು ಆಟಗಾರರಾಗಿ ಆಯ್ಕೆಯಾಗುವಂತಹ ಹೊಸ ಆಟಗಾರರು ರೂಪುಗೊಂಡಿಲ್ಲವಾ ಎಂಬ ಪ್ರಶ್ನೆಯನ್ನು ಇದೀಗ ಅಭಿಮಾನಿಗಳು ಬಿಸಿಸಿಐ ಮುಂದಿಟ್ಟಿದ್ದಾರೆ. ಒಟ್ಟಿನಲ್ಲಿ ಬಲಿಷ್ಠ ತಂಡವನ್ನೇ ರೂಪಿಸಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ದ ಆಡಲಿದ್ದು, ಈ ಮೂಲಕ ಟಿ20 ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಆಗಸ್ಟ್ 28 ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ರೋಚಕ ಕದನವನ್ನು ಎದುರು ನೋಡಬಹುದು.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.